ಬಸ​ವ​ರಾಜ ಹಿರೇ​ಮ​ಠ

ಧಾರ​ವಾಡ(ಅ.11): ಅಪ​ರಾಧ ಪ್ರಕ​ರ​ಣ​ಗ​ಳನ್ನು ತಗ್ಗಿ​ಸಲು ಹಾಗೂ ಅಪ​ರಾ​ಧಿ​ಗ​ಳನ್ನು ಕರಾ​ರು​ವ​ಕ್ಕಾ​ಗಿ ಬಂಧಿ​ಸಲು ಸಹಕಾ​ರಿಯಾ​ಗಿ ಹುಬ್ಬ​ಳ್ಳಿ- ಧಾರ​ವಾಡ ಪೊಲೀಸ ಕಮೀ​ಶ​ನ​ರೇ​ಟ್‌ ಇದೀಗ ಅತ್ಯಾ​ಧು​ನಿ​ಕ ತಂತ್ರ​ಜ್ಞಾನದ ಮೊರೆ ಹೋಗಿದೆ.
ಅವಳಿ ನಗ​ರ​ದಲ್ಲಿ ನಿತ್ಯ ಪೆಟ್ರೋ​ಲಿಂಗ್‌ ಮಾಡುವ ಎಸ್‌ಐ ಹಾಗೂ ಚೀತಾ, ಚಾಲುಕ್ಯ, ಸುಗಮ ವಾಹ​ನದ ಪೇದೆ​ಗ​ಳಿಗೆ ಬಾಡಿ ವೋರ್ನ್‌ ಕ್ಯಾಮೆ​ರಾ​ಗ​ಳನ್ನು ನೀಡಿದ್ದು ಈ ಮೂಲಕ ಕಾನೂನು ಬಾಹಿರ ಚಟು​ವ​ಟಿ​ಕೆ​ಯಲ್ಲಿ ಭಾಗ​ವ​ಹಿ​ಸು​ವ​ವರ ಮೇಲೆ ಇಲಾ​ಖೆಯು ಹದ್ದಿನ ಕಣ್ಣು ಇಡಲು ತೀರ್ಮಾ​ನಿ​ಸಿ​ದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸಿಸಿ ಟಿವಿ ಅಳ​ವ​ಡಿಕೆ ಸೇರಿ​ದಂತೆ ಏನೆಲ್ಲಾ ತಂತ್ರಜ್ಞಾನ ಹಾಗೂ ಕಠಿಣ ಕ್ರಮ​ಗ​ಳನ್ನು ಕೈಗೊಂಡರೂ ಪೊಲೀ​ಸ​ರಿಗೆ ಚಳ್ಳೆ ಹಣ್ಣು ತಿನ್ನಿಸಿ ಅಪ​ರಾಧ ಪ್ರಕ​ರ​ಣ​ಗ​ಳು ನಿರಂತ​ರ​ವಾಗಿ ನಡೆ​ಯು​ತ್ತಿವೆ. ಇತ್ತೀ​ಚೆಗೆ ನಡೆದ ಗಣೇಶ ಹಬ್ಬ ಹಾಗೂ ನಂತ​ರ​ದಲ್ಲಿ ಹುಬ್ಬ​ಳ್ಳಿ- ಧಾರ​ವಾ​ಡ ಅವಳಿ ನಗ​ರ​ದಲ್ಲಿ ಹತ್ತಾರು ಚಾಕು ಇರಿತ ಹಾಗೂ ಶೂಟೌಟ್‌ ಪ್ರಕ​ರ​ಣ​ಗ​ಳಾ​ಗಿದ್ದು ಹು-ಧಾ ಅವಳಿ ನಗ​ರದ ಪೊಲೀ​ಸ​ರಿಗೆ ತಲೆ​ನೋ​ವಾಗಿ ಪರಿ​ಣ​ಮಿ​ಸಿತ್ತು. ಅವಳಿ ನಗ​ರದ ಎಲ್ಲ ರೌಡಿ​ಗಳ ಮನೆ ಹೊಕ್ಕು ಅವರಲ್ಲಿರುವ ಶಸ್ತ್ರಾ​ಸ್ತ್ರ​ಗ​ಳನ್ನು ವಶ​ಪ​ಡಿ​ಸಿ​ಕೊಂಡು ಎಚ್ಚ​ರಿಕೆ ನೀಡುವ ಕಾರ್ಯ ಇನ್ನೂ ಮುಂದು​ವ​ರೆ​ದಿದೆ. ಇದೀಗ ಪೊಲೀ​ಸರ ಭುಜಕ್ಕೆ ಬಾಡಿ ವೋರ್ನ್‌ ಕ್ಯಾಮೆ​ರಾ​ಗ​ಳನ್ನು ಹಾಕುವ ಮೂಲಕ ದುಷ್ಟ​ಶ​ಕ್ತಿ​ಗ​ಳ ಮಟ್ಟಹಾಕಲು ಇಲಾಖೆ ಸಿದ್ಧವಾಗಿದೆ.

