ಗುಲುಗಂಜಿಯಷ್ಟು ಚಿಕ್ಕದಾದ ವಿಷಯವನ್ನು ರಬ್ಬರ್‌ನಂತೆ ಎಳೆದ ಪರಿಣಾಮ ಕೈ ಕೈ ಮಿಲಾಯಿಸಿದರು. ಈ ಕೋಲಾಹಲದಲ್ಲಿ ಕೆಲವರ ಶರ್ಟ್ ಹರಿದು ಹೋದರೆ ಮಧ್ಯಸ್ಥಿಕೆ ವಹಿಸಲು ಬಂದವರು ಬೈಗುಳ ತಿಂದು ಬದಿಗೆ ಸರಿದರು.ಇಷ್ಟೆಲ್ಲಾ ಆಗಿದ್ದು ಚಿಕ್ಕಮಗಳೂರು ನಗರಸಭೆಯಲ್ಲಿ ಬುಧವಾರ ನಡೆದ ಸಾಮಾನ್ಯಸಭೆಯಲ್ಲಿ. ಕೇವಲ 2 ನಿಮಿಷದಲ್ಲಿ ಫೋಟೋ ಫ್ಲಸ್‌ನಂತೆ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ಗದ್ದಲ ನಡೆದು ತಣ್ಣಗಾಯಿತು.
ಚಿಕ್ಕಮಗಳೂರು(ಅ.26): ಗುಲುಗಂಜಿಯಷ್ಟು ಚಿಕ್ಕದಾದ ವಿಷಯವನ್ನು ರಬ್ಬರ್ನಂತೆ ಎಳೆದ ಪರಿಣಾಮ ಕೈ ಕೈ ಮಿಲಾಯಿಸಿದರು. ಈ ಕೋಲಾಹಲದಲ್ಲಿ ಕೆಲವರ ಶರ್ಟ್ ಹರಿದು ಹೋದರೆ ಮಧ್ಯಸ್ಥಿಕೆ ವಹಿಸಲು ಬಂದವರು ಬೈಗುಳ ತಿಂದು ಬದಿಗೆ ಸರಿದರು.
ಇಷ್ಟೆಲ್ಲಾ ಆಗಿದ್ದು ಚಿಕ್ಕಮಗಳೂರು ನಗರಸಭೆಯಲ್ಲಿ ಬುಧವಾರ ನಡೆದ ಸಾಮಾನ್ಯಸಭೆಯಲ್ಲಿ. ಕೇವಲ 2 ನಿಮಿಷದಲ್ಲಿ ಫೋಟೋ ಫ್ಲಸ್ನಂತೆ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ಗದ್ದಲ ನಡೆದು ತಣ್ಣಗಾಯಿತು.
ನಗರಸಭೆ ಅಧ್ಯಕ್ಷೆ ಕವಿತಾ ಶೇಖರ್ ಅಧ್ಯಕ್ಷತೆಯಲ್ಲಿ ಸಭೆ ಆರಂಭವಾಗುತ್ತಿದ್ದಂತೆ ಬಿಜೆಪಿ ಕೆಲವು ಸದಸ್ಯರು ಸೇರಿದಂತೆ ಕಾಂಗ್ರೆಸ್ ಸದಸ್ಯರು ಎಸ್ಎಫ್ಸಿ, 14 ನೇ ಹಣಕಾಸು ಯೋಜನೆ, ನಗರಸಭಾ ನಿಧಿ ಅನುದಾನ ಶೇ. 24.10, ಶೇ. 3 ಯೋಜನೆಯಡಿ ತೆಗೆದುಕೊಂಡಿರುವ ಕಾಮಗಾರಿಯಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಆರೋಪಿಸಿದರು.
ಎಸ್ಸಿ, ಎಸ್ಟಿಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಕೆಲವು ವಾರ್ಡ್ಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಬಿಜೆಪಿ ಸದಸ್ಯ ಸುಧೀರ್ ಆರೋಪಿಸಿದರು. ಇದಕ್ಕೆ ಲೀಲಾ, ಶ್ಯಾಮಲ ರಾವ್ ಧ್ವನಿ ಗೂಡಿಸಿದರು. ಇದೇ ವಿಷಯದಲ್ಲಿ ನಗರಸಭೆಯ ಕಾಂಗ್ರೆಸ್ನ ನಾಮ ನಿರ್ದೇಶನ ಸದಸ್ಯ ಸಂದೇಶ್ ಮಾತನಾಡಿ, ಕೆಲವು ವಾರ್ಡ್ಗಳ ಅಭಿವೃದ್ಧಿಗೆ ಮಾತ್ರ ಹೆಚ್ಚು ಅನುದಾನ ನೀಡಲಾಗುತ್ತಿದೆ. ಕೆಲವು ವಾರ್ಡ್ಗಳನ್ನು ಉದ್ದೇಶ ಪೂರ್ವಕವಾಗಿ ಕಡೆಗಣಿಸಲಾಗಿದೆ ಎಂದು ಹೇಳುತ್ತಿದ್ದಂತೆ ಬಿಜೆಪಿಯ ರವಿಕುಮಾರ್, ಸಂದೇಶ್ ಕಡೆ ತಿರುಗಿ ಆಕ್ಷೇಪ ವ್ಯಕ್ತಪಡಿಸಿದರು.
