82 ನೇ ಕನ್ನಡ ಸಾಹಿತ್ಯ ರಾಯಚೂರಿನಲ್ಲಿ ಆರಂಭವಾಗಿದೆ. ಎಲ್ಲೆಲ್ಲೂ ಕನ್ನಡದ ಕಲರವ ಮೊಳಗುತ್ತಿದೆ.  ಜಯಘೋಷ ಮೊಳಗುತ್ತಿದೆ. ಒಂದೊಂದು ವೇದಿಕೆಯಲ್ಲಿ ಒಂದೊಂದು ಕಾರ್ಯಕ್ರಮಗಳು ಜರುಗುತ್ತಿವೆ. ವೇದಿಕೆಯಲ್ಲಿ ನಡೆದ ಮಜವಾದ ತಮಾಷೆಗಳಿವು. 

ರಾಯಚೂರು (ಡಿ.03): 82 ನೇ ಕನ್ನಡ ಸಾಹಿತ್ಯ ರಾಯಚೂರಿನಲ್ಲಿ ಆರಂಭವಾಗಿದೆ. ಎಲ್ಲೆಲ್ಲೂ ಕನ್ನಡದ ಕಲರವ ಮೊಳಗುತ್ತಿದೆ. ಜಯಘೋಷ ಮೊಳಗುತ್ತಿದೆ. ಒಂದೊಂದು ವೇದಿಕೆಯಲ್ಲಿ ಒಂದೊಂದು ಕಾರ್ಯಕ್ರಮಗಳು ಜರುಗುತ್ತಿವೆ. ವೇದಿಕೆಯಲ್ಲಿ ನಡೆದ ಮಜವಾದ ತಮಾಷೆಗಳಿವು. 


ಎಲ್ಲರಿಗೂ ಹಾದರದ ಸ್ವಾಗತ!
ಸಮನಾಂತರ ವೇದಿಕೆಯಲ್ಲಿ -ಕನ್ನಡ ಮತ್ತು ಹೊಸ ತಲೆಮಾರು- ಗೋಷ್ಠಿಯಲ್ಲಿ ಸ್ವಾಗತ ಭಾಷಣ ಮಾಡಿದವರು ಮುಜುಗರಕ್ಕೀಡಾದ ಪ್ರಸಂಗ ನಡೆಯಿತು. ಅತಿಥಿಗಳನ್ನು ಸ್ವಾಗತಿಸುವಾಗ ಅವರು, -ಆದರದ ಸ್ವಾಗತ- ಎನ್ನುವ ಬದಲು –ಹಾದರದ ಸ್ವಾಗತ- ಎನ್ನುತ್ತಿದ್ದರು! ಒಂದೆರಡು ಬಾರಿ ಸಹಿಸಿಕೊಂಡ ಪ್ರೇಕ್ಷಕರು ಮತ್ತೊಮ್ಮೆಯೂ ಅದೇ ಥರ ಉಚ್ಚರಿಸಿದಾಗ ಎಲ್ಲರೂ ಜೋರಾಗಿ ಕೂಗತೊಡಗಿದರು. –ಹಾದರದ ಸ್ವಾಗತ ನೀಡಬೇಡಿ, ಆದರದ ಸ್ವಾಗತ ನೀಡಿ- ಎಂದು ಆಗ್ರಹಿಸಿದರು. ಕೊನೆಗೆ ಆ ಪದವನ್ನೇ ಬಿಟ್ಟ ಸ್ವಾಗತಕಾರರು -ಪ್ರೀತಿಪೂರ್ವಕ ಸ್ವಾಗತ- ಎಂದು ಬಳಸಬೇಕಾಯಿತು!


ಇಷ್ಟಕ್ಕೆಲ್ಲ ಕಾರಣ ನರೇಂದ್ರ ಮೋದಿ!

ಸಾಮಾನ್ಯವಾಗಿ ಸಾಹಿತ್ಯ ಸಮ್ಮೇಳನಗಳಲ್ಲಿ ಕನ್ನಡ ಬಾವುಟ, ಶಾಲು, ಸ್ಟಿಕ್ಕರ್ ಮಾರುವಂಥವರಿಗೆ ಒಳ್ಳೆಯ ವ್ಯಾಪಾರ. ಆದರೆ, ಕಳೆದ ನಾಲ್ಕು ವರ್ಷಗಳಿಗೆ ಹೋಲಿಸಿಕೊಂಡರೆ ಈ 82ನೇ ಸಮ್ಮೇಳನದಲ್ಲಿ ಅತಿ ಕಡಿಮೆ ವ್ಯಾಪಾರವಾಗಿದೆ. ಕನ್ನಡದ ಧ್ವಜವನ್ನು ಕೊಳ್ಳುವವರೇ ಇಲ್ಲ. ಶಾಲುಗಳನ್ನು ರಿಯಾಯಿತಿ ದರಲ್ಲಿ ನೀಡುತ್ತಿದ್ದರೂ ಅವೂ ಬಿಕರಿಯಾಗದೆ ಹಾಗೆಯೇ ಇದ್ದವು. ಇದಕ್ಕೆಲ್ಲ ಕಾರಣ ಮೋದಿ ಎನ್ನುವುದು ವ್ಯಾಪಾರಸ್ಥರ ಅಳಲು. ಹಳೇನೋಟಿನ ನಿಷೇಧ, ಚೇಂಜಿನ ಸಮಸ್ಯೆ ಇವರಿಗೂ ತಟ್ಟಿತ್ತು.

