ವಿಶೇಷ ವರದಿ

ಚಿಕ್ಕಬಳ್ಳಾಪುರ (ಅ.26): ಸತತ ಬರದಿಂದ ಬಳಲಿ ಬೆಂಡಾಗಿರುವ ರೈತನ ಗಾಯದ ಮೇಲೆ ಬರೆ ಎಳೆಯುವ ಕೆಲಸವನ್ನು ಬೆಸ್ಕಾಂ ಮಾಡುತ್ತಿದ್ದು, ದಿಕ್ಕು ತೋಚದ ಸ್ಥಿತಿಯಲ್ಲಿ ರೈತ ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ. ಯಾವುದೇ ಮುನ್ಸೂಚನೆ ನೀಡಿದೆ ಹಗಲಿನಲ್ಲಿ ನಿರಂತರ 10 ಗಂಟೆ ಮತ್ತು ರಾತ್ರಿ ವೇಳೆ ನಿರಂತರ 6 ಗಂಟೆ ಸಮಯ ವಿದ್ಯುತ್ ಕಡಿತಗೊಳಿಸುತ್ತಿರುವ ಬೆಸ್ಕಾಂ ರೈತರು, ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚಲ್ಲಾಟವಾಡುತ್ತಿದೆ.

ಒಣಗುತ್ತಿರುವ ಬೆಳೆಗಳು
ಮಳೆ ಇಲ್ಲದೆ ನಾಶವಾಗಿರುವ ಮಳೆಯಾಧರಿತ ಬೆಳೆಗಳ ಜೊತೆಗೆ, ನಿರಂತರ ವಿದ್ಯುತ್ ಕಡಿತದಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ನೀರಾವರಿ ಬೆಳೆಗಳೂ ಒಣಗುತ್ತಿವೆ. ಅನಿಯಮಿತ ಲೋಡ್ ಶೆಡ್ಡಿಂಗ್ ನೆಪದಲ್ಲಿ ರೈತರ ಹೊಟ್ಟೆ ಹೊಡೆಯುತ್ತಿರುವ ಬೆಸ್ಕಾಂ ಸಾವಿರಾರು ರುಪಾಯಿ ವೆಚ್ಚ ಮಾಡಿ ಬೆಳೆದ ರೈತರ ಬೆಳೆಗಳು ನಾಶವಾಗುತ್ತಿದ್ದರೂ, ಅದಕ್ಕೂ ತಮಗೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿದೆ ಎಂದು ರೈತರು ಕಿಡಿಕಾರಿದ್ದಾರೆ.

ಜಿಲ್ಲಾದ್ಯಂತ ನೆಲಗಡಲೆ, ಜೋಳ ಸೇರಿದಂತೆ ಇತರೆ ಬೆಳೆಗಳು ಸಂಪೂರ್ಣ ನಾಶವಾಗಿ ದಿಕ್ಕು ತೋಚದಂತ ಸ್ಥಿತಿಯಲ್ಲಿರುವ ರೈತನಿದ್ದಾನೆ. ಸ್ವಲ್ಪ ಮಟ್ಟಿಗಾದರೂ ಆಸರೆಯಾಗಿದ್ದ ಕೊಳವೆ ಬಾವಿಗಳ ನೀರನ್ನು ಮೆಲೆತ್ತಲು ವಿದ್ಯುತ್ ಇಲ್ಲವಾಗಿದೆ. ಇದರಿಂದಾಗಿ ಮೇವು, ತರಕಾರಿ ಸೇರಿದಂತೆ ಬಹುತೇಕ ಬೆಳೆಗಳು ನೀರುಣಿಸಲಾಗದೆ ನೆಲಕಚ್ಚಿವೆ.
 

ಕುಡಿಯಲೂ ನೀರಿಲ್ಲ
ಪಂಪ್‌ಸೆಟ್ ಚಾಲನೆಗೆ ವಿದ್ಯುತ್ ಇಲ್ಲದ ಕಾರಣ ಕುಡಿಯಲು ನೀರಿಲ್ಲದೆ ಸಾರ್ವಜನಿಕರು ತೀವ್ರ ಪರದಾಡುತ್ತಿದ್ದಾರೆ. ಕೆರೆ ಕುಂಟೆಗಳು ಹಾಗೂ ತೆರೆದ ಬಾವಿಗಳು ಒಣಗಿ ದಶಕಗಳೆ ಕಳೆದಿರುವ ಕಾರಣ ನೀರಿಗಾಗಿ ಕೊಳವೆ ಬಾವಿಗಳನ್ನೆ ಆಶ್ರಯಿಸಬೇಕಾದ ಪರಿಸ್ಥಿತಿ. ಆದರೆ ನಿರಂತರ ವಿದ್ಯುತ್ ಕೈಕೊಡುತ್ತಿರುವ ಕಾರಣ ಕೊಳವೆ ಬಾವಿಗಳಲ್ಲಿನ ನೀರು ಮೇಲೆತ್ತಲಾರದೆ ಜನರು ಹಪಹಪಿಸುವಂತಾಗಿದೆ.
 

