Helicopter from scrap ಕಾರು ಬಿಡಿಭಾಗದಿಂದ ಹೆಲಿಕಾಪ್ಟರ್ ನಿರ್ಮಾಣ, ವ್ಯಂಗ್ಯವಾಡಿದ ಗ್ರಾಮಸ್ಥರ ಮುಂದೆ ಹಾರಿತು ಲೋಕಲ್ ಚಾಪರ್!
- ಅಪಹಾಸ್ಯ ಮಾಡಿದ ಗ್ರಾಮಸ್ಥರ ಮುಂದೆ ಹೆಲಿಕಾಪ್ಟರ್ ಹಾರಿಸಿದ ಸಾಧಕ
- ಗುಜುರಿ ಕಾರುಗಳ ಬಿಡಿ ಭಾಗ ತೆಗೆದು ಹೆಲಿಕಾಪ್ಟರ್ ನಿರ್ಮಿಸಿದ
- ಸರಾಗವಾಗಿ ಹಾರಾಡಿತು ಹೆಲಿಕಾಪ್ಟರ್, ಗ್ರಾಮಸ್ಥರಿಗೆ ಅಚ್ಚರಿ
ಬ್ರೆಜಿಲ್(ಡಿ.15): ಹೆಲಿಕಾಪ್ಟರ್(Helicopter) ಹಾರಿಸಬೇಕು ಅನ್ನೋದು ಆತನ ಬಾಲ್ಯದ ಕನಸು. ಆದರೆ ಪೈಲೆಟ್(pilot) ಕಲಿಯುವಷ್ಟು ದುಡ್ಡಿಲ್ಲ, ಖರೀದಿಸುವುದು ದೂರದ ಮಾತು. ಆದರೆ ಕನಸು ಬಿಡಲಿಲ್ಲ. ಕೊರೋನಾದಿಂದ ಅನಿವಾರ್ಯವಾಗಿ ಮನೆಯಲ್ಲಿರುವಾಗ ತನ್ನ ಕನಸು ಸಾಕಾರಗೊಳಿಸಲು ಈತ ಮುಂದಾಗಿದ್ದ, ತನ್ನಲ್ಲಿರುವ ಅಲ್ಪ ಹಣದಲ್ಲಿ ಹೆಲಿಕಾಪ್ಟರ್ ನಿರ್ಮಿಸಲು ಮುಂದಾದ. ಗುಜುರಿ ಕಾರು, ಬೈಕ್, ಟ್ರಕ್ ಬಿಡಿ ಭಾಗ ಪಡೆದು (Vehilce scrap) ಹೆಲಿಕಾಪ್ಟರ್ ನಿರ್ಮಿಸಿದ. ಇದೀಗ ಇದೇ ಹೆಲಿಕಾಪ್ಟರನ್ನು ತನ್ನನ್ನು ಅಪಹಾಸ್ಯದ ಮಾಡಿದ ಗ್ರಾಮಸ್ಥರ ಮುಂದೆ ಹಾರಿಸಿ ಎಲ್ಲರ ಬಾಯಿ ಮುಚ್ಚಿಸಿದ್ದಾನೆ. ಈ ಘಟನೆ ನಡೆದಿರುವುದು ಬ್ರೆಜಿಲ್‌ನಲ್ಲಿ.
ಗ್ರಾಮಸ್ಥರ ಅಪಹಾಸ್ಯ, ಮಕ್ಕಳಾಟಿಕೆ ಎಂದು ತಮಾಷೆ. ಕೈಯಲ್ಲಿ ಕಾಸಿಲ್ಲ, ಊಟಕ್ಕೆ ಗತಿಯಿಲ್ಲ, ಈತನಿಗೆ ಹೆಲಿಕಾಪ್ಟರ್ ಬೇರೆ ಕೇಡು ಎಂದು ಹಲವರು ಹೇಳಿದ್ದರು. ಆದರೆ ಬ್ರೆಜಿಲ್(Brazil) ರಿಯೋ ಗ್ರ್ಯಾಂಡ್ ಡೋ ನಾರ್ತೆಯ ಜೆನಿಸಿಸ್ ಗೊಮೆಸ್ ಎಲ್ಲಾ ಟೀಕೆ, ವಿರೋಧ ಸಹಿಸಿ ತನ್ನ ಕಾರ್ಯಸಾಧಿಸಿ ಇದೀಗ ವಿಶ್ವವನ್ನೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾನೆ.
