ಚಿಕ್ಕಮಗಳೂರು ಜಿಲ್ಲೆಗೆ ಸಾಂಬಾರು ಪಾರ್ಕ್ ನೀಡಲು ಕೇಂದ್ರ ಸರ್ಕಾರ ಸಿದ್ಧವಿದೆ. ಅದಕ್ಕೆ ಅಗತ್ಯ ಪ್ರಮಾಣದ ಭೂಮಿ ಒದಗಿಸುವ ಜವಾಬ್ದಾರಿ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರದ್ದೆಂದು ಕೇಂದ್ರ ರಸಗೊಬ್ಬರ ಖಾತೆ ಸಚಿವ ಅನಂತ ಕುಮಾರ್ ಹೇಳಿದರು.
ಚಿಕ್ಕಮಗಳೂರು (ನ.12): ಜಿಲ್ಲೆಗೆ ಸಾಂಬಾರು ಪಾರ್ಕ್ ನೀಡಲು ಕೇಂದ್ರ ಸರ್ಕಾರ ಸಿದ್ಧವಿದೆ. ಅದಕ್ಕೆ ಅಗತ್ಯ ಪ್ರಮಾಣದ ಭೂಮಿ ಒದಗಿಸುವ ಜವಾಬ್ದಾರಿ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರದ್ದೆಂದು ಕೇಂದ್ರ ರಸಗೊಬ್ಬರ ಖಾತೆ ಸಚಿವ ಅನಂತ ಕುಮಾರ್ ಹೇಳಿದರು.
ನಗರದ ಎಐಟಿ ಕಾಲೇಜಿನ ಆವರಣದಲ್ಲಿ ಶನಿವಾರ ಮೂರು ದಿನಗಳ ಜಾಗತಿಕ ಕಾಳುಮೆಣಸು ಸಮ್ಮೇಳನ ಕಾಳುಮೆಣಸಿನ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಕಾಫಿಗೆ ಕಾಳುಮೆಣಸಿಗೆ ಪ್ರತ್ಯೇಕವಾಗಿ ಬೆಳೆಗಳಿಗೆ ಗೊಬ್ಬರ ಮಿಶ್ರಣ ಮಾಡಿ ನೀಡುವ ವ್ಯವಸ್ಥೆ ಇರಲಿಲ್ಲ. ಈಗ ಕೇಂದ್ರ ಸರ್ಕಾರ ಮೂರು ದಿನಗಳ ಹಿಂದೆ ಇಂಡಿಯನ್ ಕೌನ್ಸಿಲ್ ಫಾರ್ ಫರ್ಟಿಲೈಸರ್ ನ್ಯೂಟ್ರಿಯಂಟ್ ರಿಚ್ ಎಂಬ ಸಂಸ್ಥೆ ಆರಂಭಿಸಲು ನಿರ್ಧರಿಸಿದೆ. ಹಾಗಾಗಿ ಇನ್ನು ಮುಂದೆ ಆಯಾ ಬೆಳೆಗೆ ತಕ್ಕ ಮಿಶ್ರಣದ ಗೊಬ್ಬರ ದೊರೆಯುತ್ತದೆ ಎಂದು ಹೇಳಿದರು.
ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಸಿ.ಟಿ.ರವಿ ಹಾಗೂ ಬ್ಲ್ಯಾಕ್ ಗೋಲ್ಡ್ ಲೀಗ್ ಮುಂದಿಟ್ಟ ಕೆಲವು ಬೇಡಿಕೆಗಳನ್ನು ಪ್ರಸ್ತಾಪಿಸಿದ ಸಚಿವರು, ಗೊಬ್ಬರ ಹೊತ್ತು ತರುವ ರೈಲು ಕಡೂರಿನಲ್ಲೇ ನಿಂತು ಅಲ್ಲೇ ಅದನ್ನು ಇಳಿಸಿಕೊಳ್ಳಲಾಗುತ್ತಿದೆ. ಚಿಕ್ಕಮಗಳೂರು ನಗರಕ್ಕೆ ರೈಲು ಸೌಲಭ್ಯವಿದ್ದರೂ ಇಲ್ಲಿ ರೇಖ್ ಪಾಯಿಂಟ್ ಹಾಗೂ ಗೊಬ್ಬರ ಇಳಿಸಲು ಅವಕಾಶವಿಲ್ಲ. ರೈಲ್ವೆ ಅಧಿಕಾರಿಗಳೊಂದಿಗೆ ಮಾತನಾಡಿ, ನಗರದ ರೈಲ್ವೆ ನಿಲ್ದಾಣದಲ್ಲಿ ರೇಖ್ ಪಾಯಿಂಟ್ ಹಾಗೂ ಗೊಬ್ಬರ ದಾಸ್ತಾನು ಮಾಡುವ ಸೌಲಭ್ಯ ಕಲ್ಪಿಸಿಕೊಡಲಾಗುವುದು ಎಂದು ತಿಳಿಸಿದರು.
ರಸಗೊಬ್ಬರ ಖಾತೆ ಜೊತೆಗೆ ತಮಗೆ ರಾಸಾಯನಿಕ ಖಾತೆ ಜವಾಬ್ದಾರಿಯೂ ಇದೆ. ಈ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ಅನ್ನು ಕಾಲುವೆಗಳ ಲೈನಿಂಗ್‌ಗೆ ಹಾಗೂ ಕೃಷಿ ಉಪಕರಣಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಹಾಗಾಗಿ ಇದನ್ನು ತಯಾರಿಸುವ ಸಿಪೆಟ್ ಸ್ಯಾಟಲೈಟ್ ಕೇಂದ್ರವೊಂದನ್ನು ಚಿಕ್ಕಮಗಳೂರಿನಲ್ಲಿ ಆರಂಭಿಸುವುದಾಗಿ ಸಚಿವರು ಘೋಷಿಸಿದರು.
