Asianet Suvarna News Asianet Suvarna News

ಹುಬ್ಬಳ್ಳಿ ಸ್ಫೋಟ ಪ್ರಕರಣ: ಮಹಾರಾಷ್ಟ್ರ, ಆಂಧ್ರಕ್ಕೆ 4 ತನಿಖಾ ತಂಡ

ಜೀವಂತ ಸ್ಫೋಟಕಗಳನ್ನು ಇನ್ನೂ ರೈಲ್ವೆ ನಿಲ್ದಾಣದ ಹಿಂಭಾಗದಲ್ಲಿ ಸುರಕ್ಷಿತವಾಗಿ ಇಡಲಾಗಿದೆ| ಎಫ್‌ಎಸ್‌ಎಲ್‌ ವರದಿ ಬಳಿಕ ಸ್ಫೋಟಕ ಷ್ಕ್ರೀಯ| ಹಿರಿಯ ಅಧಿಕಾರಿಗಳ ಭೇಟಿ| ಕುತೂಹಲಕ್ಕಾಗಿ ರೈಲ್ವೆ ನಿಲ್ದಾಣಕ್ಕೆ ಬರುತ್ತಿರುವ ಜನತೆ|
 

Hubballi Blast: Investigative Team Went to Maharashtra, Andhra Pradesh
Author
Bengaluru, First Published Oct 24, 2019, 7:44 AM IST

ಹುಬ್ಬಳ್ಳಿ[ಅ.24]: ರೈಲ್ವೆಯಲ್ಲಿ ನಡೆದ ಲಘು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಬುಧವಾರವೂ ತನಿಖೆ ಮುಂದುವರೆದಿದ್ದು, ಮಹಾರಾಷ್ಟ್ರ, ಆಂಧ್ರಪ್ರದೇಶಕ್ಕೆ ನಾಲ್ಕು ತಂಡಗಳನ್ನು ತನಿಖೆಗಾಗಿ ಕಳುಹಿಸಲಾಗಿದೆ. ಇನ್ನು, ಸುರಕ್ಷಿತವಾಗಿ ಇಡಲಾದ ಸ್ಫೋಟಕಗಳನ್ನು ಎಫ್‌ಎಸ್‌ಎಲ್‌ ವರದಿ ಬಳಿಕ ನಿಷ್ಕ್ರೀಯಗೊಳಿಸಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬುಧವಾರ ಹಿರಿಯ ಅಧಿಕಾರಿಗಳಿಂದ ಪರಿಶೀಲನೆ ನಡೆಯಿತು. ಆರ್‌ಪಿಎಫ್‌ ರೈಲ್ವೆ ಕಮೀಷನರ್‌ ಬಿ.ಬಿ. ಕಸಾರೆ, ಬುಧವಾರ ರೈಲ್ವೆ ವಿಭಾಗೀಯ ಭದ್ರತಾ ಆಯುಕ್ತ ವಲ್ಲೇಶ್ವರ, ನೈಋುತ್ಯ ರೈಲ್ವೆ ಮಹಾಪ್ರಬಂಧಕ ಎ.ಕೆ. ಸಿಂಗ್‌ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳೆದ ಎರಡು ದಿನಗಳಿಂದ ಇಲ್ಲಿಯೇ ಇರುವ ಜಿಆರ್‌ಪಿ ವರಿಷ್ಠಾಧಿಕಾರಿ ಡಾ. ಬೋರಲಿಂಗಯ್ಯ ಅವರು ಘಟನೆ ತನಿಖಾ ಪ್ರಗತಿ ಕುರಿತಾಗಿ ಕಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದರು.

ತನಿಖೆಗೆ ತಂಡ

ಗದಗ, ಧಾರವಾಡ, ದಾವಣಗೆರೆ ಹಾಗೂ ಹುಬ್ಬಳ್ಳಿಯ ಜಿಆರ್‌ಪಿ ಪೊಲೀಸ್‌ ತಂಡಗಳನ್ನು ಮೂರು ಇನ್ಸ್‌ಪೆಕ್ಟರ್‌ ಹಾಗೂ ಮೂರು ಸಬ್‌ ಇನ್ಸ್‌ಪೆಕ್ಟರ್‌ ನೇತೃತ್ವದಲ್ಲಿ ರಚಿಸಲಾಗಿದೆ. ಮಹಾರಾಷ್ಟ್ರದ ಕೊಲ್ಲಾಪುರ ಹಾಗೂ ಆಂಧ್ರಪ್ರದೇಶದ ವಿಜಯವಾಡಕ್ಕೆ ಕಳಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಕಟ್ಟುನಿಟ್ಟಿನ ಪರೀಕ್ಷೆ

