Asianet Suvarna News Asianet Suvarna News

'ನೂತನ ಕೈಗಾರಿಕಾ ನೀತಿಯಲ್ಲಿ ಪರಿಶಿಷ್ಟ ಉದ್ಯಮಿಗಳಿಗೆ ಪ್ರೋತ್ಸಾಹ'

2019 ರ ನೂತನ ಕೈಗಾರಿಕಾ ನೀತಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡಗಳಿಗೆ ಉತ್ತೇಜನ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದ ಸಚಿವ ಜಗದೀಶ ಶೆಟ್ಟರ್‌| ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಸಚಿವರು| ನೂತನ ಕೈಗಾರಿಕಾ ನೀತಿಯು ಬರುವ ನವೆಂಬರ್‌, ಡಿಸೆಂಬರ್‌ ನಲ್ಲಿ ಪ್ರಕಟವಾಗಲಿದೆ| ಅದರಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಉದ್ಯಮಿಗಳಿಗೆ ವಿಶೇಷ ಪ್ರಾತಿನಿಧ್ಯ ಕಲ್ಪಿಸಲಾಗುವುದು| ಆ ಮೂಲಕ ಡಾ. ಅಂಬೇಡ್ಕರ್‌ ಕಂಡ ಕನಸು ನನಸು ಮಾಡಲು ಸಾಧ್ಯವಿದೆ| 

Encouragement For Scheduled Entrepreneurs In New Industrial Policy
Author
Bengaluru, First Published Oct 14, 2019, 10:28 AM IST

ಧಾರವಾಡ(ಅ.14): 2019 ರ ನೂತನ ಕೈಗಾರಿಕಾ ನೀತಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡಗಳಿಗೆ ಉತ್ತೇಜನ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಹೇಳಿದ್ದಾರೆ. 

ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಭಾನು​ವಾರ ಏರ್ಪಡಿಸಿದ್ದ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾತನಾಡಿದರು.
ನೂತನ ಕೈಗಾರಿಕಾ ನೀತಿಯು ಬರುವ ನವೆಂಬರ್‌, ಡಿಸೆಂಬರ್‌ ನಲ್ಲಿ ಪ್ರಕಟವಾಗಲಿದೆ. ಅದರಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಉದ್ಯಮಿಗಳಿಗೆ ವಿಶೇಷ ಪ್ರಾತಿನಿಧ್ಯ ಕಲ್ಪಿಸಲಾಗುವುದು. ಆ ಮೂಲಕ ಡಾ. ಅಂಬೇಡ್ಕರ್‌ ಕಂಡ ಕನಸು ನನಸು ಮಾಡಲು ಸಾಧ್ಯವಿದೆ ಎಂದು ತಿಳಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಎಸ್‌ಟಿ ಮೀಸಲಿರುವ ವಿಧಾನಸಭಾ ಕ್ಷೇತ್ರಗಳು ಕೆಲವೇ ಜಿಲ್ಲೆಗಳಲ್ಲಿ ಕೇಂದ್ರೀಕರಣವಾಗಿವೆ. ಅವು ಎಲ್ಲಾ ಜಿಲ್ಲೆಗಳಿಗೆ ಹಂಚಿಕೆಯಾಗಬೇಕು ಎಂದು ಇಲ್ಲಿನ ಜಿಪಂ ಮಾಜಿ ಅಧ್ಯಕ್ಷೆ ಶಾಂತವ್ವ ಗುಜ್ಜಳ ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತಿದ್ದಾರೆ. ಈ ಬೇಡಿಕೆ ನ್ಯಾಯಯುತವಾಗಿದೆ ಎಂದರು. 

ಬಸವಣ್ಣ, ಡಾ. ಬಿ.ಆರ್‌. ಅಂಬೇಡ್ಕರ್‌, ಮಹರ್ಷಿ ವಾಲ್ಮೀಕಿ ಸೇರಿದಂತೆ ಎಲ್ಲ ಮಹನೀಯರು ಯಾವುದೇ ಜಾತಿ, ಮತಗಳಿಗೆ ಸೀಮಿತವಲ್ಲ. ಸಮಸ್ತ ಮನುಕುಲಕ್ಕೆ ಅವರ ತತ್ವ ಸಂದೇಶಗಳನ್ನು ನಿರಂತರವಾಗಿ ಜನಸಾಮಾನ್ಯರಿಗೆ ತಲುಪಿಸಿ ಜಾಗೃತಿ ಮೂಡಿಸುವ ಆಶಯದೊಂದಿಗೆ ಈ ಹಿಂದೆ ಬಿ.ಎಸ್‌. ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದಾಗ ವಾಲ್ಮೀಕಿ ಜಯಂತಿಯನ್ನು ಸರ್ಕಾರದಿಂದ ಆಚರಿಸುವ ಪರಂಪರೆ ಪ್ರಾರಂಭವಾಯಿತು. ಅಲ್ಲದೇ, ರಾಜ್ಯ ಸರ್ಕಾರವು ಶೋಷಿತರು, ದಲಿತರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಮೇಲೆತ್ತಲು ಹಲವಾರು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ ಎಂದರು.

