ಧಾರವಾಡದಲ್ಲಿ ನಡೆದ ಜಂಬೂ ಸವಾರಿ ಉತ್ಸವದಲ್ಲಿ ಪಾಲ್ಗೊಂಡ ಕೋಡಿಮಠದ ಶ್ರೀಗಳು ರಾಜ್ಯದ ಮಳೆ ಮತ್ತು ರಾಜಕೀಯದ ಬಗ್ಗೆ ಮಹತ್ವದ ಭವಿಷ್ಯ ನುಡಿದಿದ್ದಾರೆ. ಮುಂಬರುವ ದಿನಗಳಲ್ಲಿ ಹಿಂಗಾರು ಮಳೆಯಾಗಿ ಜನರಿಗೆ ಸುಭಿಕ್ಷೆ ಸಿಗಲಿದೆ ಎಂದು ತಿಳಿಸಿದ್ದಾರೆ. ರಾಜಕೀಯ ಬದಲಾವಣೆ ಕುರಿತು ಮಾರ್ಮಿಕವಾಗಿ ಉತ್ತರಿಸಿ ಕುತೂಹಲ ಮೂಡಿಸಿದ್ದಾರೆ.
ಧಾರವಾಡ (ಅ.20): ತಮ್ಮ ನಿಖರ ಮತ್ತು ಮಾರ್ಮಿಕ ಭವಿಷ್ಯವಾಣಿಗೆ ಹೆಸರಾಗಿರುವ ಅರಸೀಕೆರೆ ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ವಿದ್ಯಾಕಾಶಿ ಧಾರವಾಡದಲ್ಲಿ ಮತ್ತೊಮ್ಮೆ ಭವಿಷ್ಯ ನುಡಿದಿದ್ದಾರೆ. ಮುಂಗಾರು ಮಳೆಯ ವೈಫಲ್ಯ, ಬರಗಾಲ ಮತ್ತು ಪ್ರಾಕೃತಿಕ ವಿಕೋಪಗಳ ಕುರಿತು ತಾವು ಈ ಹಿಂದೆ ಹೇಳಿದ್ದ ಮಾತುಗಳನ್ನು ನೆನಪಿಸಿದ ಶ್ರೀಗಳು, ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಹಿಂಗಾರು ಮಳೆ ಉತ್ತಮವಾಗಿ ಸುರಿದು ಜನರಿಗೆ ಸುಭಿಕ್ಷೆ ಮತ್ತು ನೆಮ್ಮದಿ ಸಿಗಲಿದೆ ಎಂದು ತಿಳಿಸಿದ್ದಾರೆ.
ಧಾರವಾಡದಲ್ಲಿ ವಿಜೃಂಭಣೆಯಿಂದ ಜರುಗಿದ ಐತಿಹಾಸಿಕ ಜಂಬೂ ಸವಾರಿ ಉತ್ಸವದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀಗಳು, ಮಳೆ, ಬೆಳೆ ಹಾಗೂ ರಾಜ್ಯ ರಾಜಕೀಯ ಬೆಳವಣಿಗೆಗಳ ಕುರಿತು ಮಾತನಾಡಿದರು.
ನಾನು ಮೊದಲೇ ಹೇಳಿದ್ದೆ, ಈಗ ಹಿಂಗಾರು ಮಳೆಯಿಂದ ನೆಮ್ಮದಿ:
ತಮ್ಮ ಹಿಂದಿನ ಭವಿಷ್ಯವನ್ನು ಸ್ಮರಿಸಿದ ಕೋಡಿಮಠ ಶ್ರೀಗಳು, 'ಮುಂಗಾರು ಮಳೆ ಆಗುವುದಿಲ್ಲ, ಜನಜೀವನ ಅತ್ಯಂತ ಕಷ್ಟವಾಗುತ್ತದೆ, ನೀರಿಗೆ ತೀವ್ರ ಹಾಹಾಕಾರ ಉಂಟಾಗಿ ಅನ್ನಕ್ಕೂ ಕೊರತೆ ಎದುರಾಗುತ್ತದೆ, ಜನರು ಸಾವು-ನೋವು ಅನುಭವಿಸುತ್ತಾರೆ ಹಾಗೂ ಪ್ರಪಂಚದಲ್ಲಿ ವಿಪರೀತ ಭೂಕಂಪಗಳು ಸಂಭವಿಸುತ್ತವೆ ಎಂದು ನಾನು ಮೊದಲೇ ಭವಿಷ್ಯ ನುಡಿದಿದ್ದೆ. ಅದರಂತೆ ನಡೆದಿದೆ. ಆದರೆ ಈಗ ಸದ್ಯಕ್ಕೆ ಆತಂಕ ಪಡುವ ಅಗತ್ಯವಿಲ್ಲ. ರಾಜ್ಯದಲ್ಲಿ ಹಿಂಗಾರು ಮಳೆ ಉತ್ತಮವಾಗಿ ಆಗಲಿದೆ. ಇದರಿಂದ ಸಮಸ್ತ ಜನರಿಗೆ ಸುಭಿಕ್ಷೆ ಮತ್ತು ನೆಮ್ಮದಿ ಸಿಗಲಿದ್ದು, ಜಲಚರಗಳಿಗೂ ಒಳಿತಾಗಲಿದೆ. ರೋಗ-ರುಜಿನಗಳು ದೂರವಾಗಿ ಎಲ್ಲರಿಗೂ ಒಳ್ಳೆಯದಾಗಲಿ' ಎಂದು ಹಾರೈಸಿದರು.
