ಹುಬ್ಬಳ್ಳಿ[ಅ.25]: ರೈಲಿನಲ್ಲಿ ಸ್ಫೋಟಕ ಬಂದಿದ್ದು ಹೇಗೆ? ಎಲ್ಲಿ ಸ್ಫೋಟಕ ಇಡಲಾಯಿತು? ಅಷ್ಟಕ್ಕೂ ಸ್ಫೋಟಕವಾದರೂ ಯಾವುದು? ಪ್ರಕರಣಕ್ಕೆ ಸಂಬಂಧಿಸಿ ಯಾವುದಾದರೂ ಸುಳಿವು ಸಿಕ್ಕಿವೆಯಾ? ಎಷ್ಟು ಜನರನ್ನು ವಿಚಾರಣೆ ನಡೆಸಲಾಯಿತು? ಸುರಕ್ಷಿತವಾಗಿ ಇಡಲಾದ ಸ್ಫೋಟಕದ ನಿಷ್ಕ್ರೀಯಗೊಳಿಸೋದು ಯಾವಾಗ

ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಲಘು ಸ್ಫೋಟ ಸಂಭವಿಸಿ ನಾಲ್ಕು ದಿನಗಳು ಕಳೆದರೂ ಈ ರೀತಿಯ ಸಾಲು ಸಾಲು ಪ್ರಶ್ನೆಗಳಲ್ಲಿ ಒಂದಕ್ಕೂ ಉತ್ತರ ಸಿಗುತ್ತಿಲ್ಲ. ಇತ್ತ ಜನತೆಯಲ್ಲಿ ಮನೆ ಮಾಡಿರುವ ಆತಂಕವೂ ತಣಿಯುತ್ತಿಲ್ಲ. ಮೂರು ದಿನಗಳಿಂದ ಎಟಿಎಸ್‌, ಬಿಡಿಡಿಎಸ್‌, ಆರ್‌ಪಿಎಫ್‌, ಜಿಆರ್‌ಪಿ, ರೈಲ್ವೆ ಭದ್ರತೆಯ ಉನ್ನತಾಧಿಕಾರಿಗಳು ಸೇರಿ ಹಲವರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ತನಿಖೆಗಾಗಿ ಕೊಲ್ಲಾಪುರ ಹಾಗೂ ಆಂಧ್ರಪ್ರದೇಶಗಳಿಗೆ ತಂಡಗಳು ತೆರಳಿವೆ. ಅಲ್ಲಿಂದ ಬಂದ ನಂತರ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ. ಆದರೆ, ತನಿಖಾ ಹಂತದ ಕುರಿತು ಈವರೆಗೆ ಎಲ್ಲ ನಿಗೂಢವಾಗಿದ್ದು, ಹಲವು ಅಡೆತಡೆಗಳು ಎದುರಾಗಿರುವುದು ಪೊಲೀಸರ ತಲೆಬಿಸಿಗೆ ಕಾರಣವಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಹುಬ್ಬಳ್ಳಿ ನಿಲ್ದಾಣದಲ್ಲಿ ಸಿಸಿ ಕ್ಯಾಮೆರಾ ಅಡ್ಡಿ ಒಂದು ಕಡೆಯಾದರೆ, ಮಹಾರಾಷ್ಟ್ರದಲ್ಲಿ ಚುನಾವಣಾ ಕಾವಿದ್ದ ಕಾರಣ ತನಿಖಾ ತಂಡಕ್ಕೆ ಸ್ಥಳೀಯ ಪೊಲೀಸರಿಂದ ಸಹಕಾರ ಕೂಡ ಅಷ್ಟಾಗಿ ಸಿಕ್ಕಿಲ್ಲ ಎಂದು ತಿಳಿದು ಬಂದಿದೆ. ಅದಲ್ಲದೇ, ಹುಬ್ಬಳ್ಳಿ ರೀತಿಯಲ್ಲೆ ಹಲವೆಡೆ ಸಿಸಿ ಕ್ಯಾಮೆರಾಗಳ ಸ್ಥಿತಿಯಿದ್ದು, ಚಿಕ್ಕ ಪುಟ್ಟನಿಲ್ದಾಣದಲ್ಲಿ ಕ್ಯಾಮೆರಾಗಳೆ ಇಲ್ಲದಿರುವುದು ತನಿಖೆಯನ್ನು ಇನ್ನಷ್ಟು ಜಟಿಲಗೊಳಿಸಿವೆ.

ವರದಿ ಯಾವಾಗ?

