Asianet Suvarna News Asianet Suvarna News

52 ಲಕ್ಷಕ್ಕೆ ಏರಿಕೆಯಾದ ಎಚ್‌ಎಸ್‌ಆರ್‌ಪಿ ನಂಬರ್‌ ಪ್ಲೇಟ್‌ ಅಳವಡಿಕೆ: ಜೂ.1ರಿಂದ ದಂಡ ಪ್ರಯೋಗ?

ದಿನದಿಂದ ದಿನಕ್ಕೆ ರಾಜ್ಯದಲ್ಲಿ ಹೈ ಸೆಕ್ಯೂರಿಟಿ ನಂಬರ್‌ ಪ್ಲೇಟ್‌ (ಎಚ್‌ಎಸ್‌ಆರ್‌ಪಿ) ಅಳವಡಿಕೆ ಏರಿಕೆ ಕಾಣುತ್ತಿದ್ದು, ಎರಡನೇ ತಿಂಗಳಲ್ಲಿ 34 ಲಕ್ಷ ವಾಹನ ಮಾಲೀಕರು ಎಚ್‌ಎಸ್‌ಆರ್‌ಪಿ ಅಳವಡಿಕೆಗೆ ನೋಂದಣಿ ಮಾಡಿಕೊಂಡಿದ್ದಾರೆ. 

HSRP adoption increased to 52 lakh Penalty trial from June 1st gvd
Author
First Published Apr 8, 2024, 8:54 AM IST

ಗಿರೀಶ್‌ ಗರಗ

ಬೆಂಗಳೂರು (ಏ.08): ದಿನದಿಂದ ದಿನಕ್ಕೆ ರಾಜ್ಯದಲ್ಲಿ ಹೈ ಸೆಕ್ಯೂರಿಟಿ ನಂಬರ್‌ ಪ್ಲೇಟ್‌ (ಎಚ್‌ಎಸ್‌ಆರ್‌ಪಿ) ಅಳವಡಿಕೆ ಏರಿಕೆ ಕಾಣುತ್ತಿದ್ದು, ಎರಡನೇ ತಿಂಗಳಲ್ಲಿ 34 ಲಕ್ಷ ವಾಹನ ಮಾಲೀಕರು ಎಚ್‌ಎಸ್‌ಆರ್‌ಪಿ ಅಳವಡಿಕೆಗೆ ನೋಂದಣಿ ಮಾಡಿಕೊಂಡಿದ್ದಾರೆ. ದೇಶಾದ್ಯಂತ ಏಕೀಕೃತ ವಾಹನ ನೋಂದಣಿ ಸಂಖ್ಯೆ ಫಲಕ ಅಳವಡಿಕೆ ಹಾಗೂ ವಾಹನಗಳ ಸುರಕ್ಷತೆ ದೃಷ್ಟಿಯಿಂದಾಗಿ ಸಾರಿಗೆ ಇಲಾಖೆ 2019ರ ಏಪ್ರಿಲ್‌ಗಿಂತ ಹಿಂದೆ ನೋಂದಣಿಯಾದ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ. 

ಅದರಂತೆ ರಾಜ್ಯದಲ್ಲಿ 2019ರ ಏಪ್ರಿಲ್‌ಗಿಂತ ಹಿಂದೆ ನೋಂದಣಿಯಾದ 2 ಕೋಟಿಗೂ ಹೆಚ್ಚಿನ ವಾಹನಗಳು ಎಚ್‌ಎಸ್‌ಆರ್‌ಪಿ ಅಳವಡಿಕೆ ಮಾಡಿಕೊಳ್ಳಬೇಕಿದೆ. ಆರಂಭದಲ್ಲಿ ಎಚ್‌ಎಸ್‌ಆರ್‌ಪಿ ಅಳವಡಿಕೆಗೆ ವಾಹನ ಮಾಲೀಕರು ನಿರಾಸಕ್ತಿ ತೋರಿದ್ದ ಕಾರಣಕ್ಕಾಗಿ ಈಗಾಗಲೇ ಎರಡು ಬಾರಿ ಗಡವು ವಿಸ್ತರಿಸಲಾಗಿದೆ. ಅದರಂತೆ ಎರಡನೇ ಬಾರಿ ಗಡುವು ವಿಸ್ತರಿಸಿದ ನಂತರದಿಂದ ಎಚ್‌ಎಸ್‌ಆರ್‌ಪಿ ಅಳವಡಿಕೆ ಮಾಡಿಕೊಳ್ಳುವವರ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ಈವರೆಗೆ ಶೇ. 25ರಷ್ಟು ವಾಹನಗಳು ಎಚ್‌ಎಸ್‌ಆರ್‌ಪಿ ಅಳವಡಿಕೆ ಮಾಡಿಕೊಂಡಿವೆ.