ಪ್ರೋತ್ಸಾಹವಾಗದೆ ಕಿರಿಕಿರಿಯಾದ ಚಪ್ಪಾಳೆ

ಮೊದಲ ಕವಿಗೋಷ್ಠಿಯಲ್ಲಿ 53 ಮಂದಿ ಕವಿ- ಕವಯತ್ರಿಗಳು ಭಾಗವಹಿಸಿದ್ದರಿಂದ –ಇಷ್ಟೊಂದು ಕವಿಗಳ ಕವಿತೆ ಕೇಳಬೇಕಲ್ಲಾ?- ಅಂತ ಪ್ರೇಕ್ಷಕರು ಪೇಚು ಮೋರೆ ಹಾಕಿದ ಪ್ರಸಂಗ ನಡೆಯಿತು. ಪ್ರೇಕ್ಷಕರು ಕವಿತೆ ಓದುವಾಗಲೆಲ್ಲ ಚಪ್ಪಾಳೆ ಹೊಡೆದು ಕಿರಿಕಿರಿಯನ್ನುಂಟು ಮಾಡಿದರು. ಕೆಲ ಕವಿಗಳು ವೇಗವಾಗಿಯೇ ಕವಿತೆ ಓದಿದರೆ, ಮೈಸೂರಿನ ಡಾ. ಲೀಲಾ ಪ್ರಕಾಶ್ ಮಾತ್ರ ಪ್ರೇಕ್ಷರ ಚಪ್ಪಾಳೆ ಹೆಚ್ಚಾದಂತೆಲ್ಲಾ ತಮ್ಮ ಧ್ವನಿಯನ್ನು ಮತ್ತಷ್ಟು ಏರಿಸಿ ಸುದೀರ್ಘ ಎರಡು ಪುಟದ ಕವನ ವಾಚಿಸಿದರು. ಮಧ್ಯೆ ಮಧ್ಯೆ ‘ರಾಯಚೂರಿನ ಜನ ಕನ್ನಡಿಗರು’ ಎಂದೆಲ್ಲಾ ಹೇಳಿ ಕವನ ವಾಚಿಸಿದರು!

ನಮ್ಮಣ್ಣ ದರ್ಶನ್ ಬರ್ತರ
ಸಮ್ಮೇಳನದ ಕೊನೆಯ ದಿನ (ಇಂದು) ಸಿನಿಮಾ ಸ್ಟಾರ್ ಗಳು ಬರುತ್ತಾರೆಂಬ ಗಾಳಿಸುದ್ದಿ ಎಲ್ಲೆಡೆ ಹಬ್ಬಿತ್ತು. -ಚಾಲೆಂಜಿಂಗ್ ಸ್ಟಾರ್ ದರ್ಶನ್ ಬರ್ತರ, ನಮ್ಮಣ್ಣ ದರ್ಶನ್ ಬರ್ತರ- ಎಂದು ಪಡ್ಡೆ ಹುಡುಗರು ಮಾತನಾಡಿಕೊಂಡು ಸಂಭ್ರಮಿಸುತ್ತಿದ್ದರು. ಕೆಲವು ಪೊಲೀಸ್ ಕಾನ್ ಸ್ಟೇಬಲ್ ಗಳ ಬಾಯಿಯಲ್ಲೂ ಇದೇ ಮಾತು ಪುನರಾವರ್ತನೆ ಆಗಿತ್ತು. ಆದರೆ, ಮೇಲಧಿಕಾರಿಗಳಿಗೆ ಇದ್ಯಾವುದೇ ಮಾಹಿತಿಯೇ ಇರಲಿಲ್ಲ. ಹಂಸಲೇಖ ಮಾತ್ರ ಬರ್ತಿದ್ದಾರೆ ಅಂತ ಹೇಳಿದರು.

100 ರುಪಾಯಿಗೆ 6 ಪುಸ್ತಕ!
ಸಮ್ಮೇಳನದಲ್ಲಿ ಡೇರಿ ಹೂಡಿದ್ದ ಪ್ರತಿಷ್ಠಿತ ಪ್ರಕಾಶನದ ಬುಕ್ ಸ್ಟಾಲ್ ಗಳಲ್ಲಿ ವ್ಯಾಪಾರವೇ ಇರಲಿಲ್ಲ. ಇವರಿಗೆ ಹೀಗೆ ಶಾಕ್ ಕೊಟ್ಟಿದ್ದು ಸಣ್ಣಸಣ್ಣ ಪ್ರಕಾಶನದವರು. ಅವರೆಲ್ಲ 100 ರುಪಾಯಿಗೆ ಐದಾರು ಪುಸ್ತಕಗಳನ್ನು ಮಾರುವ ಆಫರ್ ಇಟ್ಟಿದ್ದರು. ಜನ ಆಕರ್ಷಿತರಾಗಿ ಅಲ್ಲಿಗೇ ಮುಗಿಬೀಳುತ್ತಿದ್ದರು. ಅಲ್ಲಿ ಅಡುಗೆ, ರಂಗೋಲಿ, ವ್ಯಕ್ತಿತ್ವ ವಿಕನಸ ಪುಸ್ತಕಗಳೇ ಹೆಚ್ಚಿದ್ದವು. ಜನರ ಲೆಕ್ಕಾಚಾರ ಇಷ್ಟೇ ಆಗಿತ್ತು, 100- 150ರ ಒಂದು ಪುಸ್ತಕ ಕೊಳ್ಳುವ ಬದಲು ಅಷ್ಟೇ ದುಡ್ಡಿಗೆ ಹತ್ತಾರು ಪುಸ್ತಕ ಕೊಳ್ಳಬಹುದಲ್ಲ!