ಟಾಟಾ ಕಾರ್ಮಿಕರ ಜೊತೆ ಮಹತ್ವದ ಸಂಧಾನ ಸಭೆ, ಸಚಿವರ ಸಮ್ಮುಖದಲ್ಲಿ ಸಮಸ್ಯೆ ಪರಿಹಾರ!
ಟಾಟಾ ಮಾರ್ಕೋಪೋಲೋ ಬಸ್ ಉತ್ಪಾದಕ ಸಂಸ್ಥೆಯಲ್ಲಿನ ಕಾರ್ಮಿಕರ ಧರಣಿ ತೀವ್ರಗೊಂಡ ಬೆನ್ನಲ್ಲೇ ಸರ್ಕಾರ ಹಾಗೂ ಕಂಪನಿ ಮಧ್ಯಪ್ರವೇಶಿಸಿ ಮಹತ್ವದ ಸಂಧಾನ ಸಭೆ ನಡೆಸಿದೆ. ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಸಮ್ಮುಖದಲ್ಲಿ ಸಮಸ್ಯೆ ಇತ್ಯರ್ಥ ಮಾಡಲಾಗಿದೆ.
ಬೆಂಗಳೂರು(ಜು.23): ದೇಶದ ಅತೀ ದೊಡ್ಡ ಆಟೋಮೊಬೈಲ್ ಸಂಸ್ಥೆ ಟಾಟಾ ಮೋಟಾರ್ಸ್‌ನ ಮಾರ್ಕೋಪೋಲೋ ಕಂಪನಿಯ ಧಾರಾವಾಡ ಶಾಖೆಯಲ್ಲಿ ತಲೆದೋರಿದ್ದ ಸಮಸ್ಯೆ ಪರಿಹಾರವಾಗಿದೆ. ಟಾಟಾ ಮಾರ್ಕೋಪೋಲೋ ಕಾರ್ಮಿಕರು ಹಾಗೂ ಕಂಪನಿ ನಡುವೆ ನಡೆದಿದ್ದ ಪ್ರತಿಭಟನೆ, ಧರಣಿ ಅಂತ್ಯಗೊಂಡಿದ್ದು, ಇದೀಗ ಕಂಪನಿ ಪುನರ್ ಆರಂಭಗೊಂಡಿದೆ. ಮಾರ್ಕೋಪೋಲೋ ಹಾಗೂ ಕಾರ್ಮಿಕರ ಸಂಘದ ಜೊತೆ ಸಂಧಾನ ಸಭೆ ನಡೆಸಿದ ರಾಜ್ಯ ಸರ್ಕಾರದ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹಾಗೂ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಸಮಸ್ಯೆ ಇತ್ಯರ್ಥ ಮಾಡುವಲ್ಲಿ ಯಶಸ್ವಿಯಾಗಿದೆ. ಕಂಪನಿ ಮತ್ತು ಅದರ ಕಾರ್ಮಿಕ ಒಕ್ಕೂಟಗಳು ಜೂನ್ 2016ರಲ್ಲಿ ಸಹಿ ಮಾಡಿದ್ದ ದೀರ್ಘಾವಧಿ ವೇತನ ಇತ್ಯರ್ಥ ಒಪ್ಪಂದವು ಮಾರ್ಚ್ 2020ಕ್ಕೆ ಮುಕ್ತಾಯಗೊಂಡಿದೆ. ಬಳಿಕ ಕಾರ್ಮಿಕರ ಪ್ರತಿಭಟನೆ ಆರಂಭಗೊಂಡಿದೆ. ಇದರಿಂದ ಉದ್ಭವವಾದ ಸಮಸ್ಯೆಯನ್ನು ಪರಿಹರಿಸಲಾಗಿದೆ.