ಕೋಟಿ ರೂ. ಬೆಂಝ್ ಕಾರನ್ನು ಹೆಲಿಕಾಪ್ಟರ್ ಮೂಲಕ ಬಿಸಾಡಿದ ಪುಣ್ಮಾತ್ಮ!
ಕೊರೋನಾ(Coronavirus) , ಲಾಕ್‌ಡೌನ್ ಕಠಿಣ ನಿರ್ಬಂಧಗಳಿಂದ ಹೆಚ್ಚು ಕೆಲಸವಿಲ್ಲ. ಹೀಗಾಗಿ ಜೆನಿಸಿಸ್ ಗೊಮೆಸ್‌ಗೆ ಅನಿವಾರ್ಯವಾಗಿ ಮನೆಯಲ್ಲೇ ಇರಬೇಕಾಯಿತು. ತನ್ನ ಕನಸು ಸಾಕಾರಗೊಳಿಸಲು ಕೆಲಸ ಆರಂಭಿಸಿದ ಜೆನಿಸಿಸ್‌ಗೆ ಆರ್ಥಿಕ ಮುಗ್ಗಟ್ಟು ಎದುರಾಗಿತ್ತು.ಆದರೆ ಸಂಶೋಧನೆ, ಸತತ ಪ್ರಯತ್ನ ಮಾತ್ರ ಕೈಬಿಡಲಿಲ್ಲ. ಹಣದ ಕೊರತೆಯಿಂದ ಜೆನಿಸಿಸ್ ಗೊಮೆಸ್, ವಾಹನಗ ಗುಜುರಿ ಕೇಂದ್ರಕ್ಕೆ ತೆರಳಿ ಮನವಿ ಮಾಡಿದ್ದ. ಅತೀ ಕಡಿಮೆ ಬೆಲೆಗೆ ಹಾಗೂ ಕೆಲ ಬಿಡಿ ಭಾಗಗಳನ್ನು ಯಾವುದೇ ಬೆಲೆ ನೀಡದೆ ಪಡೆದುಕೊಂಡಿದ್ದಾನೆ.
ಕಾರು, ಬೈಕ್, ಸ್ಕೂಟರ್, ಟ್ರಕ್ ಸೇರಿದಂತೆ ಇತರ ವಾಹನಗಳ ಬಿಡಿ ಭಾಗಗಳನ್ನು ಪಡೆದು ತನ್ನ ಕನಸಿನ ಹೆಲಿಕಾಪ್ಟರ್ ನಿರ್ಮಾಣ ಆರಂಭಿಸಿದ್ದ. ಈತನ ಪ್ಲಾನ್ ನೋಡಿದ ಕೆಲ ಗ್ರಾಮಸ್ಥರು ಅಪಹಾಸ್ಯ ಮಾಡಿದ್ದರು. ಬಿಡಿ ಭಾಗಗಳಲ್ಲಿ ಹೆಲಿಕಾಪ್ಟರ್ ನಿರ್ಮಿಸಿ ಹಾರಾಟ ಮಾಡುವಂತಿದ್ದರೆ, ಚಾಪರ್‌ಗೆ ಇಷ್ಟೊಂದು ಬೆಲೆ ಇರುತಿತ್ತಾ? ಎಲ್ಲರ ಮನೆಯಲ್ಲೂ ಹೆಲಿಕಾಪ್ಟರ್ ಇರುತ್ತಿತ್ತು. ಇವೆಲ್ಲಾ ಸಾಧ್ಯವಿಲ್ಲ ಎಂದಿದ್ದರು. ಆದರೆ ಜೆನಿಸಿಸ್ ಗೊಮೆಸ್ ಗೆಳಯರು ಸಾಥ್ ನೀಡಿದ್ದರು.
ಲೋಕಲ್ ರಾಂಚೋ ಇನ್ನಿಲ್ಲ.. ಪ್ರಾಣ ಬಲಿಪಡೆದ ಸಿಂಗಲ್ ಸೀಟರ್ ಹೆಲಿಕಾಪ್ಟರ್ ತಯಾರಿ!
