ಶಿವಕುಮಾರ ಮುರಡಿಮಠ

ಧಾರವಾಡ[ನ.14]:  ದೀಪಾವಳಿ ಹಬ್ಬಕ್ ತಂದ ಸಂತಿ ಉದ್ರಿ ಇನ್ನೂ ಕೊಟ್ಟಿಲ್ರಿ. ಎರಡ್ಮೂರು ತಿಂಗಳಿಂದ ಪಗಾರೇ ಆಗಿಲ್ಲ. ಟೀಚರ್ ಅದೀರಿ ಸಾವಿರಾರು ರುಪಾಯಿ ಪಗಾರಾ ಬರತೈತಿ. ಉದ್ರಿ ಮಾಡತೀರಿ ಎಂದು ಅಂಗಡಿಯವರು ಹಿಯಾಳಿಸುತ್ತಾರೀ. ದಯಮಾಡಿ ಹೆಂಗಾರ ಮಾಡಿ ಸಂಬಳಾ ಕೊಡಸರಿ! 

ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಮೂಕವೇದನೆ ಇದು. ಅಧಿಕಾರಿಗಳು ತಾಂತ್ರಿಕ ಕಾರಣ ಹೇಳಿ ಇದೇ ರೀತಿ ಹಲವು ತಿಂಗಳುಗಳ ಸಂಬಳ ನೀಡದೇ ಹೋದರೆ ಮನೆ ನಡೆಸುವುದು ಹೇಗೆ? ಎಂದು ಕೆಲವು ಶಿಕ್ಷಕರು ಪ್ರಶ್ನೆ ಕೇಳುತ್ತಿದ್ದಾರೆ. ಇತ್ತೀಚೆಗೆ ಆಚರಿಸಿದ ಸಂಪತ್ತಿನ ದೇವತೆ ವರ ಮಹಾಲಕ್ಷ್ಮೀ ಹಬ್ಬಕ್ಕಾಗಿ ಕಿರಾಣಿ ಅಂಗಡಿಗಳಲ್ಲಿ ಉದ್ರಿ ತರಲಾದ ಕಿರಾಣಿ ಸಾಮಾನುಗಳ ಹಣ ಪಾವತಿಸಲಾಗದೇ ಶಿಕ್ಷಕರ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. 

ಸಾಲದ ಸುಳಿಯಲ್ಲಿ ತೊಳಲಾಟ: 

ಬರೀ ಮನೆ ಸಂತಿ ಅಲ್ಲದೇ ಬ್ಯಾಂಕ್ ಸಾಲ, ವಿಮೆ, ವಾಹನ ಸಾಲ ಸೇರಿ ಹಲವು ಸಾಲಗಳನ್ನು ಹೊಂದಿರುವ ಶಿಕ್ಷಕರು ಸಂಬಳವಿಲ್ಲದೇ ಪರದಾಡುವಂತಾಗಿದೆ. ಶಿಕ್ಷಕರು ಮಾಡಿರುವ ಈ ಸಾಲದ ಕಂತುಗಳು ಮರು ಪಾವತಿಯಾಗದ ಕಾರಣ ಅದಕ್ಕೆ ಬಡ್ಡಿ, ಶುಲ್ಕ ದುಪ್ಪಟ್ಟು ಪ್ರಮಾಣದಲ್ಲಿ ಬೀಳುತ್ತಿದೆ. ಸಾಲದ ಕಂತಿಗಾಗಿ ಫೈನಾನ್ಸ್ ಕಂಪನಿಗಳು ಸಾಮಾನ್ಯವಾಗಿ ವೇತನ ಖಾತೆ ಇರುವ ಬ್ಯಾಂಕಿಗೆ ಒಮ್ಮೆ ಚೆಕ್ ಕಳುಹಿಸಿ ಅದು ವಾಪಸ್ಸಾದಲ್ಲಿ 510 ಶುಲ್ಕ ವಿಧಿಸುತ್ತಿದೆ. ಹೀಗೆ ಮೂರು ತಿಂಗಳಲ್ಲಿ ಹತ್ತಾರು ಬಾರಿ ಚೆಕ್ ವಾಪಸ್ ಬಂದರೆ ಶಿಕ್ಷಕನಿಗೆ ಸಾವಿರಾರು ರುಪಾಯಿ ಶುಲ್ಕದ ಹೊರೆ ಬೀಳುತ್ತದೆ. ಸಾಲದ ಕಂತುಗಳದ್ದೇ ಚಿಂತೆಯಲ್ಲಿ ಮುಳುಗಿದ್ದು, ಹಲವಾರು ಶಿಕ್ಷಕರು ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಇಂತಹ ಮನನೊಂದ ಸ್ಥಿತಿಯಲ್ಲಿರುವ ಶಿಕ್ಷಕರಿಂದ ಸಂಬಳ ನೀಡದೇ ಇನ್ನೆಷ್ಟು ದಿನ ಉತ್ತಮ ಬೋಧನೆ ನಿರೀಕ್ಷಿಸಲು ಸಾಧ್ಯ ಎಂಬ ಮಾತುಗಳು ಕೇಳಿ ಸಹ ಬರುತ್ತಿವೆ.

