ಕಾಲೇಜು ವಿದ್ಯಾರ್ಥಿನಿಯರಿಂದಲೇ ನ್ಯಾಪ್‌ಕಿನ್‌ ತಯಾರಿಕೆ!

First Published 11, Feb 2018, 8:25 AM IST
College Student Creates Napkin
Highlights

ಮೊಬೈಲ್‌, ಸಿನಿಮಾ, ಮಾಲ್‌, ಸ್ನೇಹಿತರು ಎಂದು ಕಾಲಕಳೆಯುವ ಇಂದಿನ ಪೀಳಿಗೆ ಯುವಜನರಿಗೆ ಮಾದರಿ ಎಂಬಂತೆ ಮಂಗಳೂರಿನ ಕಾವೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರು ತಮ್ಮ ಸ್ವಂತ ಹಣದಲ್ಲೇ ಕಾಲೇಜಿನಲ್ಲಿ ನ್ಯಾಪ್‌ಕಿನ್‌ ಪ್ಯಾಡ್‌ ತಯಾರಿಕಾ ಘಟಕ ಸ್ಥಾಪಿಸಿದ್ದಾರೆ. ಅಲ್ಲದೆ, ಸ್ವತಃ ತಾವೇ ಗ್ರಾಮೀಣ ಹಾಗೂ ಹಿಂದುಳಿದ ಕಾಲನಿಗಳಿಗೆ ತೆರಳಿ ಉಚಿತವಾಗಿ ಮಹಿಳೆಯರಿಗೆ ಹಂಚುವ ಮೂಲಕ ಸ್ವಚ್ಛತೆಯ ಅರಿವು ಮೂಡಿಸುತ್ತಿದ್ದಾರೆ.

ಆತ್ಮಭೂಷಣ್‌ ಮಂಗಳೂರು

ಮಂಗಳೂರು : ಮೊಬೈಲ್‌, ಸಿನಿಮಾ, ಮಾಲ್‌, ಸ್ನೇಹಿತರು ಎಂದು ಕಾಲಕಳೆಯುವ ಇಂದಿನ ಪೀಳಿಗೆ ಯುವಜನರಿಗೆ ಮಾದರಿ ಎಂಬಂತೆ ಮಂಗಳೂರಿನ ಕಾವೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರು ತಮ್ಮ ಸ್ವಂತ ಹಣದಲ್ಲೇ ಕಾಲೇಜಿನಲ್ಲಿ ನ್ಯಾಪ್‌ಕಿನ್‌ ಪ್ಯಾಡ್‌ ತಯಾರಿಕಾ ಘಟಕ ಸ್ಥಾಪಿಸಿದ್ದಾರೆ. ಅಲ್ಲದೆ, ಸ್ವತಃ ತಾವೇ ಗ್ರಾಮೀಣ ಹಾಗೂ ಹಿಂದುಳಿದ ಕಾಲನಿಗಳಿಗೆ ತೆರಳಿ ಉಚಿತವಾಗಿ ಮಹಿಳೆಯರಿಗೆ ಹಂಚುವ ಮೂಲಕ ಸ್ವಚ್ಛತೆಯ ಅರಿವು ಮೂಡಿಸುತ್ತಿದ್ದಾರೆ.

ಇಲ್ಲಿ ತಯಾರಿಸಿದ ನ್ಯಾಪ್‌ಕಿನ್‌ಗಳು ಕೇವಲ ಸ್ಥಳೀಯ ಹಿಂದುಳಿದ ಪ್ರದೇಶಗಳಿಗಷ್ಟೇ ಅಲ್ಲ, ಬೆಂಗಳೂರು, ಬೆಂಗಳೂರು ಗ್ರಾಮಾಂತರ ಹಾಗೂ ಮೈಸೂರಿನ ಹಿಂದುಳಿದ ಕಾಲನಿಗಳಿಗೂ ರವಾನೆಯಾಗಿವೆ. ಈ ಮೂಲಕ ಪದವಿ ಕಾಲೇಜು ಈಗ ಮಹಿಳೆಯರ ಸಬಲೀಕರಣ ಹಾಗೂ ಮಹಿಳಾ ಸ್ವಾಸ್ಥ್ಯ ಕಾಪಾಡುವ ದಿಸೆಯಲ್ಲಿ ದಿಟ್ಟಹೆಜ್ಜೆ ಇಟ್ಟಿದ್ದು, ಹೊಸ ಮೇಲ್ಪಂಕ್ತಿ ಹಾಕಿಕೊಟ್ಟಿದೆ. ಈ ಕಾಲೇಜಿನ ಮಹಿಳಾ ಜಾಗೃತಿ ಮತ್ತು ರೇಂಜರ್ಸ್‌ ಘಟಕದ ಸಂಚಾಲಕಿ ಡಾ.ಪ್ರಮೀಳಾ ರಾವ್‌ ಅವರ ಮಾರ್ಗದರ್ಶನ ಹಾಗೂ ಕಲ್ಪ ಟ್ರಸ್ಟ್‌ ಸಹಯೋಗದಲ್ಲಿ ವಿದ್ಯಾರ್ಥಿಗಳು ನ್ಯಾಪ್‌ಕಿನ್‌ ಉತ್ಪಾದಿಸುತ್ತಿದ್ದಾರೆ.

