ಬಿಜೆಪಿ ಕೈಯಲ್ಲಿದೆ ಸಚಿವ ಎ.ಮಂಜು ಕೀಲಿ ಕೈ

A Manju Contest From Arkalgud
Highlights

ಹಾಲಿ ರೇಷ್ಮೆ ಮತ್ತು ಪಶು ಸಂಗೋಪನಾ ಸಚಿವರಾಗಿರುವ ಎ. ಮಂಜು ಹಾಸನ ಜಿಲ್ಲೆಯ ಅರಕಲಗೂಡು ಕ್ಷೇತ್ರದಿಂದ ಮತ್ತೊಮ್ಮೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ನಿಶ್ಚಿತ. ಇದೇ ಪ್ರಥಮ ಬಾರಿಗೆ ಸಚಿವರಾಗಿ ಚುನಾವಣೆ ಎದುರಿಸುತ್ತಿರುವ ಅವರಿಗೆ ಜೆಡಿಎಸ್‌ನ ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಈ ಬಾರಿಯೂ ಪ್ರಬಲ ಸ್ಪರ್ಧೆ ಒಡ್ಡುವ ಲಕ್ಷಣಗಳು ಕಾಣುತ್ತಿವೆ.

ಹಾಸನ : ಹಾಲಿ ರೇಷ್ಮೆ ಮತ್ತು ಪಶು ಸಂಗೋಪನಾ ಸಚಿವರಾಗಿರುವ ಎ. ಮಂಜು ಹಾಸನ ಜಿಲ್ಲೆಯ ಅರಕಲಗೂಡು ಕ್ಷೇತ್ರದಿಂದ ಮತ್ತೊಮ್ಮೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ನಿಶ್ಚಿತ. ಇದೇ ಪ್ರಥಮ ಬಾರಿಗೆ ಸಚಿವರಾಗಿ ಚುನಾವಣೆ ಎದುರಿಸುತ್ತಿರುವ ಅವರಿಗೆ ಜೆಡಿಎಸ್‌ನ ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಈ ಬಾರಿಯೂ ಪ್ರಬಲ ಸ್ಪರ್ಧೆ ಒಡ್ಡುವ ಲಕ್ಷಣಗಳು ಕಾಣುತ್ತಿವೆ.

2 ವರ್ಷಗಳಿಂದ ಜಿಲ್ಲಾ ಉಸ್ತುವಾರಿ ಸಚಿವರಾಗಿಯೂ ಕಾರ್ಯ ನಿರ್ವಹಿಸುತ್ತಿರುವ ಮಂಜು ಅವರಿಗೆ 2013ರ ಚುನಾವಣೆಯಲ್ಲಿ ಈಗ ಬಿಜೆಪಿಯಲ್ಲಿರುವ ಪಕ್ಷೇತರ ಅಭ್ಯರ್ಥಿ ನಿರೀಕ್ಷೆಗಿಂತ ಹೆಚ್ಚು ಮತಗಳನ್ನು ಪಡೆದಿದ್ದು ವರದಾನವಾಗಿತ್ತು. ಈ ಚುನಾವಣೆಯಲ್ಲೂ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟರೆ ಸಚಿವ ಮಂಜುಗೆ ಅನುಕೂಲವಾಗುತ್ತದೆ. ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆಯೇ ನೇರ ಸ್ಪರ್ಧೆ ನಡೆದರೆ ಮಂಜು ಅವರಿಗೆ ಗೆಲುವು ಸುಲಭದ ತುತ್ತಾಗುವುದು ಕಷ್ಟಕರ ಎಂಬ ಮಾತುಗಳು ಕೇಳಿಬಂದಿವೆ.

ಮಂಜು ಅವರಿಗಿದು 7ನೇ ಚುನಾವಣೆ. ಮೂರು ಬಾರಿ ಗೆಲುವು ಮತ್ತು ಮೂರು ಬಾರಿ ಸೋಲನ್ನು ಅವರು ಕಂಡಿದ್ದಾರೆ. ಸಚಿವರ ಎದುರಾಳಿ ಜೆಡಿಎಸ್‌ನ ಎ.ಟಿ. ರಾಮಸ್ವಾಮಿ ಅವರಿಗೂ ಇದು ೭ನೇ ಚುನಾವಣೆ. ಅವರೂ 3 ಬಾರಿ ಗೆದ್ದಿದ್ದಾರೆ, 3 ಬಾರಿ ಸೋತಿದ್ದಾರೆ. ಈ ಚುನಾವಣೆಯಲ್ಲಿ ಶತಾಯಗತಾಯ ಗೆಲ್ಲಲೇಬೇಕೆಂಬ ಅಭಿಲಾಷೆ ಹೊಂದಿರುವ ಸಚಿವ ಮಂಜು ಕ್ಷೇತ್ರಾದ್ಯಂತ ಬಿರುಸಿನಿಂದಲೇ ಸಂಚರಿಸುತ್ತಿದ್ದಾರೆ. ರಸ್ತೆ, ಏತನೀರಾವರಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಚುರುಕುಗೊಳಿಸಿದ್ದಾರೆ.

