ಶಿವಾನಂದ ಗೊಂಬಿ

ಹುಬ್ಬಳ್ಳಿ(ಅ.10): ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆ ಸಮೀಪಿಸಿದೆ. ಟಿಕೆಟ್‌ಗಾಗಿ ಬಿಜೆಪಿಯಲ್ಲಿ ಈಗಲೇ ಫೈಟ್‌ ಶುರುವಾಗಿದೆ. ಪಕ್ಷದ ಮುಖಂಡರ ಬಳಿ ಆಕಾಂಕ್ಷಿಗಳು ಲಾಬಿ ನಡೆಸುತ್ತಿದ್ದು, ಅಭ್ಯರ್ಥಿ ಆಯ್ಕೆಯೇ ವರಿಷ್ಠರಿಗೆ ತಲೆ ನೋವಾಗಿದೆ.

ಹೌದು! ಹಾಗೆ ನೋಡಿದರೆ ಚುನಾವಣೆ 2020ರ ಜೂನ್‌ನಲ್ಲಿ ನಡೆಯಲಿದೆ. ಪ್ರತಿ ಆರು ವರ್ಷಕ್ಕೆ ಮೇಲ್ಮನೆಗಾಗಿ ನಡೆಯುವ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಪದವೀಧರರೇ ಮತದಾರರು. ಮತದಾರರನ್ನು ಸೆಳೆಯಲು ಈಗಲೇ ಆಕಾಂಕ್ಷಿಗಳು ಈಗಲೇ ತಯಾರಿ ನಡೆಸಿದ್ದಾರೆ. ಕೆಲವರಂತೂ ಅಕ್ಷರಶಃ ಸಣ್ಣದಾಗಿ ಪ್ರಚಾರವನ್ನೇ ಶುರುವಿಟ್ಟುಕೊಂಡಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕೇಂದ್ರ ಹಾಗೂ ರಾಜ್ಯದಲ್ಲಿ ಸರ್ಕಾರ ಹೊಂದಿರುವ ಬಿಜೆಪಿ ಈಗಲೇ ಚುನಾವಣೆ ತಯಾರಿಯನ್ನು ನಡೆಸಿದೆ. ಧಾರವಾಡ, ಹಾವೇರಿ, ಗದಗ, ಉತ್ತರ ಕನ್ನಡ ಜಿಲ್ಲೆಗಳನ್ನು ಹೊಂದಿರುವ ಕ್ಷೇತ್ರವಿದು. ಈಗಾಗಲೇ ಎರಡು ಸಭೆಗಳನ್ನು ಬಿಜೆಪಿ ನಡೆಸಿದ್ದುಂಟು. ಮತದಾರರ ಪಟ್ಟಿಸಿದ್ಧಪಡಿಸುವಂತೆ ಮುಖಂಡರಿಗೆ ಸೂಚನೆಯನ್ನೂ ನೀಡಲಾಗಿದೆ. ಪಶ್ಚಿಮ ಕ್ಷೇತ್ರಕ್ಕೆ ಭಾನುಪ್ರಕಾಶ ಉಸ್ತುವಾರಿಯಾಗಿದ್ದು, ಇನ್ನೊಂದು ವಾರದೊಳಗೆ 4 ಜಿಲ್ಲೆಗಳಲ್ಲಿ ಸಭೆಗಳನ್ನು ನಡೆಯಲಿದ್ದಾರೆ. ಈಗಾಗಲೇ ಆಕಾಂಕ್ಷಿಗಳಿಂದ ಅರ್ಜಿ ಪಡೆದಿದೆ.

ಯಾರ‍್ಯಾರು ಆಕಾಂಕ್ಷಿಗಳು:

