ಒಂದು ಕಾಲದಲ್ಲಿ ಹಸಿರಿನ ಸಿರಿಯಿಂದ ತಂಪೆರೆವ ನೆಲೆಯಾಗಿದ್ದ ಚಿಕ್ಕಮಗಳೂರು, ಇಂದು ಜಲಚರಗಳ ಸಾವಿನ ಕೂಪವಾಗಿದೆ. ಕೆರೆ ಕಟ್ಟೆಗಳಲ್ಲಿ ನೀರಿಲ್ಲದೆ ಒಂದೆಡೆ ಜನರು ಪರದಾಡಿದರೆ, ಇನ್ನೊಂದೆಡೆ ಅದನ್ನೇ ಆಸರೆಯಾಗಿಸಿಕೊಂಡಿದ್ದ ಜಲಚರಗಳು ಕ್ರೂರ ಬರಕ್ಕೆ ಬಲಿಯಾಗಿವೆ. 

ಚಿಕ್ಕಮಗಳೂರು(ಎ.03): ಒಂದು ಕಾಲದಲ್ಲಿ ಹಸಿರಿನ ಸಿರಿಯಿಂದ ತಂಪೆರೆವ ನೆಲೆಯಾಗಿದ್ದ ಚಿಕ್ಕಮಗಳೂರು, ಇಂದು ಜಲಚರಗಳ ಸಾವಿನ ಕೂಪವಾಗಿದೆ. ಕೆರೆ ಕಟ್ಟೆಗಳಲ್ಲಿ ನೀರಿಲ್ಲದೆ ಒಂದೆಡೆ ಜನರು ಪರದಾಡಿದರೆ, ಇನ್ನೊಂದೆಡೆ ಅದನ್ನೇ ಆಸರೆಯಾಗಿಸಿಕೊಂಡಿದ್ದ ಜಲಚರಗಳು ಕ್ರೂರ ಬರಕ್ಕೆ ಬಲಿಯಾಗಿವೆ. 

ಅಪ್ಪಟ ಮಲೆನಾಡು ಚಿಕ್ಕಮಗಳೂರು ಜಿಲ್ಲೆ ಮೂಗ್ತಿಹಳ್ಳಿಯಲ್ಲಿ ಬರದ ಭಯಾನಕ ದೃಶ್ಯಗಳು ಕಂಡುಬರುತ್ತಿವೆ. ಇಲ್ಲಿನ ಎರಡು ಕೆರೆಗಳು ಜಲಚರಗಳ ಪಾಲಿಗೆ ಸಾವಿನ ಕೂಪವಾಗಿವೆ. ಬಿಸಿಲಿನ ತಾಪಕ್ಕೆ ಕೆರೆಯ ನೀರೆಲ್ಲ ಬತ್ತಿ ಹೋಗಿ ಬಿರುಕು ಸೆಳೆದಿವೆ. ಈ ಕೆರೆಯನ್ನೇ ನಂಬಿಕೊಂಡಿದ್ದ ಸಾವಿರಾರು ಕಪ್ಪೆಗಳು ಸತ್ತು ಒಣಗಿಹೋಗಿವೆ.

ಕೆರೆಯ ಒಂದು ಭಾಗದಲ್ಲಿ ಒಂದಿಷ್ಟು ನೀರು ಇದೆ. ಕೆಲವೇ ದಿನಗಳಲ್ಲಿ ಇದು ಆವಿಯಾಗಿ ಹೋಗುವುದರಲ್ಲಿ ಅನುಮಾನವೇ ಇಲ್ಲ. ಅಲ್ಲಿಗೆ ಉಳಿದ ಕಪ್ಪೆಗಳ ಜೀವಕ್ಕೂ ಸಂಚಕಾರ ಖಚಿತ. ಈಬಾರಿಯ ಭೀಕರ ಬರ ಜನ, ಜಾನುವಾರುಗಳು ಮಾತ್ರವಲ್ಲದೆ ಜಲಚರಗಳ ಮೇಲೂ ಭೀಕರ ಪರಿಣಾಮ ಬೀರಿದೆ. ಮಳೆಗಾಗಿ ವಟಗುಡುತ್ತಿದ್ದ ಕಪ್ಪೆಗಳೇ ಈಗ ಜೀವ ಬಿಡುತ್ತಿವೆ. ಸದ್ಯಕ್ಕಂತೂ ಮಳೆಯ ನಿರೀಕ್ಷೆಯಿಲ್ಲ. ಬರಗಾಲದ ಈ ಬದುಕು ನಿಜಕ್ಕೂ ಭೀಕರ.. ಭಯಾನಕ.