ಒಣಗುತ್ತಿರುವ ಬತ್ತ ಬೆಳೆಯನ್ನು ಉಳಿಸಲು ಭದ್ರಾ ಬಲದಂಡೆ ನಾಲೆಯಲ್ಲಿ ಇನ್ನೂ 9 ದಿನ ನೀರು ಹರಿಸಲು ಭದ್ರಾ ಕಾಡಾ ನೀರಾವರಿ ಸಲಹಾ ಸಮಿತಿ ತೀರ್ಮಾನಿಸಿದೆ.

ಶಿವಮೊಗ್ಗ (ನ.09): ಒಣಗುತ್ತಿರುವ ಬತ್ತ ಬೆಳೆಯನ್ನು ಉಳಿಸಲು ಭದ್ರಾ ಬಲದಂಡೆ ನಾಲೆಯಲ್ಲಿ ಇನ್ನೂ 9 ದಿನ ನೀರು ಹರಿಸಲು ಭದ್ರಾ ಕಾಡಾ ನೀರಾವರಿ ಸಲಹಾ ಸಮಿತಿ ತೀರ್ಮಾನಿಸಿದೆ.

ಬೆಂಗಳೂರಿನಲ್ಲಿ ಬುಧವಾರ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರ ಉಪಸ್ಥಿತಿಯಲ್ಲಿ, ಕಾಡಾ ನೂತನ ಅಧ್ಯಕ್ಷ ಎಚ್.ಎಸ್. ಸುಂದರೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಮಳೆ ಬಾರದೆ ಸಂಕಷ್ಟ ಪರಿಸ್ಥಿತಿ ಇದ್ದು, ನೀರಿನ ಲಭ್ಯತೆ ಕಡಿಮೆ ಇದೆ. ಆದರೆ ದಾವಣಗೆರೆ, ಮಲೆಬೆನ್ನೂರು ಭಾಗದಲ್ಲಿ ಸುಮಾರು ೪೦ ಸಾವಿರ ಹೆಕ್ಟೇರ್ ಭತ್ತ ಒಣಗುತ್ತಿದೆ. ಈಗಾಗಲೇ ಶೇ.40 ರಷ್ಟು ಕಟಾವ್ ಆಗಿದೆ. ಆದರೂ ಕಟಾವ್ ಆಗದೇ ಉಳಿದಿರುವ ಭತ್ತದ ರಕ್ಷಣೆಗಾಗಿ ನವೆಂಬರ್ 20 ರ ವರೆಗೆ ನೀರು ಹರಿಸಲು ತೀರ್ಮಾನಿಸಲಾಗಿದೆ.

ಸಭೆಯಲ್ಲಿ ದಾವಣಗೆರೆ ಭಾಗದ ಜನಪ್ರತಿನಿಧಿಗಳು ಭತ್ತ ಬೆಳೆಯ ಸಮಸ್ಯೆಯನ್ನು ಸಭೆಯ ಗಮನಕ್ಕೆ ತಂದರು. ನೀರು ಹರಿಸದಿದ್ದರೆ ಸಾವಿರಾರು ಎಕರೆ ಭತ್ತ ನಷ್ಟವಾಗಲಿದೆ. ಹಿಂದಿನ ಸಭೆಯಲ್ಲಿ ತೀರ್ಮಾನಿಸಿದಂತೆ ನವೆಂಬರ್ 11ರ ವರೆಗೆ ಮಾತ್ರ ನೀರು ಹರಿಯುತ್ತದೆ. ಇದು ಸಾಕಾಗುವುದಿಲ್ಲ. ಆದ್ದರಿಂದ ಕನಿಷ್ಠ 10 ದಿನ ನೀರು ಹರಿಸಿ ಎಂದು ಒತ್ತಾಯಿಸಿದರು.

ರೈತ ಮುಖಂಡ ಎಚ್.ಆರ್. ಬಸವರಾಜಪ್ಪ ಅವರು, ಈಗ ನೀರು ಹರಿಸಿದರೆ ತೋಟ ಬೆಳೆ ಉಳಿಸುವುದು ಕಷ್ಟವಾಗುತ್ತದೆ. ಮಳೆ ಬಾರದಿದ್ದರೆ ಬೇಸಿಗೆಯಲ್ಲಿ ಇನ್ನಷ್ಟು ಕಷ್ಟ ಎದುರಾಗಲಿದೆ. ದಾವಣಗೆರೆಯ ಭತ್ತ ಬೆಳೆಯನ್ನೂ ಉಳಿಸುವುದು ಅನಿವಾರ್ಯ. ಆದ್ದರಿಂದ 6 ದಿನ ಮಾತ್ರ ಹರಿಸಿ ಎಂದರು.

