ಹ್ಯಾರಿಸ್‌ ಸೇರಿದಂತೆ ಈ ಎಲ್ಲರಿಗೂ ಸಿಗುತ್ತಿದೆ ಕಾಂಗ್ರೆಸ್ ಟಿಕೆಟ್..!

First Published 20, Mar 2018, 9:39 AM IST
Congress Give Ticket To Haris
Highlights

ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಮೊದಲ ಪಟ್ಟಿಏಪ್ರಿಲ್‌ ಮೊದಲ ವಾರದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಇದಕ್ಕೆ ಎಲ್ಲಾ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ತಿಳಿಸಿದರು

ಹಾಸನ: ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಗಳ ಮೊದಲ ಪಟ್ಟಿಏಪ್ರಿಲ್‌ ಮೊದಲ ವಾರದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಇದಕ್ಕೆ ಎಲ್ಲಾ ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದಲ್ಲಿ ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಲಾಗುತ್ತದೆ. ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಗೆ ಗೆಲುವು ಒಂದೇ ಮಾನದಂಡವಾಗಿದೆ ಎಂದು ಹೇಳಿದರು. ಹ್ಯಾರಿಸ್‌ ಸೇರಿ ಎಲ್ಲಾ ಹಾಲಿ ಶಾಸಕರಿಗೂ ಟಿಕೆಟ್‌ ನೀಡಲು ಈಗಾಗಲೇ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

ಇವಿಎಂ ಬೇಡ: ವಿಧಾನಸಭೆ ಚುನಾವಣೆಯಲ್ಲಿ ಮತಯಂತ್ರ (ಇವಿಎಂ) ಬಳಕೆ ಬೇಡ ಅಂತ ಎಐಸಿಸಿ ಅಧಿವೇಶನದಲ್ಲಿ ಈಗಾಗಲೇ ನಿರ್ಣಯವನ್ನು ಕೈಗೊಳ್ಳಲಾಗಿದೆ. ಅದನ್ನು ಶೀಘ್ರವೇ ಚುನಾವಣಾ ಆಯೋಗಕ್ಕೆ ಮನವಿ ಮಾಡಲಾಗುವುದು. ಇವಿಎಂ ಬದಲು ಬ್ಯಾಲೆಟ್‌ ಪೇಪರ್‌ ಬಳಸಿ ಎನ್ನುವುದು ನಮ್ಮ ಆಗ್ರಹ ಎಂದು ಹೇಳಿದರು.

ಪಕ್ಷ ಭಾಗಿಯಾಗಿಲ್ಲ: ಲಿಂಗಾಯತ-ವೀರಶೈವ ಪ್ರತ್ಯೇಕ ಧರ್ಮ ವಿಚಾರದಲ್ಲಿ ನಮ್ಮ ಪಕ್ಷ ಭಾಗಿಯಾಗಿಲ್ಲ. ಆಗುವುದಿಲ್ಲ. ಮೊದಲಿನಿಂದಲೂ ನಾನು ಇದೇ ಅಭಿಪ್ರಾಯ ವ್ಯಕ್ತಪಡಿಸುತ್ತಾ ಬಂದಿದ್ದೇನೆ. ಈ ವಿಷಯದಲ್ಲಿ ಇಬ್ಬರು ಸಚಿವರು ಹಿತಾಸಕ್ತಿ ತೋರುತ್ತಿರುವುದು ಅವರ ವೈಯಕ್ತಿಕ ವಿಚಾರ. ಆ ಇಬ್ಬರು ಸಚಿವರು ಕಾಂಗ್ರೆಸ್‌ ಪಕ್ಷವನ್ನು ಪ್ರತಿನಿಧಿಸುವುದಿಲ್ಲ. ಅವರು ಸರ್ಕಾರವನ್ನು ಪ್ರತಿನಿಧಿಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್‌ ಪಕ್ಷ ಇದರಲ್ಲಿ ರಾಜಕೀಯ ಪಕ್ಷವಾಗಿ ಭಾಗಿಯಾಗಿಲ್ಲ. ನಮ್ಮದು ಮೊದಲಿಂದಲೂ ಅದೇ ನಿಲುವಾಗಿದೆ. ಧರ್ಮದ ವಿಚಾರದಲ್ಲಿ ರಾಜಕೀಯ ಪಕ್ಷ ನಿರ್ಧಾರ ಕೈಗೊಳ್ಳಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.

