ಹುಬ್ಬಳ್ಳಿ(ನ.9): ಅಯೋಧ್ಯೆ ರಾಮ ಜನ್ಮಭೂಮಿ ತೀರ್ಪು ಪ್ರಕಟವಾಗಲಿರುವ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಪೊಲೀಸ್ ಕಟ್ಟೆಚ್ಚರ ವಹಿಸಲಾಗಿದೆ. ನಗರದಲ್ಲಿ ಶಾಂತಿ ಕಾಪಾಡಲು ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ. ಎಲ್ಲ ಪೊಲೀಸ್ ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿದೆ ಎಂದು ಕಮಿಷನರ್ ಆರ್.ದಿಲೀಪ್ ಅವರು ಹೇಳಿದ್ದಾರೆ. 

ಶನಿವಾರ ಈ ಸಂಬಂಧ ಮಾಹಿತಿ ನೀಡಿದ ಆರ್.ದಿಲೀಪ್ ಅವರು, ಕಮ್ಯೂನಲ್ ಗುಂಡಾಗಳ ಮೇಲೆ ತೀವ್ರ ನಿಗಾ ಇರಿಸಲಾಗಿದೆ. ಅವಳಿ ನಗರದಲ್ಲಿ ಶಾಂತಿ-ಸುವ್ಯವಸ್ಥೆ ಕದಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ನಗರದೆಲ್ಲೆಡೆ 5 ಕೆಎಸ್ಆರ್ಪಿ, ಸಿಎಆರ್ ತುಕಡಿ ನಿಯೋಜನೆ ಮಾಡಲಾಗಿದೆ. ಅಯಕಟ್ಟಿನ ಜಾಗದಲ್ಲಿ ಪಿಕೆಟ್ ಪಾಯಿಂಟ್ ಹಾಕಲಾಗಿದೆ.ಸೂಕ್ಷ್ಮ ಸ್ಥಳಗಳಲ್ಲಿ ಸಿಸಿಟವಿ ಅಳವಡಿಸಲಾಗಿದೆ ಎಂದು ತಿಳಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಅವಳಿ ನಗರದಾದ್ಯಂತ ಈಗಾಗಲೇ ಮುಂಜಾಗ್ರತಾ ಕ್ರಮವಾಗಿ ಸೆ 144 ಕಲಂ ನಿಷೇದಾಜ್ಞೆ ಜಾರಿ ಮಾಡಲಾಗಿದೆ. ಮದ್ಯ ಮಾರಾಟ, ಪಟಾಕಿ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ಕಿಡಿಗೇಡಿಗಳ ಪೋನ್ ಕರೆಗಳನ್ನು, ವಾಟ್ಸಪ್ ಸಂದೇಶಗಳ ಮೇಲೆ ನಿಗಾವಹಿಸಲಾಗಿದೆ. ಯಾವುದೇ ವದಂತಿಗಳನ್ನು ಹರಡದಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ. 

ಜಿಲ್ಲಾಧಿಕಾರಿ, ಎಸ್ಪಿ, ತಹಶಿಲ್ದಾರರ ಮಟ್ಟದಲ್ಲಿ ಸಭೆಗಳನ್ನು ನಡೆಸಿ‌ ಜನರಿಗೆ ಮನವಿ ಮಾಡಲಾಗಿದೆ.ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ತಲೆಬಾಗುವುದಾಗಿ ಎಲ್ಲರು ಒಪ್ಪಿದ್ದಾರೆ. ತೀರ್ಪಿಗೆ ಎಲ್ಲರು ತಲೆಬಾಗಲೇಬೇಕು ಎಂದು ತಿಳಿಸಿದ್ದಾರೆ.