ಪಾರ್ಕಿಂಗ್ ಸರ್ಟಿಫಿಕೇಟ್ ಇದ್ರೆ ಮಾತ್ರ ಹೊಸ ಕಾರು ಖರೀದಿ, ನಿಯಮ ಜಾರಿಗೆ ತಯಾರಿ
ಬೆಂಗಳೂರು ಸೇರಿದಂತೆ ಎಲ್ಲಾ ನಗರಗಳಲ್ಲಿ ಹೆಚ್ಚಿನ ವಾಹನ, ಸಂಚಾರ ದಟ್ಟಣೆ, ರಸ್ತೆಗಳಲ್ಲೇ ಪಾರ್ಕಿಂಗ್ ಸಮಸ್ಯೆ ಇದ್ದೇ ಇದೆ. ಇದಕ್ಕೆ ಅಂತ್ಯ ಹಾಡಲು ಇದೀಗ ಹೊಸ ನಿಯಮ ಜಾರಿಗೆ ತಯಾರಿ ನಡೆಯುತ್ತಿದೆ. ಈ ನಿಯಮದ ಪ್ರಕಾರ ಪಾಲಿಕೆಯಿಂದ ಪಾರ್ಕಿಂಗ್ ಸರ್ಟಿಫಿಕೇಟ್ ಇದ್ದರೆ ಮಾತ್ರ ಹೊಸ ಕಾರು ರಿಜಿಸ್ಟ್ರೇಶನ್ ಮಾಡಲು ಸಾಧ್ಯ.
ಮುಂಬೈ(ಜ.12) ದೇಶದ ಎಲ್ಲಾ ನಗರಗಳಲ್ಲಿ ಟ್ರಾಫಿಕ್ ಸಮಸ್ಯೆ ಹೊಸದೇನಲ್ಲ. ಅದರಲ್ಲೂ ಭಾರತದ ಪ್ರಮುಖ ನಗರಗಳು ವಾಹನಗಳಿಂದ ತುಂಬಿ ತುಳುಕುತ್ತಿದೆ. ಇನ್ನು ಪಾರ್ಕಿಂಗ್ ಮಾಡಲು ಸ್ಥಳವಿಲ್ಲದೆ ರಸ್ತೆಗಳಲ್ಲೇ ಪಾರ್ಕಿಂಕ್ ಸಾಮಾನ್ಯವಾಗಿದೆ. ಎಲ್ಲೆಂದರಲ್ಲಿ ಪಾರ್ಕಿಂಗ್ ಮಾಡುವುದು, ಮನೆಯ ಮುಂದೆ, ಕಚೇರಿ, ರಸ್ತೆಗಳಲ ಇಕ್ಕೆಲಗಳಲ್ಲಿ ಪಾರ್ಕಿಂಗ್ ಮಾಡುವುದು ಸಾಮಾನ್ಯ ದೃಶ್ಯವಾಗಿದೆ. ಇದೀಗ ಈ ಸಮಸ್ಯೆ ಮತ್ತಷ್ಟು ಹೆಚ್ಚಾಗದಂತೆ ತಡೆಯಲು ಹೊಸ ನಿಯಮ ಜಾರಿಗೆ ತರಲು ಸಿದ್ಧತೆ ನಡೆದಿದೆ. ಹೊಸ ಕಾರು ಖರೀದಿಸಲು ಇದೀಗ ಪಾಲಿಕೆಯಿಂದ ಪಾರ್ಕಿಂಗ್ ಸರ್ಟಿಫಿಕೇಟ್ ಅತ್ಯವಶ್ಯಕವಾಗಿದೆ. ಪಾರ್ಕಿಂಗ್ ಸರ್ಟಿಫಿಕೇಟ್ ಇದ್ದರೆ ಮಾತ್ರ ಹೊಸ ಕಾರು ಖರೀದಿದಾರನ ಹೆಸರಿಗೆ ನೋಂದಣಿಯಾಗಲಿದೆ. ಈ ಮೂಲಕ ದಾರಿಯಲ್ಲಿ ಪಾರ್ಕಿಂಗ್ ಮಾಡುವ ಸಮಸ್ಯೆಗೆ ಇತಿಶ್ರಿ ಹಾಡಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ.
