ಹುಬ್ಬಳ್ಳಿ[ಅ.16]: ಉತ್ತರ ಕರ್ನಾಟಕದಲ್ಲಿ ಭಾರೀ ಮಳೆಯಾದ ಪರಿಣಾಮ ಅತಿವೃಷ್ಟಿ ಉಂಟಾಗಿದ್ದರೂ, ‘ಮೋಡ ಬಿತ್ತನೆ’ ಮಾತ್ರ ಮುಂದುವರೆದಿದೆ. ಸ್ವತಃ ಸಿಎಂ ಯಡಿಯೂರಪ್ಪ ಅವರೇ ಕರೆ ಮಾಡಿ ಸೂಚಿಸಿದ್ದರೂ ಮೋಡ ಬಿತ್ತನೆ ಮಾಡುವುದನ್ನು ಗುತ್ತಿಗೆ ಪಡೆದ ಏಜೆನ್ಸಿ ನಿಲ್ಲಿಸುತ್ತಿಲ್ಲ ಎಂದು ತಿಳಿದು ಬಂದಿದೆ.

ಉತ್ತರ ಕರ್ನಾಟಕದಲ್ಲಿ ಮುಂಗಾರು ವಿಳಂಬವಾದ ಕಾರಣ ಈ ಹಿಂದಿನ ಸಮ್ಮಿಶ್ರ ಸರ್ಕಾರ ಮೋಡ ಬಿತ್ತನೆಗೆ ಆದೇಶಿಸಿತ್ತು. ಮಾಜಿ ಸ್ಪೀಕರ್‌ ಕೆ.ಬಿ. ಕೋಳಿವಾಡ ಅವರ ಪುತ್ರ ಪ್ರಕಾಶ ಕೋಳಿವಾಡಗೆ ಮಾಲೀಕತ್ವದ ಖ್ಯಾತಿ ಕ್ಲೈಮೇಟ್‌ ಮಾಡಿಫಿಕೇಶನ್‌ ಕನ್ಸಲ್ಟಂಟ್‌ ಮೋಡ ಬಿತ್ತನೆ ಗುತ್ತಿಗೆ ಪಡೆದಿತ್ತು. ಆ.1ರಂದು ಹುಬ್ಬಳ್ಳಿ ಜಿಲ್ಲಾಧಿಕಾರಿ ದೀಪಾ ಚೋಳನ್‌ ಮೋಡ ಬಿತ್ತನೆಗೆ ಚಾಲನೆ ನೀಡಿದ್ದರು. ಇದಾಗಿ ಎರಡೇ ದಿನಕ್ಕೆ ಉತ್ತರ ಕರ್ನಾಟಕಾದ್ಯಂತ ಮಳೆ ಅಬ್ಬರಿಸಿ, ಪ್ರವಾಹ ಉಂಟಾಗಿತ್ತು.

ಆದರೂ ನಿಂತಿಲ್ಲ ಬಿತ್ತನೆ:

ಈ ನಡುವೆ ಮಳೆ ಸುರಿಯುತ್ತಿದ್ದರೂ ಮೋಡ ಬಿತ್ತನೆಯನ್ನೂ ಮಾತ್ರ ಗುತ್ತಿಗೆ ಪಡೆದ ಏಜೆನ್ಸಿ ನಿಲ್ಲಿಸುತ್ತಲೇ ಇಲ್ಲ. ನಿರಂತರವಾಗಿ ಮೋಡ ಬಿತ್ತನೆ ಮಾಡುತ್ತಿಲ್ಲವಾದರೂ ವಾರಕ್ಕೊಮ್ಮೆ ಅಥವಾ ಎರಡು ಬಾರಿ ಮೋಡ ಬಿತ್ತನೆ ಮಾಡುತ್ತಲೇ ಇದೆ. ವರ್ಷಧಾರೆ ಯೋಜನೆಯಡಿ ಈವರೆಗೆ 50 ದಿನಗಳ ಕಾಲ ಮೋಡ ಬಿತ್ತನೆ ಕಾರ್ಯ ನಡೆಸಲಾಗಿದೆ.

90 ದಿನಗಳ ಕಾಲದ ಮೋಡ ಬಿತ್ತನೆಗೆ 45 ಕೋಟಿ ರು. ನೀಡಲಾಗುತ್ತಿದೆ. ಒಪ್ಪಂದದ ಪ್ರಕಾರ 90 ದಿನಗಳಲ್ಲಿ 400 ಗಂಟೆ ಕಾರ್ಯಾಚರಣೆ ನಡೆಸಬೇಕಾಗುತ್ತದೆ. ಈಗಾಗಲೇ ಹಾವೇರಿ, ಗದಗ, ಬಳ್ಳಾರಿ, ಬೆಳಗಾವಿ, ವಿಜಯಪುರ, ಯಾದಗಿರಿ, ರಾಯಚೂರು, ಬಾಗಲಕೋಟೆ, ಕಲಬುರಗಿ ಜಿಲ್ಲೆಗಳಲ್ಲಿ ಮೋಡ ಬಿತ್ತನೆ ನಡೆಸಲಾಗಿದೆ. ಸೆ.19ರಂದು ಜಮಖಂಡಿ, ಬೀಳಗಿ, ವಿಜಯಪುರ, ಇಂಡಿಗಳಲ್ಲಿ ಮೋಡ ಬಿತ್ತನೆ ನಡೆಸಲಾಗಿದೆ. ಅ.28ರ ವರೆಗೆ ಮೋಡಬಿತ್ತನೆ ಕಾರ್ಯ ಮುಂದುವರಿಯಲಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಬಗ್ಗೆ ಮಾತನಾಡಿದ ಸಚಿವ ಜಗದೀಶ ಶೆಟ್ಟರ್‌ ಅವರು, ಮೋಡ ಬಿತ್ತನೆ ಹಿಂದಿನ ಸರ್ಕಾರದ ಯೋಜನೆ. ಮಳೆಯಾಗುತ್ತಿದೆ ಮೋಡ ಬಿತ್ತನೆ ಅವಶ್ಯಕತೆ ಇಲ್ಲ ಎಂದು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ಆದರೂ ಮೋಡ ಬಿತ್ತನೆ ಮಾಡಿದ್ದಾರೆ. ಮೋಡ ಬಿತ್ತನೆ ಅಗತ್ಯವಿರಲಿಲ್ಲ ಎಂದು ಹೇಳಿದ್ದಾರೆ. 

ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಇಂಥ ಸಮಯದಲ್ಲಿ ಮೋಡ ಬಿತ್ತನೆ ಮಾಡುತ್ತಿರುವುದು ಎಷ್ಟು ಸರಿ. ಮೋಡ ಬಿತ್ತನೆ ಮಡಿಸುವುದನ್ನು ಬಿಟ್ಟು ಪ್ರವಾಹ ಪರಿಸ್ಥಿತಿ ಎದುರಿಸಿದವರಿಗೆ ಪರಿಹಾರ ಕೊಡಲು ಕ್ರಮ ಕೖಗೊಳ್ಳಬೇಕು ಎಂದು ರೈತ ಮುಖಂಡ ಶಿವಣ್ಣ ಅವರು ಹೇಳಿದ್ದಾರೆ.