Asianet Suvarna News Asianet Suvarna News

ಎತ್ತಿನಹೊಳೆ ಯೋಜನೆಯಲ್ಲಿ ಮುಖ್ಯಮಂತ್ರಿ ಹಾಗೂ ಆಪ್ತ ಸಚಿವರು ಕಿಕ್ ಬ್ಯಾಕ್ ಪಡೆದಿದ್ದಾರೆ :ಬಿಎಸ್ ವೈ ಆರೋಪ

ಎತ್ತಿನಹೊಳೆ ಯೋಜನೆಗೆ ಅನುಮತಿ ಸಿಗುವ ಮುಂಚೆಯೇ ರೂ.14  ಸಾವಿರ ಕೋಟಿ ಬಿಡುಗಡೆ ಮಾಡಲಾಗಿದೆ. ಕಾಮಗಾರಿ ಆರಂಭಕ್ಕೆ ಮುನ್ನವೇ ಕೋಟ್ಯಂತರ ಮೌಲ್ಯದ ಪೈಪ್ ಖರೀದಿಸಲಾಗಿದೆ. ಇದರಲ್ಲಿ ಮುಖ್ಯಮಂತ್ರಿ ಹಾಗೂ ಆಪ್ತ ಸಚಿವರು ಶೇ.40-50 ರಷ್ಟು ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಗಂಭೀರ ಆರೋಪ ಮಾಡಿದರು.

CM and His Close Ministers Got Kickback in Ettinahole Project

ಶಿವಮೊಗ್ಗ (ಡಿ.12): ಎತ್ತಿನಹೊಳೆ ಯೋಜನೆಗೆ ಅನುಮತಿ ಸಿಗುವ ಮುಂಚೆಯೇ ರೂ.14  ಸಾವಿರ ಕೋಟಿ ಬಿಡುಗಡೆ ಮಾಡಲಾಗಿದೆ. ಕಾಮಗಾರಿ ಆರಂಭಕ್ಕೆ ಮುನ್ನವೇ ಕೋಟ್ಯಂತರ ಮೌಲ್ಯದ ಪೈಪ್ ಖರೀದಿಸಲಾಗಿದೆ. ಇದರಲ್ಲಿ ಮುಖ್ಯಮಂತ್ರಿ ಹಾಗೂ ಆಪ್ತ ಸಚಿವರು ಶೇ.40-50 ರಷ್ಟು ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಗಂಭೀರ ಆರೋಪ ಮಾಡಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಸ್ಟೀಲ್ ಬ್ರಿಡ್ಜ್ ಗುತ್ತಿಗೆದಾರ ರೂ.500 ಕೋಟಿ ಸಚಿವರಿಗೆ ನೀಡಿರುವುದಾಗಿ ತನಿಖೆ ವೇಳೆ ಒಪ್ಪಿಕೊಂಡಿದ್ದಾನೆ. ಅಕ್ರಮ ನೋಟು ಪ್ರಕರಣದಲ್ಲಿ ಸಿಕಿಬಿದ್ದಿರುವ ಗುತ್ತಿಗೆದಾರ ಜಯಚಂದ್ರ ಸಹ ಹಣ ಸಚಿವರದ್ದು ಎಂದು ಹೇಳಿದ್ದಾನೆ. ಈ ಎಲ್ಲ ಪ್ರಕರಣಗಳಲ್ಲೂ ಮುಖ್ಯಮಂತ್ರಿಗಳ ಆಪ್ತ ಸಚಿವರೇ ಇದ್ದಾರೆ. ಎಲ್ಲಾ ಗೊತ್ತಿದ್ದೂ ಈ ಎಲ್ಲ ಪ್ರಕರಣಗಳಲ್ಲೂ ಆಪ್ತರನ್ನು ರಕ್ಷಿಸುವ ಕೆಲಸವನ್ನು ಸಿಎಂ ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎಂದರು.

ಕೂಡಲೇ ಮುಖ್ಯಮಂತ್ರಿ ಪ್ರಕರಣಗಳ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದ ಅವರು, ಇನ್ನು15 ದಿನದಲ್ಲಿ ಸಿದ್ದರಾಮಯ್ಯ ಸಂಪುಟದ ೪ ಸಚಿವರು ಸಂಪುಟ ತ್ಯಜಿಸುವಂತಹ ಕಾಲ ಬರುತ್ತದೆ ಎಂದು ಭವಿಷ್ಯ ನುಡಿದ ಅವರು, ಸಿಎಂ ವಿರುದ್ದವೇ ಆ ಸಚಿವರು ಮಾತನಾಡಿದರೂ ಆಶ್ಚರ್ಯವಿಲ್ಲ. ತಮಗೆ ಬಂದ ಹಣದಲ್ಲಿ ಮುಖ್ಯಮಂತ್ರಿಗೂ ಪಾಲು ಕೊಟ್ಟಿದ್ದೇವೆ ಎಂದು ಹೇಳಬಹುದು. ಈ ಎಲ್ಲ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ರಾಜಿನಾಮೆ ನೀಡುವ ಕಾಲ ಬರುತ್ತದೆ ಎಂದು ತಿಳಿಸಿದರು.

