ಜಾತಿ ಪಟ್ಟಿಗೆ ವೈಶ್ಯರ ಸೇರಿಸಲು ಕ್ರಮ: ಸಚಿವ ಆಂಜನೇಯ

First Published 18, Feb 2018, 9:02 AM IST
H Anjaneya Talk About Vaishya Caste
Highlights

ಜಾತಿ ಪಟ್ಟಿಯಲ್ಲಿ ಆರ್ಯವೈಶ್ಯ ಜನಾಂಗದ ಹೆಸರನ್ನು ಸೇರಿಸಲು ಕ್ರಮ ಕೈಗೊಳ್ಳುವುದಾಗಿ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್‌.ಆಂಜನೇಯ ಹೇಳಿದರು.

ಹೊಳಲ್ಕೆರೆ: ಜಾತಿ ಪಟ್ಟಿಯಲ್ಲಿ ಆರ್ಯವೈಶ್ಯ ಜನಾಂಗದ ಹೆಸರನ್ನು ಸೇರಿಸಲು ಕ್ರಮ ಕೈಗೊಳ್ಳುವುದಾಗಿ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್‌.ಆಂಜನೇಯ ಹೇಳಿದರು.

ಪಟ್ಟಣದ ಕನ್ನಿಕಾಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ತಾಲೂಕು ಆರ್ಯವೈಶ್ಯ ಮಂಡಳಿ ಏರ್ಪಡಿಸಿದ್ದ 90ನೇ ವರ್ಷದ ಶಿವರಾತ್ರಿ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಹಿಂದಿನಿಂದಲೂ ವೈಶ್ಯ ಜನಾಂಗ ದಾನ, ಧರ್ಮ ಕಾರ್ಯಗಳಿಂದ ಹೆಸರಾಗಿದ್ದು ಅವರನ್ನು ಮಂತ್ರಿಮಂಡಲದ ಸಭೆಯಲ್ಲಿ ಹಾಗೂ ಮುಖ್ಯಮಂತ್ರಿಯವರಲ್ಲಿ ಚರ್ಚಿಸಿ ಜಾತಿ ಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಸಮುದಾಯ ಭವನಕ್ಕೆ ಶಾಸಕರ ಅನುದಾನದಡಿಯಲ್ಲಿ ಹಣಕಾಸಿನ ಸೌಲಭ್ಯ ನೀಡಲಾಗುವುದು ಎಂದರು.

ಪಪಂ ಅಧ್ಯಕ್ಷೆ ಸವಿತಾ ಬಸವರಾಜ್‌ ಮಾತನಾಡಿ, ಆರ್ಯವೈಶ್ಯ ಸಮುದಾಯದವರ ಎಲ್ಲ ಕಾರ್ಯಗಳಿಗೆ ಪಟ್ಟಣ ಪಂಚಾಯಿತಿ ಸೌಲಭ್ಯಗಳನ್ನು ದೊರಕಿಸಿಕೊಡುವುದಾಗಿ ತಿಳಿಸಿದರು.ಅರೇಹಳ್ಳಿ ಗ್ರಾಪಂ ಅಧ್ಯಕ್ಷ ಮಾಕಂ ವೆಂಕಟೇಶ್‌ ಮಾತನಾಡಿ, ನಮ್ಮ ಸಮುದಾಯದ ಹೆಸರನ್ನು ಜಾತಿ ಪಟ್ಟಿಯಲ್ಲಿ ಸೇರಿಸುವುದು ಸಂವಿಧಾನದ ಹಕ್ಕಾಗಿದೆ. ಸಚಿವರಲ್ಲಿ ಬೇಡಿಕೆಯನ್ನು ಇಟ್ಟಿದ್ದು ಕೆಲವೇ ದಿನಗಳಲ್ಲಿ ಅದು ಸಾಕಾರಗೊಳ್ಳುವ ಭರವಸೆ ಇದೆ ಎಂದು ಹೇಳಿದರು.

ಪಪಂ ಸದಸ್ಯ ಪಿ.ಎಚ್‌ ಮುರುಗೇಶ್‌ ಮಾತನಾಡಿದರು. ತಾಲೂಕು ಕುರುಬ ಸಮಾಜದ ಅಧ್ಯಕ್ಷ ಬಿ.ಎಚ್‌ ಪ್ರಕಾಶ್‌, ಜಿಲ್ಲಾ ಆರ್ಯವೈಶ್ಯ ಮಂಡಳಿ ಉಪಾಧ್ಯಕ್ಷ ಎಂ.ಎಲ್‌. ನಾಗರಾಜ್‌, ತಾಲೂಕು ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಗೋವಿಂದ ಶ್ರೇಷ್ಠಿ, ಮಹಿಳಾ ಮಂಡಳಿ ಅಧ್ಯಕ್ಷೆ ಉಮಾ ಶಿವಕುಮಾರ್‌, ಶ್ರೀನಿವಾಸ ಬೇಕರಿ ವೆಂಕಟೇಶ್‌ ಮತ್ತಿತರರು ಉಪಸ್ಥಿತರಿದ್ದರು.

ಸುನಿತಾ ನಾಗರಾಜ್‌ ಹಾಗೂ ರಾಧವೆಂಕಟೇಶ್‌ ಪ್ರಾರ್ಥಿಸಿ ಎಂ.ಎಲ್‌.ನಾಗರಾಜ್‌ ಸ್ವಾಗತಿಸಿ, ಶಿವನ್‌ ವಂದಿಸಿದರು. ಇದೇ ಸಂದರ್ಭದಲ್ಲಿ ಲೋಕಕಲ್ಯಾಣಾರ್ಥವಾಗಿ ಗಣಪತಿ ಹೋಮ, ಮೃತ್ಯುಂಜಯ ಹೋಮ ಹಾಗೂ ನವಗ್ರಹ ಹೋಮಗಳನ್ನು ನಡೆಸಲಾಯಿತು. ನಂತರ ಮಹಾ ಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು.

loader