ಧಾರವಾಡ[ನ.13]: ರಸ್ತೆ ಪಕ್ಕದಲ್ಲಿ ನಿಂತಿದ್ದ ಟ್ರಾೃಕ್ಟರ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಕೆಲ ದಿನಗಳಲೇ ಹಸೆಮಣೆ ಏರಬೇಕಿದ್ದ ಯುವಕ ಸ್ಥಳದಲ್ಲೇ  ಮೃತಪಟ್ಟಿದ್ದು, ಇನ್ನೋರ್ವ ಗಾಯಗೊಂಡ ಘಟನೆ ತಾಲೂಕಿನ ಅಮ್ಮಿನಬಾವಿ ಗ್ರಾಮದ ಬಳಿ ಮಂಗಳವಾರ ರಾತ್ರಿ ನಡೆದಿದೆ.

ಮೃತನನ್ನು ಸವದತ್ತಿ ಪಟ್ಟಣದ ಮಹ್ಮದ್ ಅಸ್ಲಂ ಸಿಕಂದರ್ ಶಹಾಪುರ (24) ಎಂದು ಗುರುತಿಸಲಾಗಿದೆ. ಇಸಾಕ್ ಅಕ್ಬರ್‍ಸಾಬ್ ಬೆಟಗೇರಿ (22) ಎಂಬಾತ ಗಾಯಗೊಂಡಿದ್ದಾನೆ. ಮಹ್ಮದ್ ಅಸ್ಲಂ ಮದುವೆ ಮುಂದಿನ ತಿಂಗಳು ನಡೆಸಲು ನಿಶ್ಚಯಿಸಲಾಗಿತ್ತು. ಹೀಗಾಗಿ ಮದುವೆ ಆಮಂತ್ರಣ ನೀಡಲು ಇಸಾಕ್ ಜತೆಗೆ ಧಾರವಾಡಕ್ಕೆ ಆಗಮಿಸಿದ್ದ ಎಂದು ತಿಳಿದು ಬಂದಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಆಮಂತ್ರಣ ಪತ್ರಿಕೆ ನೀಡಿ ಸವದತ್ತಿಗೆ ವಾಪಸ್ ತೆರಳುತ್ತಿದ್ದ ಸಂದರ್ಭದಲ್ಲಿ ಅಮ್ಮಿನಬಾವಿ ಬಳಿ ರಸ್ತೆ ಪಕ್ಕದಲ್ಲಿ ನಿಂತಿದ್ದ ಟ್ರಾೃಕ್ಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಚಲಾಯಿಸುತ್ತಿದ್ದ ಮಹ್ಮದ್ ಅಸ್ಲಂ ತೀವ್ರಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಹಿಂಬದಿ ಸವಾರ ಇಸಾಕ್‍ಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಘಟನಾ ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.