ಯಡಿಯೂರಪ್ಪ ಮತ್ತೆ ಜೈಲಿಗೆ ಹೋಗಲಿದ್ದಾರೆ ಎಂದು ತಮ್ಮ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ಅವರು ಬಗ್ಗೆ ಮಾತನಾಡುವ ಮುನ್ನ ಒಮ್ಮೆ ಆತ್ಮ ವಿಮರ್ಶೆ ಮಾಡಿಕೊಳ್ಳಲಿ. ಕಾಂಗ್ರೆಸ್ ಆಡಳಿತ ರಾಜ್ಯದಲ್ಲಿ ಸಂಪೂರ್ಣವಾಗಿ ಕುಸಿದು ಹೋಗಿದೆ. ಮುಖ್ಯಮಂತ್ರಿಗಳ ಎಡ-ಬಲ ಇರುವ ಸಚಿವರುಗಳೇ ಕಮಿಷನ್ ವ್ಯವಹಾರದಲ್ಲಿ ಪಾಲುದಾರರಾಗಿದ್ದು, ಇನ್ನೆರೆಡು ಮೂರು ತಿಂಗಳಲ್ಲಿ ಎಲ್ಲವೂ ಬಯಲಾಗುತ್ತದೆ. ತಮ್ಮ ಆಪ್ತ ಸಚಿವರ ಹಗರಣದಿಂದಾಗಿಯೇ ಮುಖ್ಯಮಂತ್ರಿಯವರು ಖುರ್ಚಿ ಬಿಡುವ ಕಾಲ ಹತ್ತಿರವಾಗಿದೆ ಎಂದು ಯಡಿಯೂರಪ್ಪ ಹೇಳಿದರು.

ಜಿಲ್ಲಾಧ್ಯಕ್ಷ ಎಸ್.ರುದ್ರೇಗೌಡ, ಪ್ರಮುಖರಾದ ಆರ್.ಕೆ. ಸಿದ್ದರಾಮಣ್ಣ, ಬಿ.ವೈ. ರಾಘವೇಂದ್ರ, ಆರಗ ಜ್ಞಾನೇಂದ್ರ, ಎಸ್. ಜ್ಞಾನೇಶ್ವರ್, ಎನ್.ಜಿ. ನಾಗರಾಜ್, ಆಯನೂರು ಮಂಜುನಾಥ್, ಎಂ.ಬಿ. ಭಾನುಪ್ರಕಾಶ್, ಕೆ.ಜಿ. ಕುಮಾರಸ್ವಾಮಿ, ಎನ್.ಜೆ. ರಾಜಶೇಖರ್, ಬಿ.ಆರ್. ಮಧುಸೂದನ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

 

ಹತ್ತು ಸಾರಿ ಹೇಳಿದ್ದೇನೆ ಈಶ್ವರಪ್ಪನವರ ಬಗ್ಗೆ ಮಾತನಾಡುವುದಿಲ್ಲ ಎಂದು, ಆದರೂ ನೀವು ಕೇಳುತ್ತೀರಿ. ಪಕ್ಷ ಬಲಪಡಿಸುವುದು ನನ್ನ ಕೆಲಸ. ರಾಜ್ಯದಲ್ಲಿ ಬೇಕಾದಷ್ಟು ಸಮಸ್ಯೆಗಳಿವೆ, ಬರಗಾಲವಿದೆ ಇದರ ಬಗ್ಗೆ ಅಧ್ಯಯನ ಮಾಡಬೇಕಾಗಿದೆ. ಈ ಮಧ್ಯೆ ಈಶ್ವರಪ್ಪನವರ ಬಗ್ಗೆ ಮಾತನಾಡಲು ನನಗೆ ಇಷ್ಟವಿಲ್ಲ. ಸಂಗೊಳ್ಳಿರಾಯಣ್ಣ ಹೆಸರಿನಲ್ಲಿ ನಡೆಯುತ್ತಿರುವ ಎಲ್ಲ ಬೆಳವಣಿಗೆಳನ್ನು ಕೇಂದ್ರದ ವರಿಷ್ಠರ ಗಮನಕ್ಕೆ ತರಲಾಗಿದೆ. ಅವರು ಅಗತ್ಯ ಕ್ರಮ ಕೈಗೊಳ್ಳುತ್ತಾರೆ. ಈಶ್ವರಪ್ಪನವರ ನಡೆಯ ಬಗ್ಗೆ ಮಾತನಾಡದಿರುವುದೇ ಸೂಕ್ತ.

 

- ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