ಜುಲೈ 15ರಿಂದ ಹೆದ್ದಾರಿ ಸೇರಿದಂತೆ ಟೋಲ್ ರಸ್ತೆಗಳಲ್ಲಿ ದ್ವಿಚಕ್ರವಾಹನ ಸವಾರರು ಟೋಲ್ ಪಾವತಿಸಬೇಕು ಅನ್ನೋ ಸುದ್ದಿ ಹರಿದಾಡುತ್ತಿದೆ. ಈ ಕುರಿತು ಕೇಂದ್ರ ಸಚಿವ ನಿತಿನ್ ಗಡ್ಕರಿ ಸ್ಪಷ್ಟನೆ ನೀಡಿದ್ದಾರೆ.
ನವದೆಹಲಿ (ಜೂ.26) ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಗಳ ಟೋಲ್ ಪಾವತಿಯಿಂದ ದ್ವಿಚಕ್ರ ವಾಹನಗಳಿಗೆ ವಿನಾಯಿತಿ ನೀಡಲಾಗಿದೆ. ಕೆಲ ರಸ್ತೆಗಳನ್ನು ಹೊರತುಪಡಿಸಿ ಬಹುತೇಕ ರಸ್ತೆಗಳ ಟೋಲ್ ಪ್ಲಾಜಾ ಬಳಿ ದ್ವಿಚಕ್ರ ವಾಹನ ಸವಾರರಿಗೆ ಕಿರಿದಾದ ದಾರಿ ಬಿಟ್ಟಿರುತ್ತಾರೆ. ಆದರೆ ಕೆಲ ದಿನಗಳಿಂದ ದ್ವಿಚಕ್ರ ವಾಹನ ಸವಾರರಿಗೂ ಟೋಲ್ ಪಾವತಿ ಜಾರಿಯಾಗುತ್ತಿದೆ. ಜುಲೈ 15 ರಿಂದ ದ್ವಿಚಕ್ರ ವಾಹನ ಸವಾರರು ಟೋಲ್ ಪಾವತಿಸಬೇಕು ಅನ್ನೋ ಸುದ್ದಿಗಳು ಹರಿದಾಡುತ್ತಿದೆ. ಇದರ ಬೆನ್ನಲ್ಲೇ ಕೇಂದ್ರ ರಸ್ತೆ ಹಾಗೂ ಸಾರಿಗೆ ಸಚಿವೆ ನಿತಿನ್ ಗಡ್ಕರಿ ಸ್ಪಷ್ಟನೆ ನೀಡಿದ್ದಾರೆ. ಈ ವರದಿಯನ್ನು ಗಡ್ಕರಿ ತಳ್ಳಿ ಹಾಕಿದ್ದಾರೆ.
ಬೈಕ್ ಸ್ಕೂಟರ್‌ಗೆ ಟೋಲ್ ಟ್ಯಾಕ್ಸ್
ಬೈಕ್ ಸೇರಿದಂತೆ ದ್ವಿಚಕ್ರ ವಾಹನಗಳಿಂದ ಟೋಲ್ ಸಂಗ್ರಹಿಸುವ ಯಾವುದೇ ಪ್ರಸ್ತಾವನೆ ಕೇಂದ್ರ ಸರ್ಕಾರದ ಮುಂದಿಲ್ಲ ಎಂದು ನಿತಿನ್ ಗಡ್ಕರಿ ಸ್ಪಷ್ಟಪಡಿಸಿದ್ದಾರೆ. ಸೋಶಿಯಲ್ ಮೀಡಿಯಾ ಸೇರಿದಂತೆ ಕೆಲ ವೇದಿಕೆಗಳಲ್ಲಿ ಟೋಲ್ ಪಾವತಿ ಕುರಿತು ಸುದ್ದಿಗಳು ಹರಿದಾಡುತ್ತಿದೆ. ಕೇಂದ್ರ ಸರ್ಕಾರ ಈಗಿರುವ ನೀತಿಯಂತೆ ಮುಂದುವರಿಯಲಿದೆ. ದ್ವಿಚಕ್ರ ವಾಹನ ಸವಾರರಿಗೆ ಟೋಲ್ ಪಾವತಿ ಇರುವುದಿಲ್ಲ ಎಂದು ನಿತಿನ್ ಗಡ್ಕರಿ ಸ್ಪಷ್ಟಪಡಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ದ್ವಿಚಕ್ರ ವಾಹನಗಳಿಗೆ ಟೋಲ್ ಪಾವತಿ ಇರುವುದಿಲ್ಲ. ಈ ನೀತಿಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಈ ರೀತಿಯ ಬದಲಾವಣೆ ಪ್ರಸ್ತಾವನೆ ಕೇಂದ್ರ ಸರ್ಕಾರದ ಮುಂದಿಲ್ಲ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.