ಇದೇ ಕ್ಷೇತ್ರದ ರಾಮನಾಥಪುರದಿಂದ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿರುವ ಅವರ ಪುತ್ರ ಡಾ.ಮಂಥರ್ ಗೌಡ ಅವರು ತಂದೆ ಪರವಾಗಿ ಓಡಾಡುತ್ತಿದ್ದಾರೆ. ಏನೇ ಇರಲಿ.. ಮಂಜು ಅವರಿಗೆ ಅವರಿಗೆ ಈ ಚುನಾವಣೆ ಹಿಂದಿನಂತೆ ಇಲ್ಲ. ಕುರುಬ ಸಮಾಜದ ಯುವ ಮುಖಂಡ ಡಾ. ಅನಿಲ್ ಕುಮಾರ್ ಸೇರಿದಂತೆ ಕೆಲ ಮುಖಂಡರು ಜೆಡಿಎಸ್ ಸೇರಿದ್ದಾರೆ. ಇದರಿಂದ ಹಿಂದಿನಂತೆ ಹಳ್ಳಿ ಮೈಸೂರು ಹೋಬಳಿಯಲ್ಲಿ ಹೆಚ್ಚು ಮತಗಳನ್ನು ಪಡೆಯುವುದು ಕೊಂಚ ಕಷ್ಟವಾಗ ಬಹುದು ಎಂದು ಹೇಳಲಾಗುತ್ತಿದೆ. ಆದಾಗ್ಯೂ ಮಂಜು ಅವರು ಸಚಿವರಾಗಿರುವ ಹಿನ್ನೆಲೆಯಲ್ಲಿ ಹಿಂದಿನಂತೆ ಚುನಾವಣೆ ಎದುರಿಸಲು ಅವರಿಗೆ ಸಮಸ್ಯೆಯಾಗದು ಎಂಬ ವಾದವೂ ಇದೆ.

ಜೆಡಿಎಸ್ ಅಭ್ಯರ್ಥಿ ಎ.ಟಿ. ರಾಮಸ್ವಾಮಿ (ಎಟಿಆರ್) ಕಾಲಕ್ಕೆ ತಕ್ಕಂತೆ ಬದಲಾವಣೆ ಆಗಿಲ್ಲ. ವಾಸ್ತವಿಕ ರಾಜಕಾರಣ ಮಾಡದೇ ಮೌಲ್ಯಾಧಾರಿತ ರಾಜಕಾರಣದ ಮಾತುಗಳನ್ನು ಆಡುತ್ತಾರೆ. ಅವರು ಹೊಂದಾಣಿಕೆ ರಾಜಕೀಯ ಮಾಡಲ್ಲ. ಹೊಂದಾಣಿಕೆ ರಾಜಕೀಯಕ್ಕೆ ತಮ್ಮನ್ನು ಒಗ್ಗಿಸಿಕೊಂಡರೆ ಗೆಲುವಿನ ಹತ್ತಿರ ಹೋಗುವುದು ಅವರಿಗೆ ಕಷ್ಟವಾಗಲಿಕ್ಕಿಲ್ಲ ಎಂದು ಜೆಡಿಎಸ್ ಕಾರ್ಯಕರ್ತರೇ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುವುದುಂಟು. ಈ ಕ್ಷೇತ್ರದಲ್ಲಿ ಮಾಯಾವತಿ ನೇತೃತ್ವದ ಬಿಎಸ್ಪಿ ಕೂಡ ಅಲ್ಲಲ್ಲಿ ಕೊಂಚ ಸಂಘಟಿತವಾಗಿದೆ. ಇದು ಎಟಿಆರ್‌ಗೆ ಸಹಾಯಕವಾದರೇ ಅಚ್ಚರಿಯಿಲ್ಲ.

ಬಿಜೆಪಿ ಅಭ್ಯರ್ಥಿ ಯಾರೆಂಬುದು ಅಂತಿಮವಾಗಿಲ್ಲ. ನಿವೃತ್ತ ಐಎಎಸ್ ಅಧಿಕಾರಿ ರಾಮೇಗೌಡ ಮತ್ತು ಕಳೆದ ಬಾರಿ ಕೆಜೆಪಿಯಿಂದ ಸ್ಪರ್ಧಿಸಿದ್ದ ಪುಟ್ಟಸ್ವಾಮಿ ಟಿಕೆಟ್ ಪಡೆಯಲು ಪ್ರಯತ್ನ ನಡೆಸುತ್ತಿದ್ದಾರೆ. ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿರುವ ಎಚ್. ಯೋಗಾರಮೇಶ್ ನಾನೇ ಅಭ್ಯರ್ಥಿ ಎಂದು ಓಡಾಡುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ 32 ಸಾವಿರ ಮತ ಪಡೆದಿದ್ದ ಯೋಗಾರಮೇಶ್ ಈ ಬಾರಿಯೂ ಟಿಕೆಟ್ ಪಡೆದು ಸ್ಪರ್ಧೆ ಒಡ್ಡುತ್ತಾರೆಯೇ ಎಂಬುದನ್ನು ಕಾದು ನೋಡಬೇಕು. ಸದ್ಯದ ಪರಿಸ್ಥಿತಿ ಗಮನಿಸಿದರೆ ಈ ಚುನಾವಣೆಯಲ್ಲಿ ಸಚಿವ ಮಂಜು ಅವರು ನೇರವಾಗಿ ಎ.ಟಿ. ರಾಮಸ್ವಾಮಿ ಅವರನ್ನೇ ಎದುರಿಸಬೇಕಾದ ವಾತಾವರಣ.

loader