ಹೊಚ್ಚ ಹೊಸ ಕಾರಿನಲ್ಲಿ ಮನೆಗೆ ಬಂದ ಮಾಲೀಕ, ಪಾರ್ಕ್ ಮಾಡಿದ್ದ ಬೈಕ್ ಮೇಲೆ ಹತ್ತಿಸಿ ಅಪಘಾತ!
ಹೊಸ ಕಾರು ಖರೀದಿಸಬೇಕು ಅನ್ನೋದು ಬಹುತೇಕರ ಕನಸು. ಇದು ನನಸಾದರೆ ಆನಂದ ಅಷ್ಟಿಷ್ಟಲ್ಲ. ಹೀಗೆ ಬಹುದಿನಗಳ ಕನಸು ನನಸು ಮಾಡಿ ಹೊಸ ಕಾರಿನಲ್ಲಿ ಮನೆಗೆ ಬಂದ ಮಾಲೀಕನಿಗೆ ಬಹುದೊಡ್ಡ ಶಾಕ್ ಕಾದಿತ್ತು. ಅಪಾರ್ಟ್‌ಮೆಂಟ್ ಮುಂದೆ ನಿಲ್ಲಿಸಿದ ಬೈಕ್ ಮೇಲೆ ಹತ್ತಿಸಿದ ಘಟನೆ ನಡೆದಿದೆ. ಮನೆಯ ಪಾರ್ಕಿಂಗ್ ಜಾಗ ಸೇರುವ ಮೊದಲೇ ಕಾರು ಪುಡಿಯಾಗಿದೆ
ಮುಂಬೈ(ಅ.08): ಹೊಸ ಕಾರು ಖರೀದಿಸಿದಾಗ ಕೆಲವರಿಗೆ ಡ್ರೈವಿಂಗ್ ಸಮಸ್ಸೆ ಎದುರಾಗುವುದು ಸಾಮಾನ್ಯ. ಆದರೆ ಅಲ್ಪ ಸ್ವಲ್ಪ ಡ್ರೈವಿಂಗ್ ಗೊತ್ತಿದ್ದೂ ತನ್ನದೇ ಕಾರು ಎಂದು ಚಲಾಯಿಸಿದರೆ ಕಷ್ಟ. ಕಾರು ಡೆಲಿವರಿ ವೇಳೆ ಮಾಲೀಕರ ಎಡವಟ್ಟ, ಡೆಲಿವರಿ ಪಡೆದ ಬೆನ್ನಲ್ಲೇ ಕಾರು ಅಪಘಾತ ಸುದ್ದಿಗಳನ್ನು ನೋಡಿದ್ದೇವೆ. ಇದೀಗ ಶೋರೂಂನಿಂದ ಹೊಚ್ಚ ಹೊಸ ಕಾರು ಡೆಲಿವರಿ ಪಡೆದು ಸಲೀಸಾಗಿ ಮನೆಗೆ ಆಗಮಿಸಿದ ಮಾಲೀಕ, ಅಪಾರ್ಟ್‌ಮೆಂಟ್ ಮುಂಭಾಗಕ್ಕೆ ಬರುತ್ತಿದ್ದಂತೆ ಹರ್ಷ, ಉತ್ಸಾಹ ಉಕ್ಕಿದೆ. ಅದ್ಯಾಕೋ ಏನೋ ಕಾರು ಬ್ಯಾಲೆನ್ಸ್ ತಪ್ಪಿದೆ. ಪಾರ್ಕ್ ಮಾಡಿದ್ದ ಹಲವು ಬೈಕ್ ಮೇಲೆ ಕಾರು ಹತ್ತಿದೆ. ಇನ್ನೇನು ಪಲ್ಟಿಯಾಬೇಕು ಅನ್ನುವಷ್ಟರಲ್ಲೇ ಕಾರು ನಿಲ್ಲಿಸಿದ್ದಾನೆ. ಇದರಿಂದ ಭಾರಿ ಅವಘಡವೊಂದು ತಪ್ಪಿದೆ. ಆದರೆ ಕಾರಿನ ಮುಂಭಾಗದ ಬಂಪರ್, ಟೈಯರ್, ವ್ಹೀಲ್ ಪುಡಿಯಾಗಿದೆ. ಇತ್ತ ನಿಲ್ಲಿಸಿದ್ದ ಹಲವು ಬೈಕ್‌ಗಳು ನಜ್ಜು ಗುಜ್ಜಾಗಿದೆ. ಈ ವಿಡಿಯೋ ವೈರಲ್ ಆಗಿದೆ.
ಈ ಘಟನೆ ನಡೆದಿರುವುದು ಮುಂಬೈನಲ್ಲಿ. ಮುಂಬೈಕರ್ ಹೊಚ್ಚ ಹೊಸ ಟಾಟಾ ನೆಕ್ಸಾನ್(Tata Nexon Car) ಕಾರು ಖರೀದಿಸಿದ್ದಾನೆ. ನೆಕ್ಸಾನ್‌ಗೆ ಭಾರಿ ಬೇಡಿಕೆ ಇರುವ ಕಾರಣ ಹಲವು ದಿನಗಳ ಕಾಲ ಕಾದು ಕಾದು ಸುಸ್ತಾದ ಮಾಲೀಕನಿಗೆ ಕೊನೆಗೂ ಡೆಲಿವರಿ(Car Delivery) ದಿನಾಂಕ ಬಂದೇ ಬಿಟ್ಟಿದೆ. ಎಲ್ಲಾ ತಯಾರಿಯೊಂದಿಗೆ ಶೋ ರೂಂಗೆ ತೆರಳಿದ ಮಾಲೀಕ, ಕಾರಿಗೆ ಪೂಜೆ ಮಾಡಿಸಿದ್ದಾನೆ. ಹೂವಿನ ಅಲಂಕಾರ ಮಾಡಿಸಿ ಕಾರನ್ನು ಮನೆಗೆ ತಂದಿದ್ದಾನೆ.