ಬರ ಪರಿಹಾರ ಕುರಿತು ಮೋದಿ, ಶಾ, ನಿರ್ಮಲಾ ವಿಭಿನ್ನ ಸುಳ್ಳು: ಸಿದ್ದರಾಮಯ್ಯ ಕಿಡಿ

ಮಾಲೀಕರ ನಿರಾಸಕ್ತಿ, 2 ಬಾರಿ ಗಡುವು ವಿಸ್ತರಣೆ: ಎಚ್‌ಎಸ್‌ಆರ್‌ಪಿ ಅಳವಡಿಕೆಗೆ ಸಂಬಂಧಿಸಿದಂತೆ ಈಗಾಗಲೇ ಎರಡು ಬಾರಿ ಗಡುವು ವಿಸ್ತರಿಸಲಾಗಿದೆ. ಈ ಹಿಂದೆ 2023ರ ನ.17ರೊಳಗೆ ಎಚ್‌ಎಸ್‌ಆರ್‌ಪಿ ಅಳವಡಿಕೆ ಮಾಡುವಂತೆ ಸೂಚಿಸಲಾಗಿತ್ತು. ಆದರೆ, ಆ ಸಂದರ್ಭದಲ್ಲಿ ಕೇವಲ 30 ಸಾವಿರ ವಾಹನಗಳ ಮಾಲೀಕರು ಮಾತ್ರ ನೋಂದಣಿ ಮಾಡಿಕೊಂಡಿದ್ದರು. ಹೀಗಾಗಿ ಗಡುವನ್ನು ಫೆ.17ಕ್ಕೆ ವಿಸ್ತರಿಸಲಾಯಿತು. ಆದರೆ, ಆ ಸಂದರ್ಭದಲ್ಲೂ 18 ಲಕ್ಷ ವಾಹನಗಳು ಮಾತ್ರ ಎಚ್‌ಎಸ್‌ಆರ್‌ಪಿ ಅಳವಡಿಕೆಗೆ ಒಲವು ತೋರಿದ್ದರು. ಹೀಗಾಗಿ ಮತ್ತೊಮ್ಮೆ ಗಡುವು ವಿಸ್ತರಿಸಿ ಮೇ 31ರೊಳಗೆ ಎಚ್‌ಎಸ್‌ಆರ್‌ಪಿ ಅಳವಡಿಕೆ ಮಾಡಿಕೊಳ್ಳುವಂತೆ ಸಾರಿಗೆ ಇಲಾಖೆ ಸೂಚಿಸಿದೆ.

2 ತಿಂಗಳಲ್ಲಿ 34 ಲಕ್ಷ ನೋಂದಣಿ: ಫೆ. 17ರ ಗಡುವಿನ ನಂತರ ಎಚ್‌ಎಸ್‌ಆರ್‌ಪಿ ಅಳವಡಿಸಿಕೊಳ್ಳದ ವಾಹನಗಳ ವಿರುದ್ಧ ದಂಡ ಪ್ರಯೋಗ ಮಾಡಲಾಗುತ್ತದೆ ಎಂದು ಸಾರಿಗೆ ಇಲಾಖೆ ಸೂಚಿಸಿತ್ತು. ಆ ಹಿನ್ನೆಲೆಯಲ್ಲಿ ಕ್ರಮೇಣ ಎಚ್‌ಎಸ್‌ಆರ್‌ಪಿ ಅಳವಡಿಕೆಗೆ ವಾಹನ ಮಾಲೀಕರ ನೋಂದಣಿ ಪ್ರಮಾಣ ಹೆಚ್ಚಾಗಿ 18 ಲಕ್ಷಕ್ಕೆ ತಲುಪಿತ್ತು. ಇದೀಗ ಆ ಸಂಖ್ಯೆ ಮತ್ತಷ್ಟು ಹೆಚ್ಚಾಗಿದ್ದು, ಒಟ್ಟಾರೆ 52 ಲಕ್ಷ ವಾಹನಗಳು ಎಚ್‌ಎಸ್‌ಆರ್‌ಪಿ ಅಳವಡಿಕೆ ಮಾಡಿಕೊಂಡಿವೆ. ಅಂದರೆ ಎರಡನೇ ತಿಂಗಳಲ್ಲಿ 34 ಲಕ್ಷ ವಾಹನಗಳು ಎಚ್‌ಎಸ್‌ಆರ್‌ಪಿ ಅಳವಡಿಕೆ ಮಾಡಿಕೊಂಡಿವೆ. ಅಲ್ಲದೆ, ಶೇ. 25ರಷ್ಟು ವಾಹನಗಳು ಎಚ್‌ಎಸ್‌ಆರ್‌ಪಿ ಅಳವಡಿಕೆ ಮಾಡಿಕೊಂಡಿದ್ದು, ಇನ್ನೂ ಶೇ. 75ರಷ್ಟು ಅಂದರೆ 1.48 ಕೋಟಿ ವಾಹನಗಳು ಎಚ್‌ಎಸ್‌ಆರ್‌ಪಿ ಅಳವಡಿಸಿಕೊಳ್ಳಬೇಕಿದೆ.