ದೇಶ​ದೆ​ಲ್ಲೆಡೆ ರಾಮ:

ಕೇಂದ್ರ ಸಂಸ​ದೀಯ ವ್ಯವ​ಹಾ​ರ​ಗಳು, ಕಲ್ಲಿ​ದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ ಜೋಶಿ ಮಾತ​ನಾಡಿ, ವಾಲ್ಮೀಕಿ ರಾಮಾಯಣ ಅನೇಕ ರೀತಿಯಲ್ಲಿ ಐತಿಹಾಸಿಕ ದಾಖಲೆಯಾಗಿ ಉಳಿದಿದೆ. ರಾಮಾಯಣದ ಪ್ರಸಂಗಗಳನ್ನು ನೋಡಿದಾಗ ಭಾರತದೇಶ ಆ ಕಾಲದಲ್ಲಿಯೇ ಇತ್ತು ಎಂಬುದಕ್ಕೆ ಸ್ಪಷ್ಟನಿದರ್ಶನಗಳು ಇವೆ. ರಾಮ ಎಂಬ ಹೆಸರು ದೇಶದ ಎಲ್ಲ ಭಾಗಗಳಲ್ಲಿಯೂ ಕಂಡು ಬರುತ್ತದೆ. ರಾಜಪ್ರಭುತ್ವ, ಆಡಳಿತ, ಕಲ್ಯಾಣ ರಾಜ್ಯ ಕಲ್ಪನೆಗಳು ನಮಗೆ ಸಿಕ್ಕಿರುವುದೇ ರಾಮಾಯಣದ ಮೂಲಕ. ಮಹರ್ಷಿ ವಾಲ್ಮೀಕಿ 24 ಸಾವಿರ ಶ್ಲೋಕಗಳ ಮೂಲಕ ಈ ಸಂದೇಶಗಳನ್ನು ಸಾರಿದ್ದಾರೆ ಎಂದರು.

ಜಾತಿ ಮತ ಪಂಥಗಳನ್ನು ಮೀರಿ ಗುಣಕ್ಕೆ ಬೆಲೆ ಇದೆ ಎಂದು ಮೊಟ್ಟಮೊದಲ ಬಾರಿಗೆ ನಿರೂಪಿಸಿದವರು ಮಹರ್ಷಿ ವಾಲ್ಮೀಕಿ. ರಾಮನಿಗೆ ಉದಾತ್ತ ಗುಣಗಳನ್ನು ಕಲ್ಪಿಸಿ ಆತನಿಗೆ ಪೂಜ್ಯ ಸ್ಥಾನ ದೊರೆಯುವಂತೆ ಮಾಡಿದವರು ಮಹರ್ಷಿ ವಾಲ್ಮೀಕಿ. ಇಡೀ ಸಂಪೂರ್ಣ ಜಾತಿ ವ್ಯವಸ್ಥೆ ವಿರುದ್ಧವಾಗಿ ಗುಣಕ್ಕೆ ಮನ್ನಣೆ ನೀಡಿದ್ದಾರೆ. ತ್ರೇತಾಯುಗದಿಂದ ಇಲ್ಲಿಯವರೆಗೆ ಸುಮಾರು ಹತ್ತು ವರ್ಷಗಳ ನಂತರವೂ ನಾವೆಲ್ಲ ರಾಮಾಯಣ ಹಾಗೂ ವಾಲ್ಮೀಕಿಯನ್ನು ಸ್ಮರಿಸುತ್ತಿರುವುದು ಅದರ ಪ್ರಾಮುಖ್ಯತೆಗೆ ಸಾಕ್ಷಿಯಾಗಿದೆ ಎಂ​ದ​ರು.

