ದತ್ತಜಯಂತಿ ಹಿನ್ನೆಲೆ ಸಾರ್ವಜನಿಕ ಶಾಂತಿ ಸುವ್ಯವಸ್ಥೆ ಕಾಪಾಡಲು ಸೂಕ್ತ ಬಂದೋಬಸ್ತ್ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಸತ್ಯವತಿ ಅಧಿಕಾರಿಗಳಿಗೆ ಸೂಚಿಸಿದರು. ಡಿಸೆಂಬರ್ 11 ರಿಂದ 13 ರ ವರೆಗೆ ನಡೆಯಲಿರುವ ದತ್ತ ಜಯಂತಿ ಸಂಬಂಧ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಚಿಕ್ಕಮಗಳೂರು (ನ.23): ದತ್ತಜಯಂತಿ ಹಿನ್ನೆಲೆ ಸಾರ್ವಜನಿಕ ಶಾಂತಿ ಸುವ್ಯವಸ್ಥೆ ಕಾಪಾಡಲು ಸೂಕ್ತ ಬಂದೋಬಸ್ತ್ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಸತ್ಯವತಿ ಅಧಿಕಾರಿಗಳಿಗೆ ಸೂಚಿಸಿದರು. ಡಿಸೆಂಬರ್ 11 ರಿಂದ 13 ರ ವರೆಗೆ ನಡೆಯಲಿರುವ ದತ್ತ ಜಯಂತಿ ಸಂಬಂಧ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅಭಿಯಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸುವ ಹಿನ್ನೆಲೆ, ಶಾಂತಿ ಸುವ್ಯವಸ್ಥೆಯಲ್ಲಿ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಬಂದೋಬಸ್ತ್ ಕಲ್ಪಿಸಬೇಕು ಎಂದು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಿದ ಅವರು, ಸೆಕ್ಟರ್ ಮ್ಯಾಜಿಸ್ಟೇಟರ್‌ಗಳನ್ನು ನಿಯೋಜನೆ ಮಾಡಲು ಸಹ ತಿಳಿಸಿದರು.

ಐಡಿ ಪೀಠದ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ಡಿ 11 ರಿಂದ 13 ರ ವರೆಗೆ ನಡೆಯಲಿರುವ ದತ್ತಮಾಲಾ ಅಭಿಯಾನ ಮತ್ತು ದತ್ತ ಜಯಂತಿ ಉತ್ಸವಕ್ಕೆ ಆಗಮಿಸಲಿರುವ ಭಕ್ತಾಧಿಗಳಿಗೆ ಕುಡಿಯುವ ನೀರು, ತಾತ್ಕಾಲಿಕ ಆಸ್ಪತ್ರೆ ವ್ಯವಸ್ಥೆ ಸೇರಿದಂತೆ ಆಂಬ್ಯುಲೆನ್ಸ್ ಮತ್ತು ವೈದ್ಯಾಧಿಕಾರಿಗಳನ್ನು ನೇಮಿಸುವುದರ ಜೊತೆಗೆ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸಬೇಕೆಂದು ಹಾಗೂ ದತ್ತ ಜಯಂತಿ ಸಂದರ್ಭ ನಿರಂತರ ವಿದ್ಯುತ್ ಸರಬರಾಜು ಆಗುವಂತೆ ನೋಡಿಕೊಳ್ಳಬೇಕೆಂದು ಮೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದಿಂದ ಐಡಿ ಪೀಠಕ್ಕೆ ಹೋಗುವ ರಸ್ತೆಯ ವಾಹನ ಸಂಚಾರಕ್ಕೆ ಯೋಗ್ಯ ರೀತಿಯಲ್ಲಿರುವಂತೆ ಅಗತ್ಯ ದುರಸ್ತಿ ಕಾರ್ಯಗಳನ್ನು ಕೈಗೊಳ್ಳಬೇಕು ಹಾಗೂ ರಸ್ತೆ ತಿರುವುಗಳಲ್ಲಿ ಸೂಚನಾ ಫಲಕ ಅಳವಡಿಸ ಬೇಕೆಂದರು. ವಿವಿಧ ಜಿಲ್ಲೆಗಳಿಂದ ಭಕ್ತರು ವಾಹನಗಳ ಮೂಲಕ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಆಗಮನ ಮತ್ತು ನಿರ್ಗಮನ ವ್ಯವಸ್ಥೆಯಲ್ಲಿ ಯಾವುದೇ ರೀತಿಯಲ್ಲಿ ಸಂಚಾರಕ್ಕೆ ತೊಂದರೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಐಡಿ ಪೀಠದ ಸ್ವಚ್ಚತೆ ಕಾಪಾಡುವುದರೊಂದಿಗೆ ಗುಹೆಯ ಆವರಣ ಹಾಗೂ ಒಳಭಾಗದಲ್ಲಿ ಕ್ಯಾಮೆರಾ, ವಿಡಿಯೋ ಹಾಗೂ ಮೊಬೈಲ್‌ಗಳನ್ನು ನಿಷೇಧಿಸಲಾಗಿದೆ ಎಂದ ಅವರು, ನ್ಯಾಯಾಲಯ ಆದೇಶದ ವ್ಯಾಪ್ತಿಯೊಳಗೆ ದತ್ತ ಜಯಂತಿಗೆ ಎಲ್ಲ ಸಹಕಾರವನ್ನೂ ನೀಡಬೇಕೆಂದು ಸತ್ಯವತಿ ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ.ಅಣ್ಣಾಮಲೈ, ಉಪವಿಭಾಗಾಧಿಕಾರಿ ಸಂಗಪ್ಪ, ಸರೋಜ, ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಅಣ್ಣಪ್ಪ ನಾಯಕ್, ಜಿಪಂ ಉಪಕಾರ್ಯದರ್ಶಿ ರಾಜಗೋಪಾಲ್, ತಾಲೂಕಿನ ತಹಶೀಲ್ದಾರ್‌ರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ದತ್ತಜಯಂತಿ ಹಿನ್ನಲೆ ಅಧಿಕಾರಿಗಳ ಪೂರ್ವಭಾವಿ ಸಭೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಡಿಸಿ ಸತ್ಯವತಿ ಅಧ್ಯಕ್ಷತೆಯಲ್ಲಿ ನಡೆಯಿತು.