ಉತ್ತರ ಕರ್ನಾಟಕದಲ್ಲಿ ಕೈಗಾರಿಕಾ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಗಾಗಿ ಟಾಟಾ ಮಾರ್ಕೊಪೋಲೊ ಮೋಟಾರ್ಸ್ ಲಿಮಿಟೆಡ್ (ಕಂಪನಿ) ಸಂಸ್ಥೆಯು ಬಸ್ ಗಳ ತಯಾರಿಕೆ ಘಟಕವನ್ನು 2008ರಲ್ಲಿ ಸ್ಥಾಪಿಸಿದೆ. 350 ಕೋಟಿ ರೂಪಾಯಿ ಹೂಡಿಕೆ ಮಾಡಲಾಗಿದೆ. ಆದರೆ ಇತ್ತೀಚೆಗೆ ಕಾರ್ಮಿಕರು ಹಾಗೂ ಕಂಪನಿ ನಡುವಿನ ಶೀತಲ ಸಮರ ತಾರಕಕ್ಕೇರಿತ್ತು. ಧಾರವಾಡ ಸ್ಥಾವರದಲ್ಲಿ ಒಕ್ಕೂಟವೊಂದರ ಜತೆಗೆ ಸಹಿ ಮಾಡಿದ ದೀರ್ಘಾವಧಿ ಒಪ್ಪಂದವಲ್ಲದೆ, ಮಾರ್ಚ್ 2022ರಲ್ಲಿ, ಕಂಪನಿಯು ತನ್ನ ಲಕ್ನೋ ಸ್ಥಾವರದಲ್ಲಿ ಕಾರ್ಮಿಕರ ಒಕ್ಕೂಟದೊಂದಿಗೆ ದೀರ್ಘಾವಧಿಯ ಒಪ್ಪಂದಕ್ಕೆ ಟಾಟಾ ಸಹಿ ಹಾಕಿತು. ಇದು ಬೆಳವಣಿಗೆ ಮತ್ತು ಉತ್ಪಾದಕತೆಯ ಮೇಲೆ ಕೇಂದ್ರೀಕರಿಸಲು ದಾರಿ ಮಾಡಿಕೊಟ್ಟಿತು. ಧಾರವಾಡ ಸ್ಥಾವರದ ಸ್ಪರ್ಧಾತ್ಮಕತೆ, ದೀರ್ಘಾವಧಿಯ ಬೆಳವಣಿಗೆ ಮತ್ತು ಸುಸ್ಥಿರತೆಯನ್ನು ಬೆಂಬಲಿಸಲು ಸೂಕ್ತ ಸರ್ಕಾರಿ ಸಂಸ್ಥೆಗಳು ಮತ್ತು ಒಕ್ಕೂಟಗಳಿಗೆ ತನ್ನ ಸಂಪೂರ್ಣ ಸಹಕಾರವನ್ನು ವಿಸ್ತರಿಸುವುದನ್ನು ಸಂಸ್ಥೆಯು ಮುಂದುವರೆಸಿದೆ.
ಕಂಪನಿಯು 1,240ಕ್ಕೂ ಹೆಚ್ಚು ಕಾರ್ಮಿಕರಿಗೆ ಖಾಯಂ ಉದ್ಯೋಗವನ್ನು ಒದಗಿಸಿದೆ.. ಈ ಪೈಕಿ 60% ಕ್ಕಿಂತ ಹೆಚ್ಚಿನವರು ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳಿಗೆ ಸೇರಿದವರು. ಉಳಿದ ಕೆಲಸಗಾರರಲ್ಲಿ ಬಹುತೇಕರು ಉತ್ತರ ಕರ್ನಾಟಕದ ಇತರ ಜಿಲ್ಲೆಗಳಿಂದ ಆಗಮಿಸಿದವರಾಗಿದ್ದಾರೆ. ಕಂಪನಿಯ ಪೂರೈಕೆದಾರರು ಮತ್ತು ಮಾರಾಟಗಾರರು ಈ ಪ್ರದೇಶದ 10,000ಕ್ಕೂ ಅಧಿಕ ಸ್ಥಳೀಯರಿಗೆ ಹೆಚ್ಚುವರಿ ಉದ್ಯೋಗವನ್ನು ಸೃಷ್ಟಿಸಲಾಗಿದೆ. ಕಂಪನಿಯು ಎಲ್ಲ ಮಧ್ಯಸ್ಥಗಾರರೊಂದಿಗೆ ಸಾಮರಸ್ಯದಿಂದ ಕೆಲಸ ಮಾಡುವುದರಲ್ಲಿ ನಂಬಿಕೆಯಿರಿಸಿದ್ದು. ತನ್ನ ಉದ್ಯೋಗಿಗಳ, ಅವರ ಕುಟುಂಬಗಳ ಹಾಗೂ ನೆರೆಯ ಸಮುದಾಯಗಳ ಕಲ್ಯಾಣಕ್ಕಾಗಿ ಪ್ರತಿ ವರ್ಷವೂ ಹಲವಾರು ಪ್ರಗತಿಪರ ಕ್ರಮಗಳನ್ನು ತೆಗೆದುಕೊಂಡಿದೆ. ಸಂಸ್ಥೆಯು ತನ್ನ ಉದ್ಯೋಗಿಗಳಿಗೆ ಉದ್ಯಮ ಮತ್ತು ಈ ಪ್ರದೇಶಕ್ಕೆ ಸಂಬಂಧಿಸಿ ನಿಗದಿಪಡಿಸಲಾದ ಸಮಗ್ರ ವೇತನ ಮತ್ತು ಲಾಭಾಂಶದ ಪ್ಯಾಕೇಜ್ ನೀಡುತ್ತಿದೆ ಎಂದಿದೆ.
