ಧಾರವಾಡ(ಅ.9): ನವರಾತ್ರಿಯ 9 ದಿನಗಳ ದೇವಿ ಆರಾಧನೆ, ಆಯುಧಗಳ ಪೂಜೆ ಹಾಗೂ ಜಂಬೂ ಸವಾರಿಯ ಮೆರವಣಿಗೆಯೊಂದಿಗೆ ಮಂಗಳವಾರ ಅದ್ಧೂರಿಯಾಗಿ ದಸರಾ ಸಂಭ್ರಮ ಸಂಪನ್ನಗೊಂಡಿತು.

ಮೈಸೂರು ದಸರಾ ನೆನಪಿಸುವ ರೀತಿಯಲ್ಲಿ ಧಾರವಾಡದಲ್ಲೂ ಕಳೆದ ಕೆಲ ವರ್ಷಗಳಿಂದ ನಡೆಯುತ್ತಿರುವ ಜಂಬೂ ಸವಾರಿ ಸಾವಿರಾರು ಜನರನ್ನು ಆಕರ್ಷಿಸಿತು. ಸುತ್ತಮುತ್ತಲಿನ ಗ್ರಾಮಸ್ಥರು, ದೂರದ ಊರಿನಿಂದ ಆಗಮಿಸಿದ ಜನರು ಚಿತ್ತಾಕರ್ಷಕ ಜಂಬೂ ಸವಾರಿಯನ್ನು ಕಣ್ತುಂಬಿಕೊಂಡರು.

ಈಶ್ವರ ದೇವಸ್ಥಾನದಿಂದ ಆರಂಭವಾದ ಜಂಬೂ ಸವಾರಿ ಮೆರವಣಿಗೆಯು ಕಲಘಟಗಿ ರಸ್ತೆ, ಟೋಲನಾಕಾ, ಬಾಗಲಕೋಟ ಪೆಟ್ರೋಲ್‌ ಪಂಪ್‌, ಹೊಸಯಲ್ಲಾಪುರ, ಗಾಂಧಿ ಚೌಕ್‌, ಸುಭಾಸ ರಸ್ತೆ ಮಾರ್ಗವಾಗಿ ಸಂಚರಿಸಿ ನಂತರ ಕಡಪಾ ಮೈದಾನ ತಲುಪಿ ಮುಕ್ತಾಯಗೊಂಡಿತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಆನೆ, ಕುದುರೆ ಸಾರೋಟಗಳು, ಜಾಂಝ್‌ ಮೇಳ, ಚಂಡಿ, ಭೂತ ಕುಣಿತ, ಹೆಜ್ಜೆ ಮೇಳ, ಭಜನೆ, ಡೊಳ್ಳು ಸೇರಿದಂತೆ 40 ಕ್ಕೂ ಹೆಚ್ಚು ವಿವಿಧ ಕಲಾ ತಂಡಗಳು ಜನರ ಗಮನ ಸೆಳೆದವು. ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಮೆರವಣಿಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

ದಸರಾ ಉತ್ಸವ ಸಂಪನ್ನ

ಧಾರವಾಡ ಜಂಬೂ ಸವಾರಿ ಉತ್ಸವ ಸಮಿತಿ ಸೇರಿದಂತೆ ಧಾರವಾಡದ ಹಲವು ಸಂಸ್ಥೆಗಳು 9 ದಿನಗಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹ ಸಮಾರೊಪಗೊಂಡವು. ಸೋಮವಾರ ಗಾಂಧಿ ನಗರದ ಈಶ್ವರ ದೇವಸ್ಥಾನದಲ್ಲಿ ದಸರಾ ಜಂಬೂ ಸವಾರಿ ಮೆರವಣಿಗೆ ಪೂಜಾ ಕಾರ್ಯಕ್ರಮ ನಡೆಯಿತು.

ಅತಿಥಿಗಳಾಗಿ ಆಗಮಿಸಿದ ಕೇಂದ್ರ ಮಾಜಿ ಸಚಿವ ಬಾಬಾಗೌಡ ಪಾಟೀಲ್‌ ಮಾತನಾಡಿ, ಪ್ರಸ್ತುತ ಪರಿಸ್ಥಿತಿಯಲ್ಲಿ ಧರ್ಮ, ಸಂಸ್ಕೃತಿ ಕುರಿತಂತೆ ಕೇಳಿ ಬರುತ್ತಿರುವ ಹೊಸ ವಿಚಾರಧಾರೆಗಳ ಬಗ್ಗೆ ಚಿಂತನೆ ನಡೆಸಬೇಕಾದ ಅನಿವಾರ್ಯತೆ ಇದೆ ಎಂದರು.
ಧರ್ಮ, ದೇವರು, ಸಂಸ್ಕೃತಿ, ಭಕ್ತಿ, ಶಿಷ್ಟಾಚಾರಗಳು ನಮಗೆ ಬೇಡ ಎಂಬ ಹೊಸ ಆಲೋಚನೆಗಳು ಈಗ ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ಹೊಸ ವಿಚಾರಧಾರೆಗಳ ಬಗ್ಗೆ ಚಿಂತನೆ ನಡೆಸಬೇಕಿದೆ. ಸಮಾಜಕ್ಕೆ ಮತ್ತು ಮನುಷ್ಯನ ಬದುಕಿಗೆ ಹಳೆಯ ಅಥವಾ ಹೊಸ ವಿಚಾರಗಳು ಪೂರಕವಾಗಿದ್ದರೆ ಸ್ವೀಕರಿಸುವುದರಲ್ಲಿ ತಪ್ಪಿಲ್ಲ. ವ್ಯಕ್ತಿಯ ಜೀವನಕ್ಕಿಂತ ಸಮಾಜ ಜೀವನ ಅರ್ಥಪೂರ್ಣವಾಗಿರಬೇಕು. 

