ಕಸ ವಿಲೇವಾರಿಗೆ ಈ ಬಾರಿ ಬಂಪರ್‌ ಹಣ: 752 ಕೋಟಿ ರು. | ಪಾರ್ಕ್, ಇತರೆಡೆ ಕಾಂಪೋಸ್ಟ್‌ ಗೊಬ್ಬರ ತಯಾರಿ ಘಟಕ

ಬೆಂಗಳೂರು(ಮಾ. 26): ನಗರದ ಪ್ರಮುಖ ಸಮಸ್ಯೆಯಾದ ಕಸ ವಿಲೇವಾರಿ​ಯನ್ನು ಸವಾಲಾಗಿ ಸ್ವೀಕರಿಸಿರುವ ಪಾಲಿಕೆಯು ‘ನಮ್ಮ ಕಸ ನಮ್ಮ ಜವಾಬ್ದಾರಿ, ನಮ್ಮ ವಾರ್ಡ್‌'ನ ಕಸ ವಾರ್ಡ್‌ ಜವಾಬ್ದಾರಿ' ಎಂಬ ಘೋಷವಾಕ್ಯದಡಿ ವಾರ್ಡ್‌ ಮಟ್ಟದಲ್ಲಿ, ಉದ್ಯಾನಗಳಲ್ಲಿ ಹಾಗೂ ಇತರೆ ಸ್ಥಳಗಳಲ್ಲಿ ವಿಕೇಂದ್ರೀಕೃತ ಕಾಂಪೋಸ್ಟ್‌ ಕೇಂದ್ರಗಳ ಆರಂಭ ಸೇರಿದಂತೆ ಹಲವು ಕ್ರಮಗಳನ್ನು ಬಜೆಟ್‌'ನಲ್ಲಿ ಘೋಷಿಸಿದೆ.

ಘನತ್ಯಾಜ್ಯ ವಿಂಗಡಣೆಯಲ್ಲಿ ಹಸಿ ತ್ಯಾಜ್ಯ, ಒಣತ್ಯಾಜ್ಯ ಹಾಗೂ ನೈರ್ಮಲ್ಯ ತ್ಯಾಜ್ಯವನ್ನು ಮೂಲದಲ್ಲಿ ಬೇರ್ಪಡಿಸುವುದನ್ನು ಕಡ್ಡಾಯ​ಗೊಳಿಸ​ಲಾ​ಗುವುದು. ಇದಕ್ಕಾಗಿ ಪ್ರತಿ ಮನೆಗೆ 2 ಕಸದ ಬುಟ್ಟಿಮತ್ತು 1 ಚೀಲವನ್ನು ಉಚಿತವಾಗಿ ನೀಡಲಿದ್ದು, ಇದಕ್ಕಾಗಿ ರು. 5 ಕೋಟಿ ಅನುದಾನ ಮೀಸಲಿಡಲಾಗಿದೆ. ವಸತಿ ಸಂಕೀರ್ಣಗಳಲ್ಲಿ ತ್ಯಾಜ್ಯ ವಿಂಗಡಣೆ ಹಾಗೂ ಕಾಂಪೋಸ್ಟಿಂಗ್‌ ಕಡ್ಡಾಯ. ಇದನ್ನು ಉತ್ತೇಜಿಸಲು ಘನತ್ಯಾಜ್ಯ ಕರದಲ್ಲಿ ವಿನಾಯಿತಿ ನೀಡಲಾಗುವುದು. ಪಾಲಿಕೆಯ ಲಿಂಕ್‌ ವರ್ಕ್​ರ್‍ಸ್​ಗಳ ಸೇವೆಯನ್ನು ಬಳಸಿಕೊಂಡು ನಾಗರೀಕರಿಗೆ ತರಬೇತಿ ಮತ್ತು ಅರಿವು ಮೂಡಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೇ ವಾರ್ಡ್‌ಗಳಲ್ಲಿ ನಡೆಯುತ್ತಿರುವ ಕಾಂಪೋಸ್ಟ್‌ ಸಂತೆಗಳನ್ನು ಮುಂದುವರಿಸಲು ರು. 2 ಕೋಟಿ ಅನುದಾನ ನೀಡಲಾಗಿದೆ. 198 ವಾರ್ಡ್‌'​ಗಳಲ್ಲಿ ಕಾಂಪೋಸ್ಟ್‌ ಖರೀದಿ ಕೇಂದ್ರಗಳನ್ನು ತೆರೆಯಲಾಗುತ್ತಿದೆ.

