ನಾನು ವಿದ್ಯಾವಂತನಾಗಿ ದಡ್ಡನಾದೆ. ನನ್ನ ನಿರ್ಧಾರ ತಪ್ಪಾಗಿದೆ. ಎಲ್ಲರಂತೆ ನಾನೂ ಸಹ ನೌಕರಿಗೆ ಹೋಗುವ ಆಸೆಯನ್ನು ಬಿಟ್ಟು ಹಳ್ಳಿಯಲ್ಲಿ ಕೃಷಿಕನಾಗಿ ಬದುಕು ಕಟ್ಟಿಕೊಳ್ಳಬಹುದು ಎನ್ನುವ ನಿರೀಕ್ಷೆ ತಪ್ಪಾಗಿದೆ. ಇಂದು ನಮ್ಮ ಬದುಕು ಮೂರಾಬಟ್ಟೆಯಾಗಿದೆ. ಇದಕ್ಕೆ ಅರಣ್ಯ ಇಲಾಖೆಯೇ ನೇರ ಹೊಣೆ. ಒಬ್ಬ ರೈತ ಎಷ್ಟೇ ವಿದ್ಯಾವಂತನಾದರೂ ಕಾಡಂಚಿನಲ್ಲಿ ವ್ಯವಸಾಯ ಮಾಡಲು ಸಾಧ್ಯವಿಲ್ಲ ಎನ್ನುವುದು ಸಾಬೀತಾಗಿದೆ. ಹೀಗಾದರೆ ರೈತರ ಪಾಡೇನು ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ಕನಕಪುರ: ಕಾವೇರಿ ವನ್ಯಜೀವಿಧಾಮದ ಕಾಡಂಚಿನ ಗ್ರಾಮ ಭೂಹಳ್ಳಿಯಲ್ಲಿ ಕಾಡುಪ್ರಾಣಿಗಳಿಂದ ಬೆಳೆ ನಷ್ಟ ಅನುಭವಿಸಿ ಜೀವನ ನಡೆಸಲಾಗದೆ ಮನನೊಂದು ಅರಣ್ಯಾಧಿಕಾರಿಗಳ ಮುಂದೆಯೇ ರೈತನೊಬ್ಬ ಅತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆಯಿತು. ಆತ್ನಹತ್ಯೆಗೆ ಯತ್ನಿಸಿದ ರೈತನನ್ನು ಸಾತನೂರು ಹೋಬಳಿಯ ಭೂಹಳ್ಳಿ ಗ್ರಾಮದ ರಾಜು ಎಂದು ಗುರುತಿಸಲಾಗಿದೆ. ಈತ ಮೂರು ಎಕರೆ ಜಮೀನಿನಲ್ಲಿ ಹತ್ತಾರು ವರ್ಷಗಳಿಂದ ಕೃಷಿಯಲ್ಲಿ ತೊಡಗಿಸಿಕೊಂಡಿದ್ದು, ಬೆಳೆ ನಷ್ಟದಿಂದ ಜೀವನ ನಡೆಸಲಾಗದೆ ಇಂತಹ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದರು. ನಾನು ಸಹ ನನ್ನ ಸಹೋದರರಂತೆ ಪದವೀಧರ. ಎಲ್ಲರೂ ನೌಕರಿಗೆ ತೆರಳಿ, ನಾನು ಕೃಷಿಯನ್ನು ಆಯ್ಕೆ ಮಾಡಿಕೊಂಡು ಜೀವನ ಕಟ್ಟಿಕೊಳ್ಳಲಾಗದೆ ಪರದಾಡುತ್ತಿದ್ದೇನೆ ಎಂದು ಮಾಧ್ಯಮಗಳಿಗೆ ತಿಳಿಸಿದರು.