ಇದಕ್ಕೆ ಅಧ್ಯಕ್ಷರು ಉತ್ತರ ನೀಡಬೇಕು, ನಿಮ್ಮಿಂದ ಉತ್ತರ ನಿರೀಕ್ಷೆ ಮಾಡಿಲ್ಲ ಎನ್ನುತ್ತಿದ್ದಂತೆ ಬಿಜೆಪಿಯ ದೇವರಾಜ್ ಶೆಟ್ಟಿ ಸೇರಿದಂತೆ ಕೆಲವು ಸದಸ್ಯರು ರವಿಕುಮಾರ್ ಪರವಾಗಿ ಎದ್ದು ನಿಂತು ಮಾತನಾಡಲು ಆರಂಭಿಸಿದರು. ಆಗ, ಸಂದೇಶ್ ಪರವಾಗಿ ತೇಜಸ್ಕುಮಾರ್, ಪುಟ್ಟಸ್ವಾಮಿ ಸೇರಿದಂತೆ ಕಾಂಗ್ರೆಸ್ ಸದಸ್ಯರು ಮಾತನಾಡಿದರು. ಪರಸ್ಪರ ನೂಕಾಟ, ತಲ್ಲಾಟ ನಡೆದು, ನಗರಸಭೆಯ ಅಧಿಕಾರಿಗಳಿಗೆ, ನೌಕರರಿಗೆ ಪುಕ್ಕಟೆ ಮನೋರಂಜನೆಯನ್ನು ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರು ನೀಡಿದರು.
ಶಾಸಕ ಸಿ.ಟಿ. ರವಿ ಮಾತನಾಡಿ, ನಮ್ಮ ಸ್ಥಾನದಲ್ಲಿ ಕುಳಿತು ಗೌರವದಿಂದ ಮಾತನಾಡಬೇಕು. ಇಲ್ಲಿರುವ ನಗರಸಭೆಯ ಎಲ್ಲಾ ೪೧ ಸದಸ್ಯರು ತಮ್ಮ ಸ್ಥಾನ ಹಾಗೂ ಆತ್ಮಗೌರವದಿಂದ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕೆಲವು ವಾರ್ಡ್ಗಳಿಗೆ ನಿಯಮಬಾಹಿರವಾಗಿ ಹಣ ಹಂಚಿಕೆ ಮಾಡಿದ್ದರೆ ಅದನ್ನು ಸರಿಪಡಿಸಲು, ಕೆಲವು ವಾರ್ಡ್ಗಳು ಕೈ ತಪ್ಪಿ ಹೋಗಿದ್ದರೆ ಅವುಗಳನ್ನು ಸೇರಿಸಲು ಅವಕಾಶವಿದೆ. ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ನಗರಸಭೆಗೆ ಎಸ್ಎಫ್ಸಿ ಹಣ ಬಿಡುಗಡೆ ಮಾಡುವಂತೆ ಕೋರಿಕೊಳ್ಳಲಾಗುವುದು ಎಂದು ಅಧ್ಯಕ್ಷೆ ಕವಿತಾ ಶೇಖರ್ ಹೇಳಿದರು.
ಡಿಸಿಗೆ ಶಹಬಾಸ್ಗಿರಿ
ಇಂದಾವರದಲ್ಲಿರುವ ಘನತ್ಯಾಜ್ಯ ವಸ್ತುಗಳ ವಿಲೇವಾರಿ ಕೇಂದ್ರದ ನಿರ್ವಹಣೆಗೆ ಎಷ್ಟು ಹಣ ಖರ್ಚಾಗಿದೆ ಎಂಬ 5 ವರ್ಷದ ಮಾಹಿತಿಯನ್ನು ನಗರಸಭೆಯ ಸದಸ್ಯರಿಗೆ ಅಧಿಕಾರಿಗಳು ನೀಡಬೇಕು ಎಂದು ಶಾಸಕ ಸಿ.ಟಿ. ರವಿ ಹೇಳಿದರು.