ಪೌರ ಕಾರ್ಮಿಕರ ಅನುಕೂಲಕ್ಕಾಗಿ ವಿಶ್ರಾಂತಿ ಕೊಠಡಿಗಳನ್ನು ನಿರ್ಮಿಸಲು ಉದ್ದೇಶಿಸಿದ್ದು, ಇದಕ್ಕಾಗಿ ರು. 10 ಕೋಟಿ ಮತ್ತು ನಿರ್ವಹಣೆಗೆ ರು.3 ಕೋಟಿ ಮೀಸಲಿರಿಸಲಾಗಿದೆ. ನಗರದ ಪ್ರಮುಖ ರಸ್ತೆಗಳಲ್ಲಿ ಕಸ ಗುಡಿಸುವುದರಿಂದ ಉಂಟಾಗುವ ಧೂಳು ಹಾಗೂ ಇದರಿಂದ ಉಂಟಾಗುವ ವಾಯುಮಾಲಿನ್ಯ ತಡೆಯುವ ನಿಟ್ಟಿನಲ್ಲಿ ಪ್ರಾಯೋಗಿಕವಾಗಿ ಸ್ವಯಂಚಾಲಿತ ಯಂತ್ರೋಪಕರಣಗಳ ಬಳಕೆಗೆ ಮುಂದಾಗಿದ್ದು, ರು. 6 ಕೋಟಿ ಮೀಸಲಿರಿಸಿದೆ. ಅಲ್ಲದೆ, ಪ್ರಸಕ್ತ ಸಾಲಿನಲ್ಲಿ ಪೌರ ಕಾರ್ಮಿಕರ ಹಾಜರಾತಿ ದಾಖಲೆಗಾಗಿ ಬಯೋಮೆಟ್ರಿಕ್‌ ಆಧಾರಿತ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ. 

ಪ್ಲಾಸ್ಟಿಕ್‌ ನಿಷೇಧ ಪರಿಣಾಮಕಾರಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುವ ಭರವಸೆಯನ್ನೂ ಬಜೆಟ್‌ನಲ್ಲಿ ನೀಡಲಾಗಿದೆ. ಅಲ್ಲದೆ, ಕರ್ನಾಟಕ ಕಾಂಪೋಸ್ಟ್‌ ಅಭಿವೃದ್ಧಿ ನಿಗಮಕ್ಕೆ .15 ಕೋಟಿ ಅನುದಾನ ನೀಡಲಾಗುತ್ತದೆ. ಒಟ್ಟಾರೆ ಬೆಂಗಳೂರು ಮಹಾ​ನಗರದ ಕಸ ವಿಲೇವಾರಿ ಸಮರ್ಪಕ ನಿರ್ವಹಣೆಗೆ ರು.600 ಕೋಟಿ ಸೇರಿದಂತೆ ಘನತ್ಯಾಜ್ಯ ನಿರ್ವಹಣೆಗೆ ಈ ಬಾರಿ ಬಜೆಟ್‌ನಲ್ಲಿ ಒಟ್ಟು ರು. 751.70 ಕೋಟಿ ಮೀಸಲಿರಿಸಲಾಗಿದೆ.

