ಏಷ್ಯನ್ ಎಫ್3 ರೇಸ್‌ನಲ್ಲಿ ಮೊದಲ ಆಲ್-ಇಂಡಿಯನ್ ತಂಡ ಮುಂಬೈ ಫಾಲ್ಕನ್ಸ್
ಪ್ರತಿಷ್ಠಿತ ಎಫ್3 ಏಷ್ಯನ್ ಚಾಂಪಿಯನ್‌ಶಿಪ್ ಟೂರ್ನಿಗೆ ಕೌಂಟ್‌ಡೌನ್ ಆರಂಭಗೊಂಡಿದೆ. ಇದೀಗ ಎಲ್ಲರ ಚಿತ್ತ ಕಳೆದ ವರ್ಷ ರೇಸ್‌ನಲ್ಲಿ ಬಹುತೇಕ ಪ್ರಶಸ್ತಿಗಳನ್ನು ಬಾಚಿಕೊಂಡ ಎಫ್2 ತಾರೆ ಜೆಹಾನ್ ದಾರೂವಾಲಾ ಹಾಗೂ ಬ್ರಿಟಿಷ್ ಎಫ್3 ರನ್ನರ್-ಅಪ್ ಬೆಂಗಳೂರಿನ ಖುಷ್ ಮೈನಿ ಮೇಲೆ ನೆಟ್ಟಿದೆ.
ಮುಂಬೈ (ಜ.14): ಪ್ರತಿಷ್ಠಿತ ಎಫ್3 ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳಲಿರುವ ಸರ್ವ-ಭಾರತೀಯರ ತಂಢ ಎನ್ನುವ ಹಿರಿಮೆಗೆ ಮುಂಬೈ ಫಾಲ್ಕನ್ಸ್ ಪಾತ್ರರಾಗಲಿದ್ದು, ತಂಡ ಇತಿಹಾಸ ಬರೆಯಲು ಸಜ್ಜಾಗಿದೆ. ಜನವರಿ 29ರಿಂದ ದುಬೈನಲ್ಲಿ ಚಾಂಪಿಯನ್‌ಶಿಪ್ ಆರಂಭಗೊಳ್ಳಲಿದೆ.
ಬೆಂಗಳೂರಿನ ಯುವ ರೇಸರ್ಸ್‌ಗೆ ಮೀಕೋ FMSCI ರಾಷ್ಟ್ರೀಯ ಕಾರ್ಟಿಂಗ್ ಚಾಂಪಿಯನ್‌ಶಿಪ್!
ಕಳೆದ ವರ್ಷ ನಡೆದ ಉದ್ಘಾಟನಾ ಎಕ್ಸ್1 ಲೀಗ್‌ನಲ್ಲಿ ಬಹುತೇಕ ಎಲ್ಲ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದ ತಂಡವನ್ನು ಎಫ್2 ತಾರೆ ಜೆಹಾನ್ ದಾರೂವಾಲಾ ಹಾಗೂ ಬ್ರಿಟಿಷ್ ಎಫ್3 ರನ್ನರ್-ಅಪ್ ಬೆಂಗಳೂರಿನ ಖುಷ್ ಮೈನಿ ಮುನ್ನಡೆಸಲಿದ್ದಾರೆ ಎಂದು ಬುಧವಾರ ಪತ್ರಿಕಾ ಪ್ರಕಟಣೆ ಮೂಲಕ ತಂಡ ತಿಳಿಸಿದೆ. ಮಾಜಿ ಎಫ್2 ಹಾಗೂ ಜಿಟಿ1 ರೇಸರ್ ಅರ್ಮಾನ್ ಇಬ್ರಾಹಿಂ ತಂಡದ ಮುಖ್ಯಸ್ಥರಾಗಿದ್ದು, 8 ಬಾರಿ ರಾಷ್ಟ್ರೀಯ ಚಾಂಪಿಯನ್ ರಯೋಮಂದ್ ಬನಾಜಿ ತಂಡದ ತಂತ್ರಗಾರಿಕೆ ಹಾಗೂ ಸಂವಹನ ಮುಖ್ಯಸ್ಥರಾಗಿದ್ದಾರೆ. ಇವರಿಬ್ಬರ ನೇತೃತ್ವದಲ್ಲಿ ತಂಡ ಚಾಂಪಿಯನ್‌ಶಿಪ್ ಗೆಲ್ಲುವ ವಿಶ್ವಾಸದಲ್ಲಿದೆ.
