ಚಿತ್ರದುರ್ಗ (ಅ.11): ಜಿಲ್ಲೆಯ ಅಭಿವೃದ್ಧಿಗೆ .1600 ಕೋಟಿ ಅನುದಾನಕ್ಕೆ ಮನವಿ ಮಾಡಿದ್ದು, ಅದರ ನಿರೀಕ್ಷೆಯಲ್ಲಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌. ಆಂಜನೇಯ ಹೇಳಿದರು.
ಚಿತ್ರದುರ್ಗ (ಅ.11): ಜಿಲ್ಲೆಯ ಅಭಿವೃದ್ಧಿಗೆ .1600 ಕೋಟಿ ಅನುದಾನಕ್ಕೆ ಮನವಿ ಮಾಡಿದ್ದು, ಅದರ ನಿರೀಕ್ಷೆಯಲ್ಲಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್. ಆಂಜನೇಯ ಹೇಳಿದರು.
ಶರಣ ಸಂಸ್ಕೃತಿ ಉತ್ಸವದಲ್ಲಿ ‘ಚಿತ್ರದುರ್ಗ ನಗರ ಮತ್ತು ಜಿಲ್ಲೆಯ ಸ್ಥಿತಿಗತಿ’ ಕುರಿತ ಚಿಂತನ ಮಂಥನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಗರದಲ್ಲಿ ಒಳಚರಂಡಿ ಯೋಜನೆ ಅವೈಜ್ಞಾನಿಕವಾಗಿದೆ. ಯೋಜನೆ ರೂಪಿಸುವವರು ಸರಿಯಾದ ರೀತಿಯಲ್ಲಿ ಅನುಷ್ಠಾನಗೊಳಿಸಿಲ್ಲ. ಇದು ಚಿತ್ರದುರ್ಗದಲ್ಲಿ ಮಾತ್ರವಲ್ಲದೆ ರಾಜ್ಯದ ಇತರ ನಗರಗಳಲ್ಲೂ ಇದೇ ಸಮಸ್ಯೆಯಾಗಿದೆ. ಚಿತ್ರದುರ್ಗಕ್ಕೆ .35 ಕೋಟಿ ಮಂಜೂರು ಮಾಡಲಾಗಿದೆ. ನಾವು ಕಣ್ಮುಚ್ಚಿ ಕುಳಿತಿಲ್ಲ, ನಮಗೂ ಜವಾಬ್ದಾರಿ ಇದೆ ಎಂದರು.
ಎಲ್ಲ ಜಿಲ್ಲಾಧಿಕಾರಿಗಳು ಒಳ್ಳೆಯ ಕೆಲಸ ಮಾಡಿದ್ದಾರೆ. ಚಿತ್ರದುರ್ಗ ಪ್ರವಾಸಿ ಮಂದಿರಕ್ಕೆ .5 ಕೋಟಿ ಬಿಡುಗಡೆ ಮಾಡಿದ್ದೇವೆ. ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರಕ್ಕೆ .5 ಕೋಟಿ ಬಿಡುಗಡೆ ಮಾಡಿದ್ದೇವೆ. ಜಿಲ್ಲೆಯಲ್ಲಿ ವಿಶ್ವವಿದ್ಯಾಲಯ ಪ್ರಾರಂಭಿಸಲು ಯೋಜನೆ ರೂಪಿಸಿದ್ದೇವೆ. ಸರ್ಕಾರದಿಂದ ಹೊಸ ವೈದ್ಯಕೀಯ ಕಾಲೇಜು ಆರಂಭಿಸಲಾಗುವುದು. ಯಾವುದೇ ಖಾಸಗಿ ವೈದ್ಯಕೀಯ ಕಾಲೇಜನ್ನು ತೆಗೆದುಕೊಳ್ಳವುದಿಲ್ಲ. ತುಂಗಾಭದ್ರಾ ನದಿಯಿಂದ ಜಿಲ್ಲೆಗೆ ಕುಡಿಯುವ ನೀರಿಗೆ ಯೋಜನೆ ಹಾಕಿಕೊಂಡಿದ್ದೇವೆ. ಮಠದ ಮುಂದೆ ಮತ್ತು ಹಿಂದೆ ಇರುವ ಕೆರೆಗಳನ್ನು ವಿಶೇಷ ಯೋಜನೆಯಲ್ಲಿ ಅಭಿವೃದ್ಧಿಪಡಿಸುತ್ತೇವೆ. ನಗರದಲ್ಲಿ ಯಾವ ಭಾಗದಲ್ಲಿ ಸಂಚಾರಕ್ಕೆ ಹಾಗೂ ಸೌಂದರ್ಯಕ್ಕೆ ಧಕ್ಕೆಯಾಗಿದೆಯೋ ಅಲ್ಲಿನ ಅಂಗಡಿಗಳನ್ನು ತೆರುವು ಗೊಳಿಸುತ್ತೇವೆ ಎಂದು ತಿಳಿಸಿದರು.