ನಗರಕ್ಕೂ ತಟ್ಟಿದ ಬಿಸಿ
ನಗರ ಪ್ರದೇಶದಲ್ಲಿ ಹೋಟೆಲ್ ಸೇರಿದಂತೆ ಪ್ರತಿಯೊಂದಕ್ಕೂ ನೀರಿನ ಸಮಸ್ಯೆ ಎದುರಾಗಿದೆ. ತಿಂಡಿ ತಯಾರಿಕೆಗೆ ಹಿಟ್ಟು ರುಬ್ಬಲು ವಿದ್ಯುತ್ ಇಲ್ಲದೆ ಸಂಕಷ್ಟ ಎದುರಾಗಿದ್ದು, ಹಲವು ಹೋಟೆಲ್‌ಗಳ ಬಾಗಿಲು ಮುಚ್ಚಿವೆ. ನಿತ್ಯ ಬಳಕೆಗೆ ನೀರಿಲ್ಲದೆ ನಾಗರಿಕರು ಪರದಾಡುತ್ತಿದ್ದರೂ ಬೆಸ್ಕಾಂ ಅಧಿಕಾರಿಗಳು ಮಾತ್ರ ನಿರಾಳರಾಗಿದ್ದಾರೆ.
 

ಕಾರಣ ತಿಳಿಸದ ಬೆಸ್ಕಾಂ
ಜಲ್ಲಿ ಕ್ರಷರ್‌ಗಳು, ಕಲ್ಲು ಗಣಿಗಾರಿಕೆಗೆ ನಿರಂತರ ವಿದ್ಯುತ್ ಸರಬರಾಜು ಮಾಡುವ ಬೆಸ್ಕಾಂ ಅಧಿಕಾರಿಗಳು, ಸಾರ್ವಜನಿಕರಿಗೆ ನಿತ್ಯ ವಿದ್ಯುತ್ ನೀಡದೆ ಸತಾಯಿಸುತ್ತಿದ್ದು, ವಿದ್ಯುತ್ ಕಡಿತಕ್ಕೆ ಕಾರಣ ಏನು ಎಂಬುದನ್ನು ಮಾತ್ರ ಹೇಳುತ್ತಿಲ್ಲ. ಅಲ್ಲದೆ ಗಣಿಗಾರಿಕೆಗೆ ನೀಡುವ ವಿದ್ಯುತ್ ಜನರಿಗೇಕೆ ನೀಡುತ್ತಿಲ್ಲ ಎಂಬ ಪ್ರಶ್ನೆಗೂ ಬೆಸ್ಕಾಂ ಅಧಿಕಾರಿಗಳು ಉತ್ತರ ನೀಡುತ್ತಿಲ್ಲ.
 

ಸ್ಥಬ್ದವಾದ ಎಟಿಎಂಗಳು
ನಿರಂತರ ವಿದ್ಯುತ್ ಕಡಿತದಿಂದಾಗಿ ನಗರದಲ್ಲಿರುವ ಬಹುತೇಕ ಎಲ್ಲ ಎಟಿಎಂಗಳು ತಟಸ್ಥವಾಗಿದ್ದು, ಜನರು ಅನಿವಾರ್ಯವಾಗಿ ಬ್ಯಾಂಕ್‌ಗಳಿಗೆ ತೆರಳಿ ಹಣ ಪಡೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಬ್ಯಾಂಕ್‌ಗಳಲ್ಲಿ ಜನಸಂದಣಿ ಹೆಚ್ಚಿ ದಿನಗಟ್ಟಲೆ ಸಮಯ ಕಳೆಯುವಂತಾಗಿದೆ ಎಂದು ಗ್ರಾಹಕರು ಬೇಸರ ವ್ಯಕ್ತಪಡಿಸಿದ್ದಾರೆ.


ದೊಡ್ಡಬಳ್ಳಾಪುರದಿಂದ ಸರಬರಾಜಾಗುವ ವಿದ್ಯುತ್‌ನಲ್ಲಿ ಏರುಪೇರಾದ ಪರಿಣಾಮ ಅನಿಯಮಿತ ಲೋಡ್‌ಶೆಡ್ಡಿಂಗ್ ಹೇರಲಾಗಿದ್ದು, ಇದೇ ಸ್ಥಿತಿ ಇನ್ನೂ ಒಂದು ವಾರ ಮುಂದುವರಿಯುವ ಸೂಚನೆಗಳಿವೆ. ವಾರದ ನಂತರ ಸಮಸ್ಯೆ ಪರಿಹಾರವಾಗಲಿದೆ.
-ರಮೇಶ್, ಸಹಾಯಕ ಕಾರ್ಯಪಾಲಕ ಅಭಿಯಂತರ, ಬೆಸ್ಕಾಂ.

ಅರ್ಧ ಎಕರೆ ಜಮೀನಿನಲ್ಲಿ ೫೦ ಸಾವಿರ ವೆಚ್ಚ ಮಾಡಿ ಬಿತ್ತನೆ ಮಾಡಿದ್ದ ಕ್ಯಾರೆಟ್ ಬೆಳೆಗೆ ವಿದ್ಯುತ್ ಇಲ್ಲದೆ ನೀರು ಹಾಯಿಸಲು ಸಾಧ್ಯವಾಗಿಲ್ಲ. ಇದರಿಂದ ಬೆಳೆ ಸಂಪೂರ್ಣ ನಾಶವಾಗಿದೆ. ಈ ನಷ್ಟಕ್ಕೆ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೆ ಕಾರಣ.
- ಮುನೇಗೌಡ, ಪಟ್ರೇನಹಳ್ಳಿ ರೈತ.