‘ಭಾರತೀಯ ಮೋಟಾರ್‌ಸ್ಪೋರ್ಟ್ಸ್ ಅನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಬೇಕು ಎನ್ನುವುದು ನಮ್ಮ ಗುರಿ. ಏಷ್ಯನ್ ಎಫ್‌೩ ಕೇವಲ ಆರಂಭವಷ್ಟೇ’ ಎಂದು ಕಳೆದ ವರ್ಷವಷ್ಟೇ ಸ್ಥಾಪನೆಗೊಂಡ ಮುಂಬೈ ಫಾಲ್ಕನ್ಸ್ ತಂಡದ ಮಾಲೀಕ ನವ್‌ಜೀತ್ ಗಧೋಕೆ ಹೇಳಿದ್ದಾರೆ. ‘ಜೆಹಾನ್ ಹಾಗೂ ಖುಷ್‌ರಂತಹ ಶ್ರೇಷ್ಠ ಚಾಲಕರು ನಮ್ಮ ತಂಡದಲ್ಲಿದ್ದಾರೆ. ಅತ್ಯುತ್ತಮ ಪ್ರದರ್ಶನ ತೋರಿ ಚಾಂಪಿಯನ್‌ಶಿಪ್ ಗೆಲ್ಲುವುದು ನಮ್ಮ ಗುರಿಯಾಗಿದೆ’ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
‘ಸದ್ದಿಲ್ಲದೆ ನಾವು ಅಗತ್ಯ ತಯಾರಿ ನಡೆಸುತ್ತಿದ್ದೇವೆ ಹಾಗೂ ಅಂತಾರಾಷ್ಟ್ರೀಯ ಮಟ್ಟವನ್ನು ಪ್ರವೇಶಿಸಲು ನಾವು ದೊಡ್ಡ ಮಟ್ಟದಲ್ಲಿ ಸಿದ್ಧರಿದ್ದೇವೆ’ ಎಂದು ಮುಂಬೈ ಫಾಲ್ಕನ್ಸ್ ತಂಡದ ಮುಖ್ಯ ಕಾರ್ಯನಿವಾರ್ಹಕ ಅಧಿಕಾರಿ (ಸಿಇಒ) ಮೊಯಿದ್ ತುಂಗೇಕರ್ ನುಡಿದಿದ್ದಾರೆ. ಏಷ್ಯನ್ ಎಫ್3 ಚಾಂಪಿಯನ್‌ಶಿಪ್, ಏಷ್ಯಾದ ಅತ್ಯಂತ ಸ್ಪರ್ಧಾತ್ಮಕ ರೇಸಿಂಗ್ ಸ್ಪರ್ಧೆಯಾಗಿದ್ದು, 9 ಬಲಿಷ್ಠ ತಂಡಗಳು ಅನೇಕ ಎಫ್2 ಹಾಗೂ ಎಫ್3 ಚಾಲಕರೊಂದಿಗೆ ಕಣಕ್ಕಿಳಿಯಲಿವೆ. ಕಳೆದ ವರ್ಷ ಈ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸಿದ್ದ ಇಬ್ಬರು ಚಾಲಕರು ಫಾರ್ಮುಲಾ ೧ಗೆ ಬಡ್ತಿ ಪಡೆದಿದ್ದಾರೆ.
ಕಳೆದ ವರ್ಷ ಎಂಸ್ಪೋರ್ಟ್ ತಂಡವೊಂದನ್ನು ಕಣಕ್ಕಿಳಿಸಿತ್ತು ಆದರೆ ಒಬ್ಬನೇ ಒಬ್ಬ ಭಾರತೀಯ ಚಾಲಕ ತಂಡದಲ್ಲಿದ್ದರು. ಒಟ್ಟು 15 ರೇಸ್‌ಗಳ 5 ಸುತ್ತುಗಳ ಋತು ಜನವರಿ 29ರಂದು ದುಬೈನಲ್ಲಿ ಆರಂಭಗೊಳ್ಳಲಿದ್ದು, ಫೆಬ್ರವರಿ 20ರಂದು ಅಬು ಧಾಬಿಯಲ್ಲಿ ಮುಕ್ತಾಯಗೊಳ್ಳಲಿದೆ.
ಭಾರತೀಯ ರೇಸಿಂಗ್‌ನ ಭವಿಷ್ಯದ ತಾರೆ ಎಂದೇ ಗುರುತಿಸಿಕೊಂಡಿರುವ ಜೆಹಾನ್ ದಾರೂವಾಲಾ ಫಾಮುಾಾಲ 1 ಹಂತಕ್ಕೆ ಪ್ರವೇಶಿಸಲು ಕೇವಲ ಒಂದು ಹೆಜ್ಜೆ ಹಿಂದಿದ್ದಾರೆ. ಹಲವು ಬಾರಿ ಅಂತಾರಾಷ್ಟ್ರೀಯ ಕಾರ್ಟಿಂಗ್ ಚಾಂಪಿಯನ್ ಆಗಿರುವ ಜೆಹಾನ್, ಎಫ್‌ಐಎ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪೋಡಿಯಂ ಫಿನಿಶ್ ಮಾಡಿರುವ ಭಾರತದ ಏಕೈಕ ರೇಸರ್ (2014ರ ಎಫ್‌ಐಎ ಸಿಐಕೆ ವಿಶ್ವ ಕಾರ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ 3ನೇ ಸ್ಥಾನ) ಆಗಿದ್ದಾರೆ.