ಬೆಂಗಳೂರಿಗರು ಸದ್ಯಕ್ಕೆ ನಿಟ್ಟುಸಿರು ಬಿಡಬಹುದು. ಕಾರಣ ಈ ನಿಯಮ ಮಹಾರಾಷ್ಟ್ರದಲ್ಲಿ ಜಾರಿಗೆ ಬರುತ್ತಿದೆ. ಆರಂಭಿಕ ಹಂತದಲ್ಲಿ ಮುಂಬೈ, ನಾಗ್ಪುರ ಹಾಗೂ ಪುಣೆ ನಗರಗಳಲ್ಲಿ ಈ ಹೊಸ ನಿಯಮ ಜಾರಿಗೆ ತರಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ. ಬಳಿಕ ಹಂತ ಹಂತವಾಗಿ ಈ ನಿಯಮ ಮಹಾರಾಷ್ಟ್ರದ ಇತರ ನಗರಗಳು,ಪಟ್ಟಣಗಳಿಗೆ ವಿಸ್ತರಣೆಯಾಗಲಿದೆ. ಮಹಾರಾಷ್ಟ್ರ, ಮುಂಬೈ ಅಂತಾ ನೆಮ್ಮದಿಯಾಗಿ ನಿದ್ದೆ ಮಾಡುವಂತಿಲ್ಲ. ಕಾರಣ ಈ ನಿಯಮ ಯಶಸ್ವಿಯಾದರೆ ಬೆಂಗಳೂರು ಸೇರಿದಂತೆ ಇತರ ನಗರಗಳಲ್ಲೂ ಜಾರಿಗೆ ಬರವು ಸಾಧ್ಯತೆ ಇದೆ.
ಬೆಂಗಳೂರಲ್ಲಿ ಜಾರಿಗೆ ಬರುತ್ತಾ ವಿಯೆಟ್ನಾಂ ಟ್ರಾಫಿಕ್ ನಿಯಮ? ಸಿಗಲಿದೆ 17,000 ರೂ ಬಹುಮಾನ
ಮುಂಬೈನಲ್ಲಿ ನಡೆದ ಮಹತ್ವದ ಸಭೆಯಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಈ ನಿಯಮದ ಕುರಿತು ಪ್ರಸ್ತಾಪಿಸಿದ್ದಾರೆ. ಪ್ರಮುಖವಾಗಿ ಮುಂಬೈನಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆ, ವಾಯು ಮಾಲಿನ್ಯ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಹೊಸ ನಿಯಮ ಜಾರಿಗೆ ಮುಂದಾಗಿದೆ. ದೆಹಲಿಯಲ್ಲಿ ಆಗುತ್ತಿರುವ ವಾಯು ಮಾಲಿನ್ಯ ಸಮಸ್ಯೆಗಳು ಮುಂಬೈ ಸೇರಿದಂತೆ ಇತರ ನಗರಗಳಲ್ಲಿ ಹೆಚ್ಚಾಗಲು ಹೆಚ್ಚು ದಿನದ ಅವಶ್ಯಕತೆ ಇಲ್ಲ ಎಂದು ತಜ್ಞರು ಹೇಳಿದ್ದಾರೆ. ಹೀಗಾಗಿ ಈಗಲೇ ವಾಹನ ದಟ್ಟಣೆ ನಿಯಂತ್ರಣ, ಮಾಲಿನ್ಯ ಸೇರಿದಂತೆ ಹಲವು ಸಮಸ್ಯೆಗಳಿಗೆ ಪರಿಹಾರ ಸೂಚಿಸಲು ಹೊಸ ನಿಯಮ ಅನಿವಾರ್ಯ ಅನ್ನೋ ಅಭಿಪ್ರಾಯ ವ್ಯಕ್ತವಾಗಿದೆ.