ಪರಿಹಾರ ಸಿಕ್ಕಿಲ್ಲ: ಮೂರು ಎಕರೆ ಜಮೀನಿನಲ್ಲಿ 150ಕ್ಕೂ ಹೆಚ್ಚು ತೆಂಗಿನ ಮರ ಇದ್ದವು. ಇಂದು ಕಾಡುಪ್ರಾಣಿಗಳ ದಾಳಿಗೆ ಸಿಲುಕಿ 50 ತೆಂಗಿನ ಮರಗಳು ಉಳಿದುಕೊಂಡಿವೆ. ಈವರೆಗೆ ನಾಶವಾದ ಮರಗಳಿಗೆ ಯಾವುದೇ ಪರಿಹಾರ ಸಿಕ್ಕಿಲ್ಲ. ಒಂದು ದಿನ ದಾಳಿಯಲ್ಲಿ ಕಳೆದುಕೊಂಡ ಬೆಳೆಗೆ ಅರ್ಜಿ ನೀಡಿ ಮನೆಗೆ ಬಂದರೆ, ಎರಡು ದಿನ ಬಿಟ್ಟು ಮತ್ತೆ ದಾಳಿ ನಡೆಸುತ್ತವೆ. ಮತ್ತೆ ಕಚೇರಿಗೆ ಅಲೆದು ದೂರು ನೀಡಿ ಸಾಕಾಗಿದೆ. ಈವರೆಗೆ ನಮಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಕೊಟ್ಟಭರವಸೆ ಹುಸಿಯಾಗಿದೆ ಎಂದು ದೂರಿದರು.

ಕಳೆದ ಮೂರು ದಿನಗಳಿಂದ ಸತತ ದಾಳಿಗೆ ಮುಂದಾಗಿರುವ ಕಾಡಾನೆಗಳು ಮೂರು ಎಕರೆಯಲ್ಲಿನ ಬೆಳೆಯನ್ನು ಸಂಪೂರ್ಣವಾಗಿ ನಾಶ ಮಾಡಿವೆ. ನಮಗೆ ಮತ್ತು ನಮ್ಮ ಬೆಳೆಗಳಿಗೆ ರಕ್ಷಣೆ ಇಲ್ಲದಂತಾಗಿದೆ ನಮ್ಮಂತೆ ಹಲವಾರು ರೈತರು ಇಂತಹ ಸಂದಿಗ್ದತೆಯಲ್ಲಿ ಸಿಲುಕಿಕೊಂಡಿದ್ದಾರೆ. ಎಲ್ಲರ ಬದುಕು ಸಹ ನಮ್ಮಂತೆಯೇ ಇದೆ. ಕಾಡಂಚಿನ ಗ್ರಾಮದ ರೈತರಾಗಿರುವುದೇ ನಾವು ಮಾಡಿರುವ ಪಾಪ ಎಂಬಂತಾಗಿದೆ ಎನ್ನುತ್ತರೆ ಬೆಳೆ ಕಳೆದುಕೊಂಡ ರೈತರು.

