ಬರ ನಿರ್ವಹಣೆ ಮಾಡುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ಸರ್ಕಾರದ ನೀತಿ ಪ್ರತಿಭಟಿಸಿ ಎಐಟಿಯುಸಿ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಚಿತ್ರದುರ್ಗ (ನ.07): ಬರ ನಿರ್ವಹಣೆ ಮಾಡುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ಸರ್ಕಾರದ ನೀತಿ ಪ್ರತಿಭಟಿಸಿ ಎಐಟಿಯುಸಿ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಮುಖಂಡ ಶಿವಣ್ಣ ಮಾತನಾಡಿ, ರಾಜ್ಯದಲ್ಲಿ ಬರ ತಾಂಡವವಾಡುತ್ತ ಜನ ಮತ್ತು ಜಾನುವಾರು ಮೇವು ಹಾಗೂ ನೀರಿಗಾಗಿ ಅಲೆದಾಡುತ್ತಿದ್ದರೆ ರಾಜಕೀಯ ಪಕ್ಷಗಳು ಇದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ಮುಂದಿನ ದಿನಗಳಲ್ಲಿ ಅಧಿಕಾರ ಪಡೆಯುವ ಸಲುವಾಗಿ ಮತಕ್ಕಾಗಿ ಕೆಸರೆರಚಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಈಗಾಗಲೇ ರಾಜ್ಯದ 110 ತಾಲೂಕುಗಳನ್ನು ಬರಗಾಲ ಪೀಡಿತ ತಾಲೂಕುಗಳು ಎಂದು ರಾಜ್ಯ ಸರ್ಕಾರ ಘೋಷಿಸಿದ್ದು ಇನ್ನೂ ಸುಮಾರು 25 ತಾಲೂಕುಗಳು ಬರ ಪೀಡಿತವೆಂದು ಅಧಿಕೃತ ಆದೇಶ ಹೊರಡಿಸಬೇಕಿದೆ. ಮತ್ತೊಂದೆಡೆ ಹೈದರಾಬಾದ್ ಮತ್ತು ಉತ್ತರ ಕರ್ನಾಟಕ ಸುಮಾರು 18ಕ್ಕೂ ಹೆಚ್ಚು ತಾಲೂಕುಗಳಲ್ಲಿ ಸುರಿದ ಅಕಾಲಿಕ ಮಳೆ, ನೆರೆ ಹಾವಳಿಯಿಂದ ಸಾವಿರಾರು ರೈತರ ಬೆಳೆ, ಜಾನುವಾರು, ಮನೆಗಳು ನಾಶವಾಗಿವೆ. ಒಟ್ಟಾರೆ ರಾಜ್ಯದ 176 ತಾಲೂಕುಗಳ ಪೈಕಿ ಸುಮಾರು 153 ತಾಲೂಕುಗಳು ಬರ ಮತ್ತು ನೆರೆ ಹಾವಳಿಯಿಂದ ತತ್ತರಿಸಿ ಹೋಗಿವೆ. ಬರಗಾಲದಿಂದ ರೂ.12,145 ಕೋಟಿ ಹಾನಿಯಾಗಿದೆ ಎಂದು ಅಂದಾಜಿಸಿದ್ದರೂ ಸಹಾ ವಾಸ್ತವವಾಗಿ ಈ ಒಟ್ಟು ನಷ್ಟದ ಮೊತ್ತ ₹೨೫ ಸಾವಿರ ಕೋಟಿಗೂ ಹೆಚ್ಚಾಗಿದೆ ಎಂದು ಸರ್ಕಾರದ ವರದಿಗಳೇ ತಿಳಿಸಿವೆ ಎಂದರು.

ಪ್ರತಿಭಟನೆಯಲ್ಲಿ ಸಿ.ವೈ. ಶಿವರುದ್ರಪ್ಪ, ಜಿ.ಸಿ. ಸುರೇಶ್ ಬಾಬು, ಟಿ.ಆರ್. ಉಮಾಪತಿ, ಬಿ. ಬಸವರಾಜ್, ಗಣೇಶ್ ಕಾರ್ಮಿಕ ಮುಖಂಡರು, ಕೆ.ಎನ್. ರಮೇಶ್, ಕೆ.ಈ. ಸತ್ಯಕೀರ್ತಿ, ಜಾಫರ್ ಶರೀಫ್ ಭಾಗವಹಿಸಿದ್ದರು.