ಹಾಲಿ ಸದಸ್ಯ ಎಸ್‌.ವಿ. ಸಂಕನೂರು ಅವರನ್ನು ಬಿಜೆಪಿ ಮತ್ತೆ ಕಣಕ್ಕಿಳಿಸುವುದು ಡೌಟು. ಹಾಗಾಗಿ ಹುಡಾದ ಮಾಜಿ ಅಧ್ಯಕ್ಷ, ಧಾರವಾಡ ವಿಭಾಗೀಯ ಬಿಜೆಪಿ ಪ್ರಭಾರಿ ಲಿಂಗರಾಜ ಪಾಟೀಲ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಮೋಹನ ಲಿಂಬಿಕಾಯಿ, ಶೆಟ್ಟರ್‌ ವಿರುದ್ಧ ಎರಡು ಬಾರಿ ಸ್ಪರ್ಧಿಸಿ ಪರಾಭವಗೊಂಡಿರುವ ಇತ್ತೀಚಿಗಷ್ಟೇ ಬಿಜೆಪಿ ಸೇರಿರುವ ಡಾ. ಮಹೇಶ ನಾಲ್ವಾಡ ಸೇರಿದಂತೆ ಹಲವರು ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ.

ಸಂಕನೂರು ಈಗಾಗಲೇ ನಾನು ಒಂದು ಬಾರಿ ಸದಸ್ಯನಾಗಿ ಸಾಕಷ್ಟುಉತ್ತಮ ರೀತಿಯಲ್ಲಿ ಕೆಲಸ ಮಾಡಿದ್ದೇನೆ. ಪದವೀಧರರ ಸಮಸ್ಯೆಗಳಿಗೆ ಸದನದೊಳಗೆ ಹಾಗೂ ಹೊರಗೆ ಧ್ವನಿ ಎತ್ತಿದ್ದೇನೆ. ಇದೊಂದು ಸಲ ತಮಗೆ ಟಿಕೆಟ್‌ ಕೊಡಿ ಎಂದು ದುಂಬಾಲು ಬಿದ್ದಿದ್ದರೆ, ಈ ಹಿಂದೆ ಒಂದು ಬಾರಿ ಸದಸ್ಯರಾಗಿರುವ ಮೋಹನ ಲಿಂಬಿಕಾಯಿ ಈ ಸಲ ತಮಗೆ ಟಿಕೆಟ್‌ ಕೊಡಿ ಎಂದು ಕೇಳುತ್ತಿದ್ದಾರೆ. 

ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿರುವ ಮಹೇಶ ಟೆಂಗಿನಕಾಯಿ ಅವರಿಗೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಲಘಟಗಿ ಕ್ಷೇತ್ರದ ಟಿಕೆಟ್‌ ಕೊಡುವುದಾಗಿ ಘೋಷಣೆ ಮಾಡಿ ಕೊನೆ ಕ್ಷಣದಲ್ಲಿ ಟಿಕೆಟ್‌ ಕೊಡಲಿಲ್ಲ. ಆಗ ಪಕ್ಷಕ್ಕಾಗಿ ತ್ಯಾಗ ಮಾಡಿದ್ದೇನೆ. ಪರಿಷತ್‌ ಚುನಾವಣೆಯಲ್ಲಾದರೂ ನನಗೆ ಟಿಕೆಟ್‌ ಬೇಕೆಂದು ಟೆಂಗಿನಕಾಯಿ ಲಾಬಿ ನಡೆಸಿದ್ದರೆ, ಲಿಂಗರಾಜ ಪಾಟೀಲ ಕಳೆದ 30 ವರ್ಷಗಳಿಂದ ಪಕ್ಷಕ್ಕಾಗಿ ದುಡಿದಿದ್ದೇನೆ. ಪಕ್ಷವನ್ನು ಬೇರು ಮಟ್ಟದಿಂದ ಕಟ್ಟಿದ್ದೇನೆ. ನಾಲ್ಕು ಜಿಲ್ಲೆಗಳಲ್ಲಿ ಸಂಪರ್ಕ ಹೊಂದಿದ್ದೇನೆ ಟಿಕೆಟ್‌ ನನಗೆ ಕೊಡಿ ಎಂದು ದುಂಬಾಲು ಬಿದ್ದಿದ್ದಾರೆ.

