ಚಂದ್ರದ್ರೋಣ ಪರ್ವತದಲ್ಲಿರುವ ದತ್ತಪೀಠದಲ್ಲಿ ಮಂಗಳವಾರ ವಿಎಚ್‌ಪಿ, ಬಜರಂಗದಳ ಹಮ್ಮಿಕೊಂಡಿರುವ ದತ್ತಜಯಂತಿ ಉತ್ಸವದ ಎರಡನೇ ದಿನವಾದ ಸೋಮವಾರ ನಗರದಲ್ಲಿ ಶೋಭಾಯಾತ್ರೆ ಅತ್ಯಂತ ವೈಭವವಾಗಿ ನಡೆಯಿತು.
ಚಿಕ್ಕಮಗಳೂರು (ಡಿ.12): ಚಂದ್ರದ್ರೋಣ ಪರ್ವತದಲ್ಲಿರುವ ದತ್ತಪೀಠದಲ್ಲಿ ಮಂಗಳವಾರ ವಿಎಚ್ಪಿ, ಬಜರಂಗದಳ ಹಮ್ಮಿಕೊಂಡಿರುವ ದತ್ತಜಯಂತಿ ಉತ್ಸವದ ಎರಡನೇ ದಿನವಾದ ಸೋಮವಾರ ನಗರದಲ್ಲಿ ಶೋಭಾಯಾತ್ರೆ ಅತ್ಯಂತ ವೈಭವವಾಗಿ ನಡೆಯಿತು.
ದತ್ತಪೀಠಕ್ಕೆ ಇರುಮುಡಿ ಕಟ್ಟಿಕೊಂಡು ಹೋಗುವುದು ಸಂಪ್ರದಾಯ. ಅದಕ್ಕಾಗಿ ಮಾಲಾಧಾರಿಗಳು, ಪೀಠಕ್ಕೆ ತೆರಳುವ ಹಿಂದಿನ ದಿನ ೫ ಮನೆಗಳಿಗೆ ತೆರಳಿ ಪಡಿ ಸಂಗ್ರಹ ಮಾಡುತ್ತಾರೆ. ಈ ಪ್ರತೀತಿಯಂತೆ ಸೋಮವಾರ ಶಾಸಕ ಸಿ.ಟಿ. ರವಿ ಸೇರಿದಂತೆ ಪ್ರಮುಖ ಮಾಲಾಧಾರಿಗಳು ಪಡಿ ಸಂಗ್ರಹಿಸಿದರು.
ಮಧ್ಯಾಹ್ನ ಹೊರಡುವ ಶೋಭಾಯಾತ್ರೆಗೆ ಸಂಘಪರಿವಾರದವರು ಭರದ ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಇತ್ತ ಪೊಲೀಸ್ ಇಲಾಖೆ ಕೂಡ ತನ್ನ ಸಿಬ್ಬಂದಿಗಳನ್ನು ಯಾತ್ರೆ ಹೊರಡುವ ದಾರಿಯಲ್ಲಿ ನಿಯೋಜನೆ ಮಾಡುತ್ತಿತ್ತು. ನಿಗದಿಯಂತೆ ಮಧ್ಯಾಹ್ನ ೨.೩೦ಕ್ಕೆ ಶೋಭಾಯಾತ್ರೆ ಹೊರಡಬೇಕಾಗಿತ್ತು. ಆದರೆ, ಹೊರಟಿದ್ದು ೩.೩೦ಕ್ಕೆ. ಕಾಮಧೇನು ಗಣಪತಿ ದೇವಾಲಯದಿಂದ ದತ್ತ ವಿಗ್ರಹದೊಂದಿಗೆ ಹೊರಟ ಶೋಭಾಯಾತ್ರೆ ಕೆಇಬಿ ವೃತ್ತ, ಬಸವನಹಳ್ಳಿ ಮುಖ್ಯ ರಸ್ತೆ, ಹನುಮಂತಪ್ಪ ವೃತ್ತ, ಎಂ.ಜಿ. ರಸ್ತೆಯ ಮೂಲಕ ಆಜಾದ್ ಪಾರ್ಕ ವೃತ್ತಕ್ಕೆ ತಲುಪಿದ ಬಳಿಕ ಧಾರ್ಮಿಕ ಸಭೆ ನಡೆಯಿತು.
