ಬೆಂಗಳೂರು: ಸಂತೋಷ, ಸಂಭ್ರಮದಿಂದ ಹೋಳಿ ಆಡುತ್ತಿದ್ದ ನಗರದ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳ ಮೇಲೆ ಪೊಲೀಸರು ಗೂಂಡಾಗಿರಿ ಪ್ರದರ್ಶಿಸಿದ್ದು, ಖಾಕಿ ಪಡೆಯ ದುರ್ವರ್ತನೆಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. 

ಕ್ರೈಸ್ಟ್ ಕಾಲೇಜಿನ ಸುತ್ತ ಮುತ್ತ ವಾಸಿಸುವ ವಿದ್ಯಾರ್ಥಿಗಳು ಕೋರಮಂಗಲದ ಸಮೀಪ ಹೋಳಿ ಆಡುತ್ತಿದ್ದರು. ಆಗ ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಅಕಸ್ಮಾತ್ ಬಣ್ಣ ಹಾರಿದೆ. ಇಷ್ಟಕ್ಕೇ ಆಕ್ರೋಶಗೊಂಡ ಪೊಲೀಸ್ ಅಧಿಕಾರಿ, ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಚ್ ಮಾಡಿದ್ದಾರೆ. ಅಷ್ಟೇ ಅಲ್ಲ, ವಿದ್ಯಾರ್ಥಿಯನ್ನು ಠಾಣೆಗೆ ಕರೆದುಕೊಂಡು ಹೋಗಿ, ಬೆತ್ತಲಾಗಿಸುವುದಾಗಿ ಬೆದರಿಸಿದ್ದಾರೆ ಕರ್ತವ್ಯ ನಿರತ ಪೊಲೀಸರು. ಅಲ್ಲದೇ ಪಿಜಿಯೊಂದರೊಳಗೆ ನುಗ್ಗಿ, ವಿದ್ಯಾರ್ಥಿನಿಯೊಬ್ಬಳಿಗೆ ಮಹಿಳಾ ಪೊಲೀಸ್ ಅಧಿಕಾರಿ ಥಳಿಸಿದ್ದಾರೆಂದೂ ವಿದ್ಯಾರ್ಥಿಗಳು ಆರೋಪಿಸುತ್ತಿದ್ದಾರೆ.

ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ಆದರೆ, ಪೊಲೀಸರ ಗೂಂಡಾವರ್ತನೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವಿದ್ಯಾರ್ಥಿಗಳು ಅಭಿಯಾನ ಆರಂಭಿಸಿದ್ದು, ಟ್ವೀಟರ್, ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ ಪೊಲೀಸರ ದೌರ್ಜನ್ಯ ನಿಲ್ಲಬೇಕೆಂದು ಆಗ್ರಹಿಸಲಾಗುತ್ತಿದೆ. 'ಪೊಲೀಸರ ಇಂಥ ನಡೆಯಿಂದಲೇ ವಿದ್ಯಾರ್ಥಿಗಳು ಬೆಂಗಳೂರಿಗೆ ಓದಲು ಆಗಮಿಸಲು ಹಿಂಜರಿಯುತ್ತಾರೆ,' ಎಂದೂ ವಿದ್ಯಾರ್ಥಿಗಳು ಹೇಳಿಕೊಂಡಿದ್ದಾರೆ.

'ನಮ್ಮ ಹಬ್ಬ ಹೋಳಿ ಆಡುವಾಗ ಪೊಲೀಸರು ದುರ್ವರ್ತನೆ ತೋರಿದ್ದಾರೆ. ನಿಮ್ಮ ಹಬ್ಬವನ್ನು ಆಚರಿಸಿಸುವಾಗ ರಸ್ತೆಗಳನ್ನು ಬ್ಲಾಕ್ ಮಾಡಿ, ಭಾರೀ ಶಬ್ಧದೊಂದಿಗೆ ಹೇಗೆ ಬೇಕೋ ಹಾಗೆ ಮಾಡುತ್ತೀರಿ. ಅದಕ್ಕೆ ಮಾತ್ರ ಯಾವುದೇ ಅಡಚಣೆಯಿಲ್ಲ...' ಎಂದು ಪ್ರಣವ್ ಜೈನ್ ಎಂಬುವವರು ಫೇಸ್‌ಬು‌ಕ್ ಪೋಸ್ಟ್ ಮಾಡಿದ್ದಾರೆ.

#AbRokoAbuse #LathiNahilnsaaf #NoMoreAbuse #StopPowerAbuse #PowerAbuseBglr ಎಂಬ ಹ್ಯಾಷ್ ಟ್ಯಾಗ್ಸ್ ಎಲ್ಲೆಡೆ ವೈರಲ್ ಆಗುತ್ತಿದೆ. ವಿದ್ಯಾರ್ಥಿಗಳ ನ ಮೇಲೆ ದುರ್ವರ್ತನೆ ತೋರಿರುವ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು. ಹೊರ ರಾಜ್ಯಗಳಿಂದ ವಿದ್ಯಾರ್ಥಿಗಳ ವಿರುದ್ಧ ಇಂಥ ವರ್ತನೆ ಸಲ್ಲದೆಂದು ಕ್ರೈಸ್ಟ್ ಕಾಲೇಜಿನ ವಿದ್ಯಾರ್ಥಿಗಳು ಬೆಂಗಳೂರು ಪೊಲೀಸರನ್ನು ಆಗ್ರಹಿಸಿದ್ದಾರೆ.