ಹುಬ್ಬಳ್ಳಿ(ಅ.11): ವಿಧಾನಸಭೆ ಕಲಾಪಕ್ಕೆ ಖಾಸಗಿ ಮಾಧ್ಯಮಗಳ ಕ್ಯಾಮೆರಾಮನ್‌ಗಳಿಗೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದ ರಾಜ್ಯ ಸರ್ಕಾರ ಕ್ರಮ ಖಂಡಿಸಿ ಜಿಲ್ಲಾ ಯುವ ಕಾಂಗ್ರೆಸ್ಸಿಗರು ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರು ಇವರನ್ನು ವಶಕ್ಕೆ ಪಡೆದು ಬಿಡುಗಡೆ ಮಾಡಿದ್ದಾರೆ. 

ರಾಜ್ಯ ಸರ್ಕಾರದ ನಡೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಕಾಂಗ್ರೆಸ್‌ ಯುವ ಕಾರ್ಯಕರ್ತರು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದರು. ಈ ಕೂಡಲೇ ಈ ನಿರ್ಣಯವನ್ನು ವಾಪಸ್‌ ಪಡೆಯದಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು. ರಸ್ತೆ ಮಧ್ಯೆ ಕುಳಿತು ಧರಣಿ ನಡೆಸಿದ ಕಾರ್ಯಕರ್ತರನ್ನು ಉಪನಗರ ಠಾಣೆ ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಟ್ಟರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಇದಕ್ಕೂ ಮುನ್ನ ಮಾತನಾಡಿದ ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಇಮ್ರಾನ್‌ ಯಲಿಗಾರ, ನೆರೆ ಪರಿಹಾರ ನೀಡುವಲ್ಲಿ ಸಂಪೂರ್ಣ ವಿಫಲವಾದ ಬಿಜೆಪಿ ಜನತೆಯನ್ನು ಸತ್ಯ, ಪಾರದರ್ಶಕತೆಯಿಂದ ದೂರವಿಡಲು ಈ ರೀತಿ ಹುನ್ನಾರ ನಡೆಸಿದೆ. ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದ ವೇಳೆ ಕಲಾಪದ ನಡುವೆಯೇ ಅಶ್ಲೀಲ ಚಿತ್ರ ವೀಕ್ಷಿಸಿ ಸಚಿವರು ಸಿಕ್ಕಿಬಿದ್ದಿದ್ದರು. ಬಳಿಕ ಇವರ ತಲೆದಂಡವೂ ಆಗಿತ್ತು. ಆದರೆ, ಈ ಬಾರಿ ತಮ್ಮ ಶಾಸಕರ ವರ್ತನೆಯನ್ನು ಸಮರ್ಥಿಸಿಕೊಳ್ಳಲು ಯಡಿಯೂರಪ್ಪ ಸಭಾಧ್ಯಕ್ಷರ ಕಾರ್ಯಾಲಯವನ್ನು ದುರುಪಯೋಗ ಪಡಿಸಿಕೊಂಡು ಈ ನಿರ್ಣಯ ಹೊರಬರುವಂತೆ ಮಾಡಿದ್ದಾರೆ ಎಂದು ದೂರಿದರು.

ಇನ್ನು, ವಿರೋಧ ಪಕ್ಷ ಕೇಳುವ ಪ್ರಶ್ನೆಗೆ ಉತ್ತರಿಸದೆ ಮುಜುಗರಕ್ಕೀಡಾಗುವ ಸನ್ನಿವೇಶವನ್ನು ಜನತೆ ನೋಡಬಾರದೆಂದು ಬಿಜೆಪಿ ಬಯಸಿದೆ. ಈ ಹಿನ್ನೆಲೆಯಲ್ಲಿ ಮಾಧ್ಯಮಗಳ ಕ್ಯಾಮೆರಾ, ಮೊಬೈಲ್‌ಗಳಿಗೆ ನಿರ್ಬಂಧ ಹೇರಲಾಗಿದೆ. ಕೂಡಲೆ ಈ ನಿರ್ಣಯವನ್ನು ವಾಪಸ್‌ ಪಡೆಯದಿದ್ದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವುದಾಗಿ ಒತ್ತಾಯಿಸಿದರು.

ಈ ವೇಳೆ ಶಾಕೀರ್‌ ಸನದಿ, ಪ್ರವೀಣ ಶಲವಡಿ, ಪಿ.ಸುರೇಶ, ಆನಂದ ಮುಗದುಂ, ದಾದಾಪೀರ್‌ ಕನ್ರೂಲ್‌, ನಾಗಾರ್ಜುನ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.