ಎಕ್ಸ್‌ಪ್ರೆಸ್‌ವೇಗೆ ದ್ವಿಚಕ್ರ ವಾಹನ ಪ್ರವೇಶಕ್ಕೆ ಅವಕಾಶವಿದೆಯಾ?
ಬೆಂಗಳೂರು-ಮೈಸೂರು ಸೇರಿದಂತೆ ರಾಷ್ಟ್ರೀಯ ಎಕ್ಸ್‌ಪ್ರೆಸ್ ವೇಗಳಲ್ಲಿ ದ್ವಿಚಕ್ರ ವಾಹನ, ಆಟೋ ರಿಕ್ಷಾಗಳಿಗೆ ಅವಕಾಶವಿಲ್ಲ. ಈ ನಿಯಮ ಸಡಿಲ ಮಾಡಲು ಹಲವು ಮನವಿಗಳು ಸಲ್ಲಿಕೆಯಾಗಿದೆ. ಇತ್ತೀಚೆಗೆ ಎಕ್ಸ್‌ಪ್ರೆಸ್‌ವೇಗಳಲ್ಲಿ ದ್ವಿಚಕ್ರ ವಾಹನ, ಆಟೋ ರಿಕ್ಷಾಗಳಿಗೆ ಪ್ರವೇಶಕ್ಕೆ ಅವಕಾಶ ನೀಡಬೇಕು ಅನ್ನೋ ಒತ್ತಾಯ ಕೇಳಿಬರುತ್ತಿದ್ದಂತೆ ನಿತಿನ್ ಗಡ್ಕರಿ ಸ್ಪಷ್ಟನೆ ನೀಡಿದ್ದಾರೆ. ಎಕ್ಸ್‌ಪ್ರೆಸ್ ವೇನಲ್ಲಿ ದ್ವಿಚಕ್ರ ವಾಹನ ಹಾಗೂ ಆಟೋ ಪ್ರವೇಶ ಅಕ್ರಮವಾಗಿದೆ. ಈ ನಿಯಮದಲ್ಲಿ ಯಾವುದೇ ಸಡಿಲಿಕೆ ಇಲ್ಲ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.
ಟೋಲ್ ದರ ಇಳಿಕೆಯಾಗುತ್ತಾ?
ಹಲವು ಹೆದ್ದಾರಿಗಳಲ್ಲಿ ಟೋಲ್ ದರ ದುಬಾರಿಯಾಗಿದೆ. ಇದೇ ವೇಳೆ ಹಲವು ಪ್ರತಿಭಟನೆ ಹೋರಾಟಗಳು ನಡೆದಿದೆ. ಆದರೆ ಟೋಲ್ ದರ ಇಳಿಕೆ ಯಾಗುವುದಿಲ್ಲ ಅನ್ನೋದು ಸ್ಪಷ್ಟವಾಗಿದೆ.
ಹೊಸ ಮಾದರಿಯಲ್ಲಿ ಟೋಲ್ ಸಂಗ್ರಹ
ಜಿಪಿಎಸ್ ಆಧಾರಿತ ಟೋಲ್ ಸಂಗ್ರಹಕ್ಕೆ ಕೇಂದ್ರ ಸರ್ಕಾರ ಒತ್ತು ನೀಡುತ್ತಿದೆ. ಪ್ರಾಯೋಗಿಕವಾಗಿ ಕೆಲ ಹೆದ್ದಾರಿಗಳಲ್ಲಿ, ಎಕ್ಸ್‌ಪ್ರೆಸ್‌ವೇಗಳಲ್ಲಿ ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ಜಾರಿಗೆ ತರಲು ಕೇಂದ್ರ ಸರ್ಕಾರ ಕಸರತ್ತು ನಡೆಸುತ್ತಿದೆ. ಈ ಮೂಲಕ ಹೆದ್ದಾರಿಯಲ್ಲಿ ಎಷ್ಟು ದೂರ ಕ್ರಮಿಸುತ್ತೀರೋ, ಅಷ್ಟು ದೂರ ಮಾತ್ರ ಪಾವತಿ ಮಾಡುವ ವ್ಯವಸ್ಥೆ ಜಾರಿಗೆ ತರಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಶ್ರಮಿಸುತ್ತಿದೆ. ಹೊಸ ವ್ಯವಸ್ಥೆಯಿಂದ ಟೋಲ್ ರಸ್ತೆ ಪ್ರವೇಶಿಸಿ ಪ್ಲಾಜಾ ಬರುತ್ತಿದ್ದಂತೆ ಸರ್ವೀಸ್ ರಸ್ತೆಗೆ ಇಳಿಯುವ ವಾಹನ ಸವಾರರಿಗೂ ಕಡಿವಾಣ ಬೀಳಲಿದೆ.
