Asianet Suvarna News Asianet Suvarna News

ಜೂನ್ 30ರೊಳಗೆ ಕರ್ನಾಟಕದಲ್ಲಿ 1000 ರಿಚಾರ್ಜಿಂಗ್ ಕೇಂದ್ರಗಳ ಸ್ಥಾಪನೆ

* ಜೂನ್ 30ರೊಳಗೆ ಕರ್ನಾಟಕದಲ್ಲಿ 1000 ರಿಚಾರ್ಜಿಂಗ್ ಕೇಂದ್ರಗಳ ಸ್ಥಾಪನೆ
* ಸಚಿವ ವಿ.ಸುನಿಲ್ ಕುಮಾರ್ ಹೇಳಿಕೆ
* ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಚಾರ್ಜಿಂಗ್ ಸ್ಟೇಷನ್‌

1000 fast charging stations for electric vehicles Says Minister Sunil kumar rbj
Author
Bengaluru, First Published May 8, 2022, 6:52 PM IST

ವರದಿ : ಮಧು.ಎಂ.ಚಿನಕುರಳಿ

ಮೈಸೂರು, (ಮೇ.08)
: ರಾಜ್ಯಾದಾದ್ಯಂತ 2022 ಜೂನ್ 30 ರೊಳಗೆ 1000 ಎಲೆಕ್ಟ್ರಾನಿಕ್ ವಾಹನಗಳ ಎಲೆಕ್ಟ್ರಿಕ್ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಇಂಧನ ಸಚಿವ ವಿ.ಸುನಿಲ್ ಕುಮಾರ್ ಅವರು ತಿಳಿಸಿದರು.

 ಚಾಮುಂಡೇಶ್ವರಿ ವಿದ್ಯುತ್‌ಚ್ಚಕ್ತಿ ನಿಗಮಿತ ಮತ್ತು ಕರ್ನಾಟಕ ವಿದ್ಯುತ್‌ಚ್ಚಕ್ತಿ ಮಂಡಳಿಯ ಇಂಜಿನಿಯರ್‌ಗಳ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಸ್ಟೇಷನ್‌ಗಳ ಉದ್ಘಾಟನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಜಿಲ್ಲಾ ಕೇಂದ್ರಗಳು, ಪ್ರವಾಸಿ ಕೇಂದ್ರಗಳು, ರಾಜ್ಯ ಹೆದ್ದಾರಿ ಮತ್ತು ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಲಾಗುವುದು. ಜೂನ್ ತಿಂಗಳಲ್ಲಿ ರಾಜ್ಯಾದ್ಯಂತ ಚಾರ್ಜಿಂಗ್ ಸ್ಟೇಷನ್‌ಗಳ ಸ್ಥಾಪನೆ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಪರ್ವ ಆರಂಭವಾಗಿದೆ. ದೇಶದಲ್ಲಿ ಹಸಿರು ವಾಹನಗಳ ಸಂಖ್ಯೆ ಹೆಚ್ಚಿಸಬೇಕು. ವಿದ್ಯುತ್ ವಾಹನಗಳ ಬಳಕೆಯಿಂದ ಮಾಲಿನ್ಯವನ್ನು ಕಡಿಮೆ ಮಾಡಬಹುದು. ಪೆಟ್ರೋಲಿಯಂ ಉತ್ಪನ್ನಗಳ ಬಳಕೆಯ ವಾಹನಗಳಿಂದ ಕಾರ್ಬನ್ ಹೊರಸೂಸಿ ವಾಯುಮಾಲಿನ್ಯ ಹೆಚ್ಚಾಗುತ್ತದೆ. ಕಾರ್ಬನ್‌ಗಳು ಮಾನವನ ಆರೋಗ್ಯ ಮತ್ತು ವಾತಾವರಣದ ಮೇಲೆ ಪರಿಣಾಮವನ್ನು ಬೀರುತ್ತವೆ. ಆದ್ದರಿಂದ ಸಾರ್ವಜನಿಕರು ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಮುಂದಾಗಬೇಕು. ಎಲೆಕ್ಟ್ರಿಕ್ ವಾಹನಗಳ ಉತ್ಪಾದನಾ ಕಂಪನಿಗಳು ಗ್ರಾಹಕರ ಕೈಗೆಟಕುವ ದರದಲ್ಲಿ ವಾಹನಗಳ ಮಾರಾಟ ಮಾಡಬೇಕು ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಏಕಕಾಲಕ್ಕೆ 50 ಎಲೆಕ್ಟ್ರಿಕ್ ವಾಹನಗಳ ರೀಚಾರ್ಜ್ ಆರಂಭ

