Hindi ರಾಷ್ಟ್ರಭಾಷೆ ಅನ್ನೋದರಲ್ಲಿ ಅನುಮಾನವಿಲ್ಲ: ಡಾ. ವೈ.ಎ.ನಾರಾಯಣಸ್ವಾಮಿ
ದೇಶ ಒಡೆಯುವ ರಾಜಕೀಯ, ಕುತಂತ್ರದ ಭಾಗವಾಗಿ ಹಿಂದಿಗೆ ವಿರೋಧ ಎಂದು ದಾವಣಗೆರೆಯಲ್ಲಿ ವಿಧಾನ ಪರಿಷತ್ ಮುಖ್ಯ ಸಚೇತಕ ಡಾ. ವೈ.ಎ.ನಾರಾಯಣಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.
ಕನ್ನಡಪ್ರಭ ವಾರ್ತೆ, ದಾವಣಗೆರೆ
ಹಿಂದಿ ರಾಷ್ಟ್ರಭಾಷೆ ಎನ್ನುವುದರಲ್ಲಿ ಯಾವುದೇ ಅನುಮಾನವೂ ಇಲ್ಲ. ದೇಶ ಒಡೆಯುವ ರಾಜಕೀಯ ಕುತಂತ್ರ, ಷಡ್ಯಂತ್ರದ ಭಾಗವಾಗಿ ಹಿಂದಿಯನ್ನು ವಿರೋಧಿಸುವ ಕೆಲಸವಾಗುತ್ತಿದೆಯಷ್ಟೇ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಡಾ. ವೈ.ಎ.ನಾರಾಯಣಸ್ವಾಮಿ ದಾವಣಗೆರೆಯಲ್ಲಿ ಹೇಳಿದರು. ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಸೋಮವಾರ ರಾಜ್ಯ ಪ್ರೌಢಶಾಲಾ ಹಿಂದಿ ಶಿಕ್ಷಕರ ಸಂಘ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಶೈಕ್ಷಣಿಕ ಸಮ್ಮೇಳನದಲ್ಲಿ ಮಾತನಾಡಿದ ಅವರು, ಫ್ರೆಂಚ್, ಜಪಾನೀಸ್, ಚೀನಾ, ಜರ್ಮನ್‌ನಲ್ಲಿ ಅಲ್ಲಿನ ಭಾಷೆಯಲ್ಲೇ ಬೋಧಿಸುತ್ತಿದ್ದಾರೆ. ಯಾವುದೇ ಭಾಷೆಗೂ ಇಲ್ಲದ ವಿರೋಧ ಹಿಂದಿ ಭಾಷೆ ವಿಚಾರದಲ್ಲೇ ಏಕೆಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದರು.
ದೇಶದ 30 ರಾಜ್ಯಗಳನ್ನು ಬೆಸೆಯುವ ಹಿಂದಿ ಭಾಷೆಯು ದೇಶಕ್ಕೆ ಗೌರವ ತಂದಿದೆ. ಒಗ್ಗಟ್ಟನ್ನು ಕಾಪಾಡಿದೆ. ಇಂತಹ ಒಗ್ಗಟ್ಟನ್ನು ಮುರಿಯಲು ನಾವೆಂದಿಗೂ ಅವಕಾಶ ನೀಡುವುದಿಲ್ಲ. ನಾವು ಹಿಂದಿ ಪರವಾಗಿದ್ದು, ಯಾರೂ ಆತಂಕಪಡಬೇಕಾದ ಪ್ರಮೇಯವೇ ಇಲ್ಲ. ಶಿಕ್ಷಕರಿಗೆ ಗೌರವ ಕೊಡದ ಸಮಾಜ ಉಳಿಯುವುದಕ್ಕೆ ಸಾಧ್ಯವೂ ಇಲ್ಲ. ಶಿಕ್ಷಕರ ಮೊಗದಲ್ಲಿ ಮಂದಹಾಸವಿದ್ದಾಗ ಮಾತ್ರ ಸಮಾಜ ಸುಭದ್ರವಾಗುತ್ತದೆ ಎಂದು ತಿಳಿಸಿದರು. ಶಿಕ್ಷಕ ಸಮುದಾಯದ ಎಲ್ಲಾ ಸಮಸ್ಯೆಗಳು ಬಗೆಹರಿಯಬೇಕು. ಯಾವುದೇ ಭಿನ್ನಾಭಿಪ್ರಾಯಗಳು ಇದ್ದರೆ ಅವುಗಳನ್ನು ತೊರೆದು, ಶಿಕ್ಷಕರೆಲ್ಲರೂ ಒಗ್ಗಟ್ಟಾಗಿದ್ದರೆ ಸಂಘಟನೆಯೂ ಭದ್ರವಾಗುವ ಜೊತೆಗೆ ನಿಮ್ಮ ಬೇಡಿಕೆಗಳನ್ನೂ ಅದೇ ಸಂಘಟನೆ ಮೂಲಕ ಈಡೇರಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಶಿಕ್ಷಕರು ಸಂಘಟಿತರಾಗುವ ಮೂಲಕ ಒಗ್ಗಟ್ಟು ಸಾಧಿಸಬೇಕು ಎಂದು ಹೇಳಿದರು.
ಇದನ್ನು ಓದಿ: ರಾಷ್ಟ್ರಭಾಷೆ ಹಿಂದಿ ಗೊತ್ತಿರಲೇಬೇಕು ಎಂದ Zomatoಗೆ ತಕ್ಕ ಶಾಸ್ತಿ ಮಾಡಿದ ಗ್ರಾಹಕ!
