ಜಗದೀಶ ಶೆಟ್ಟರ್ ಬಿಜೆಪಿಗೆ ಮರುಸೇರ್ಪಡೆಯಾಗಿದ್ದು ಸಂತೋಷವಾಗಿದೆ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಬಿಜೆಪಿಗೆ ಮರಳಿ ಬಂದಿರುವುದು ಸಂತೋಷವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದರು. ಜಗದೀಶ ಶೆಟ್ಟರ್ ಘರ್ ವಾಪ್ಸಿಯಿಂದ ನಾನು ಬಹಳ ಖುಷಿಯಾಗಿದ್ದೇನೆ. ಅಂದು ಶೆಟ್ಟರ್ ಘರ್ ವಾಪ್ಸಿ ಕುರಿತು ನನಗೆ ಹೇಳಿದ್ರು. ಆದರೆ ನನಗೆ ದೊಡ್ಡವರ ಜೊತೆ ಅಂದು ಮೀಟಿಂಗ್ ಇದ್ದ ಕಾರಣ ಸೇರ್ಪಡೆ ವೇಳೆ ಹೋಗೋಕೆ ಆಗಿರಲಿಲ್ಲ ಎಂದರು.
ಹುಬ್ಬಳ್ಳಿ (ಜ.27): ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಬಿಜೆಪಿಗೆ ಮರಳಿ ಬಂದಿರುವುದು ಸಂತೋಷವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಸಿಗದೆ ಮುನಿಸಿಕೊಂಡು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಜಗದೀಶ ಶೆಟ್ಟರ್, ಇದೀಗ ಮತ್ತೆ ಬಿಜೆಪಿಗೆ ಮರುಸೇರ್ಪಡೆಗೊಂಡಿರುವ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಪ್ರಶ್ನೆಗೆ ಸಚಿವರು ಪ್ರತಿಕ್ರಿಯಿಸಿದರು.
ತಮ್ಮ ಮನೆಗೇ ರಾಮ ಬಂದಿದ್ದಾನೆಂಬ ಸಂಭ್ರಮದಲ್ಲಿ ಜನರಿದ್ದಾರೆ: ಕೇಂದ್ರ ಸಚಿವ ಜೋಶಿ
ಜಗದೀಶ ಶೆಟ್ಟರ್ ಘರ್ ವಾಪ್ಸಿಯಿಂದ ನಾನು ಬಹಳ ಖುಷಿಯಾಗಿದ್ದೇನೆ. ಅಂದು ಶೆಟ್ಟರ್ ಘರ್ ವಾಪ್ಸಿ ಕುರಿತು ನನಗೆ ಹೇಳಿದ್ರು. ಆದರೆ ನನಗೆ ದೊಡ್ಡವರ ಜೊತೆ ಅಂದು ಮೀಟಿಂಗ್ ಇದ್ದ ಕಾರಣ ಸೇರ್ಪಡೆ ವೇಳೆ ಹೋಗೋಕೆ ಆಗಿರಲಿಲ್ಲ. ಜಗದೀಶ ಶೆಟ್ಟರ್ ಮರುಸೇರ್ಪಡೆಗೊಂಡಿರುವುದರಿಂದ ಪಕ್ಷಕ್ಕೆ ಬಲ ಬಂದಿದೆ. ನಾವು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ 28ಕ್ಕೆ 28 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಗದೀಶ ಶೆಟ್ಟರ್ ಬಿಜೆಪಿಗೆ ಮರುಸೇರ್‌ಪಡೆಯಾಗಿರೋದಕ್ಕೆ ನನ್ನಿಂದ ಯಾವುದೇ ವಿರೋಧ ಇಲ್ಲ. ಇದ್ದಿದ್ರೆ ನಾನು ನಿಮಗೆ ಹೇಳುತ್ತಿದ್ದೆ. ನಾನು ಆರು ತಿಂಗಳ ಹಿಂದೆ ಅವರು ವಾಪಸ್ ಬರೋದಾಗಿ ಹೇಳಿದ್ದೆ. ಇದೀಗ ನನ್ನ ಹೇಳಿಕೆಯಂತೆ ಶೆಟ್ಟರ್ ಪುನಃ ಪಕ್ಷಕ್ಕೆ ಮರಳಿರುವುದು ಸಂತೋಷವಾಗಿದೆ. ಉಳಿದ ವಿಚಾರ ಅವರನ್ನೇ ಕೇಳಿ. ಅವರು ಪಕ್ಷಕ್ಕೆ ಬರುವ ಬಗ್ಗೆ ಸ್ಥಳೀಯ ನಾಯಕರಿಗೆ ಮಾಹಿತಿ ಇತ್ತು. ನಾನು ದೆಹಲಿಯಲ್ಲಿ ಇದ್ದೆ ಹೀಗಾಗಿ ನನಗೆ ಈ ಬಗ್ಗೆ ಹೆಚ್ಚು ಮಾಹಿತಿ ಇಲ್ಲ. ಅಂದು ಅರವಿಂದ ಬೆಲ್ಲದ್ ನನ್ನ ಜೊತೆ ಇರಲಿಲ್ಲ. ಆದರೆ ಅದರ ಹಿಂದಿನ ದಿನ ಮಾತ್ರ ಬೆಲ್ಲದ್ ನನ್ನ ಜೊತೆ ಇದ್ರು ಎಂದರು.
ಧಾರವಾಡ ಲೋಕಸಭಾ ಅಭ್ಯರ್ಥಿ ನಾನೇ ಮತ್ತಿನ್ಯಾರು?