ಅರಣ್ಯ ಇಲಾಖೆ ಹೊಣೆ: ನಾನು ವಿದ್ಯಾವಂತನಾಗಿ ದಡ್ಡನಾದೆ. ನನ್ನ ನಿರ್ಧಾರ ತಪ್ಪಾಗಿದೆ. ಎಲ್ಲರಂತೆ ನಾನೂ ಸಹ ನೌಕರಿಗೆ ಹೋಗುವ ಆಸೆಯನ್ನು ಬಿಟ್ಟು ಹಳ್ಳಿಯಲ್ಲಿ ಕೃಷಿಕನಾಗಿ ಬದುಕು ಕಟ್ಟಿಕೊಳ್ಳಬಹುದು ಎನ್ನುವ ನಿರೀಕ್ಷೆ ತಪ್ಪಾಗಿದೆ. ಇಂದು ನಮ್ಮ ಬದುಕು ಮೂರಾಬಟ್ಟೆಯಾಗಿದೆ. ಇದಕ್ಕೆ ಅರಣ್ಯ ಇಲಾಖೆಯೇ ನೇರ ಹೊಣೆ. ಒಬ್ಬ ರೈತ ಎಷ್ಟೇ ವಿದ್ಯಾವಂತನಾದರೂ ಕಾಡಂಚಿನಲ್ಲಿ ವ್ಯವಸಾಯ ಮಾಡಲು ಸಾಧ್ಯವಿಲ್ಲ ಎನ್ನುವುದು ಸಾಬೀತಾಗಿದೆ. ಹೀಗಾದರೆ ರೈತರ ಪಾಡೇನು ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ಈ ಬಾರಿ ಮೂರು ಎಕರೆಗೂ ಬಿಳಿಜೋಳ ಹಾಕಿ ಹೈನುಗಾರಿಕೆ ನಡೆಸುವ ರೈತರಿಗೆ ಎಕರೆಗೆ 15 ಸಾವಿರದಂತೆ ಮೂರು ಎಕರೆ ಜೋಳವನ್ನು 45 ಸಾವಿರ ರೂ ಗೆ ಮಾರಾಟ ಮಾಡಿದ್ದೆವು ಅದನ್ನು ಕಟಾವು ಮಾಡುವ ಮುನ್ನವೇ ದಾಳಿ ಮಾಡಿ ನಾಶ ಮಾಡಿದ್ದು ಖರೀದಿಸಿ ರೈತರು ಬೇಡವೆಂದು ಬಿಟ್ಟಿದ್ದಾರೆ. ಇಂದು ಬರುತ್ತಿದ್ದ ಹಣ ಇಲ್ಲವಾಗಿದೆ ಇಂದು ನಮಗೆ ಸ್ಥಳದಲ್ಲೇ ಪರಿಹಾರ ನೀಡಬೇಕು ಇಲ್ಲವಾದರೆ ನಮ್ಮ ತೀರ್ಮಾನ ಬದಲಾಯಿಸುವುದಿಲ್ಲ ಎಂದು ಪಟ್ಟು ಹಿಡಿದರು.

ರೈತರ ಹತಾಶೆಯನ್ನು ಕಂಡ ನೂತನವಾಗಿ ಬಂದಿರುವ ಉಪವಲಯಾರಣ್ಯಾಧಿಕಾರಿ ಶಿವಕುಮಾರ್‌, ರೈತರನ್ನು ಸಮಾಧಾನ ಪಡಿಸಿ. ನಾನು ಇಲ್ಲಿಗೆ ಹೊಸದಾಗಿ ಬಂದಿರುವ ಅಧಿಕಾರಿ ಈ ಹಿಂದೆ ಏನು ನಡೆದಿತ್ತು ಎಂದು ಗೊತ್ತಿಲ್ಲ. ಕಾಡಾನೆದಾಳಿಯಿಂದ ನಿಮಗೆಲ್ಲ ತೊಂದರೆಯಾಗಿರುವುದು ನಿಜ. ಇದನ್ನು ಮನಗಂಡು ಉನ್ನತ ಅಧಿಕಾರಿಗಳ ಜೊತೆ ಚರ್ಚೆ ಮಾಡಲಾಗಿದೆ. ಈ ಭಾಗದಲ್ಲಿ ರೈಲ್ವೆ ಕಂಬಿಗಳನ್ನು ಹಾಕಿಸಿ ಶಾಶ್ವತ ಪರಿಹಾರ ನೀಡುವ ಭರವಸೆ ನೀಡಿದ್ದು, ಕಾರ್ಯಗತವಾಗಲಿದೆ. ನಂತರ ನಿಮಗೆ ಇಂತಹ ಸಮಸ್ಯೆ ಕಾಡುವುದಿಲ್ಲ. ಈಗ ಆಗಿರುವ ನಷ್ಟದ ಅಂದಾಜು ವರದಿಯನ್ನು ಸಿದ್ಧ ಮಾಡಿ ನಿಮಗೆ ಸೂಕ್ತ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ
epaper.kannadaprabha.in