ಈ ದಿಸೆಯಲ್ಲಿ ನಮ್ಮ ಜಾನಪದ ಸಂಸ್ಕೃತಿ ಶ್ರೇಷ್ಠವಾಗಿದ್ದು, ಅವುಗಳಲ್ಲಿನ ಮಾನವೀಯ ಮೌಲ್ಯಗಳು, ಮನುಷ್ಯ ಸಂಬಂಧ ಇನ್ನಿತರ ಸಂಗತಿಗಳ ಅವಗಣನೆ ಸರಿಯಲ್ಲ. ಇಂದು ಹಣದ ಬೆನ್ನತ್ತಿ ನಮ್ಮ ಶ್ರೀಮಂತ ಸಂಸ್ಕೃತಿಯನ್ನು ಮರೆಯುತ್ತಿದ್ದೇವೆ. ಜೀವನದ ಸಮಸ್ತ ಮೌಲ್ಯಗಳ ಸಂಗ್ರಹದಂತಿರುವ ಹಬ್ಬ, ಸಾಂಪ್ರದಾಯಿಕ ಆಚರಣೆಗಳನ್ನು ಸಂಭ್ರಮಿಸುವ ಮನೋಧರ್ಮ ಬೆಳೆಸಿಕೊಳ್ಳಬೇಕಿದ್ದು, ಧಾರವಾಡದಲ್ಲಿ ಕಳೆದ 15 ವರ್ಷಗಳಿಂದ ಜಂಬೂ ಸವಾರಿ ಆಯೋಜಿಸುತ್ತಿರುವ ಸಮಿತಿಯ ಪ್ರಯತ್ನ ಆದರ್ಶಪ್ರಾಯವಾಗಿದೆ ಎಂದರು.

ಉಪ್ಪಿನ ಬೆಟಗೇರಿ ಮೂರುಸಾವಿರ ವಿರಕ್ತಮಠದ ಕುಮಾರ ವಿರುಪಾಕ್ಷ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕುಪ್ಪೂರ ಗದ್ದುಗೆ ಸಂಸ್ಥಾನಮಠದ ಡಾ. ಯತೀಶ್ವರ ಶಿವಾಚಾರ್ಯರು, ಬೆಳಗಾವಿ ಮುಕ್ತಿಮಠದ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯರು, ಬೈಲಹೊಂಗಲದ ಪ್ರಭುನೀಲಕಂಠ ಮಹಾಸ್ವಾಮಿಗಳು, ಹಿರೇ ಮುನವಳ್ಳಿಯ ಶಂಭುಲಿಂಗ ಸ್ವಾಮೀಜಿ, ಗುರುಲಿಂಗ ಶಿವಾಚಾರ್ಯರು, ಗರಗದ ವೀರೇಶ್ವರ ದೇವರು, ಫಂಡರಪುರ ಅಜರೇಕರ ಮಾವುಲಿಯ ಗುರುವರ್ಯ ಹರಿದಾಸ ರಾಮಬಾವು ಬೋರಾಠೆ, ಆನಂದಿ ಗುರುಗಳು ಸಮ್ಮುಖ ವಹಿಸಿದ್ದರು.

ಧಾರವಾಡ ದಸರಾ ಜಂಬೂ ಸವಾರಿ ಉತ್ಸವ ಸಮಿತಿ ಅಧ್ಯಕ್ಷ ಗುರುರಾಜ ಹುಣಸಿಮರದ ಅಧ್ಯಕ್ಷತೆ ವಹಿಸಿದ್ದರು. ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಶಂಕ್ರಣ್ಣ ಮುನವಳ್ಳಿ, ಮಾಜಿ ಶಾಸಕ ಎನ್‌.ಎಚ್‌. ಕೋನರಡ್ಡಿ, ಎ.ಸಿ. ವಿರಕ್ತಮಠ, ಧಾಮುಲ್‌ ವ್ಯವಸ್ಥಾಪಕ ನಿರ್ದೇಶಕ ಸುರೇಶ ನಾಯಕ, ಕಾರ್ಯಕಾರಿ ಮಂಡಳಿಯ ಪಿ.ಎಚ್‌. ಕಿರೇಸೂರ, ಗಣಪತರಾವ ಮುಂಜಿ, ನಾರಾಯಣ ಕೋಪರ್ಡೆ, ವಿಲಾಸ ತಿಬೇಲಿ, ಕರೆಪ್ಪ ಸುಣಗಾರ, ಮನೋಜ ಸಂಗೊಳ್ಳಿ , ವಿಶಾಲ ಮರಡಿ ಇದ್ದರು.

ಹೇಮಾಕ್ಷಿ ಕಿರೇಸೂರ, ಅನುರಾಧ ಆಕಳವಾಡಿ, ಸಿದ್ದು ಕಂಬಾರ, ಮಲ್ಲನಗೌಡ ಪಾಟೀಲ, ಎಂ.ಎಫ್‌. ಹಿರೇಮಠ, ದ್ಯಾಮಣ್ಣ ರೇವಣ್ಣವರ, ನಿಂಗಣ್ಣ ಹೊಂಗಲ, ಪ್ರಕಾಶ ಪಾಟೀಲ, ಆನಂದ ಜಾಧವ, ಪ್ರವೀಣ ಕದಂ, ಆಕಾಶ ಕಪಲಿ, ವಿಶಾಲ ಮರಡಿ, ಹರ್ಷವರ್ಧನ ಪಟ್ಯಾಳ ಮತ್ತಿತರರು ಉತ್ಸವದ ಯಶಸ್ಸಿಗೆ ಶ್ರಮಿಸಿದರು.