 ಮಾನ್ಯ ಪ್ರಧಾನ ಮಂತ್ರಿಗಳು 2030 ರ ವೇಳೆಗೆ ದೇಶದಲ್ಲಿ 500 ಗಿಗಾವ್ಯಾಟ್ ಹಸಿರು ವಿದ್ಯುತ್ ಉತ್ಪಾದನೆ ಮಾಡವ ಗುರಿ ಹೊಂದಿದ್ದಾರೆ. ಅದೇ ರೀತಿ ರಾಜ್ಯದಲ್ಲಿ 10 ಗಿಗಾವ್ಯಾಟ್ ಉತ್ಪಾದಿಸುವ ಗುರಿ ಹೊಂದಲಾಗಿದೆ. ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಸಬ್ಸಿಡಿ ನೀಡಲಾಗುತ್ತದೆ. ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಸ್ಟೇಷನ್ ಆರಂಭಿಸಲು ಸರ್ಕಾರದಿಂದ ಸಬ್ಸಿಡಿ ನೀಡಲಾಗುವುದು. ನವೀಕರಿಸಬಹುದಾದ ಇಂಧನಗಳ ಬಳಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ನವೀಕರಿಸಬಹುದಾದ ಇಂಧನಗಳ ಬಳಕೆ ಹಾಗೂ ಅಭಿಯಾನದಲ್ಲಿ ಇತರ ರಾಜ್ಯಗಳಿಗಿಂತ ಕರ್ನಾಟಕ ರಾಜ್ಯ ಮುಂಚೂಣಿಯಲ್ಲಿದೆ ಎಂದು ತಿಳಿಸಿದರು.

ಇಂಧನ ಇಲಾಖೆಯನ್ನು ಜನಸ್ನೇಹಿ ಇಲಾಖೆ ಆಗಿ ಪರಿವರ್ತಿಸಲಾಗುತ್ತಿದೆ. ಆ ನಿಟ್ಟಿನಲ್ಲಿ ಟಿ.ಸಿ ಕೆಟ್ಟುಹೋದ 24 ಗಂಟೆಯೊಳಗೆ ಬದಲಿಸುವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಪ್ರಾರಂಭದಲ್ಲಿ ಇದು ಅಸಾಧ್ಯ ಎಂದವರು ಇಂದು ಸಾಧ್ಯ ಎನ್ನುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇವೆ. 24 ಗಂಟೆಯೊಳಗೆ ಟಿಸಿ ಬದಲಾಯಿಸುವ ಕಾರ್ಯದಲ್ಲಿ ಶೇಕಡಾ 86 ರಷ್ಟು ಪ್ರಗತಿ ಸಾಧಿಸಿದ್ದೇವೆ. ಮುಂದಿನ ದಿನಗಳಲ್ಲಿ ಶೇಕಡ 100 ರಷ್ಟು ಗುರಿ ಮುಟ್ಟುವ ವಿಶ್ವಾಸವಿದೆ ಎಂದು ಭರವಸೆ ನೀಡಿದರು.

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಜಿ ಟಿ ದೇವೇಗೌಡರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ರತಿಯೊಂದು ಪೆಟ್ರೋಲ್‌ಬಂಕ್ ಸ್ಟೇಷನ್ ಹತ್ತಿರ ಚಾರ್ಜಿಂಗ್ ಕೇಂದ್ರಗಳನ್ನು ತೆರೆಯುವಂತೆ ಹಾಗೂ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕೆ.ಇ.ಬಿ ಸ್ಟೇಷನ್‌ಗಳ ಕೊರತೆ ಇದ್ದು, ಶೀಘ್ರವಾಗಿ ಸ್ಟೇಷನ್‌ಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳುವಂತೆ ಇಂಧನ ಸಚಿವರಲ್ಲಿ ಮನವಿ ಮಾಡಿದರು.

