Asianet Suvarna News Asianet Suvarna News

ಹುಬ್ಬಳ್ಳಿ: ಕೆರೆಯಲ್ಲಿ ಮುಳುಗುತ್ತಿದ್ದ ಒಬ್ಬ ಸ್ನೇಹಿತನನ್ನ ರಕ್ಷಿಸಲು ಹೋಗಿ ನಾಲ್ವರ ದುರ್ಮರಣ

ಮುಳುಗುತ್ತಿದ್ದ ಒಬ್ಬ ಸ್ನೇಹಿತನ ರಕ್ಷಣೆಗೆ ಮುಂದಾದ ಮೂವರು ಬಲಿ| ಗಣೇಶಪೇಟೆಯ ಮಚಲಿ ಮಾರುಕಟ್ಟೆ ನಿವಾಸಿಗಳ ದುರ್ಮರಣ| ದೇವರಗುಡಿಹಾಳ ಕೆರೆಯಲ್ಲಿ ಮುಳುಗಿ ನಾಲ್ಕು ಯುವಕರು ಸಾವು|

Four Persons Dead in Lake in Hubballi
Author
Bengaluru, First Published Nov 12, 2019, 7:34 AM IST

ಹುಬ್ಬಳ್ಳಿ[ನ.12]: ಮುಳುಗುತ್ತಿದ್ದ ಒಬ್ಬನನ್ನು ರಕ್ಷಿಸಲು ತೆರಳಿದ ಮೂವರು ಸೇರಿದಂತೆ ನಾಲ್ಕು ಯುವಕರು ಕೆರೆಯಲ್ಲಿ ಮುಳುಗಿ ಮೃತಪಟ್ಟ ಹೃದಯ ವಿದ್ರಾವಕ ಘಟನೆ ತಾಲೂಕಿನ ದೇವರಗುಡಿಹಾಳ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ. ಗಣೇಶಪೇಟೆಯ ಮಚಲಿ ಮಾರುಕಟ್ಟೆ ನಿವಾಸಿಗಳಾದ ಸುಭಾನಿ ಅಹ್ಮದ್ ವನ್ನಿಹಾಳ (17), ಸೋಯಲ್‌ಮುಸ್ತಾಕ್ ಅಹ್ಮದ್ ಸೈಯದ್ (17), ಐಯಾನ್‌ ಮೌಲಾಸಾಬ್ ಉಣಕಲ್ (18) ಹಾಗೂ ಸೈಯದ್‌ಸುಭಾನ ಸೈಯದ್ ಬಿಲಾಲ್ ಬುರಬುರಿ (17) ಮೃತಪಟ್ಟಿದ್ದಾರೆ. 