ಹೊಸ ನಿಯಮದಲ್ಲಿ ಹೌಸಿಂಗ್ ಬೋರ್ಡ್, ಮಹಾನಗರ ಪಾಲಿಕೆ, ನಗರಾಭಿವೃದ್ಧಿ ಇಲಾಖೆ ಸೇರಿದಂತೆ ಕೆಲ ಇಲಾಖೆಗಳ ಸಹಯೋಗದಲ್ಲಿ ಹೊಸ ನಿಯಮ ಜಾರಿಗೆ ತರಲು ಚರ್ಚೆ ನಡೆದಿದೆ. ಪ್ರಮುಖವಾಗಿ ನಾಲ್ಕು ಚಕ್ರದ ವಾಹನಗಳಾದ ಕಾರು, ಜೀಪು ಸೇರಿದಂತೆ ಇತರ ವಾಹನಗಳ ರಿಜಿಸ್ಟ್ರೇಶನ್ ಮಾಡಲು ಪಾರ್ಕಿಂಕ್ ಸರ್ಟಿಫಿಕೇಟ್ ನೀಡಬೇಕು. ಮಹಾ ನಾಗರ ಪಾಲಿಕೆಯಿಂದ ವಾಹನ ಖರೀದಿಸುವ ಮೊದಲು ಪಾರ್ಕಿಂಗ್ ಸರ್ಟಿಫಿಕೇಟ್ ಮಾಡಿಸಿಕೊಳ್ಳಬೇಕು. ಅರ್ಜಿ ಸಲ್ಲಿಸಿದ ಬಳಿಕ ಕಾರು ಅಥವಾ ವಾಹನ ನಿಲ್ಲಿಸಲು ಸರಿಯಾದ ಪಾರ್ಕಿಂಗ್ ಸ್ಥಳ ಇದೆಯಾ ಎಂದು ಅದಿಕಾರಿಗಳು ಪರಿಶೀಲನೆ ನಡೆಸುತ್ತಾರೆ. ಇನ್ನು ಹಣ ಪಾವತಿ ಮಾಡಿ ಪಾರ್ಕಿಂಗ್ ಮಾಡುವಲ್ಲಿ ಪಾರ್ಕಿಂಗ್ ಮಾಡುವ ಪ್ಲಾನ್ ಇದ್ದರೆ ಕನಿಷ್ಠ 1 ವರ್ಷದ ಪಾರ್ಕಿಂಗ್ ಹಣ ಮುಂಗಡವಾಗಿ ಪಾವತಿಸಿರಬೇಕು. ಬಳಿಕ ವರ್ಷ ವರ್ಷ ಈ ಪಾರ್ಕಿಂಗ್ ಸರ್ಟಿಫಿಕೇಟ್ ನವೀಕರಿಸಬೇಕು. ಮನೆಯಲ್ಲಿ ವಾಹನ ಪಾರ್ಕಿಂಗ್ ಮಾಡಲು ಸೂಕ್ತ ಜಾಗವಿದ್ದರೆ ಸುಲಭವಾಗಿ ಪಾರ್ಕಿಂಗ್ ಸರ್ಟಿಫಿಕೇಟ್ ಸಿಗಲಿದೆ. ಉದಾಹರಣೆಗೆ 1 ವಾಹನ ಪಾರ್ಕಿಂಗ್ ಮಾಡಲು ಜಾಗವಿದ್ದರೆ, ವೆಹಿಕಲ್ ಪಾರ್ಕಿಂಗ್ ಸರ್ಟಿಫಿಕೇಟ್( 1 ವಾಹನ) ಸಿಗಲಿದೆ.
ಬೆಂಗಳೂರು ಏಷ್ಯಾದ ಅತೀ ಹೆಚ್ಚು ಟ್ರಾಫಿಕ್ ದಟ್ಟಣೆ ಸಿಟಿ, ಎಷ್ಟು ಗಂಟೆ ರಸ್ತೆಯಲ್ಲಿ ಕಳೆಯುತ್ತೀರಿ ಗೊತ್ತಾ?
ಲಂಡನ್, ನ್ಯೂಯಾರ್ಕ್, ಟೊಕಿಯೋ, ಜ್ಯೂರಿಚ್ ಸೇರಿದಂತೆ ಕೆಲ ನಗರಗಳಲ್ಲಿ ಈ ನಿಯಮವಿದೆ. ಇದರಿಂದ ಅಲ್ಲಿನ ಸಮಸ್ಯೆಗಳು ಮತ್ತಷ್ಟು ಉಲ್ಬಣವಾಗದಂತೆ ತಡೆಯಲಾಗಿದೆ. ಈ ನಿಯಮದಿಂದ ಸಾರ್ವಜನಿಕ ಸಾರಿಗೆ ಬಳಕೆ ಹೆಚ್ಚಾಗಲಿದೆ ಅನ್ನೋ ಅಭಿಪ್ರಾಯವೂ ವ್ಯಕ್ತವಾಗಿದೆ.