ಕೋವಿಡ್‌ನಿಂದ ಕಂಪನಿ ನಷ್ಟದಲ್ಲಿದೆ. ಸ್ಥಾವರದ ಉತ್ಪಾದಕತೆಯು ಸಾಮಾನ್ಯ ಮಟ್ಟಕ್ಕಿಂತ ಕಡಿಮೆಯಾಗಿತ್ತು. ಇದು ಕಂಪನಿಯ ಹಣಕಾಸಿನ ಮೇಲೆ ಮತ್ತಷ್ಟು ಒತ್ತಡವನ್ನು ಸೃಷ್ಟಿಸುತ್ತಿದೆ. ಮೇ 2022ರಲ್ಲಿ ಉತ್ಪಾದನೆಯ ಕೊರತೆ ಮತ್ತು ಅದು ಒಡ್ಡಿರುವ ಸವಾಲುಗಳನ್ನು ಆಡಳಿತ ಮಂಡಳಿಯು ಒಕ್ಕೂಟ ಮತ್ತು ಕಾರ್ಮಿಕರಿಗೆ ನಿಯಮಿತವಾಗಿ ತಿಳಿಸುತ್ತದೆ. ಇದಲ್ಲದೆ, ಕಂಪನಿಯು ಸದಾಶಯದಿಂದ ಕೂಲಿ ಕಾರ್ಮಿಕರಿಗೆ ಮೇ ತಿಂಗಳಲ್ಲಿ ಪಾವತಿಗೆ ಬಾಕಿ ಇರುವ ವೇತನದ ಜತೆಗೆ ಹೆಚ್ಚುವರಿಗಾಗಿ ಮಾಸಿಕ 6,000 ರೂ.ಗಳನ್ನು ಪಾವತಿಸಿದೆ. ಜೂನ್ ತಿಂಗಳಿನಲ್ಲೂ ಉತ್ಪಾದಕತೆಯ ಮಟ್ಟಗಳು ಕಡಿಮೆಯೇ ಇದ್ದು, ಕಂಪನಿಯು ತಿಂಗಳ ಮಧ್ಯಂತರ ಪರಿಹಾರವನ್ನು ಪಾವತಿಸಲು ಸಾಧ್ಯವಾಗಲಿಲ್ಲ.
ಕಳೆದ ಕೆಲವು ವರ್ಷಗಳಿಂದ ಸತತವಾಗಿ ನಷ್ಟವನ್ನು ಅನುಭವಿಸುತ್ತಿದ್ದರೂ, ಕಂಪನಿಯು ತನ್ನ ಉದ್ಯೋಗಿಗಳಿಗೆ ಸಮಯೋಚಿತ ವೇತನ ಪಾವತಿಯನ್ನು ಪ್ರತಿ ತಿಂಗಳೂ ನೀಡುತ್ತಿದೆ. ಈಗ ಚೇತರಿಕೆಯ ಹಾದಿಯಲ್ಲಿರುವ ಸಂದರ್ಭದಲ್ಲಿ, ಕಂಪನಿ ಮತ್ತು ಅದರ ಉದ್ಯೋಗಿಗಳ ದೀರ್ಘಾವಧಿಯ ಉಳಿವು ಮತ್ತು ಬೆಳವಣಿಗೆಗೆ ಮಾರುಕಟ್ಟೆ ಸ್ಪರ್ಧಾತ್ಮಕವಾಗಿ ಉಳಿಯುವುದು ಅತ್ಯಗತ್ಯ. ನಾವು ನ್ಯಾಯಾಧಿಕರಣದ ನಿರ್ಧಾರದ ನಿರೀಕ್ಷೆಯಲ್ಲಿದ್ದು, ಮಧ್ಯಂತರ ಪರಿಹಾರವನ್ನು ಪಡೆಯಲು, ಸಾಮರಸ್ಯ, ಶಿಸ್ತು ಮತ್ತು ಉತ್ಪಾದಕತೆಯನ್ನು ಖಚಿತಪಡಿಸಿಕೊಳ್ಳಲು ಕಾರ್ಮಿಕ ಕಾರ್ಯದರ್ಶಿಯ ನಿರ್ದೇಶನವನ್ನು ಉದ್ಯೋಗಿಗಳೂ ಗೌರವಿಸುವಂತೆ ಹಾಗೂ ಪಾಲಿಸುವಂತೆ ಕಂಪನಿಯೂ ನಿರೀಕ್ಷಿಸುತ್ತದೆ. ಇದೀಗ ಎಲ್ಲಾ ಸಮಸ್ಯೆಗಳು ಇತ್ಯರ್ಥವಾಗಿದೆ.