ಅನುದಾನದ ಕೊರತೆ: 

ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಿಂದ ಸಂಬಳ ಆಗಿಲ್ಲ. ಶಿಕ್ಷಕರ ಒತ್ತಡದಿಂದ ಅಕ್ಟೋಬರ್ ಮೊದಲ ವಾರದಲ್ಲಿಯೇ ಅನುದಾನ ಬಿಡುಗಡೆಯಾಗಲಿದೆ. ಆದಾದ ನಂತರ ವೇತನ ನೀಡಲಾಗುವುದು ಎಂದು ಅಧಿಕಾರಿಗಳು ಹಾರಿಕೆ ಉತ್ತರ ನೀಡಿದ್ದರು. ಇದೀಗ ನವೆಂಬರ್ ತಿಂಗಳು ಅರ್ಧ ಮುಗಿದರೂ ಸಂಬಳದ ಸುದ್ದಿ ಇಲ್ಲ. ಅನುದಾನ ಬಂದಿಲ್ಲ ಎನ್ನುತ್ತಿದ್ದು, ನಮಗೆ ಅರ್ಥವಾಗುತ್ತಿಲ್ಲ ಎಂದು ಶಿಕ್ಷಕರೊಬ್ಬರು ಬೇಸರ ವ್ಯಕ್ತಪಡಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅನುದಾನದ ಕೊರತೆ ಇದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ತಡವಾದಂತೆ ಕುಟುಂಬ ನಿರ್ವಹಣೆ ಮತಷ್ಟು ಕಷ್ಟಕರವಾಗುತ್ತಿದೆ. ಸಾಲ ತುಂಬದ ಕಾರಣ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದು, ಪೂರ್ಣಮನಸ್ಸಿನಿಂದ ಬೋಧನೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಶಿಕ್ಷಕರೊಬ್ಬರು ಹೇಳಿದ್ದಾರೆ. ಸರ್ಕಾರದಿಂದ ಅನುದಾನದ ಕೊರತೆ ಉಂಟಾಗಿ ವೇತನ ನೀಡಲು ಸಾಧ್ಯವಾಗಿರಲಿಲ್ಲ. ಇದೀಗ ಬಿಇಒ ಅವರ ಮೂಲಕ ಬಿಲ್ ಪಾಸ್ ಮಾಡಲಾಗಿದ್ದು ಎರಡುದಿನಗಳಲ್ಲಿ ಶಿಕ್ಷರಿಗೆ ವೇತನ ನೀಡಲಾಗುವುದು ಎಂದು ಡಿಡಿಪಿಐ ಗಜಾನನ ಮನ್ನಿಕೇರಿ ಅವರು ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ವಿದ್ಯಾ ನಾಡಿಗೇರ ಅವರು ಎರಡು ದಿನಗಳಲ್ಲಿ ಸಂಬಳ ಶಿಕ್ಷಕರಿಗೆ ವೇತನ ನೀಡಲು ಅನುದಾನ ಕೊರತೆಯಾಗಿತ್ತು. ಈ ಕಾರಣದಿಂದಾಗಿ ವಿಳಂಬವಾಗಿದೆ. ಇದು ಕೇವಲ ಧಾರವಾಡ ಗ್ರಾಮೀಣ ಭಾಗದ ಸಮಸ್ಯೆ ಮಾತ್ರ ಅಲ್ಲ. ರಾಜ್ಯಾದಂತ ಎಲ್ಲ ಪ್ರಾಥಮಿಕ ಶಿಕ್ಷಕರದ್ದಾಗಿದೆ. ಸರ್ಕಾರವು ಈಗ ಅನುದಾನ ನೀಡಿದ್ದು ಎರಡ್ಮೂರು ದಿನಗಳಲ್ಲಿ ಸಂಬಳವಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.