ಇಲ್ಲಿನ ಮುಖ್ಯದ್ವಾರದಿಂದ ಆಗಮಿಸುವ ಪ್ರತಿಯೊಬ್ಬರನ್ನೂ ಕಟ್ಟುನಿಟ್ಟಾಗಿ ಅರ್‌ಪಿಎಫ್‌ ಸಿಬ್ಬಂದಿ ತಪಾಸಣೆ ಮಾಡಿದರು. ಶಸ್ತ್ರಸಜ್ಜಿತ ಪೊಲೀಸರು ಪ್ರತಿಯೊಬ್ಬರನ್ನ ನಿಲ್ಲಿಸಿ ಬ್ಯಾಗ್‌ ಇನ್ನಿತರೆ ಸರಂಜಾಮುಗಳನ್ನು ಮೆಟಲ್‌ ಡಿಟೆಕ್ಟರ್‌ನಿಂದ ತಪಾಸಣೆ ಮಾಡಿದರು. ಸಂಶಯ ಬಂದಲ್ಲಿ ಮೇಲಧಿಕಾರಿಗಳಿಗೆ ತಿಳಿಸಿ ಕಚೇರಿಗೆ ಕರೆದೊಯ್ದು ಸಂಪೂರ್ಣ ತಪಾಸಣೆಗೆ ಒಳಪಡಿಸಿದರು. ಇದಲ್ಲದೆ, ಶ್ವಾನದಳ ಹಾಗೂ ಬಿಡಿಡಿಎಸ್‌ ತಂಡ ಕೂಡ ದಿನವಿಡಿ ತಪಾಸಣೆಯಲ್ಲಿ ತೊಡಗಿತ್ತು.

ಇನ್ನು, ಶ್ರೀರಾಮ ಸೇನೆ ಮುಖಂಡ ಪ್ರಮೋದ ಮುತಾಲಿಕ್‌ ಅವರು ಕೂಡ ಸ್ಥಳಕ್ಕೆ ಭೇಟಿ ನೀಡಿದರು. ಬಳಿಕ ಮಾತನಾಡಿ ಸ್ಫೋಟದಿಂದ ಗಾಯಗೊಂಡ ಯುವಕನಿಗೆ ಪರಿಹಾರ ನೀಡುವ ಕಾರ್ಯವಾಗಲಿ ಪ್ರಕರಣವನ್ನು ಶೀಘ್ರವೆ ಪತ್ತೆ ಹಚ್ಚಲು ಪೊಲೀಸರು ಮುಂದಾಗಬೇಕಿದೆ ಎಂದರು.

ಕುತೂಹಲಕ್ಕಾಗಿ ಬಂದರು!

ಸೋಮವಾರ ಸಂಭವಿಸಿದ ಲಘು ಸ್ಫೋಟದ ಬಳಿಕ ಇಲ್ಲಿನ ವಾತಾವರಣ ಬದಲಾಗಿದೆ. ವಿಷಯ ತಿಳಿದ ಹಲವರು ಸ್ಥಳ ವೀಕ್ಷಣೆಗೆ ಆಗಮಿಸುತ್ತಿರುವುದು ಅದಕ್ಕಾಗೆ ಪ್ಲಾಟ್‌ಫಾರಂ ಟಿಕೆಟ್‌ ಪಡೆದಿದ್ದು ಕಂಡು ಬಂತು.

ಘಟನೆ ನಡೆದ ಎಸ್‌ಎಂಆರ್‌ ಕಚೇರಿ ಎದುರಿನ ಸ್ಥಳದ ಸುತ್ತ ಬ್ಯಾರಿಕೇಡ್‌ ಹಾಕಿಡಲಾಗಿದೆ. ಮೊನ್ನೆ ಚೆಲ್ಲಿದ ರಕ್ತವನ್ನು ಸ್ವಚ್ಛಗೊಳಿಸಲಾಗಿದ್ದರೂ ಪಂಚನಾಮೆ, ಅಧಿಕಾರಿಗಳ ವೀಕ್ಷಣೆ ಇತರ ಕಾರಣಕ್ಕೆ ಕೊಂಚ ಹಾಗೆ ಇಟ್ಟು ಅದರ ಮೇಲೆ ರಟ್ಟಿನ ಬಾಕ್ಸ್‌ ಇಡಲಾಗಿದೆ. ಇದರ ಸುತ್ತ ಪೊಲೀಸರು ನಿಂತಿದ್ದಾರೆ. ಇನ್ನು, ಜೀವಂತ ಸ್ಫೋಟಕಗಳನ್ನು ಇನ್ನೂ ರೈಲ್ವೆ ನಿಲ್ದಾಣದ ಹಿಂಭಾಗದಲ್ಲಿ ಸುರಕ್ಷಿತವಾಗಿ ಇಡಲಾಗಿದೆ. ಅಲ್ಲಿಯೂ ಜಿಆರ್‌ಪಿ (ಜನರಲ್‌ ರೈಲ್ವೆ ಪೊಲೀಸ್‌) ಸಿಬ್ಬಂದಿ ಪಹರೆಯಿದೆ. ಉನ್ನತಾಧಿಕಾರಿಗಳು ತನಿಖೆಗೆ ಬಂದಾಗ ಜನತೆಯನ್ನು ದೂರವಿರುವಂತೆ, ಗುಂಪುಗೂಡದಂತೆ ಗದರುತ್ತಿರುವುದು ಸಾಮಾನ್ಯವಾಗಿ ಕಂಡುಬಂತು.

Follow Us:
Download App:
  • android
  • ios