ವೋಕ್ಸ್‌ವ್ಯಾಗನ್ ಬೀಟಲ್ ಕಾರಿನ ಎಂಜಿನ್‌ನನ್ನು ಈ ಹೆಲಿಕಾಪ್ಟರ್‌ಗೆ ಬಳಸಲಾಗಿದೆ. ಅತ್ಯಂತ ಶಕ್ತಿಶಾಲಿ ಎಂಜಿನ್ ಮೂಲಕ ವಿನೂತನ ಲೋಕಲ್ ಚಾಪರ್ ತಯಾರಿಸಲಾಗಿದೆ. ಈ ಹೆಲಿಕಾಪ್ಟರ್ ಟೇಕ್ ಆಫ್ ಕೊಂಚ ಬದಲಾವಣೆ ಇದೆ. ವಿಮಾನ ರೀತಿಯಲ್ಲಿ ರಸ್ತೆಯನ್ನು ರನ್‌ವೇ ರೀತಿ ಬಳಸಲಾಗಿದೆ. ರನ್‌ವೇನಲ್ಲಿ ವೇಗವಾಗಿ ತೆರಳಿ ಸರಾಗವಾಗಿ ಆಗಸಕ್ಕೆ ಹಾರಿದೆ. ಇತ್ತ ಗ್ರಾಮಸ್ಥರು, ಸ್ಥಳೀಯರು ಹೆಲಿಕಾಪ್ಟರ್ ಟೇಕ್ ಆಫ್ ಆಗುವುದನ್ನು ವಿಡಿಯೋ ಮಾಡಿದ್ದಾರೆ.
ಇದೀಗ ಬ್ರೆಜಿಲ್‌ನಲ್ಲಿ ಈ ಹೆಲಿಕಾಪ್ಟರ್ ಮಾತು ಜೋರಾಗಿದೆ. ಈ ವಿಡಿಯೋ ವೈರಲ್ ಆಗಿದೆ. ಹಲವು ಎವಿಯೇಶನ್ ಕಂಪನಿಗಳು ಇದೀಗ ಜೆನಿಸಿಸ್ ಗೊಮೆಸ್ ಸಂಪರ್ಕ ಮಾಡಲು ಯತ್ನಿಸಿದೆ. ಜೆನಿಸಿಸ್‌ಗೆ ಉದ್ಯೋಗದ ಆಫರ್ ನೀಡಲು ಹಲವು ಕಂಪನಿಗಳು ಮುಂದಾಗಿದೆ.
ಇತ್ತೀಚೆಗೆ ಇದೇ ರೀತಿ ವಾಹನಗಳ ಬಿಡಿಭಾಗದಿಂದ ಹೆಲಿಕಾಪ್ಟರ್ ತಯಾರಿಸಿದ ಯುವಕನೋರ್ವ ಪರೀಕ್ಷೆ ವೇಳೆ ಮೃತಪಟ್ಟ ಘಟನೆ ನಡೆದಿತ್ತು. ಹೆಲಿಕಾಪ್ಟರ್ ನಿರ್ಮಿಸಿ ಅದನ್ನು ಪರೀಕ್ಷಿಸುವ ವೇಳೆ ಹೆಲಿಕಾಪ್ಟರ್ ರೆಕ್ಕೆ ಮುರಿದು ನೇರವಾಗಿ ಯುವಕನ ತಲೆಗೆ ಬಡಿದಿತ್ತು. ಯುವಕ ಸ್ನೇಹಿತರು ಸಾಧನೆಯನ್ನು ವಿಡಿಯೋ ಮಾಡುತ್ತಿರುವಾಗಲೇ ಈ ಘಟನೆ ನಡೆದಿತ್ತು. ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ಯವಕನ ದಾಖಲಿಸಲಾಗಿತ್ತು. ಅದಕ್ಕೂ ಮೊದಲೇ ಯುವಕನ ಪ್ರಾಣ ಪಕ್ಷಿ ಹಾರಿಹೋಗಿತ್ತು. ಈ ಘಟನೆ ಬಳಿಕ ಹಲವರು ಹೆಲಿಕಾಪ್ಟರ್ ನಿರ್ಮಾಣಕ್ಕೆ ಹಿಂದೇಟು ಹಾಕಿದ್ದರು. ಆದರೆ ಜೆನಿಸಿಸ್ ಅಡೆತಡೆಗ, ಆತಂಕಗಳನ್ನು ಬದಿಗಿಟ್ಟು ಆತ್ಮವಿಶ್ವಾಸದಿಂದ ಹೆಲಿಕಾಪ್ಟರ್ ನಿರ್ಮಿಸಿ ಆಗಸದಲ್ಲಿ ಹಾರಿಸಿದ್ದಾರೆ.