ಏನಿದು ಬಾಡಿ ವೋರ್ನ್‌..

ಅತ್ಯಾ​ಧು​ನಿಕ ತಂತ್ರಜ್ಞಾನ​ವುಳ್ಳ ಈ ಬಾಡಿ ವೋರ್ನ್‌ ಕ್ಯಾಮೆ​ರಾ​ವನ್ನು ಪೊಲೀ​ಸ​ರಿಗೆ ಬಲ ಭುಜಕ್ಕೆ ಅಳವಡಿಸಲಾಗುತ್ತದೆ. 32 ಮೆಗಾ ಫಿಕ್ಸಲ್‌ ಕ್ಯಾಮೆರಾ ಹೊಂದಿದ್ದು ಯಾವುದೇ ಒಂದು ಘಟ​ನೆಯ ಫೋಟೋ ಹಾಗೂ ವಿಡಿಯೋ ಮಾಡ​ಬ​ಹುದು. 140 ಡಿಗ್ರಿ ಲೆನ್ಸ್‌ ಹೊಂದಿದ್ದು 32 ರಿಂದ 128 ಜಿ.ಬಿ. ಸ್ಟೋರೇಜ್‌ ಹೊಂದಿ​ರು​ತ್ತದೆ. ಅಂದಾಜು 130 ಗ್ರಾಂ ತೂಕದ ಈ ಕ್ಯಾಮರಾ ಕೆಳಗೆ ಬಿದ್ದರೂ ಸಹ ಒಡೆ​ಯ​ದಂತೆ ಗಟ್ಟಿ​ಯಾ​ಗಿ​ರು​ತ್ತದೆ. ಒಮ್ಮೆ ಚಾರ್ಜ್ ಮಾಡಿ​ದರೆ 24 ಗಂಟೆ​ಗಳ ಕಾಲ ಬ್ಯಾಟರಿ ಇರು​ತ್ತದೆ. ಡಯಲ್‌ ವ್ಯವಸ್ಥೆ ಸಹ ಇದ್ದು ಗ್ರುಪ್‌ ಮಾಡಿ​ಕೊಂಡು ಈ ಕ್ಯಾಮರಾ ಮೂಲಕ ಫೋನ್‌ ಸಹ ಮಾಡ​ಬ​ಹುದು. ವಿಶೇ​ಷ​ವಾಗಿ ಪೊಲೀ​ಸ​ರಿಗೆ ಈ ಕ್ಯಾಮೆರಾ ಅತ್ಯಾ​ವ​ಶ್ಯ​ಕ​ವಾ​ಗಿದ್ದು ಈ ಮೂಲಕ ದುಷ್ಟಶಕ್ತಿ​ಗ​ಳನ್ನು ಬೇಗ ಪತ್ತೆ ಹಚ್ಚಿ ಅಪ​ರಾ​ಧ​ಗ​ಳನ್ನು ತಡೆ​ಯಲು ಅನು​ಕೂ​ಲ ಎಂದು ಧಾರ​ವಾಡ ಸಂಚಾರಿ ಪೊಲೀಸ್‌ ಠಾಣೆ ಇನ​ಸ್ಪೆ​ಕ್ಟರ್‌ ಮುರ​ಘೇಶ ಚೆನ್ನ​ಣ್ಣ​ವರ ಮಾಹಿತಿ ನೀಡಿ​ದರು.

