ಕೆಲಸ ತೃಪ್ತಿ ಇಲ್ಲದೇ ರೋಹಿಣಿಯನ್ನು ಸರಕಾರ ವರ್ಗಾಯಿಸಿರಬಹುದು: ಪರಮೇಶ್ವರ್

First Published 24, Jan 2018, 2:02 PM IST
Government transfers Rohini Sindhuri for poor administration
Highlights

ಸರಕಾರಕ್ಕೆ ಯಾವ ಅಧಿಕಾರಿ ಕೆಲಸ ಮಾಡುತ್ತಿದ್ದಾರೆ, ಯಾರು ಮಾಡುತ್ತಿಲ್ಲವೆಂಬ ಮಾಹಿತಿ ಇರುತ್ತದೆ. ಈ ಹಿನ್ನೆಲೆಯಲ್ಲಿ ಹಾಸನ ಡಿಸಿ ರೋಹಿಣಿ ಕೆಲಸ ತೃಪ್ತ ತರದೇ ವರ್ಗಾಯಿಸಿರಬಹುದೆಂದು, ಕೆಪಿಸಿಸಿ ಅಧ್ಯಕ್ಷರು ಹೇಳಿದ್ದಾರೆ.

ತುಮಕೂರು: 'ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕೆಲಸ ಸರ್ಕಾರಕ್ಕೆ ತೃಪ್ತಿ ತಂದಿಲ್ಲದೆ ಇರಬಹುದು.  ಹಾಗಾಗಿ ವರ್ಗಾವಣೆ ಮಾಡಲಾಗಿದೆ,' ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಹಾಸನ ಡಿಸಿ ವರ್ಗಾವಣೆಗೆ ಪ್ರತಿಕ್ರಿಯೆ ನೀಡಿದ್ದಾರೆ.

'ಯಾವ ಅಧಿಕಾರಿಯನ್ನು ಬೇಕಾದರೂ ವರ್ಗಾಯಿಸುವ ಸ್ವಾತಂತ್ರ್ಯ ಸರಕಾರಕ್ಕಿದೆ. ಯಾವ ಅಧಿಕಾರಿ ಸರಿಯಾಗಿ ಕೆಲಸ ಮಾಡುತ್ತಾರೆ, ಯಾವ ಅಧಿಕಾರಿ ಸರಿಯಾಗಿ ಮಾಡೋಲ್ಲ ಅನ್ನೋ ಮಾಹಿತಿ ಸರ್ಕಾರಕ್ಕಿದೆ.

 ಹಾಗಾಗಿ ಆಡಳಿತ ಚೆನ್ನಾಗಿರಲೆಂದು ವರ್ಗಾಯಿಸಲಾಗಿದೆ,' ಎಂದು ಸರಕಾರದ ಕ್ರಮವನ್ನು ಪರಮೇಶ್ವರ್ ಸಮರ್ಥಿಸಿಕೊಂಡಿದ್ದಾರೆ. 

'ಕೇಂದ್ರ ಚುನಾವಣಾ ಆಯೋಗದಿಂದ ವರ್ಗಾವಣೆಗೆ ತಡೆ ಬಂದಿದ್ದೂ ಆಡಳಿತದ ಸಹಜ ಪ್ರಕ್ರಿಯೆಯೇ ಹೊರತು, ಸರಕಾರಕ್ಕೇನೂ ಮುಖಭಂಗವಾಗಿಲ್ಲ. ದೇವೇಗೌಡರು ಮಾಜಿ ಪ್ರಧಾನಿಗಳು, ಹಿರಿಯ ರಾಜಕಾರಣಿಗಳು, ಅವರ ಸಲಹೆಯನ್ನು ಗಣನೆಗೆ ತೆಗೆದುಕೊಳ್ಳುತ್ತೇವೆ. 

ಆದರೆ ಆಡಳಿತ ನಡೆಸುವವರು ನಾವು. ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ನಮಗೆ ಸ್ವಾತಂತ್ರ್ಯವಿದೆ,' ಎಂದಿದ್ದಾರೆ.

ಮೋದಿ, ಶಾ ರಾಜ್ಯಕ್ಕೆ ಬಂದೇನು ಮಾಡುತ್ತಾರೆ?

'ಕಾಂಗ್ರೆಸ್ ಸರ್ಕಾರದ ಜನ ಪರ ಕೆಲಸ ನೋಡಿ ಬಿಜೆಪಿ ಹತಾಶವಾಗಿದೆ. ಹೀಗಾಗಿ ಪದೇ ಪದೇ ಅಮಿತ್ ಶಾ, ಮೋದಿಯನ್ನು ರಾಜ್ಯಕ್ಕೆ ಕರೆ ತರುತ್ತಿದ್ದಾರೆ. ಅವರ ಕಾರ್ಯಕ್ರಮಕ್ಕೆ ಅಡ್ಡಿಯಾಗಲಿ ಅಂತ ಬಂದ್ ಮಾಡಿ ಅಂತ ನಾವೇನೂ ಯಾರಿಗೂ ಹೇಳಿಲ್ಲ. 

ಮುಖ್ಯಮಂತ್ರಿಗಳು ಅನ್ಯ ನಿಮಿತ್ತ 27ನೇ ತಾರೀಖಿನ ಬಂದ್ ಅನ್ನು 25 ರಂದು ಮಾಡಿ ಎಂದು ಹೇಳಿರಬಹುದು. ದೇಶದ ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ನಾವೇಕೆ ಅಡ್ಡಿ ಪಡಿಸಬೇಕು? ಅಷ್ಟಕ್ಕೂ ರಾಜ್ಯದ ಜನತೆ ನಮ್ಮೊಂದಿಗಿರುವಾಗಿ ಮೋದಿ, ಶಾ ಬಂದೇನು ಮಾಡುತ್ತಾರೆ,' ಎಂದು ಪ್ರಶ್ನಿಸಿದ್ದಾರೆ.


ರಾಜ್ಯದಲ್ಲಿ ರಾಹುಲ್ ಪ್ರವಾಸ

ಫೆಬ್ರವರಿ 10, 11, 12ರಂದು ರಾಹುಲ್ ಗಾಂಧಿ ರಾಜ್ಯ ಪ್ರವಾಸ ಮಾಡಲಿದ್ದಾರೆ. ಹೈದರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕದಲ್ಲಿ ಭಾಗದಲ್ಲಿ ಪ್ರವಾಸ ನಡೆಸಲಿದ್ದಾರೆ. ತುಮಕೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಗೆ ಅವರ ಭೇಟಿ ನೀಡಲಿದ್ದಾರೆ. ಚುನಾವಣೆಗಾಗಿ ನಾಲ್ಕು ಬಾರಿ ರಾಹುಲ್ ಗಾಂಧಿ ರಾಜ್ಯ ಪ್ರವಾಸ ಮಾಡಲಿದ್ದಾರೆ; ಎಂದು ವಿವರಿಸಿದರು.
 

loader