ಬಿಜಿಎಲ್ ಬ್ರ್ಯಾಂಡ್ ಮೆಣಸು ಬಿಡುಗಡೆ ಮಾಡಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಚಿವ ಅನಂತಕುಮಾರ್ ಜೊತೆ ಸೇರಿ ಆದಷ್ಟು ಬೇಗ ಜಿಲ್ಲೆಯಲ್ಲಿ ಸಾಂಬಾರು ಪಾರ್ಕ್ ಆರಂಭವಾಗುವಂತೆ ಮಾಡುವ ಭರವಸೆ ನೀಡಿದರು.
ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಸಾಕಷ್ಟು ಅವಕಾಶವಿದೆ. ಇಲ್ಲಿನ ಕೆಮ್ಮಣ್ಣುಗುಂಡಿ ಕೃಷ್ಣರಾಜೇಂದ್ರ ಗಿರಿಧಾಮದ ಅಭಿವೃದ್ಧಿಗೆ ತಾವು ಮುಖ್ಯಮಂತ್ರಿಯಾಗಿದ್ದಾಗ ₹ ೪೦ ಕೋಟಿ ಬಿಡುಗಡೆ ಮಾಡಿದ್ದನ್ನು ತಿಳಿಸಿ, ಗಿರಿಧಾಮದಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸಗಳು ಆಗಬೇಕಾಗಿದೆ. ಸಂಸದೆ ಶೋಭಾ ಕರಂದ್ಲಾಜೆ ಈ ಹಿನ್ನೆಲೆಯಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ ಎಂದರು.
ರಾಜ್ಯ ಹಿಂದೆಂದೂ ಕಾಣದ ಭೀಕರ ಬರಗಾಲ ಈ ವರ್ಷ ಕಂಡಿದೆ. ನೀರಿಗೆ ಹಾಹಾಕಾರ. ಕಾವೇರಿ ನದಿಪಾತ್ರದಲ್ಲಿ ಕೇವಲ ೨೧ ಟಿಎಂಸಿ ನೀರು ಮಾತ್ರದೆ. ಬೆಂಗಳೂರಿಗೂ ನೀರು ಸಿಗುವುದು ಅನುಮಾನ. ಕೇಂದ್ರ ಸರ್ಕಾರ ಪರಿಸ್ಥಿತಿ ಎದುರಿಸಲು ರಾಜ್ಯಕ್ಕೆ ವಿಶೇಷ ಪ್ಯಾಕೇಜ್ ನೀಡಬೇಕೆಂದು ಗೃಹ ಸಚಿವ ರಾಜನಾಥ್‌ಸಿಂಗ್‌ರನ್ನು ಭೇಟಿ ಮಾಡಿ ಮನವಿ ಮಾಡಿದ್ದಾಗಿ ತಿಳಿಸಿದರು.
ಶಾಸಕ ಸಿ.ಟಿ.ರವಿ ಕೃಷಿಕ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿ, ಕಾರ್ಮಿಕರ ಕೊರತೆ ಹಿನ್ನೆಲೆಯಲ್ಲಿ ಅಸ್ಸಾಂ ಹಾಗೂ ಪಶ್ಚಿಮ ಬಂಗಾಳದಿಂದ ಕಾರ್ಮಿಕರು ಇಲ್ಲಿಗೆ ಬರುತ್ತಿದ್ದಾರೆ. ಆದರೆ ಇವರಲ್ಲಿ ಅನೇಕರು ಬಾಂಗ್ಲಾ ವಲಸಿಗರು. ಕೇಂದ್ರ ಸರ್ಕಾರ ಮುಂದೆ ಉಂಟಾಗುವ ಸಾಮಾಜಿಕ ಸಂಘರ್ಷ ಹಾಗೂ ದೇಶಕ್ಕೆ ಒದಗುವ ಅಪಾಯ ತಡೆಯಲು ಈ ಕಾರ್ಮಿಕರ ಗುರುತು ಪತ್ತೆ ಹಚ್ಚಲು ವಿಶೇಷ ಪರಿಶೀಲನಾ ಕೇಂದ್ರವೊಂದನ್ನು ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳಲ್ಲಿ ತೆರೆಯಬೇಕೆಂದು ಒತ್ತಾಯಿಸಿದರು.
ಸಂಸದೆ ಶೋಭಾ ಕರಂದ್ಲಾಜೆ ಕೃಷಿಕ ಪತ್ರಿಕೆ ಆ್ಯಪ್ ಬಿಡುಗಡೆ ಮಾಡಿ, ಮಣ್ಣನ್ನು ಜೀವಂತವಾಗುಳಿಸಲು ಹಾಗೂ ಕೃಷಿ ನಿರಂತರಗೊಳಿಸಲು ಸಾವಯವ ಕೃಷಿಗೆ ಕೃಷಿಕರು ಮರಳಬೇಕು. ದೇಶದಲ್ಲೂ ಮಾರುಕಟ್ಟೆ ವಿಸ್ತರಿಸುವ ಜವಾಬ್ದಾರಿ ಅವರ ಮೇಲಿದೆ ಎಂದು ಹೇಳಿದರು.