ಡಾ.ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ಐತಿಹಾಸಿಕ ನಗರದಲ್ಲಿ ಪ್ರತಿಯೊಂದು ರಸ್ತೆಗಳು ಹಾಳಾಗಿವೆ. ಧಾರ್ಮಿಕ ಚೌಕಟ್ಟಿನಲ್ಲಿರುವ ನಾವು ಶ್ರೀಮಠವನ್ನು ಎಷ್ಟೊಂದು ಸುಂದರವಾಗಿಟ್ಟಿದ್ದೇವೆ. ಆದರೆ ನಗರ ಏಕೆ ಹೀಗಾಗಿದೆ. ದಾವಣಗೆರೆ ನಗರವು ಸಂಪೂರ್ಣ ಕಾಂಕ್ರಿಟ್ ರಸ್ತೆಯಾಗಿದೆ. ಆದರೆ ಚಿತ್ರದುರ್ಗದ ಜನರು ಏನು ಪಾಪ ಮಾಡಿದ್ದಾರೆ. ಬೇರೆ ನಗರಗಳಿಗೆ ಇದು ಸಾಧ್ಯವಾದರೆ ನಮ್ಮ ನಗರಕ್ಕೆ ಏಕೆ ಸಾಧ್ಯವಾಗುತ್ತಿಲ್ಲ. ನಮ್ಮ ಐತಿಹಾಸಿಕ ನಗರ ಇಂದು ಸ್ಲಂ ಆಗುತ್ತಿದೆ. ಸ್ಮಾರ್ಟ್ ಸಿಟಿ ರೂಪಿಸುವುದು ನಮಗೆ ಏಕೆ ಆಗುತ್ತಿಲ್ಲ. ಮಠದ ಕೆರೆಗಳಿಗೆ ಕಸವನ್ನು ತಂದು ಹಾಕುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ಚಿತ್ರದುರ್ಗ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಮಾತನಾಡಿ, ಚಿತ್ರದುರ್ಗದಲ್ಲಿ ಕೆ.ಎಂ.ಆರ್.ಪಿ ಯೊಜನೆಯಡಿಲ್ಲಿ ಯು.ಜಿ.ಡಿ. ನಿರ್ಮಿಸಿದಕ್ಕೆ 100ಕ್ಕೆ ನೂರರಷ್ಟುರಸ್ತೆಗಳು ಹಾಳಾಗಿವೆ. 2012 ರಲ್ಲಿ ವಿವಿಧ ಯೋಜನೆಗಳಿಂದ .12 ಕೋಟಿ ಅನುದಾನ ಬಂದಿತ್ತು. ಇದೇ ವರ್ಷ .80 ಕೋಟಿ ಯು.ಜಿ.ಡಿ.ಗೆ ಕೊಟ್ಟಿದ್ದರು. ಕಾಮಗಾರಿ ಸಂದರ್ಭದಲ್ಲಿ ಗುಂಡಿ ತೆಗೆಯಲು ಹಣಕೊಟ್ಟಿದ್ದರು. ಆದರೆ ಅದನ್ನು ಮುಚ್ಚಲು ಕೊಟ್ಟಿರಲಿಲ್ಲ. 2014- 15ರಲ್ಲಿ ನಗರೋತ್ಥಾನಕ್ಕೆ .35 ಕೋಟಿ ಕೊಟ್ಟಿದ್ದರು, ಈ ಹಣ ಸರ್ಕಾರಕ್ಕೆ ವಾಪಸ್ ಹೋಗಿದೆ ಎಂದರು.