ಈ ಕುರಿತು ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಧ್ಯಾಹ್ನ ಗಣೇಶಪೇಟೆಯ ಏಳು ಯುವಕರು ಸೇರಿ ದೇವರಗುಡಿಹಾಳ ಗ್ರಾಮದಲ್ಲಿರುವ ಕೆರೆಗೆ ಈಜಲು ಹೋಗಿದ್ದರು. ನಾಲ್ವರು ಕೆರೆಗೆ ಧುಮುಕಿದಾಗ ಈಜು ತಿಳಿಯುದ ಒಬ್ಬ ನೀರಿನ ಸೆಳೆತಕ್ಕೆ ಮುಂದೆ ಹೋಗಿ ಮುಳುಗೇಳುತ್ತಿದ್ದ ಎನ್ನಲಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ಸಂದರ್ಭದಲ್ಲಿಅವನನ್ನು ರಕ್ಷಿಸಲು ಒಬ್ಬೊಬ್ಬರೆ ಹೋಗಿದ್ದಾರೆ, ಆದರೆ, ಯಾರಿಗೂ ಈಜಾಡಲು ಸಾಧ್ಯವಾಗಿಲ್ಲ ಎಂದು ಸ್ಥಳೀಯರು ಹೇಳಿದರು. ನೀರಿಗಿಳಿಯದಿದ್ದ ಯುವಕರು ತಟದಲ್ಲಿ ಕುಳಿತು ಮೊಬೈಲ್‌ನಲ್ಲಿ ಆಟವಾಡುತ್ತಿದ್ದರು. ಅವರು ಇದನ್ನು ಕಂಡು ಗಾಬರಿಯಾಗಿದ್ದಾರೆ. ಸ್ನೇಹಿತರನ್ನು ರಕ್ಷಿಸುವಂತೆಗ್ರಾಮಸ್ಥರ ಬಳಿ ತೆರಳಿ ಗೋಗರೆದಿದ್ದಾರೆ. ಆದರೆ, ರಕ್ಷಿಸಲು ಕೆರೆಗೆ ಹಾರಿದವರನ್ನು ಯುವಕರು ಗಾಬರಿಯಲ್ಲಿ ಗಟ್ಟಿಯಾಗಿ ಹಿಡಿದುಕೊಳ್ಳಲು ಮುಂದಾದ ಕಾರಣ ಇವರೂ ಹೆದರಿ ವಾಪಸಾಗಿದ್ದಾರೆ. ಪರಿಣಾಮ ಯುವಕರು ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಅಗ್ನಿಶಾಮಕ ದಳದೊಂದಿಗೆ ಸ್ಥಳಕ್ಕೆ ಆಗಮಿಸಿದ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಸ್ಥಳೀಯರ ಸಹಕಾರದಲ್ಲಿ ಯುವಕರ ಮೃತ ದೇಹಗಳನ್ನು ಹೊರತೆಗೆದರು. ಬಳಿಕ ಕಿಮ್ಸ್‌ಗೆ ಮೃತದೇಹವನ್ನು ತಂದು ರಾತ್ರಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

ಈ ಕುರಿತು ಮಾತನಾಡಿದ ಮೃತ ಐಯಾನ್ ಉಣಕಲ್‌ ಅವರ ಸಂಬಂಧಿ ಮಹ್ಮದ್ ರಫೀ, ಹುಡುಗರು ಗದಗಿನ ಮುಳಗುಂದದ ದಾವಲ್ ಮಲ್ಲಿಕ್ ಮಂದಿರಕ್ಕೆ ಹೋಗಿ ಬರುವುದಾಗಿ ಹೇಳಿ 3-4 ಬೈಕ್‌ಗಳಲ್ಲಿ ತೆರಳಿದ್ದರು.ಅದಕ್ಕೂ ಮುನ್ನ ಕುಲಕರ್ಣಿ ಹಕ್ಕಲ್‌ದಲ್ಲಿ ಕೇಕ್ ಕಟ್‌ಮಾಡಿ ಸಂಭ್ರಮಿಸಿದ್ದರು. ಆದರೆ, ಮಂದಿರಕ್ಕೆ ಹೋಗದೆ ದೇವರಗುಡಿಹಾಳ ಗ್ರಾಮದತ್ತ ತೆರಳಿ ಅನಾಹುತ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು. 

ಯುವಕರು ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಕಿಮ್ಸ್ ಬಳಿ ನೂರಾರು ಜನರು ಜಮಾಯಿಸಿದ್ದರು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಕಿಮ್ಸ್‌ಗೆ ಆಗಮಿಸಿದ ಶಾಸಕ ಪ್ರಸಾದ ಅಬ್ಬಯ್ಯ,ಅಂಜುಮನ್ ಸಂಸ್ಥೆ ಚೇರ್‌ಮನ್ ಮಹ್ಮದ್ ಯೂಸೂಫ್‌ ಸವಣೂರು ಭೇಟಿ ನೀಡಿ ಮಾಹಿತಿ ಪಡೆದು ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದರು.

Follow Us:
Download App:
  • android
  • ios