ನಗರಸಭೆಗೆ ಹೊರ ಗುತ್ತಿಗೆ ಆಧಾರದ ಮೇಲೆ ಪೌರ ಸೇವಾ ನೌಕರರನ್ನು ಕೊಟ್ಟಿರುವ ನಿತ್ಯ ಎಂಟರ್ ಪ್ರೈಸಸ್ ಸಂಸ್ಥೆ, ಘನ ತ್ಯಾಜ್ಯ ವಸ್ತುಗಳ ವಿಲೇವಾರಿ ಘಟಕದಲ್ಲಿ ಸರಿಯಾದ ರೀತಿಯ ಲ್ಲಿ ನಿರ್ವಹಣೆ ಮಾಡುತ್ತಿಲ್ಲ ಎಂಬ ದೂರುಗಳು ಬಂದ ಹಿನ್ನಲೆ ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಂಡಿದ್ದರಿಂದ ಇದೀಗ ಕಳೆದ ಒಂದು ತಿಂಗಳಿಂದ ಪರಿಸ್ಥಿತಿ ಸುಧಾರಿಸಿದ್ದು, ಡಿಸಿಗೆ ಥ್ಯಾಂಕ್ಸ್ ಎಂದರು.
ಆದಾಯ 2 ಕೋಟಿ: ಖರ್ಚು 6 ಕೋಟಿ
ನಗರಸಭೆಗೆ ಕುಡಿವ ನೀರಿಗೆ ವರ್ಷಕ್ಕೆ ಸುಮಾರು ₹೬ ಕೋಟಿ ಖರ್ಚು ಮಾಡುತ್ತಿದ್ದು, ಬರುತ್ತಿರುವ ಆದಾಯ ₹೨ ಕೋಟಿ ಮಾತ್ರ. ಈ ಕಾರಣಕ್ಕಾಗಿ ಸರ್ಕಾರದ ಸುತ್ತೋಲೆಯ ಪ್ರಕಾರ ನೀರಿನ ತೆರಿಗೆ ಶೇ. ೨೦ ರಿಂದ ೨೫ ರಷ್ಟು ಹೆಚ್ಚಳ ಮಾಡುವ ಪ್ರಸ್ತಾವನೆ ಸಭೆಯ ಮುಂದಿಡಲಾಯಿತ್ತು.
ಹಲವು ವಾರ್ಡ್ಗಳಿಗೆ ಸಮರ್ಪಕವಾಗಿ ಕುಡಿವ ನೀರು ಕೊಡಲು ಸಾಧ್ಯವಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ತೆರಿಗೆ ಹೆಚ್ಚಿಸಿದರೆ ಜನ ಸುಮ್ಮನೆ ಇರುವುದಿಲ್ಲ ಎಂದು ಆಡಳಿತ ಮತ್ತು ಪ್ರತಿ ಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಕರ ಹೆಚ್ಚಳ ಪ್ರಸ್ತಾಪ ತಾತ್ಕಾಲಿಕವಾಗಿ ಕೈಬಿಡಲಾಯಿತು.
ನಗರದಲ್ಲಿ ಎಷ್ಟು ಮನೆಗಳಿವೆ. ನಲ್ಲಿ ಸಂಪರ್ಕ ಹೊಂದಿರುವ ಮನೆಗಳ ಸಂಖ್ಯೆ ಎಷ್ಟು, ವಾಣಿಜ್ಯ ಮತ್ತು ಕೈಗಾರಿಕಾ ಕಟ್ಟಡಗಳು ಎಷ್ಟಿವೆ, ಅವುಗಳು ನೀರಿನ ಸಂಪರ್ಕ ಹೊಂದಿರುವ ಬಗ್ಗೆ ಪರಿಶೀಲನೆ ಮಾಡಲಾಗಿದೆ. ಪ್ರಾಯೋಗಿಕವಾಗಿ ವಾಣಿಜ್ಯ ಕಟ್ಟಡಗಳಿಗೆ ಬಳಕೆಯಾಗುವ ನಲ್ಲಿ ನೀರಿಗೆ ಮೀಟರ್ ಅಳವಡಿಸಬೇಕು ಎಂದು ಹೇಳಿದರು.
ಆಸ್ತಿ ಮೌಲ್ಯವನ್ನು ನಿಗದಿತ ವರ್ಷಗಳಲ್ಲಿ ಆಗಬೇಕಾಗಿತ್ತು. ಕಂದಾಯ ಎಷ್ಟು ಪಾವತಿಯಾಗಿದೆ. ಬಾಕಿ ಎಷ್ಟಿದೆ ಎಂಬ ಮಾಹಿತಿ ಡಿಸಿಬಿಯಲ್ಲಿ ನಿರ್ವಹಣೆ ಮಾಡದಿರುವ ಬಗ್ಗೆ ಶಾಸಕರು ಆಕ್ಷೇಪ ವ್ಯಕ್ತಪಡಿಸಿದಾಗ, ಈ ಕೆಲಸವನ್ನು ಇನ್ನೆರಡು ತಿಂಗಳಲ್ಲಿ ಪೂರೈಸಲು ಕಂದಾಯ ಅಧಿಕಾರಿ ಗುರುಮೂರ್ತಿ ಭರವಸೆ ನೀಡಿದರು.