ರಾಜಕೀಯ ಬದಲಾವಣೆ: ಮಾರ್ಮಿಕ ಉತ್ತರ!
ಇದೇ ವೇಳೆ ರಾಜ್ಯ ರಾಜಕೀಯದಲ್ಲಿ ಸಿಎಂ ಬದಲಾವಣೆ ಅಥವಾ ಮಹತ್ವದ ರಾಜಕೀಯ ತಿರುವುಗಳು ಸಂಭವಿಸುತ್ತವೆಯೇ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಎಂದಿನಂತೆ ತಮ್ಮ ನಿಗೂಢ ಶೈಲಿಯಲ್ಲೇ ಉತ್ತರಿಸಿದ ಶ್ರೀಗಳು, ‘ರಾಜಕೀಯ ಬದಲಾವಣೆಯ ವಿಚಾರ ನಮಗಿಂತ ಮಾಧ್ಯಮದವರಾದ ನಿಮಗೇ ಚೆನ್ನಾಗಿ ಗೊತ್ತಿದೆ. ಎಲ್ಲರಿಗೂ ಒಳ್ಳೆಯದಾಗಲಿ’ ಎಂದು ನಗುತ್ತಲೇ ಮಾರ್ಮಿಕವಾಗಿ ಜಾರಿಕೊಂಡರು. ಅವರ ಈ ಒಂದು ಸಾಲಿನ ಉತ್ತರ ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ಧಾರವಾಡ ಜಂಬೂ ಸವಾರಿ ಅಖಂಡ ಕರ್ನಾಟಕದ ಪ್ರತೀಕ:
ಧಾರವಾಡದ ದಸರಾ ಜಂಬೂ ಸವಾರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ ಸ್ವಾಮೀಜಿ, 'ಅಖಂಡ ಕರ್ನಾಟಕ ಒಂದಾಗಿ ಸಾಗಬೇಕು, ಸಮಸ್ತ ಮನುಕುಲಕ್ಕೂ ಒಳ್ಳೆಯದಾಗಬೇಕು ಎಂಬ ಸಂಕಲ್ಪದೊಂದಿಗೆ ಇಂದು ಧಾರವಾಡದಲ್ಲಿ ಜಂಬೂ ಸವಾರಿ ನಡೆಯುತ್ತಿದೆ. ಇದು ಅಖಂಡ ಕರ್ನಾಟಕದ ಭವ್ಯ ಸಂಸ್ಕೃತಿಯ ಪ್ರತೀಕ. ಮೈಸೂರಿನಲ್ಲಿ ದಕ್ಷಿಣ ಕರ್ನಾಟಕದ ಸಂಭ್ರಮವಾದರೆ, ಉತ್ತರ ಕರ್ನಾಟಕಕ್ಕೆ ಈ ಧಾರವಾಡ ದಸರಾ ಒಂದಾಗಿದೆ. ಇದು ಏಕತಾ ಮನೋಭಾವನೆಯ ಅದ್ಭುತ ಸಂದೇಶ ನೀಡುತ್ತದೆ' ಎಂದರು.
ಮುಂದುವರಿದು, 'ಇಂದಿನ ದಿನಗಳಲ್ಲಿ ಮನುಷ್ಯನ ದುರ್ನಡತೆಗಳು ಹೆಚ್ಚಾಗುತ್ತಿರುವಾಗ, ಮನುಷ್ಯ ಮನುಷ್ಯನಾಗಿ ಬದುಕಲು ನಮ್ಮ ಹಿರಿಯರು ಹಾಕಿಕೊಟ್ಟ ಆದರ್ಶಗಳ ಸಂಕೇತವೇ ಈ ಸಾಂಸ್ಕೃತಿಕ ಹಬ್ಬಗಳು. ಈ ಪವಿತ್ರ ಪರಂಪರೆ ಮುಂದೆಯೂ ನಿರಂತರವಾಗಿ ಸಾಗಲಿ' ಎಂದು ಆಶೀರ್ವದಿಸಿದರು.