ದುಷ್ಟಶಕ್ತಿ ಮೇಲೆ ನಿಗಾ:

ಈಗಾ​ಗಲೇ 30 ಜನ ಪೊಲೀಸ್‌ ಅಧಿ​ಕಾರಿ ಹಾಗೂ ಸಿಬ್ಬಂದಿಗೆ ತರ​ಬೇತಿ ನೀಡಿ ಕ್ಯಾಮೆ​ರಾ​ಗ​ಳನ್ನು ಸಹ ಬಳ​ಕೆಗೆ ನೀಡ​ಲಾ​ಗಿದೆ. ಇವುಗಳು ರೌಡಿ​ಗಳು, ಕಳ್ಳರು, ಮಹಿ​ಳೆ​ಯ​ರೊಂದಿಗೆ ಅನು​ಚಿ​ತ​ವಾಗಿ ವರ್ತಿ​ಸುವ ವ್ಯಕ್ತಿ​ಗಳು, ಸಂಚಾ​ರ ನಿಯಮ ಉಲ್ಲಂಘಿ​ಸುವ, ಯುವ​ತಿ​ಯ​ರನ್ನು ಚುಡಾ​ಯಿ​ಸುವ ಹಾಗೂ ಸಂಚಾರಿ ಪೊಲೀ​ಸ​ರೊಂದಿಗೆ ವಾಗ್ವಾದ ಮಾಡು​ವ​ವರ ಮೇಲೆ ಕಣ್ಣಿ​ಡುವುದರ ಜೊತೆಗೆ ಹಬ್ಬ - ಹರಿ​ದಿ​ನ​ಗ​ಳಲ್ಲಿ, ಜಾತ್ರಾ ಮಹೋ​ತ್ಸವ, ಪ್ರತಿ​ಭ​ಟನೆ, ರಾರ‍ಯಲಿ ಮೆರ​ವ​ಣಿಗೆ, ವಿಐಪಿ ಬಂದೋ​ಬಸ್ತ್ ಇತ್ಯಾದಿ ಸಂದ​ರ್ಭ​ಗ​ಳಲ್ಲಿ ಸಾಮಾ​ಜಿಕ ದುಷ್ಟಶಕ್ತಿ​ಗಳ ಮೇಲೆ ನಿಗಾ​ವ​ಹಿ​ಸಲು ಈ ಕ್ಯಾಮೆರಾ ಬಹಳ ಉಪ​ಯುಕ್ತ ಎಂಬ ಹಿನ್ನೆ​ಲೆ​ಯಲ್ಲಿ ಪೊಲೀಸ ಆಯುಕ್ತರು ಈ ಕ್ರಮ ಕೈಗೊಂಡಿ​ದ್ದಾರೆ ಎಂದರು ಚೆನ್ನ​ಣ್ಣ​ವರ.

ಈ ಬಗ್ಗೆ ಮಾತನಾಡಿದ ಪೊಲೀಸ್‌ ಆಯು​ಕ್ತ​ ಆರ್‌. ದಿಲೀಪ್‌ ಅವರು, ಹುಬ್ಬ​ಳ್ಳಿ- ಧಾರ​ವಾಡ ಸೇರಿ​ದಂತೆ ಅಭಿ​ವೃದ್ಧಿ ಹೊಂದು​ತ್ತಿ​ರುವ ನಗರ, ಪಟ್ಟ​ಣ​ಗ​ಳಲ್ಲಿ ಅಪ​ರಾ​ಧ​ಗಳ ಸಂಖ್ಯೆ ಹೆಚ್ಚು​ತ್ತಿದ್ದು, ಅವು​ಗ​ಳನ್ನು ನಿಯಂತ್ರಿ​ಸಲು ಅತ್ಯಾ​ಧು​ನಿಕ ತಂತ್ರ​ಜ್ಞಾ​ನದ ಅವ​ಶ್ಯ​ಕತೆ ಇದೆ. ಈ ನಿಟ್ಟಿ​ನಲ್ಲಿ ನಿತ್ಯ ಪೆಟ್ರೋ​ಲಿಂಗ್‌ ಮಾಡುವ ಅಧಿ​ಕಾರಿ ಹಾಗೂ ಸಿಬ್ಬಂದಿಗೆ ಬಾಡಿ ವೋರ್ನ್‌ ಕ್ಯಾಮೆ​ರಾ​ಗ​ಳನ್ನು ಒದ​ಗಿ​ಸಲಾ​ಗು​ತ್ತಿದೆ. ಕ್ಯಾಮ​ರಾ​ದಲ್ಲಿ ದಾಖ​ಲಾದ ವಿಡಿಯೋ, ಫೋಟೋ​ಗಳ ಆಧಾ​ರದ ಮೇಲೆ ಬಹು​ಬೇಗ ಅಪ​ರಾ​ಧಿ​ಗ​ಳನ್ನು ಗುರು​ತಿಸಿ ಶಿಕ್ಷಿ​ಸ​ಬ​ಹುದು ಎಂದು ತಿಳಿಸಿದ್ದಾರೆ.