ಹಂದಿ ಹಿಡಿಯಲು ಬಳಸುವ ಕಡಿಮೆ ತೀವ್ರತೆಯ (ಕಚ್ಚಾಬಾಂಬ್‌) ಸ್ಫೋಟಕವನ್ನು ಆಂಧ್ರಪ್ರದೇಶದಲ್ಲಿ ಬಳಸುತ್ತಾರೆ ಎಂದು ಅಧಿಕಾರಿಗಳಿಗೆ ತಿಳಿದು ಬಂದಿದ್ದರೂ ಅದರ ಸ್ಪಷ್ಟತೆ ಇನ್ನೂ ಸಿಕ್ಕಿಲ್ಲ. ಎಫ್‌ಎಸ್‌ಎಲ್‌ ವರದಿ ಬಂದ ಬಳಿಕವೇ ಸ್ಫೋಟಕ ಯಾವುದು? ಯಾವುದರಿಂದ ಸಿದ್ಧಪಡಿಸಲಾಗಿದೆ ಎಂಬುದು ತಿಳಿದು ಬರಬೇಕಿದೆ. ಇದು ತಿಳಿಯುವವರೆಗೂ ಸ್ಫೋಟಕವನ್ನು ನಿಷ್ಕಿ್ರಯಗೊಳಿಸಲಾಗದು ಎಂದು ಅಧಿಕಾರಿಗಳು ಹೇಳಿದ್ದರು. ಹೀಗಾಗಿ ಎಲ್ಲಿವರೆಗೆ ಇದೇ ಸ್ಥಿತಿಯಲ್ಲಿ ಸ್ಫೋಟಕ ನಿಲ್ದಾಣದ ಪಕ್ಕದಲ್ಲೇ ಇರಲಿದೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಸ್ಫೋಟಕವಿಟ್ಟಸ್ಥಳವೀಗ ಪ್ರದರ್ಶನಾ ಸ್ಥಳವಾದಂತಾಗಿದೆ. ವರದಿ ಬರಬೇಕೆಂದಿಲ್ಲ, ಇನ್ನೆರಡು ದಿನದಲ್ಲಿ ಸ್ಫೋಟಕ ನಿಷ್ಕ್ರೀಯಗೊಳಿಸಲು ಬಿಡಿಡಿಎಸ್‌ ತಂಡ ಆಗಮಿಸಲಿದೆ ಎಂದು ಜನರಲ್‌ ರೈಲ್ವೆ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಬೋರಲಿಂಗಯ್ಯ ತಿಳಿಸಿದ್ದಾರೆ.

ಆರೋಪಿ ಪತ್ತೆ ಯಾವಾಗ?

ಘಟನೆ ನಡೆದು ನಾಲ್ಕನೆಯ ದಿನ ಕಳೆ​ದ​ರೂ ಆರೋಪಿ ಪತ್ತೆ ಯಾವಾಗ? ಎಂಬುದು ಮತ್ತೊಂದು ಪ್ರಶ್ನೆ. ಕಿಡಿಗೇಡಿಗಳು ಚುನಾವಣಾ ಹೊಸ್ತಿಲಲ್ಲಿ ಶಾಸಕರ ಹೆಸರನ್ನು ಎಳೆದು ತರಲು ಈ ರೀತಿ ಮಾಡಿದ್ದಾರಾ? ಅಥವಾ ದುಷ್ಕೃತ್ಯ ಎಸಗುವ ಉದ್ದೇಶದಿಂದಲೆ ದುಷ್ಕರ್ಮಿಗಳು ಈ ರೀತಿ ಸ್ಫೋಟಕವಿಟ್ಟು ಶಾಸಕರ ಹೆಸರು ಬರೆದಿದ್ದಾರಾ? ಎಂಬ ಕುರಿತಾಗಿ ತನಿಖೆ ನಡೆಯುತ್ತಿದೆ. ಕುಕೃತ್ಯ ಎಸಗಿದವರು ವಿಜಯವಾಡದಿಂದ ಬಂದ ರೈಲಿನಲ್ಲಿ ಡಬ್ಬಿ ಸಿಗಲು ಕಾರಣವೇನು? ಅಲ್ಲಿಗೂ ಹಾಗೂ ಮಹಾರಾಷ್ಟ್ರದ ರಾಧಾನಗರಿಯಲ್ಲಿ ಚುನಾವಣಾ ಕಣದಲ್ಲಿದ್ದ ಅಬೀತ್ಕರ್‌ ಹೆಸರಿಗೂ ನಂಟೇನು? ಎಂಬ ಕುರಿತು ಸಮಗ್ರವಾಗಿ ತನಿಖೆ ನಡೆಯುತ್ತಿದೆ.

ಎನ್‌​ಐಎ ಆಗ​ಮನ ಸಾಧ್ಯ​ತೆ

ಸ್ಫೋಟ​ದ ಕುರಿತು ಮಾಹಿತಿ ಕಲೆ ಹಾಕಲು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌​ಐ​ಎ) ನಗ​ರಕ್ಕೆ ಆಗ​ಮಿ​ಸುವ ಸಾಧ್ಯ​ತೆ​ಗ​ಳಿ​ವೆ ಎಂದು ಮೂಲ​ಗಳು ತಿಳಿ​ಸಿವೆ. ಇನ್ನೆ​ರಡು ದಿನ​ಗ​ಳಲ್ಲಿ ಎನ್‌​ಐಎ ಆಗ​ಮಿ​ಸಲಿದೆ ಎನ್ನ​ಲಾ​ಗಿ​ದೆ.

ಕರ್ತವ್ಯಲೋಪ ಮುಚ್ಚಿಕೊಳ್ಳುವ ಯತ್ನ?