ಸಂಸದ ಬಿ.ಎನ್. ಚಂದ್ರಪ್ಪ ಮಾತನಾಡಿ, 12ನೇ ಶತಮಾನದ ಕಲ್ಪನೆಯನ್ನು ಈ ಅನುಭವ ಮಂಟಪದಲ್ಲಿ ಕಾಣುತ್ತಿದ್ದೇವೆ. ನಗರದಲ್ಲಿ ಸಾಕಷ್ಟುನ್ಯೂನತೆಗಳಿವೆ. ಜಿಲ್ಲೆಯಲ್ಲಿ ಅತ್ಯಂತ ಕ್ರಿಯಾಶೀಲ ಶಾಸಕರಿದ್ದಾರೆ. ಶಾಸಕರು ತಮ್ಮ ಕ್ಷೇತ್ರಕ್ಕೆ ಮಾತ್ರವಲ್ಲ ನಗರಕ್ಕೂ ತಮ್ಮ ಗಮನವನ್ನು ಹರಿಸಬೇಕು. ಸಚಿವರು ಸರ್ಕಾರದಿಂದ ಹೆಚ್ಚಿನ ಹಣತರಬೇಕಾಗಿದೆ ಎಂದು ಹೇಳಿದರು.
ಶ್ರೀ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಮಾತನಾಡಿ, ಮೊದಲು ಕೆರೆಗಳ ಹೂಳೆತ್ತುವ ಕೆಲಸ ಮಾಡಬೇಕು. ಮುಂದಿನ ಪೀಳಿಗೆಗೆ ಹೊಸ ಯೋಜನೆಗಳನ್ನು ಮಾಡಬೇಕಿದೆ. ಉದ್ಯೊಗ ಸೃಷ್ಠಿ ಹಾಗೂ ನೀರಾವರಿಗೆ ತಾವು ಕೈಗೊಂಡಿರುವ ಕಾರ್ಯಗಳು ಏನು ಎಂದು ಕೇಳಿದರು.
ಹೊಸದುರ್ಗದ ಶಾಸಕ ಬಿ.ಜಿ. ಗೋಂದಪ್ಪ, ಚಳ್ಳಕೆರೆ ಗೇಟ್ನಿಂದ ಎನ್.ಎಚ್.4 ರವರೆಗೆ, ಅಂದರೆ ಬಿ.ಡಿ. ರಸ್ತೆಯನ್ನು ಅಗಲೀಕರಣ ಮಾಡಬೇಕೆಂದು ಈಗಾಗಲೇ ಚರ್ಚೆ ನಡೆಸಲಾಗಿದೆ. ನಗರೋತ್ಥಾನ, ಗಡಿಭಾಗದಿಂದ ಹಾಗೂ ಸಮಾಜ ಕಲ್ಯಾಣದಿಂದ ಬರುವ ಹಣ ಒಟ್ಟುಗೂಡಿಸಿದರೆ ನಗರ ಅತ್ಯಂತ ಸುಂದರ ನಗರವಾಗುತ್ತದೆ. ಪಕ್ಷಭೇದ ಮರೆತು ನಗರದ ಸ್ವಚ್ಛತೆ, ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ಕೊಡಬೇಕು. 2017ರ ನವಂಬರ್ ವೇಳೆಗೆ ಭದ್ರಾ ಮೇಲ್ದಂಡೆ ಯೋಜನೆ ನೀರು ವೇದಾವತಿ ನದಿಗೆ ಹರಿಸುವ ಕೆಲಸ ಮಾಡುತ್ತೇವೆ. ಇದರ ಮೂಲಕ ವಾಣಿವಿಲಾಸಸಾಗರ ಅಣೆಕಟ್ಟೆಗೆ ನೀರು ಹರಿಸುತ್ತೇವೆ ಎಂದು ಹೇಳಿದರು.