ಇಂದಿನಿಂದ ರಾಹುಲ್‌ ರಾಜ್ಯ ಪ್ರವಾಸ:

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ 3ನೇ ಹಂತದ ರಾಜ್ಯ ಪ್ರವಾಸ ಮಂಗಳವಾರದಿಂದ ಆರಂಭಗೊಳ್ಳಲಿದೆ. ಇಂದು ಮಂಗಳೂರಿಗೆ ಆಗಮಿಸುವ ರಾಹುಲ್‌ ಗಾಂಧಿ, ಬುಧವಾರ ಶೃಂಗೇರಿ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ಚಿಕ್ಕಮಗಳೂರು, ಹಾಸನ ಹಾಗೂ ಮೈಸೂರ ನಡೆಯಲಿರುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಲ್ಲಿಂದ ದೆಹಲಿಗೆ ತೆರಳಲಿದ್ದಾರೆ. ಮತ್ತೆ ಮಾ.24 ಮತ್ತು 25ರಂದು ರಾಜ್ಯ ಪ್ರವಾಸ ಮಾಡಲಿದ್ದಾರೆ ಎಂದು ಹೇಳಿದರು.

ಪ್ರತಿಕ್ರಿಯೆ ನೋಡಿ ಹರ್ಷ ಮೊಹ್ಲಿ ಮೇಲೆ ಕ್ರಮ:

ಕಾಂಗ್ರೆಸ್‌ ಪಕ್ಷಕ್ಕೆ ಡ್ಯಾಮೇಜ್‌ ಆಗುವ ರೀತಿಯಲ್ಲಿ ಟ್ವೀಟ್‌ ಮಾಡಿದ್ದ ಮಾಜಿ ಸಿಎಂ ವೀರಪ್ಪ ಮೊಯ್ಲಿ ಪುತ್ರ ಹರ್ಷ ಮೊಯ್ಲಿಗೆ ನೋಟಿಸ್‌ ನೀಡಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದರಲ್ಲಿ ನಿಮ್ಮ ಪಾತ್ರ ಏನು? ಎಂದು ಕಾರಣ ಕೇಳಲಾಗಿದೆ. ಅವರಿಂದ ಸೂಕ್ತ ಉತ್ತರ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ ತೀರ್ಮಾನಿಸಲಾಗುತ್ತದೆ ಎಂದರು.

ಅಶೋಕ್‌ ಖೇಣಿ ಕಾಂಗ್ರೆಸ್‌ ಸೇರ್ಪಡೆಗೆ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಕುರಿತು ಪ್ರತಿಕ್ರಿಯೆ ನೀಡಿದ ಪರಮೇಶ್ವರ್‌, ಪ್ರಜಾಪ್ರಭುತ್ವದ ಪ್ರಕಾರ ಸಾಧಕ-ಬಾಧಕ ನೋಡಿ ದೂರದೃಷ್ಟಿಉದ್ದೇಶದಿಂದ ಪಕ್ಷ ಒಂದು ತೀರ್ಮಾನ ಮಾಡಿದೆ. ಇದಕ್ಕೆ ಎಲ್ಲರೂ ಬದ್ಧರಾಗಿರಬೇಕು. ಜೆಡಿಎಸ್‌ ಬಂಡಾಯ ಶಾಸಕರು ಮಾ.25ರಂದು ಕಾಂಗ್ರೆಸ್‌ ಸೇರುವ ಸಾಧ್ಯತೆ ಇದೆ ಎಂದು ಹೇಳಿದರು.

loader