ಅಧಿಕೃತ ಗ್ರ್ಯಾನ್ ಪ್ರಿ ಜಯಿಸಿದ ಭಾರತದ ಏಕೈಕ ಚಾಲಕ (ನ್ಯೂಜಿಲೆಂಡ್ ಗ್ರ್ಯಾನ್ ಪ್ರಿ) ಎನ್ನುವ ದಾಖಲೆಯೂ ಜೆಹಾನ್ ಹೆಸರಿನಲ್ಲಿಯೇ ಇದೆ. ಎಫ್‌ಐಎ ಫಾರ್ಮುಲಾ 3 ಯುರೋಪಿಯನ್ ಚಾಂಪಿಯನ್‌ಶಿಪ್‌ನಲ್ಲಿ 26 ಬಾರಿ ಪೋಡಿಯಂ ಫಿನಿಶ್ ಮಾಡಿರುವುದು ಸಹ ಒಂದು ದಾಖಲೆಯೆ. ಹಲವು ಗೆಲುವುಗಳನ್ನು ಕಂಡಿರುವ ಜೆಹಾನ್, 2019ರ ಎಫ್‌ಐಎ ಎಫ್3 ಚಾಂಪಿಯನ್‌ಶಿಪ್‌ನಲ್ಲಿ ಎರಡನೇ ರನ್ನರ್-ಅಪ್ ಆಗಿ ಹೊರಹೊಮ್ಮಿದ್ದರು. ಕೊನೆ ಸುತ್ತಿನ ವರೆಗೂ ಅವರು ಪ್ರಶಸ್ತಿ ಗೆಲ್ಲುವ ನೆಚ್ಚಿನ ರೇಸರ್ ಎನಿಸಿದ್ದರು. ಕೆಲ ವಾರಗಳ ಹಿಂದಷ್ಟೇ ಅವರು ಎಫ್2 ರೇಸ್‌ನಲ್ಲಿ ಗೆಲುವು ಸಾಧಿಸಿದ ಮೊದಲ ಭಾರತೀಯ ಎನ್ನುವ ಹಿರಿಮೆಗೆ ಪಾತ್ರರಾಗಿದ್ದರು.
ಖುಷ್ ಮೈನಿ ಏಷ್ಯನ್ ಕಾರ್ಟಿಂಗ್ ರೇಸ್‌ನಲ್ಲಿ ಜಯ ಸಾಧಿಸಿದ ಭಾರತದ ಅತಿಕಿರಿಯ ಎನಿಸಿಕೊಂಡಿದ್ದು, ಹಲವು ಬಾರಿ ಕಾರ್ಟಿಂಗ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಫಾರ್ಮುಲಾ ವಿಭಾಗಗಳಲ್ಲಿ ಗೆಲುವು ದಾಖಲಿಸಿದ್ದಾರೆ. ಕಳೆದ ವರ್ಷ ಬಿಆರ್‌ಡಿಸಿ ಫಾರ್ಮುಲಾ ೩ ಚಾಂಪಿಯನ್‌ಶಿಪ್‌ನಲ್ಲಿ ಅವರು ಪ್ರಶಸ್ತಿ ಜಯಿಸುವ ಭರವಸೆ ಮೂಡಿಸಿದ್ದರು. ಬಹಳ ಜನಪ್ರಿಯ ಬ್ರಿಟಿಷ್ ಸರ್ಕ್ಯೂಟ್‌ಗಳಲ್ಲಿ 3 ಗೆಲುವುಗಳನ್ನು ಸಾಧಿಸಿದ್ದ ಭಾರತದ ಯುವ ಚಾಲಕ ತಮ್ಮ ಸಾಮರ್ಥ್ಯ ಸಾಬೀತು ಪಡಿಸಿದ್ದರು.
ಉದ್ಘಾಟನಾ ಆವೃತ್ತಿಯ ಎಕ್ಸ್1 ರೇಸಿಂಗ್ ಲೀಗ್‌ನಲ್ಲಿ ಆಕರ್ಷಕ ಪ್ರದರ್ಶನ ತೋರಿದ್ದ ಖುಷ್, ಮುಂಬೈ ಫಾಲ್ಕನ್ಸ್ ತಂಡದೊಂದಿಗೆ ಭಾರತದ ಅಂತಾರಾಷ್ಟ್ರೀಯ ಚಾಲಕ ಪ್ರಶಸ್ತಿಯನ್ನು ಜಯಿಸಿದ್ದರು.