ವಾದ್ಯಗಳ ನಾದಕ್ಕೆ ಹೆಜ್ಜೆ ಹಾಕಿ ಕುಣಿದ ಯುವಕರು;
ಶೋಭಾಯಾತ್ರೆ ಆರಂಭದಲ್ಲಿ ನಿರೀಕ್ಷೆಯಷ್ಟು ಮಾಲಾಧಾರಿಗಳು ಇರಲಿಲ್ಲ, ಬಸವನಹಳ್ಳಿ ರಸ್ತೆಯ ಮಧ್ಯ ಭಾಗಕ್ಕೆ ಬರುತ್ತಿದ್ದಂತೆ ಹೆಚ್ಚು ಮಂದಿ ಮಾಲಾಧಾರಿಗಳು ಸೇರ್ಪಡೆಗೊಂಡಿದ್ದರಿಂದ ಯಾತ್ರೆಗೆ ಮೆರಗು ಬಂದಿತು. ಯುವಕರು, ವಾದ್ಯಗಳ ನಾದಕ್ಕೆ ಹೆಜ್ಜೆ ಹಾಕಿ ಕುಣಿಯುತ್ತಿದ್ದರೆ, ಮಹಿಳೆಯರು ಭಜನೆ ಹಾಕುತ್ತಾ ಮುಂದೆ ಸಾಗುತ್ತಿದ್ದರು. ಚಿಕ್ಕ ಮಕ್ಕಳು ವಿವಿಧ ವೇಷ ಧರಿಸಿ ಪಾಲ್ಗೊಂಡಿದ್ದು ಇಡೀ ರಸ್ತೆ ತುಂಬೆಲ್ಲಾ ಕೇಸರಿಯದ್ದೆ ಕಂಪು ಬೀರಿತ್ತು. ಈ ವೈಭವ ನೋಡಲು ರಸ್ತೆಗಳ ಇಕ್ಕೆಲಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ನಿಂತಿದ್ದರು.
ಶಾಸಕರಾದ ಸಿ.ಟಿ. ರವಿ, ಡಿ.ಎನ್.ಜೀವರಾಜ್, ಕಾರ್ಕಳ ಶಾಸಕ ವಿ. ಸುನೀಲ್ಕುಮಾರ್, ವಿಪ ಸದಸ್ಯ ಎಂ.ಕೆ. ಪ್ರಾಣೇಶ್, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ಜಿಪಂ ಅಧ್ಯಕ್ಷೆ ಚೈತ್ರಶ್ರೀ, ವಿಎಚ್ಪಿ ಜಿಲ್ಲಾ ಕಾರ್ಯಾಧ್ಯಕ್ಷ ಶಿವಶಂಕರ್, ಕಾರ್ಯದರ್ಶಿ ಯೋಗೀಶ್ರಾಜ್ ಅರಸ್, ಬಿಜೆಪಿ ಮುಖಂಡ ತಮ್ಮಯ್ಯ, ವರಸಿದ್ಧಿ ವೇಣುಗೋಪಾಲ್, ದೀಪಕ್ ದೊಡ್ಡಯ್ಯ ಹಾಗೂ ವಿಎಚ್ಪಿ ಮುಖಂಡರು, ದತ್ತಮಾಲಾ ಧಾರಿಗಳು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ರಾಜ್ಯದ ವಿವಿಧೆಡೆಗಳಿಂದ ದತ್ತಪೀಠಕ್ಕೆ ಮಂಗಳವಾರ ದತ್ತಮಾಲಾಧಾರಿಗಳು ಆಗಮಿಸಲಿದ್ದು, ಅವರುಗಳು ಮಾರ್ಗದ ಮಧ್ಯದಲ್ಲಿರುವ ಹೊನ್ನಮ್ಮನಹಳ್ಳದಲ್ಲಿ ಸ್ನಾನ ಮಾಡಿ ಪಾದಯಾತ್ರೆ ಮೂಲಕ ಪೀಠಕ್ಕೆ ತೆರಳಿ, ಸರದಿ ಸಾಲಿನಲ್ಲಿ ದತ್ತಪಾದುಕೆ ದರ್ಶನ ಪಡೆದು ನಂತರದಲ್ಲಿ ಪಡಿ ಸಮರ್ಪಿಸಿ, ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.
ಮಾಜಿ ಸಿಎಂ ಯಡಿಯೂರಪ್ಪ, ಜಿಲ್ಲೆಯ ಬಿಜೆಪಿ ಶಾಸಕರು, ಜನಪ್ರತಿನಿಧಿಗಳು, ವಿಎಚ್ಪಿ- ಬಜರಂಗದಳ ಮುಖಂಡರು, ದತ್ತಪೀಠಕ್ಕೆ ತೆರಳಲಿದ್ದಾರೆ.