ರಾಜ್ಯ​ದಲ್ಲೂ ಏಕಲವ್ಯ ವಸತಿ ಶಾಲೆ

ಭಾರತ ಸರ್ಕಾರ ಏಕಲವ್ಯ ಮಾದರಿ ವಸತಿ ಶಾಲೆಗಳನ್ನು ವಿಶೇಷವಾಗಿ ಎಸ್ಟಿಜನಾಂಗದ ವಿದ್ಯಾರ್ಥಿಗಳಿಗೆ ಪ್ರಾರಂಭಿಸಿದೆ. ದೇಶದಲ್ಲಿ ಈಗಾಗಲೇ 284 ಇಂತಹ ಶಾಲೆಗ​ಳಿದ್ದು, ರಾಜ್ಯದಲ್ಲಿಯೂ ವಿಶೇಷ ಕೌಶಲ್ಯಾಭಿವೃದ್ಧಿ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದು ಕೇಂದ್ರ ಸಚಿ​ವ​ ಪ್ರಹ್ಲಾದ ಜೋಶಿ ಅವರು ಹೇಳಿದ್ದಾರೆ. 

ವಿಧಾನಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಮಹರ್ಷಿ ವಾಲ್ಮೀಕಿಯಂತಹ ಮಹಾನ್‌ ವ್ಯಕ್ತಿಗಳು ಯುಗಾಂತರಗಳಲ್ಲಿ ಒಬ್ಬರು ಹುಟ್ಟಿಬರುತ್ತಾರೆ. ಅಂದಿನ ಕಾಲದಲ್ಲಿ 24 ಸಾವಿರ ಶ್ಲೋಕಗಳನ್ನು ನವಿಲುಗರಿಯಿಂದ ಬರೆದಿದ್ದು ಸಾಮಾನ್ಯ ಸಂಗತಿಯಲ್ಲ. ರಾಮಾಯಣದ ಮೂಲಕ ಪ್ರೀತಿ, ವಿಶ್ವಾಸ, ಪರಸ್ಪರ ನಂಬಿಕೆ, ಸದ್ಗುಣಗಳನ್ನು ಕಲಿಯಲು ಸಾಧ್ಯವಾಗಿದೆ. ವಿದ್ಯಾರ್ಥಿಗಳು, ಯುವಜನರು ಇಂತಹ ಮಹನೀಯರ ಆದರ್ಶಗಳನ್ನು ಅರಿತು, ಅಳವಡಿಸಿಕೊಳ್ಳಬೇಕು. ಪ್ರತಿಯೊಬ್ಬರೂ ರಾಮಾಯಣ ಓದಬೇಕು ಹಾಗೂ ಈ ಕುರಿ​ತ ನಾಟಕ, ವಿಡಿಯೋಗಳನ್ನು ನೋಡಬೇಕು ಎಂದರು.

ಕುಷ್ಟಗಿಯ ಭಾರತಿ ನೀರಗೇರಿ ವಿಶೇಷ ಉಪನ್ಯಾಸ ನೀಡಿ, ಮಹಾತ್ಮರ ಜಯಂತಿಗಳು ಅವರು ಸಾರಿದ ಸಂದೇಶ, ವಿಚಾರಗಳನ್ನು ಪುನರಾವಲೋಕನ ಮಾಡಿಕೊಳ್ಳಲು ಸಹಕಾರಿಯಾಗಿವೆ. ರಾಮ, ಸೀತೆ, ಭರತ, ರಾವಣರ ಪಾತ್ರಗಳ ಮೂಲಕ ಬದುಕಿನ ವಿಧಾನವನ್ನು ಮಹರ್ಷಿ ವಾಲ್ಮೀಕಿ ಸಾರಿದ್ದಾರೆ. ಭಾತೃತ್ವ ಭಾವನೆಗಳ ಶ್ರೇಷ್ಟಉದಾಹರಣೆ ರಾಮ, ಲಕ್ಷ್ಮಣ, ಭರತರಲ್ಲಿ ಕಾಣಬಹುದು ಎಂದರು.

ವಿವಿಧ ರಂಗಗಳಲ್ಲಿ ಸಾಧನೆ ಮಾಡಿರುವ ವಾಲ್ಮೀಕಿ ಜನಾಂಗದ ಬಿ. ಮಾರುತಿ, ತಿಮ್ಮಣ್ಣ ಎಸ್‌. ಕ್ವಾಟಿಹಳ್ಳಿ, ಸುರೇಶಬಾಬು ತಳವಾರ, ಹನುಮಂತಪ್ಪ ಫ. ದೊಡ್ಡಮನಿ ಹಗೂ ಅರವಿಂದ ದೊಡ್ಡಮನಿ ಅವರನ್ನು ಸನ್ಮಾನಿಸಲಾಯಿತು.
 

Follow Us:
Download App:
  • android
  • ios