ಚನ್ನಪಟ್ಟಣದಿಂದ ಸ್ಪರ್ಧಿಸುವಂತೆ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಮೇಲೆ ಸ್ಥಳೀಯ ಮುಖಂಡರ ಒತ್ತಡ ಹೆಚ್ಚಾಗುತ್ತಿದೆ.

ಚನ್ನಪಟ್ಟಣ : ಚನ್ನಪಟ್ಟಣದಿಂದ ಸ್ಪರ್ಧಿಸುವಂತೆ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಮೇಲೆ ಸ್ಥಳೀಯ ಮುಖಂಡರ ಒತ್ತಡ ಹೆಚ್ಚಾಗುತ್ತಿದೆ.

ಚನ್ನಪಟ್ಟಣ ಜೆಡಿಎಸ್‌ ಅಭ್ಯರ್ಥಿ ಆಯ್ಕೆ ಸಂಬಂಧ ಬೆಂಗಳೂರಿನ ಜೆಪಿ ನಗರದಲ್ಲಿರುವ ಎಚ್‌ಡಿಕೆ ನಿವಾಸದಲ್ಲಿ ಕರೆಯಲಾಗಿದ್ದ ತಾಲೂಕು ಜೆಡಿಎಸ್‌ ಮುಖಂಡ ಸಭೆಯಲ್ಲಿ, ಖುದ್ದು ಕುಮಾರಸ್ವಾಮಿ ಅವರೇ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂದು ನಾಯಕರು ಮನವಿ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ಶೀಘ್ರವೇ ಈ ಕುರಿತು ತೀರ್ಮಾನ ಕೈಗೊಳ್ಳಲಾಗುವುದು. ಏ.3ರಂದು ಅಂತಿಮ ನಿರ್ಣಯ ಪ್ರಕಟಿಸಲಾಗುತ್ತದೆ ಎಂದಿದ್ದಾರೆ.

ಸ್ಥಳೀಯವಾಗಿ ಯಾರೇ ನಿಂತರು ಸೋಲು ಕಟ್ಟಿಟ್ಟಬುತ್ತಿ ಎಂದು ಸಭೆಯಲ್ಲಿದ್ದ ಮುಖಂಡರು ಸ್ಪಷ್ಟಪಡಿಸಿದ ಹಿನ್ನೆಲೆಯಲ್ಲಿ, ಚನ್ನಪಟ್ಟಣದಲ್ಲಿ ಜೆಡಿಎಸ್‌ ಉಳಿಸಲು ನಾನೇ ತಲೆ ಕೊಡುತ್ತೇನೆ ಎಂದು ಕುಮಾರಸ್ವಾಮಿ ಎಂದರು ಎನ್ನಲಾಗಿದೆ.

‘ಪ್ರತಿ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿಗೆ 60 ರಿಂದ 70 ಸಾವಿರ ದಷ್ಟುಮತ ಲಭಿಸುತ್ತಿದೆ. ಆದರೂ ಪಕ್ಷದ ಅಭ್ಯರ್ಥಿ ಗೆಲ್ಲುತ್ತಿಲ್ಲ ಎಂದರೆ ಸ್ಥಳೀಯ ಮುಖಂಡರ ಒಳಜಗಳವೇ ಕಾರಣ. ಕ್ಷೇತ್ರದ ಕಾರ್ಯಕರ್ತರ ನೋವು ಏನೆಂದು ನನಗೆ ಗೊತ್ತಿದೆ. ಯಾವುದೇ ಕಾರಣಕ್ಕೂ ಪಕ್ಷದ ಕಾರ್ಯಕರ್ತರಿಗೆ ನಾನು ನೋವು ಮಾಡುವುದಕ್ಕೆ ಬಯಸುವುದಿಲ್ಲ. ಕಾರ್ಯಕರ್ತರ ಹಿತಕಾಯಲು ಸದಾ ತಾನು ಬದ್ಧ’ ಎಂದು ಎಚ್‌ಡಿಕೆ ಹೇಳಿದರು ಎಂದು ಸಭೆಯಲ್ಲಿದ್ದ ಮುಖಂಡರು ತಿಳಿಸಿದ್ದಾರೆ.

ಏ.3ರಂದು ಘೋಷಣೆ:

ಏ.3ರಂದು ಚನ್ನಪಟ್ಟಣದಲ್ಲಿ ವಿಕಾಸಪರ್ವ ಕಾರ್ಯಕ್ರಮ ಆಯೋಜಿಸಲಾಗಿದ್ದು, ಚನ್ನಪಟ್ಟಣದಲ್ಲಿ ಸ್ಪರ್ಧೆ ಕುರಿತು ಅಂದೇ ಎಚ್‌ಡಿಕೆ ತಮ್ಮ ತೀರ್ಮಾನ ಪ್ರಕಟಿಸುವುದಾಗಿ ಮುಖಂಡರಿಗೆ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ. ಸಭೆಯಲ್ಲಿ ಜೆಡಿಎಸ್‌ ರಾಜ್ಯ ಸಂಘಟನಾ ಕಾರ್ಯದರ್ಶಿ ನಿಜಲಿಂಗೇಗೌಡ, ಹಿರಿಯ ಮುಖಂಡ ಹಾಪ್‌ಕಾಮ್ಸ್‌ ದೇವರಾಜು, ಬಮೂಲ್‌ ನಿರ್ದೇಶಕ ಎಸ್‌.ಲಿಂಗೇಶ್‌ಕುಮಾರ್‌, ತಾಲೂಕು ಜೆಡಿಎಸ್‌ ಅಧ್ಯಕ್ಷ ಜಯಮುತ್ತು ಇತರರು ಇದ್ದರು.