ಜೂ.1ರಿಂದ ದಂಡ ಪ್ರಯೋಗ?: ರಾಜ್ಯ ಸಾರಿಗೆ ಇಲಾಖೆ ಮೇ 31ರವರೆಗೆ ಎಚ್‌ಎಸ್‌ಆರ್‌ಪಿ ಪಡೆಯಲು ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಿದೆ. ಅದಾದ ನಂತರ ಅಂದರೆ ಜೂ.1ರಿಂದ ಪೊಲೀಸ್‌ ಇಲಾಖೆ ಜತೆಗೂಡಿ ಎಚ್‌ಎಸ್‌ಆರ್‌ಪಿ ಇಲ್ಲದ ವಾಹನಗಳಿಗೆ ದಂಡ ವಿಧಿಸಲು ನಿರ್ಧರಿಸಲಾಗಿದೆ. ಅಷ್ಟರಲ್ಲಿ ಶೇ.75ರಷ್ಟಾದರೂ ವಾಹನಗಳು ಎಚ್‌ಎಸ್‌ಆರ್‌ಪಿ ಅಳವಡಿಕೆ ಮಾಡಿಕೊಳ್ಳದಿದ್ದರೆ ಮತ್ತೊಮ್ಮೆ ಗಡುವು ವಿಸ್ತರಿಸುವ ಸಾಧ್ಯತೆಯಿದೆ. ಒಂದು ವೇಳೆ ಗಡುವು ವಿಸ್ತರಣೆಗೊಳ್ಳದಿದ್ದರೆ ಎಚ್‌ಎಸ್‌ಆರ್‌ಪಿ ಇಲ್ಲದ ವಾಹನಗಳಿಗೆ ನಿಯಮದಂತೆ 500 ರಿಂದ 1 ಸಾವಿರ ರು. ದಂಡ ವಿಧಿಸುವುದಾಗಿ ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.----

ಸರ್ಕಾರಿ ವಾಹನಗಳಲ್ಲೇ  ಎಚ್‌ಎಸ್‌ಆರ್‌ಪಿ ಇಲ್ಲ: ರಾಜ್ಯದಲ್ಲಿ ಎಚ್‌ಎಸ್‌ಆರ್‌ಪಿ ಅಳವಡಿಸಿಕೊಳ್ಳದ 1.48 ಕೋಟಿ ವಾಹನಗಳ ಪೈಕಿ 1 ಲಕ್ಷಕ್ಕೂ ಹೆಚ್ಚಿನ ವಾಹನಗಳು ಸರ್ಕಾರಿ ವಾಹನಗಳಾಗಿವೆ. ವಿವಿಧ ಇಲಾಖೆಗೆ ಸೇರಿದ ಸರ್ಕಾರಿ ವಾಹನಗಳು ಇನ್ನೂ ಎಚ್‌ಎಸ್‌ಆರ್‌ಪಿ ಅಳವಡಿಕೆಗೆ ಮುಂದಾಗಿಲ್ಲ. ಎರಡು ಬಾರಿ ಗಡುವು ವಿಸ್ತರಿಸಿದರೂ ಆ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಅಲ್ಲದೆ, ಸರ್ಕಾರದ ನಿಯಮವನ್ನು ಸರ್ಕಾರಿ ಅಧಿಕಾರಿಗಳೇ ಪಾಲಿಸುತ್ತಿಲ್ಲ.

ಮಾಜಿ ಸಚಿವ ಮಾಧುಸ್ವಾಮಿ ಭೇಟಿಯಾದ ಮುದ್ದಹನುಮೇಗೌಡ: ರಹಸ್ಯ ಮಾತುಕತೆ

ಕೋಟ್‌ಎಚ್‌ಎಸ್‌ಆರ್‌ಪಿ ಅಳವಡಿಕೆ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಎರಡನೇ ಗಡುವಾದ ಫೆ.17ರ ನಂತರ ಎಚ್ಎಸ್‌ಆರ್‌ಪಿ ಅಳವಡಿಕೆ ಮಾಡಿಕೊಳ್ಳುವವರ ಸಂಖ್ಯೆ ಭಾರೀ ಏರಿಕೆಯಾಗಿದೆ. ಈವರೆಗೆ 52 ಲಕ್ಷ ವಾಹನಗಳು ಎಚ್‌ಎಸ್‌ಆರ್‌ಪಿ ಅಳವಡಿಸಿಕೊಂಡಿದ್ದು, ಗಡುವು ಮುಗಿಯುವುದರೊಳಗೆ ಎಲ್ಲ 2 ಕೋಟಿ ವಾಹನಗಳು ಎಚ್‌ಎಸ್‌ಆರ್‌ಪಿ ಅಳವಡಿಕೆ ಮಾಡಿಕೊಳ್ಳುವ ನಿರೀಕ್ಷೆಯಿದೆ.
-ಸಿ. ಮಲ್ಲಿಕಾರ್ಜುನ, ಅಪರ ಸಾರಿಗೆ ಆಯುಕ್ತ

Follow Us:
Download App:
  • android
  • ios