ಈ ಹಿಂದೆ ಹುಣಸೂರು ಕ್ಷೇತ್ರದ ಶಾಸಕನಾಗಿ ನಾಲ್ಕು ಹೋಬಳಿಗಳಲ್ಲಿ ನಾಲ್ಕು ಸ್ಟೇಷನ್‌ಗಳನ್ನು ಸ್ಥಾಪಿಸಲಾಗಿ, ಪ್ರಸ್ತುತ ಆ ಭಾಗದ ರೈತರಿಗೆ ಹಾಗೂ ನಿವಾಸಿಗಳಿಗೆ ವಿದ್ಯುತ್ ಸಮರ್ಪಕವಾಗಿ ಸರಬರಾಜಗುತ್ತಿರುವುದನ್ನು ಸ್ಮರಿಸಿದರು ನಂತರ ಲೈನ್‌ಮೆನ್‌ಗಳ ಕೊರತೆ ಇರುವುದರಿಂದ ಶೀಘ್ರವಾಗಿ 25 ಲೈನ್ ಮೆನ್ ಗಳನ್ನು ಒದಗಿಸಿಕೊಡುವಂತೆ ಸಚಿವರಲ್ಲಿ ಕೋರಿದರು.

ಚೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಜಯವಿಭವಸ್ವಾಮಿ ಅವರು ಮಾತನಾಡಿ ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಾಗುತ್ತವೆ ಪೆಟ್ರೋಲಿಯಂ ಉತ್ಪನ್ನ ವಾಹನಗಳ ಅವಲಂಬನೆ ಕಡಿಮೆಯಾಗುತ್ತದೆ. ಪೆಟ್ರೋಲಿಯಂ ಉತ್ಪನ್ನಗಳ ಆಮದು ಕಡಿಮೆಯಾಗಿ ದೇಶ ಸ್ವಾವಲಂಬನೆ ಆಗುತ್ತದೆ. ಎಲೆಕ್ಟಿçಕ್ ಚಾರ್ಜಿಂಗ್ ಸ್ಟೇಷನ್ ಸ್ಥಾಪಿಸುವವರಿಗೆ ಸಬ್ಸಿಡಿ ದರದಲ್ಲಿ ಯುನಿಟ್ ಗೆ 5 ರೂ ರಂತೆ ವಿದ್ಯುತ್ ಪೂರೈಕೆ ಮಾಡಲಾಗುವುದು. ಎಲೆಕ್ಟ್ರಿಕ್ ವಾಹನಗಳ ನೋಂದಣಿ ಶುಲ್ಕ ವಿನಾಯಿತಿ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ನಂಜನಗೂಡು ವಿಧಾನಸಭಾ ಕ್ಷೇತ್ರದ ಶಾಸಕರಾದ ಹರ್ಷವರ್ಧನ್, ವಿಧಾನಪರಿಷತ್ ಸದಸ್ಯರಾದ ಮಂಜೇಗೌಡ, ಗುಲ್ಬರ್ಗ ವಿಭಾಗದ ತಾಂತ್ರಿಕ ನಿರ್ದೇಶಕರಾದ ಸೋಮಶೇಖರ್, ಇಂಜಿನಿಯರ್ ಗಳ ಸಂಘದ ಅಧ್ಯಕ್ಷರಾದ ಶಿವಪ್ರಕಾಶ್, ನೌಕರರ ಎಸ್ಸಿಎಸ್ಟಿ ಸಂಘದ ಅಧ್ಯಕ್ಷರಾದ ದಾಸ್ ಪ್ರಕಾಶ್, ವಿದ್ಯುತ್ಛಕ್ತಿ ಮಂಡಳಿಯ ಇಂಜಿನಿಯರ್‌ಗಳು ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

Follow Us:
Download App:
  • android
  • ios