Mahindra Thar ಕಾರು ಡೆಲಿವರಿ ವೇಳೆ ಗ್ರಾಹಕನ ಎಡವಟ್ಟು, ಶೋ ರೂಂ ಗಾಜು ಪುಡಿ ಪುಡಿ, ಅತೀ ದೊಡ್ಡ ದುರಂತದಿಂದ ಪಾರು!
ಶೋ ರೂಂನಿಂದ ಮನೆವರೆಗೆ ಬಂದ ಮಾಲೀಕ, ಇನ್ನೇನು ಎರಡು ನಿಮಿಷದಲ್ಲಿ ಕಾರು ಪಾರ್ಕ್ ಮಾಡಬೇಕಿತ್ತು. ಅಪಾರ್ಟ್‌ಮೆಂಟ್ ಮುಂಭಾಗಕ್ಕೆ ಬಂದ ಮಾಲೀಕನಿಗೆ ಕಾರು ಗೇಟ್ ಓಪನ್ ಮಾಡಿ ಕೊಡಲಾಯಿತು. ನಿಧಾನವಾಗಿ ಕಾರು ಅಪಾರ್ಟ್‌ಮೆಂಟ್ ಆವರಣದೊಳಗೆ ಪ್ರವೇಶಿಸಿತು. ಎಲ್ಲವೂ ಸರಿಯಾಗೇ ಇತ್ತು. ಆದರೆ ಆವರಣ ಒಳಗೆ ಪ್ರವೇಶಿಸುತ್ತಿದ್ದಂತೆ ಮಾಲೀಕನ ಸಂತೋಷ, ಉತ್ಸಾಹ ಇಮ್ಮಡಿಯಾಗಿದೆ. ಇದೇ ವೇಳೆ ಬ್ಯಾಲೆನ್ಸ್ ಕೂಡ ತಪ್ಪಿದೆ.
ಮುಂಭಾಗದಲ್ಲಿ ಹಲವು ಬೈಕ್ ಪಾರ್ಕ್ ಮಾಡಲಾಗಿತ್ತು. ಕಾರು ನೇರವಾಗಿ ಈ ಬೈಕ್(Accident) ಮೇಲೆ ಹತ್ತಿದೆ. ಬೈಕ್ ಮೇಲೆ ಹತ್ತಿದ ಕಾರು ಒಂದೇ ಸಮನೇ ಬಲಭಾಗಕ್ಕೆ ವಾಲಿದೆ. ಇನ್ನೇನು ಕಾರು ಪಲ್ಟಿಯಾಗಬೇಕು ಅನ್ನುಷ್ಟರಲ್ಲಿ ಕಾರು ಮತ್ತೆ ಸರಿಯಾಗಿದೆ. ಇದೇ ವೇಳೆ ಮಾಲೀಕನ ಸಂಬಂಧಿಕ ಓಡೋಡಿ ಬಂದಿದ್ದಾನೆ. ಅತ್ತ ಸೆಕ್ಯೂರಿಟಿ ಕೂಡ ಓಡಿ ಬಂದಿದ್ದಾರೆ. ಅಷ್ಟರಲ್ಲೇ ದೊಡ್ಡ ಅನಾಹುತವೊಂದು ತಪ್ಪಿದೆ.
ನೂತನ ಬೈಕ್ ಪಡೆದ ಸಂಭ್ರಮ, ಸವಾರನ ಸಾಹಸಕ್ಕೆ ಶೋ ರೂಂ ಮೆಟ್ಟಿಲು ಕಿತ್ತು ಬಂತು!
ಮಾಲಿಕನ ಎಡವಟ್ಟಿಗೆ 8 ರಿಂದ 9 ಬೈಕ್ ಮೇಲೆ ಕಾರು ಹತ್ತಿದೆ. ಬೈಕ್ ಸಂಪೂರ್ಣ ನಜ್ಜು ಗುಜ್ಜಾಗಿದೆ. ಇತ್ತ ಕಾರಿನ ಮುಂಭಾಗ, ಫಾಗ್ ಲೈಟ್, ವೀಲ್ ಸೇರಿದಂತೆ ಹಲವ ಭಾಗಳು ಪುಡಿಯಾಗಿದೆ. ಹೊಸ ಕಾರು ಮನೆಯಲ್ಲಿ ಪಾರ್ಕ್ ಮಾಡುವ ಕೆಲ ನಿಮಿಷಗಳ ಮುಂಚೆ ನಡೆದ ಈ ಘಟನೆ ಇದೀಗ ಮಾಲೀಕನ ತಲೆನೋವು ಹೆಚ್ಚಿಸಿದೆ.