ಕಾಲೇಜಿನಲ್ಲೇ ಘಟಕ: ಕಾಲೇಜಿನ ಖಾಲಿ ಕೊಠಡಿಯಲ್ಲಿ ನ್ಯಾಪ್‌ಕಿನ್‌ ತಯಾರಿಕಾ ಘಟಕವನ್ನು ಒಂದು ತಿಂಗಳ ಹಿಂದೆಯೇ ಸ್ಥಾಪಿಸಲಾಗಿದೆ. ಪದವಿ ಓದುತ್ತಿರುವ 22 ವಿದ್ಯಾರ್ಥಿನಿಯರು ಶನಿವಾರ, ಭಾನುವಾರ ಹಾಗೂ ರಜಾ ದಿನಗಳಲ್ಲಿ ಇಲ್ಲಿ ನ್ಯಾಪ್‌ಕಿನ್‌ ಪ್ಯಾಡ್‌ ಉತ್ಪಾದಿಸುತ್ತಿದ್ದಾರೆ. ಈ ವಿದ್ಯಾರ್ಥಿನಿಯರಿಗೆ ಕಲ್ಪ ಟ್ರಸ್ಟ್‌ನ 20 ಸದಸ್ಯರು ತರಬೇತಿ ನೀಡಿದ್ದು, ಒಟ್ಟು 65 ಮಂದಿ ನ್ಯಾಪ್‌ಕಿನ್‌ಗಳ ಉತ್ಪಾದನಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ದಾನಿಗಳಿಂದ ಬಟ್ಟೆಸಂಗ್ರಹ: ನ್ಯಾಪ್‌ಕಿನ್‌ ತಯಾರಿಸಲು ಬೇಕಾದ ಹಳೆ ಬಟ್ಟೆಗಳನ್ನು ವಿದ್ಯಾರ್ಥಿನಿಯರೇ ದಾನಿಗಳಿಂದ ಸಂಗ್ರಹಿಸುತ್ತಾರೆ. ಬಳಿಕ ಅವನ್ನು ಸಂಪೂರ್ಣ ಸ್ವಚ್ಛಗೊಳಿಸಿ, ಇಸ್ತ್ರಿ ಮಾಡಿ, ಮೆಡಿಕಲ್‌ ಕಾಟನ್‌ ಬಟ್ಟೆಯಿಂದ ಸುತ್ತಿ, ಹೊರ ಆವರಣದಲ್ಲಿ ಹೊಸ ಬಟ್ಟೆಅಳವಡಿಸುತ್ತಾರೆ. ನಂತರ ನೂಲಿನಲ್ಲಿ ಹೂವಿನ ಚಿತ್ರ ಬಿಡಿಸಿ ನ್ಯಾಪ್‌ಕಿನ್‌ ಪ್ಯಾಡ್‌ ಅನ್ನು ಸಿದ್ಧಗೊಳಿಸುತ್ತಾರೆ. ಈ ಪ್ಯಾಡ್‌ನಲ್ಲಿ ಯಾವುದೇ ರಾಸಾಯನಿಕ ಅಂಶ ಇರುವುದಿಲ್ಲ. ಇವುಗಳನ್ನು ಮಾರಾಟ ಮಾಡದೆ, ‘ಸ್ವಾಸ್ಥ್ಯ’ ಎಂಬ ಹೆಸರಿನಲ್ಲಿ ಇವುಗಳನ್ನು ಹಿಂದುಳಿದ ಕಾಲನಿಗಳಲ್ಲಿ ವಿದ್ಯಾರ್ಥಿಗಳೇ ಉಚಿತವಾಗಿ ಹಂಚುತ್ತಾರೆ.

ಮಾಸಿಕ 3 ಸಾವಿರ ಉತ್ಪಾದನೆ: ಇದೇ ರೀತಿ ತಿಂಗಳಿಗೆ 3 ಸಾವಿರ ನ್ಯಾಪ್‌ಕಿನ್‌ ಪ್ಯಾಡ್‌ಗಳನ್ನು ವಿದ್ಯಾರ್ಥಿಗಳೇ ಉತ್ಪಾದಿಸುತ್ತಾರೆ. ಯಾರಾದರೂ ಹಣಕಾಸಿನ ನೆರವು ನೀಡಿದರೆ ಸರಿ, ಇಲ್ಲದಿದ್ದರೆ ಹೇಗೋ ತಾವೇ ಹಣ ಹೊಂದಿಸಿಕೊಂಡು ತಯಾರಿಸುತ್ತಾರೆ. ಇಲ್ಲಿ ಸಿದ್ಧಗೊಳ್ಳುವ ನ್ಯಾಪ್‌ಕಿನ್‌ಗಳನ್ನು ವಿದ್ಯಾರ್ಥಿಗಳೇ ಉಚಿತವಾಗಿ ಪೂರೈಸುತ್ತಾರೆ. ಜೊತೆಗೆ ಸ್ವಚ್ಛತೆ ಹಾಗೂ ಆರೋಗ್ಯದ ಬಗ್ಗೆ ಕಾಲನಿಯ ಮಹಿಳೆಯರಲ್ಲಿ ಅರಿವು ಮೂಡಿಸುತ್ತಾರೆ ಎನ್ನುತ್ತಾರೆ ಸಂಚಾಲಕಿ ಡಾ.ಪ್ರಮೀಳಾ ರಾವ್‌.