ಸ್ಫೋಟದಲ್ಲಿ ಗಾಯಗೊಂಡ ಹುಸೇನ್‌ಸಾಬ್‌ ಸ್ವತಃ ಆರ್‌ಪಿಎಫ್‌ ಸಿಬ್ಬಂದಿ ತನ್ನ ಕೈಗೆ ಸ್ಫೋಟಕ ನೀಡಿದ್ದ ಎಂದು ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ. ಆದರೆ, ಜಿಆರ್‌ಪಿಗೆ ಆರ್‌ಪಿಎಫ್‌ ನೀಡಿದ ದೂರಿನಂತೆ ದಾಖಲಾದ ಪ್ರಕರಣದಲ್ಲಿ ಹುಸೇನ್‌ಸಾಬ್‌ ಬಂದು ಸ್ಫೋಟಕ ತೆಗೆದುಕೊಂಡು ಹೋದ ಎಂದು ಪ್ರಥಮ ವರ್ತಮಾನ ವರದಿ ದಾಖಲಾಗಿದೆ ಎಂದು ಮೂಲಗಳು ತಿಳಿಸಿವೆ. ಸ್ವತಃ ನೈಋುತ್ಯ ರೈಲ್ವೆ ಮಹಾಪ್ರಬಂಧಕ ಎ.ಕೆ. ಸಿಂಗ್‌ ಅವರು ಮೇಲ್ನೋಟಕ್ಕೆ ಆರ್‌ಪಿಎಫ್‌ ಲೋಪ ಕಂಡು ಬಂದಿದೆ ಎಂದು ಮಾಧ್ಯಮಕ್ಕೆ ಹೇಳಿಕೆ ನೀಡಿರುವುದು ಸಂಶಯಕ್ಕೆ ಕಾರಣವಾಗಿದ್ದು, ಆರ್‌ಪಿಎಫ್‌ ಕರ್ತವ್ಯಲೋಪ ಮುಚ್ಚಿಕೊಳ್ಳುವ ಯತ್ನದಲ್ಲಿದೆಯೆ ಎಂಬ ಪ್ರಶ್ನೆ ಮೂಡಿಸಿದೆ.

ಅಬೀತ್ಕರ್‌ ಗೆಲವು

ಸ್ಫೋಟಕವಿದ್ದ ಬಕೆಟ್‌ ಮೇಲೆ ಹೆಸರು ದಾಖಲಾಗಿದ್ದ ಮಹಾರಾಷ್ಟ್ರದ ಕೊಲ್ಲಾಪುರದ ರಾಧಾನಗರಿಯ ಶಾಸಕ ಪ್ರಕಾಶ ಆನಂದರಾವ್‌ ಅಬೀತ್ಕರ್‌ 2019ರ ವಿಧಾನಸಭಾ ಚುನಾವಣೆಯಲ್ಲಿ ಗೆಲವು ಸಾಧಿಸಿದ್ದಾರೆ. 1,05,881 ಮತ ಪಡೆದಿರುವ ಅಬೀತ್ಕರ್‌ ಎದುರಾಳಿ ಎನ್‌ಸಿಪಿಯ ಮಾಜಿ ಶಾಸಕ ಕೆ.ಪಿ. ಪಾಟೀಲ್‌ 87451 ಮತ ಪಡೆದಿದ್ದಾರೆ. ಅಬೀತ್ಕರ್‌ ಎರಡು ದಿನಗಳ ಮೊದಲು ಕೊಲ್ಲಾಪುರದ ಎಸ್‌ಪಿ ಅವರನ್ನು ಭೇಟಿಯಾಗಿ ಹುಬ್ಬಳ್ಳಿ ಸ್ಫೋಟದಲ್ಲಿ ತಮ್ಮ ಹೆಸರು ಪ್ರಸ್ತಾಪವಾಗಿರುವ ಕುರಿತು ತನಿಖೆ ನಡೆಸುವಂತೆ ಕೇಳಿಕೊಂಡಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಹುಬ್ಬಳ್ಳಿ ಸ್ಫೋಟ ಪ್ರಕರಣ: ಮಹಾರಾಷ್ಟ್ರ, ಆಂಧ್ರಕ್ಕೆ 4 ತನಿಖಾ ತಂಡ

ಈ ಬಗ್ಗೆ ಮಾಹಿತಿ ನೀಡಿದ ರಾಜ್ಯ ರೈಲ್ವೆ ಪೊಲೀಸ್‌ ಎಸ್‌ಪಿ ಡಾ. ಬೋರಲಿಂಗಯ್ಯ ಅವರು, ಸ್ಫೋಟಕ ನಿಷ್ಕ್ರೀಯಗೊಳಿಸಲು ಎಫ್‌ಎಸ್‌ಎಲ್‌ ವರದಿಯೆ ಬರಬೇಕೆಂದೆನಿಲ್ಲ. ಇನ್ನೆರಡು ದಿನದಲ್ಲಿ ಬಿಡಿಡಿಎಸ್‌ ತಂಡ ಆಗಮಿಸಿ ನಿಷ್ಕ್ರೀಯಗೊಳಿಸಲಿದೆ ಎಂದು ತಿಳಿಸಿದ್ದಾರೆ.