ಸಂಘದ ರಾಜ್ಯಾಧ್ಯಕ್ಷ ಧರ್ಮರಾಜ್ ಎಂ.ರಾಠೋಡ್ ಅಧ್ಯಕ್ಷತೆ ವಹಿಸಿದ್ದರು. ನಗರಾಭಿವೃದ್ಧಿ ಸಚಿವ ಬಿ.ಎ.ಬಸವರಾಜ ಭೈರತಿ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಸಂಸದ, ಕೇಂದ್ರದ ಮಾಜಿ ಸಚಿವ ಡಾ.ಜಿ.ಎಂ.ಸಿದ್ದೇಶ್ವರ, ಪ್ರೌಢಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಸಿದ್ದಬಸಪ್ಪ, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಡಿ.ಡಿ.ಹಾಲಪ್ಪ, ಡಯಟ್ ಪ್ರಾಚಾರ್ಯರಾದ ಗೀತಾ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಪಾಲಾಕ್ಷಿ, ಹಿಂದಿ ಶಿಕ,್ಕರ ಸಂಘದ ಜಿಲ್ಲಾಧ್ಯಕ್ಷ ಕೆ.ಮಂಜಾನಾಯ್ಕ ಬೆಂಗಳೂರು ವಿಭಾಗದ ಉಪಾಧ್ಯಕ್ಷ ಬಿ.ಮುಬಾರಕ್ ಅಲಿ ಇತರರು ಇದ್ದರು. ಇದೇ ವೇಳೆ ರಾಜ್ಯ ಪ್ರಶಸ್ತಿ ಪುರಸ್ಕೃತ ಹಿಂದಿ ಶಿಕ್ಷಕರಿಗೆ ಸನ್ಮಾನಿಸಲಾಯಿತು. ಜಿಲ್ಲೆಗೊಬ್ಬ ಶಿಕ್ಷಕರಿಗೆ ಹಿಂದಿ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಂಘದ ವೆಬ್‌ಸೈಟ್ ಹಾಗೂ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು.
ರಾಷ್ಟ್ರಭಾಷೆಯಾಗಿ ಹಿಂದಿ ಕಲಿಸುವುದು ತಪ್ಪೇನೂ ಇಲ್ಲ
ವಿಧಾನ ಪರಿಷತ್ ಸದಸ್ಯ ಎಂ.ಚಿದಾನಂದಗೌಡ ಮಾತನಾಡಿ, ದೇಶಕ್ಕೆ ರಾಷ್ಟ್ರಧ್ವಜ, ರಾಷ್ಟ್ರಪಕ್ಷಿ, ರಾಷ್ಟ್ರೀಯ ಪ್ರಾಣಿ ಇರುತ್ತದೆ. ಆದರೆ, ಈವರೆಗೆ ರಾಷ್ಟ್ರಭಾಷೆಯ ಕುರಿತಂತೆ ಇರುವ ಗೊಂದಲ ಇಂದಿಗೂ ಬಗೆಹರಿದಿಲ್ಲ. ಜವಾಹರ ಲಾಲ್ ನೆಹರೂ ಕಾಲದಿಂದ ಈಗಿನ ಪ್ರಧಾನಿ ನರೇಂದ್ರ ಮೋದಿವರೆಗೂ ಹಿಂದಿಯನ್ನು ರಾಷ್ಟ್ರಭಾಷೆಯಾಗಿ ಘೋಷಿಸುವ ಪ್ರಯತ್ನಗಳು ನಡೆಯುತ್ತಿದ್ದರೂ, ದುರಾದೃಷ್ಟವಶಾತ್ ಅದು ಕಾರ್ಯ ರೂಪಕ್ಕೆ ಬಂದಿಲ್ಲವೆಂದು ವಿಷಾದಿಸಿದರು. ಹಿಂದಿ ಹೇರಿಕೆಯ ಆರೋಪದಲ್ಲಿ ದಕ್ಷಿಣ ಭಾರತದ ರಾಜ್ಯದಿಂದ ವಿರೋಧ ವ್ಯಕ್ತವಾಗುತ್ತಿದೆ. ರಾಷ್ಟ್ರ ಭಾಷೆಯಾಗಿರುವ ಹಿಂದಿ ಕಲಿಸುವುದು ತಪ್ಪೇನೂ ಇಲ್ಲ. ಈ ಸಮ್ಮೇಳನದ ಮೂಲಕ ಹಿಂದಿಯನ್ನು ರಾಷ್ಟ್ರ ಭಾಷೆಯೆಂಬುದಾಗಿ ಅಧಿಕೃತವಾಗಿ ಘೋಷಿಸುವಂತೆ ಸರ್ಕಾರಕ್ಕೆ ಸಂದೇಶ ಹೋಗಬೇಕಿದೆ. ಹಿಂದಿ ಭಾಷೆಯನ್ನು ರಾಷ್ಟ್ರೀಯ ಭಾಷೆಯೆಂಬುದಾಗಿ ಘೋಷಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುವ ಕೆಲಸವೂ ಆಗಬೇಕಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಹಿಂದಿ ರಾಷ್ಟ್ರ ಭಾಷೆಯಲ್ಲ ಎಂದ ಕೇಂದ್ರ: ರಾಜ್ಯದಲ್ಲಿ ಹಿಂದಿ ವಿರೋಧಿ ಪ್ರತಿಭಟನೆ ಬೆನ್ನಲ್ಲೇ ಸ್ಪಷ್ಟನೆ