ಒಂದು ಬಾಕ್ಸ್’ಗೆ 120 ರು. ವೆಚ್ಚ : ಒಂದು ಬಾಕ್ಸ್‌ನಲ್ಲಿ 10 ಪ್ಯಾಕೆಟ್‌ ನ್ಯಾಪ್‌ಕಿನ್‌ ಪ್ಯಾಡ್‌ ಇರುತ್ತದೆ. 10 ನ್ಯಾಪ್‌ಕಿನ್‌ಗಳಿಗೆ ಬಾಕ್ಸ್‌ ಸೇರಿ ಒಟ್ಟು . 120 ವೆಚ್ಚ ತಗಲುತ್ತದೆ. ಹಳೆಬಟ್ಟೆ, ಹೊಲಿಗೆ, ಇಸ್ತ್ರಿ ಎಲ್ಲವೂ ಉಚಿತವಾಗಿದ್ದರೂ, ಮೆಡಿಕಲ್‌ ಕಾಟನ್‌ ಬಟ್ಟೆ, ಹೊಸ ಬಟ್ಟೆಗಳನ್ನು ಖರೀದಿಸುತ್ತಾರೆ. ಇದಕ್ಕೆ ಬೇಕಾಗುವ ಮೊತ್ತವನ್ನು ಕಲ್ಪ ಟ್ರಸ್ಟ್‌ ಭರಿಸುತ್ತದೆ. ಆದರೆ ಈ ನ್ಯಾಪ್‌ಕಿನ್‌ನನ್ನು ಕಾಲನಿಗಳಿಗೆ ಉಚಿತವಾಗಿ ಹಂಚಲಾಗುತ್ತದೆ.

ನ್ಯಾಪ್‌ಕಿನ್‌ ಪ್ಯಾಡ್‌ಗಳನ್ನು ಹಿಂದುಳಿದ ಕಾಲನಿ, ಅಬಲಾಶ್ರಮ, ಬಾಲಿಕಾಶ್ರಮಗಳಿಗೂ ಉಚಿತವಾಗಿ ಹಂಚುತ್ತಿದ್ದೇವೆ. ಹೊರಗಡೆ ಕಡಿಮೆ ದರಕ್ಕೆ ಅಥವಾ ಉಚಿತವಾಗಿ ಸಣ್ಣ ಕಟ್ಟಡ ಸಿಕ್ಕರೂ ಈ ಉದ್ದಿಮೆಯನ್ನು ಇನ್ನಷ್ಟುವಿಸ್ತರಿಸುವ ಯೋಚನೆ ಇದೆ. ಅಲ್ಲದೆ, ನ್ಯಾಪ್‌ಕಿನ್‌ ಪ್ಯಾಡ್‌ಗಳಿಗೆ ಮೆಡಿಕಲ್‌ ಬಟ್ಟೆಯ ಬದಲು ವುಡ್‌ಪಲ್‌್ಫ ಬಳಸುವ ಚಿಂತನೆಯೂ ಇದೆ.

-ಡಾ.ಪ್ರಮೀಳಾ ರಾವ್‌, ಸಂಚಾಲಕರು ಮಹಿಳಾ ಜಾಗೃತಿ ಮತ್ತು ರೇಂಜರ್ಸ್‌ ಘಟಕ

‘ಸ್ವಾಸ್ಥ್ಯ ಹೆಸರಿನ ಈ ನ್ಯಾಪ್‌ಕಿನ್‌ ಉತ್ತಮವಾಗಿದೆ. ಕೇವಲ ಬಟ್ಟೆಯಿಂದ ಉತ್ಪಾದಿಸುವುದರಿಂದ ಇದರಿಂದ ಮಹಿಳೆಯರಿಗೆ ತೊಂದರೆಯಿಲ್ಲ. ಇದನ್ನು ಕಾಲನಿ ನಿವಾಸಿಗಳಿಗೆ ಉಚಿತವಾಗಿ ನೀಡುವುದರಿಂದ ದೈಹಿಕ ಸ್ವಚ್ಛತೆ ಹಾಗೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಸಾಧ್ಯವಾಗಿದೆ.’

-ಸುಜಾತ, ತೊಟ್ಟಿಲಗುರಿ ನಿವಾಸಿ

loader