ರಾಜ್ಯ ಸೇರಿ ದೇಶದೆಲ್ಲೆಡೆ ಡೆಂಗ್ಯೂ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಇದು ಸಹಜವಾಗಿಯ ಜನರಲ್ಲಿ ವಿಪರೀತ ಆತಂಕ ಸೃಷ್ಟಿಸಿದೆ. ಅಲ್ಲದೇ ಈ ರೋಗ ಹಾಗೂ ರೋಗ ತರುವ ಸೊಳ್ಳೆ ಬಗ್ಗೆ ಹಲವು ತಪ್ಪು ಕಲ್ಪನೆಗಳು ಮತ್ತು ಮಾಹಿತಿ ಕೊರತೆಯಿಂದ ಸೊಳ್ಳೆ ಹೇಗೆ, ಎಲ್ಲಿ ಉತ್ಪತ್ತಿಯಾಗುತ್ತದೆ ಎಂಬುವುದೇ ಜನರ ಅರಿವಿಗೆ ಬರುತ್ತಿಲ್ಲ. ಇದರಿಂದಲೂ ಮಂದಿ ಮತ್ತಷ್ಟು ಭಯ ಭೀತರಾಗುತ್ತಿದ್ದಾರೆ.

ಎಲ್ಲರೂ ನಂಬಿರುವಂತೆ ಡೆಂಗ್ಯೂ ಸೊಳ್ಳೆಗಳು ನಿಂತ ಕೊಳಕು ನೀರಲ್ಲಿ ಮಾತ್ರವಲ್ಲ, ಸ್ವಚ್ಛ, ಶುದ್ಧ ನೀರಲ್ಲೂ ಮೊಟ್ಟೆ ಇಡಬಹುದು. ಅದಕ್ಕೆ ಎಸಿ ನೀರು, ಅಲಂಕೃತ ಕಾರಂಜಿ, ಪ್ರಾಣಿಗಳಿಗೆ ಕುಡಿಯಲು ಇಡುವ ನೀರು ಹಾಗೂ ಸಣ್ಣ ಹಾಗೂ ದೊಡ್ಡ ಕೊಳಗಳ ನೀರಿನ ಬಗ್ಗೆಯೂ ಜಾಗರೂಕರಾಗಿರುವುದು ಮುಖ್ಯ.

ಒಮ್ಮೆ ಬಂದ ಡೆಂಗ್ಯೂ ಮತ್ತೆ ಬರೋಲ್ಲ ಎನ್ನೋದು ಸುಳ್ಳು

ಇಂಥ ನೀರಿರುವ ಪಾತ್ರೆ ಮೇಲೆ ಸೊಳ್ಳೆಗಳು ಮೊಟ್ಟೆಗಳನ್ನಿಡುತ್ತವೆ. ನಂತರ ಅವು ನೀರಲ್ಲಿ ಮುಳುಗುತ್ತವೆ. ಮೊಟ್ಟೆಗಳನ್ನಿಡಲು ಜಾಗ ಹುಡುಕಲು ಡೆಂಗ್ಯೂ ಸೊಳ್ಳೆಗಳು ನೂರು ಗಜಗಳಷ್ಟು ದೂರ ಹಾರಬಲ್ಲವು. ಅದಕ್ಕೆ ಸೊಳ್ಳೆ ನೀಯಂತ್ರಣಕ್ಕೆ ಸುತ್ತಮುತ್ತಲಿನ ಪರಿಸರವನ್ನು ಎಷ್ಟು ಸ್ವಚ್ಛವಾಗಿಟ್ಟುಕೊಂಡರೂ ಸಾಲದು. ಒಬ್ಬರು ತಮ್ಮ ಮನೆಯನ್ನು ಸ್ವಚ್ಛವಾಗಿಟ್ಟುಕೊಂಡು, ಪಕ್ಕದ ಮನೆಯಲ್ಲಿ ಕೊಳಕಿನಿಂದ ಗಬ್ಬು ನಾರುತ್ತಿದ್ದರೂ ಸೊಳ್ಳೆ ಉತ್ಪತ್ತಿಯಾಗುವುದರಲ್ಲಿ ಅನುಮಾನವೇ ಇಲ್ಲ. ಆದರೆ, ಸೊಳ್ಳೆಗಳು ರಸ್ತೆ ಬದಿಯ ಚಾನೆಲ್, ಕ್ಯಾನಲ್, ಜೌಗು ಪ್ರದೇಶ, ನದಿ ಅಥವಾ ಕೆರೆಯಲ್ಲಿ ಮೊಟ್ಟೆ ಇಡುವುದಿಲ್ಲ.