ಕಸ ಸುರಿದರೆ ಹುಷಾರ್‌, ಮಾರ್ಷಲ್‌ ಹಿಡೀತಾರೆ..!
ಕಂಡ ಕಂಡಲ್ಲಿ ಕಸ ಸುರಿದು ನಗರದ ಸೌಂದರ್ಯ ಹಾಳುಮಾಡುವುದನ್ನು ತಡೆಗಟ್ಟಲು ಮಾರ್ಷಲ್‌ಗಳನ್ನು ನಿಯೋಜಿಸಲು ಬಿಬಿಎಂಪಿ ನಿರ್ಧರಿಸಿದೆ.ಇವರು ಬೀದಿಯಲ್ಲಿ ಕಸ ಎಸೆಯುವವ ರನ್ನು ಹಿಡಿದು ದಂಡ ವಿಧಿಸಲಿದ್ದಾರೆ. ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಈ ಮಾರ್ಷಲ್‌ಗಳ ಸೇವೆ ಬಳಸಿಕೊಳ್ಳಲು ಬಜೆಟ್‌'ನಲ್ಲಿ ರು.7 ಕೋಟಿ ಕಾಯ್ದಿರಿಸಲಾಗಿದೆ. 

ಈ ಬಾರಿ ಬಿಬಿಎಂಪಿ ಬಜೆಟ್‌'ನಲ್ಲಿ ಘನತ್ಯಾಜ್ಯ ನಿರ್ವಹಣೆಗೆ ಉತ್ತಮ ಕಾರ್ಯಕ್ರಮ ಘೋಷಿಸಲಾಗಿದೆ. ಅಂತೆಯೆ ಉತ್ತಮ ಅನುದಾನವನ್ನೂ ನೀಡಲಾಗಿದೆ. ಈ ಅನುದಾನವನ್ನು ಕೇವಲ ಕಸ ಸಾಗಾಣಿಕೆಗೆ ಬಳಸಿದರೆ ಪ್ರಯೋಜನವಿಲ್ಲ. ಕಸ ಸಾಗಾಣೆಗೆ ಸುಧಾರಿತ ವಾಹನಗಳ ಖರೀದಿ, ಪೌರ ಕಾರ್ಮಿಕರ ಕೆಲಸ ಕಾಯಂ, ವೇತನ ಹೆಚ್ಚಳ, ಗುಣಮಟ್ಟದ ಕೈಗವಸು, ಮಾಸ್ಕ್‌ ನೀಡುವುದು. ತ್ಯಾಜ್ಯದಿಂದ ಬಯೋ ಗ್ಯಾಸ್‌, ಗೊಬ್ಬರ ತಯಾರಿಕೆಗೆ ಬಳಸಬೇಕು. ಕಸ ಸಂಗ್ರಹ ಸ್ಥಳಗಳಲ್ಲಿ ಗುಣಮಟ್ಟದ ಕಸದ ಬುಟ್ಟಿಗಳನ್ನು ಇರಿಸಬೇಕು. ವಾಹನದಿಂದ ವಾಹನಕ್ಕೆ ಕಸ ವರ್ಗಾಯಿಸುವಾಗ ಯಂತ್ರಗಳ ಬಳಕೆಗೆ ಮುಂದಾಗಬೇಕು. ಒಂದು ವೇಳೆ ಅನುದಾನವನ್ನು ಕಸ ಸಾಗಾಣಿಕೆಗೆ ಬಳಸಿಕೊಂಡಲ್ಲಿ ಅದು ಮತ್ತೊಂದು ಹಣ ಹೊಡೆಯವ ಮಾಫಿಯಾವಾಗಲಿದೆ.
- ಕಾತ್ಯಾಯನಿ ಚಾಮರಾಜ್‌, ಮುಖ್ಯ ಕಾರ್ಯ ನಿರ್ವಾಹಕಿ, ಸಿವಿಕ್‌ ಸಂಸ್ಥೆ

ಕನ್ನಡಪ್ರಭ ವಾರ್ತೆ
epaper.kannadaprabha.in