ರೈತ ನಾಯಕ ಕೆ.ಟಿ. ಗಂಗಾಧರ್ ಅವರು ನ.20 ರ ವರೆಗೆ ದಿನ ನೀರು ಹರಿಸುವುದಕ್ಕೆ ಒಲವು ತೋರಿದರು. ಕೊನೆಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ನಂತರ ಇನ್ನೂ 9 ದಿನ ನೀರು ಹರಿಸಲು ತೀರ್ಮಾನಿಸಲಾಯಿತು.

ಬಲ ದಂಡೆ ನಾಲೆಗೆ-

ಎಡ ದಂಡೆ ನಾಲೆಗೆ ಈ ಮೊದಲು ನ.೧ರ ವರೆಗೆ ನೀರು ಹರಿಸಲು ತೀರ್ಮಾನಿಸಲಾಗಿತ್ತು. ಆದರೆ ನಿಲ್ಲಿಸಿರಲಿಲ್ಲ. ಬುಧವಾರ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಚರ್ಚೆ ನಡೆದಾಗ ಭದ್ರಾ ನಾಲೆ ವ್ಯಾಪ್ತಿಯ ರೈತ ಪ್ರತಿನಿಧಿಗಳು ಕನಿಷ್ಠ ೧೦೦ ಕ್ಯುಸೆಕ್ ನೀರನ್ನು ಹರಿಸುವಂತೆ ಬೇಡಿಕೆ ಸಲ್ಲಿಸಿದರು. ಅದರಂತೆ ನ.೧೫ರ ವರೆಗೆ ಎಡ ದಂಡೆ ನಾಲೆಯಲ್ಲಿ ನೀರು ಹರಿಸಲು ತೀರ್ಮಾನಿಸಲಾಯಿತು.

ಸದ್ಯ ಜಲಾಶಯದಲ್ಲಿ ೩೦ ದಿನಕ್ಕೆ ಆಗುವಷ್ಟು ದಿನ ನೀರು ಇದ್ದು, ಬೇಸಿಗೆ ಹಂಗಾಮಿನಲ್ಲಿ ತಿಂಗಳಿಗೆ ಕನಿಷ್ಠ ೧೦ ದಿನ ನೀರು ಹರಿಸುವ ಇಂಗಿತ ಸಭೆಯಲ್ಲಿ ವ್ಯಕ್ತವಾಯಿತು.

ಸಭೆಯಲ್ಲಿ ಶಾಸಕರಾದ ಎಸ್.ಎಸ್. ಮಲ್ಲಿಕಾರ್ಜುನ್, ವಡ್ನಾಳ್ ರಾಜಣ್ಣ, ಎಚ್.ಎಸ್. ಶಿವಶಂಕರ್, ಡಿ.ಜಿ. ಶಾಂತನಗೌಡ, ತರೀಕೆರೆ ಶ್ರೀನಿವಾಸ್, ಶಾರದಾ ಪೂರ್ಯಾನಾಯ್ಕ್, ಕಾಡಾ ಆಡಳಿತಾಧಿಕಾರಿ ಅಂಬಾಡಿ ಮಾದವ ಸೇರಿದಂತೆ ಹಲವರು ಭಾಗವಹಿಸಿದ್ದರು.

------------

ಹಲವೆಡೆ ನೀರಿನ ಸೋರಿಕೆ ಆಗುತ್ತಿದ್ದು, ಇದನ್ನು ತಡೆಗಟ್ಟಬೇಕಿದೆ. ಆದ್ದರಿಂದ ಗುರುವಾರ ಬೆಳಿಗ್ಗೆ ನೀರಾವರಿ ಸಚಿವ ಎಂ.ಬಿ. ಪಾಟೀಲ್ ಅವರನ್ನು ಭೇಟಿ ಮಾಡುತ್ತಿದ್ದೇವೆ. ನೀರಿನ ಸಂರಕ್ಷಣೆಗೆ ನೆರವಾಗುವಂತೆ ಕೋರುತ್ತೇವೆ. ಅಲ್ಲದೇ, ಸೋರಿಕೆ ಸ್ಥಳ ಪರಿಶೀಲನೆಯನ್ನೂ ನಡೆಸಲಾಗುವುದು. ನೀರಿನ ಸಂಗ್ರಹ ಪರಿಸ್ಥಿತಿಗೆ ಸದ್ಯವೇ ಮತ್ತೊಮ್ಮೆ ಸಲಹಾ ಸಮಿತಿ ಸಭೆ ನಡೆಸಲಾಗುವುದು.