ನೀರು ನಿಂತ ಜಾಗಕ್ಕೆ ಕ್ಲೋರೀನ್ ಹಾಕಿದರೆ ಸೊಳ್ಳೆ ಸಂತತಿ ನಾಶವಾಗುತ್ತದೆ ಎಂದು ಕೆಲವರು ನಂಬಿದ್ದಾರೆ. ಅದೂ ತಪ್ಪು ಕಲ್ಪನೆ. ನಿಂತ ನೀರನ್ನು ಸ್ವಚ್ಛಗೊಳಿಸುವುದೇ ಸೊಳ್ಳೆ ನಾಶಕ್ಕಿರುವ ಏಕೈಕ ಸೊಲ್ಯೂಷನ್. ಕ್ಲೋರಿನ್‌ ಆಗಲಿ, ರಾಸಾಯನಿಕಗಳಾಗಲಿ ಡೆಂಗ್ಯೂನಂಥ ರೋಗ ತರುವ ಸೊಳ್ಳೆಯನ್ನು ನಾಶಗೊಳಿಸಲು ಆಗುವುದಿಲ್ಲ.

ಎಲ್ಲ ನೀರಿನ ಪಾತ್ರೆಗಳಿಗೂ ಬಿಗಿ ಮುಚ್ಚಳವಿರುವಂತೆ ನೋಡಿಕೊಳ್ಳಿ. ಶುದ್ಧ ನೀರಿರುವ ಸ್ಥಳದಲ್ಲಿಯೂ ಸೊಳ್ಳೆಗಳು ಉತ್ಪತ್ತಿಯಾಗುವುದರಿಂದ ಕಾರಂಜಿ, ಕೃತಕ ಸರೋವರಗಳಲ್ಲಿಯೂ ನೀರು ಹರಿಯುವಂತೆ ನೋಡಿಕೊಳ್ಳಬೇಕು. ಸೊಳ್ಳೆ ಮೊಟ್ಟೆಗಳು ಹಾಗೂ ಕೀಟಗಳನ್ನು ತಿನ್ನುವಂತೆ ಗಪ್ಪಿಗಳು ಹಾಗೂ ಬೀಟಾಗಳಂಥ ಮೀನುಗಳನ್ನು ಇಂಥ ನೀರಲ್ಲಿ ಬಿಡಬೇಕು.

ರಾತ್ರಿಯಲ್ಲೂ ಸೊಳ್ಳೆ ಸಕ್ರಿಯ, ಇರಲಿ ಎಚ್ಚರ

ಸೂಕ್ಷ್ಮವಾಗಿ ಗಮನಿಸಿದರೆ ಮನೆಯ ಸುತ್ತ ನೀರು ನಿಂತಿರುವುದು ಹಾಗೂ ನೀರನ್ನು ಸಂಗ್ರಹಿಸಿಟ್ಟಿರುವುದು ಕಾಣಿಸುತ್ತದೆ. ಅದನ್ನು ವಾರಕ್ಕೊಮ್ಮೆಯಾದರೂ ಸ್ವಚ್ಛಗೊಳಿಸಬೇಕು. ಇದರಿಂದ ಡೆಂಗ್ಯೂ ಸೊಳ್ಳೆಗಳ ಸಂತಾನೋತ್ಪತ್ತಿ ನಿಯಂತ್ರಿಸುವುದಲ್ಲದೇ, ಅಂಥ ರೋಗವನ್ನು ಹರಡುವ ಸೊಳ್ಳೆಗಳ ಉತ್ಪಾದನೆಯನ್ನೂ ನಿಯಂತ್ರಿಸುತ್ತದೆ. ಒಂದೇ ಒಂದು ಸೊಳ್ಳೆಯೂ ಮಾರಾಣಾಂತಿಕವಾಗಬಲ್ಲದು. ಅದಕ್ಕೆ ಸೊಳ್ಳೆ ನಮ್ಮನ್ನು ಕೊಲ್ಲುವ ಮುನ್ನ ಅವನ್ನು ಮೊದಲು ಕೊಂದು ಬಿಡಿ.