ನಾಲ್ವಾಡ ಕೂಡ ಪೈಪೋಟಿ:

ಇನ್ನು ಮಹೇಶ ನಾಲ್ವಾಡ ಬಿಜೆಪಿಗೆ ಬರುವಾಗ ಎಂಎಲ್‌ಸಿ ಮಾಡುವುದಾಗಿ ವರಿಷ್ಠರು ಮಾತುಕೊಟ್ಟಿದ್ದರಂತೆ. ಹೀಗಾಗಿ ಈ ಸಲ ನಾಲ್ವಾಡ ಅವರಿಗೆ ಟಿಕೆಟ್‌ ಎಂಬ ಮಾತು ನಾಲ್ವಾಡ ಅವರ ಬೆಂಬಲಿಗರ ಮಾತು. ಆದರೆ, ಇದನ್ನು ಪಕ್ಷದ ಮುಖಂಡರು ಮಾತ್ರ ಒಪ್ಪುತ್ತಿಲ್ಲ. ಹಾಗೆ ಯಾವುದೇ ಮಾತು ನಾಲ್ವಾಡ ಅವರಿಗೆ ಪಕ್ಷ ಕೊಟ್ಟಿಲ್ಲ. ಪಕ್ಷಕ್ಕೆ ಸೇರುವಾಗ ನಾಲ್ವಾಡ ಕೂಡ ಯಾವುದೇ ಷರತ್ತು ವಿಧಿಸಿಲ್ಲ ಎಂದು ಸ್ಪಷ್ಟಪಡಿಸುತ್ತಾರೆ.
ಈ ಬಗ್ಗೆ ಮಾತನಾಡಿದ ಎಂಎಲ್‌ಸಿ ಎಸ್‌.ವಿ. ಸಂಕನೂರು ಅವರು, ಕಳೆದ ಸಲ ಉತ್ತಮ ಕೆಲಸ ಮಾಡಿ ತೋರಿಸಿದ್ದೇನೆ. ಇನ್ನೊಂದು ಸಲ ನಮಗೆ ಟಿಕೆಟ್‌ ಕೊಡುವಂತೆ ಕೇಳಿದ್ದೇನೆ. ಈಗಾಗಲೇ ಕರಪತ್ರ ಮುದ್ರಿಸಿ ಹಂಚುತ್ತಿದ್ದೇನೆ. ನಾಲ್ಕು ಜಿಲ್ಲೆಗಳಲ್ಲಿ ಸಂಚರಿಸಿದ್ದೇನೆ ಎಂದು ತಿಳಿಸಿದ್ದಾರೆ. 

30 ವರ್ಷಗಳಿಂದ ಪಕ್ಷಕ್ಕಾಗಿ ದುಡಿದಿದ್ದೇನೆ. ನಾಲ್ಕು ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದೇನೆ. ಎಲ್ಲೆಡೆ ಸಂಪರ್ಕ ಹೊಂದಿದ್ದೇನೆ. ತಮಗೆ ಟಿಕೆಟ್‌ ಕೊಡುವಂತೆ ಕೇಳಿದ್ದೇನೆ. ವರಿಷ್ಠರು ಈ ಸಲ ತಮಗೆ ಟಿಕೆಟ್‌ ನೀಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಧಾರವಾಡ ಪ್ರಭಾರಿ ವಿಭಾಗ (ಬಿಜೆಪಿ) ಲಿಂಗರಾಜ ಪಾಟೀಲ ಅವರು ಹೇಳಿದ್ದಾರೆ. 

ಮಹೇಶ ನಾಲ್ವಾಡ ಪಕ್ಷಕ್ಕೆ ಸೇರ್ಪಡೆಗೊಳ್ಳುವಾಗ ಯಾವುದೇ ಷರತ್ತು ವಿಧಿಸಿರಲಿಲ್ಲ. ನಾವು ಅವರಿಗೆ ಟಿಕೆಟ್‌ ಕೊಡುತ್ತೇವೆ ಎಂದು ಕೂಡ ಭರವಸೆಯನ್ನೂ ನೀಡಿಲ್ಲ. ಪಕ್ಷದ ಸಿದ್ಧಾಂತ ಮೆಚ್ಚಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಸದ್ಯ ಎಂಎಲ್‌ಸಿ ಟಿಕೆಟ್‌ ಬೇಕೆಂದು ಅವರು ಅರ್ಜಿಯನ್ನೂ ಸಲ್ಲಿಸಿಲ್ಲ ಎಂದು ಮಹಾನಗರ ಘಟಕದ ಜಿಲ್ಲಾಧ್ಯಕ್ಷ ನಾಗೇಶ್ ಕಲಬುರ್ಗಿ ಅವರು ಹೇಳಿದ್ದಾರೆ.