ನಮಗೆ ಲಿಂಗಾಯತ ಸೇರಿ ಎಲ್ಲರೂ ಬೇಕು. ಸವದಿ ಅವರಲ್ಲಿ ನಮ್ಮ ವೈಚಾರಿಕತೆ ರಕ್ತವಿದೆ. ಅವರು ಬಂದರೂ ಸ್ವಾಗತ ಕೋರುತ್ತೇವೆ ಎಂದರು. ಇದೇ ವೇಳೆ ಧಾರವಾಡ ಲೋಕಸಭಾ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ ಜೋಶಿ ಬಿಟ್ರೆ ಇನ್ಯಾರು ಎನ್ನುವ ಮೂಲಕ ನಾನೇ ಅಭ್ಯರ್ಥಿ ಎಂದರು. ಧಾರವಾಡ ಲೋಕಸಭಾ ಟಿಕೆಟ್ ವಿಚಾರ ಪ್ರಶ್ನಿದಾಗ ಅರವಿಂದ್ ಬೆಲ್ಲದ್ ಸಹ 'ಅವರೇ ರೀ ಅವರನ್ನ ಬಿಟ್ಟು ಯಾರಿಲ್ಲ ಯಾವ ಚರ್ಚೆನೂ ಇಲ್ಲ' ಎಂದರು.
ನಮ್ಮ ಪಕ್ಷ ಈಗಾಗಲೇ ಚುನಾವಣೆ ತಯಾರಿ ನಡೆಸಿದೆ. ಲೋಕಸಭಾ ಚುನಾವಣೆಗೆ ಅಭ್ಯರ್ಥಿ ಘೋಷಣೆ ವಿಚಾರವಾಗಿ ನಾನು ಏನೂ ಮಾತಾಡೊಲ್ಲ. ಆದರೆ ನಾನೂ ಚುನಾವಣೆ ತಯಾರಿ ನಡೆಸಿದ್ದೇನೆ. ಧಾರವಾಡ ಲೋಕಸಭಾ ಚುನಾವಣೆಗೆ ನಾನೇ ಅಭ್ಯರ್ಥಿ ಎಂದು ಜೋಶಿ ಪುನರುಚ್ಚರಿಸಿದರು.
ಗಾಲಿ ಜನಾರ್ದನ ರೆಡ್ಡಿ ಕೂಡ ಒರಿಜಿನಲ್ ಬಿಜೆಪಿ:
ಜಗದೀಶ ಶೆಟ್ಟರ್ ರೀತಿ ಗಂಗಾವತಿ ಶಾಸಕ ಕೆಆರ್‌ಪಿಪಿ ಪಕ್ಷದ ಸ್ಥಾಪಕ ಗಾಲಿ ಜನಾರ್ದನರೆಡ್ಡಿ ಕೂಡ ಒರಿಜಿನಲ್ ಬಿಜೆಪಿ ಕಾರ್ಯಕರ್ತ. ಅವರು ಸಹ ಲೋಕಸಭಾ ಚುನಾವಣಾ ವೇಳೆಗೆ ಬಿಜೆಪಿಗೆ ಬರಬಹುದು. ಕಾಂಗ್ರೆಸ್‌ನೊಂದಿಗೆ ಹೊಂದಾಣಿಕೆ ಸಾಧ್ಯವಿಲ್ಲ. ಬಿಜೆಪಿಯೊಂದಿಗೆ ಮಾಡಬಹುದು ಎಂದು ಅವರೇ ಹೇಳಿದ್ದಾರೆ. ಹೀಗಾಗಿ ಅವರೂ ಬಿಜೆಪಿಗೆ ಸೇರಬಹುದು ಎನ್ನುವ ಮೂಲಕ ಜನಾರ್ದನರೆಡ್ಡಿಯವರನ್ನು ಪಕ್ಷಕ್ಕೆ ಕರೆತರುವ ಪ್ರಯತ್ನದ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸುಳಿವು ಕೊಟ್ಟರು.
ಇವತ್ತು ಜಗದೀಶ ಶೆಟ್ಟರ್ ಕಾರ್ಯಕಾರಿಣಿ ಸಭೆಯಲ್ಲಿ ಸಿಕ್ಕಿದ್ದರು. ವೆಲ್‌ಕಂ ಬ್ಯಾಕ್ ಹೇಳಿದ್ದೇನೆ. ಸರ್ಕಾರ ಐದು ವರ್ಷ ನಡೆಸಬೇಕು. ಆದ್ರೆ ಅವರು ಐದು ವರ್ಷ ಸರ್ಕಾರ ಸರಿಯಾಗಿ ನಡೆಸ್ತಿಲ್ಲ ಅನ್ನೋ ಆಕ್ರೋಶ ಇದೆ. ಜನರಿಗೂ ಆಕ್ರೋಶ ಇದೆ, ನಮಗೂ ಇದೆ ಎಂದರು. ಇದೇ ವೇಳೆ ದೆಹಲಿ ಸಿಎಂ ಕೇಜ್ರಿವಾಲರ ದುರಾಡಳಿತದ ಬಗ್ಗೆ ವಾಗ್ದಾಳಿ ನಡೆಸಿದರು. ಕೇಜ್ರಿವಾಲ ಈ ಹಿಂದೆ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುವ ಮೂಲಕ ಅಧಿಕಾರಕ್ಕೆ ಬಂದರು. ಆದರೆ ಅವರೇ ಇಂದು ಭ್ರಷ್ಟಾಚಾರದಿಂದ ಬಂದ ಹಣದಿಂದಲೇ ವೈಭವೋಪೇತ ಜೀವನ ನಡೆಸ್ತಿದ್ದಾರೆ ಎಂದು ಟೀಕಿಸಿದರು.