ನಾಗರಾಜ್ ಬಡದಾಳ್

ದಾವಣಗೆರೆ [ನ.11]: ಬಾಂಗ್ಲಾದೇಶದ ಅಕ್ರಮ ವಲಸಿಗರು ದಾವಣಗೆರೆ ಯಲ್ಲಿ ಬೇರು ಬಿಟ್ಟಿರುವುದಕ್ಕೆ ಸಾಕಷ್ಟು ನಿದರ್ಶನಗಳಿದ್ದು, ಇದಕ್ಕೆ ಇಂಬು ನೀಡುವಂತೆ ಕಳೆದ ವರ್ಷವಷ್ಟೇ ರೈಲಿನಲ್ಲಿ ಇಲ್ಲಿಗೆ ಬಂದ ವೇಳೆ ಸಿಕ್ಕು ಬಿದ್ದು, ಕಳೆದ ತಿಂಗಳಷ್ಟೇ 2 ವರ್ಷ ಜೈಲು ಮತ್ತು ಗಡೀಪಾರು ಶಿಕ್ಷೆಗೆ ಗುರಿಯಾದ ಬಾಂಗ್ಲಾ ಮೂಲದ ಮಹಿಳೆ ಪ್ರಕರಣವೇ ಸಾಕ್ಷಿ.

90 ರ ದಶಕದಲ್ಲಿ ನಗರದ ಹಾಸ್ಟೆಲ್‌ವೊಂದರಲ್ಲಿನಿಗೂಢ ಸ್ಫೋಟ, ಮಾಯಕೊಂಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರ ಜೀಪನ್ನು ಕಾಣುತ್ತಿದ್ದಂತೆಯೇ ಬಂದೂಕನ್ನು ಎಸೆದು ಬೈಕ್‌ನಲ್ಲಿ ಪರಾರಿಯಾಗಿದ್ದ ಆಗಂತುಕರ ಪ್ರಕರಣ, ಹೊನ್ನಾಳಿ ತಾಲೂಕಿನ ಕಡದಕಟ್ಟೆ ಬಳಿ ಶಂಕಿತ ಇಬ್ಬರ ಬಂಧನ ಪ್ರಕರಣಗಳು ಜನರ ಮನಸ್ಸಿನಲ್ಲಿ ಹಸಿರಾಗಿದ್ದಾಗಲೇ ಬಾಂಗ್ಲಾ ಮೂಲದ ಮಹಿಳೆಯ ಬಂಧನವಾಗಿತ್ತು.

ಯೂರೋಪ್‌ನ ಗ್ಲಾಸ್ಕೋ ವಿಮಾನ ನಿಲ್ದಾಣ ಸ್ಫೋಟ ಪ್ರಕರಣದ ಒಬ್ಬ ಆರೋಪಿ ದಾವಣಗೆರೆಯ ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜೊಂದ ರಲ್ಲಿ ಓದಿದ್ದ, ಇಲ್ಲಿನ ಶ್ರೀಮಂತರ ಬಡಾವಣೆಯಲ್ಲಿ ಕೊಠಡಿ ಮಾಡಿಕೊಂಡು ವಿದ್ಯಾಭ್ಯಾಸ ಮಾಡಿದ್ದ. ಇಲ್ಲಿಗೆ ಉನ್ನತ ಶಿಕ್ಷಣ ಪಡೆಯಲು ದೇಶ, ವಿದೇಶದಿಂದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಬರುತ್ತಾರೆ. 

ಅದೇ ರೀತಿ ಅನ್ನ ಅರಸಿಯೋ ಅಥವಾ ಬೇರಿನ್ಯಾವ ಕಾರಣಕ್ಕೋ ಅಕ್ರಮವಾಗಿ ಬಂದು ನೆಲೆಸಿದವರ ಸಂಖ್ಯೆಯೂ ಸಾಕಷ್ಟಿದೆ. ಬಾಂಗ್ಲಾದೇಶದ ಭರತ್‌ಪುರ ಗ್ರಾಮದ ಹಸಿಯಾ ಅಲಿಯಾಸ್ ಅಸ್ಮಾ ಬಿನ್ ಜಮೀರ್(30 ವರ್ಷ) ಎಂಬ ಮಹಿಳೆ ಅಕ್ರಮವಾಗಿ ಭಾರತದೊಳಗೆ ಪ್ರವೇಶಿಸಿದ್ದಳು. ಅಷ್ಟೇ ಅಲ್ಲ, 18.6.2018 ರಂದು ದಾವಣಗೆರೆ ರೈಲ್ವೆ ನಿಲ್ದಾಣಕ್ಕೆ ಬಂದಿಳಿದಾಗ ಅನುಮಾನಾಸ್ಪದವಾಗಿ ವರ್ತಿಸಿದ ಹಿನ್ನೆಲೆಯಲ್ಲಿ ಆಕೆ ಸಿಕ್ಕಿ ಬಿದ್ದಿದ್ದಳು. ಮೈತ್ರಿ ಪುನರ್ವಸತಿ ಕೇಂದ್ರದ ಸಿಬ್ಬಂದಿ ರೈಲ್ವೆ ನಿಲ್ದಾಣದಲ್ಲಿ ಸಿಕ್ಕ ಹಸಿಯಾಳನ್ನು ತಮ್ಮ ಪುನರ್ವಸತಿ ಕೇಂದ್ರಕ್ಕೆ ಕರೆದೊಯ್ದಾಗ ಆಕೆ ಬಾಂಗ್ಲಾ ಪ್ರಜೆಯೆಂಬುದು ಸ್ಪಷ್ಟವಾಗಿತ್ತು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮೈತ್ರಿ ಸಂಸ್ಥೆ ಮುಖ್ಯಸ್ಥರು ತಕ್ಷಣವೇ ಬಡಾವಣೆ ಪೊಲೀಸರಿಗೆ ಈ ವಿಚಾರ ಮುಟ್ಟಿಸಿದ್ದರು. ಹಸಿಯಾಳನ್ನು ಮಹಿಳಾ ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ತಾನು ಬಾಂಗ್ಲಾ ದೇಶದ ದಾಲ್ ಚೋಡಾ ಜಿಲ್ಲೆ ಭರತ್‌ಪುರದ ವಾಸಿ. ಬಾಂಗ್ಲಾದಿಂದ ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ್ದು, ರೈಲಿನಲ್ಲಿ ಇಲ್ಲಿಗೆ ಬಂದಿಳಿದಾಗ ಸಿಕ್ಕಿ ಬಿದ್ದಿದ್ದಾಗಿ ಬಾಯಿ ಬಿಟ್ಟಿದ್ದಾಳೆ. ಆಕೆ ಅಕ್ರಮವಾಗಿ ಭಾರತ ಪ್ರವೇಶಿಸಿದ್ದು ತುತ್ತು ಅನ್ನ ಕ್ಕಾಗೋ ಅಥವಾ ಮತ್ತ್ಯಾವ ಕಾರಣಕ್ಕೆ ಎಂಬುದು ಮಾತ್ರ ಈಗಲೂ ನಿಗೂಢವಾಗಿ ಉಳಿದಿದೆ. 

ಹಸಿಯಾ ಅಲಿಯಾಸ್ ಅಸ್ಮಾಗೆ ನ್ಯಾಯಾಲಯವು ಸುದೀರ್ಘ ವಿಚಾರಣೆ ನಡೆಸಿ, 2 ವರ್ಷ ಜೈಲು ಶಿಕ್ಷೆ ಶಿಕ್ಷೆ ಮುಗಿದ ನಂತರ ಭಾರತದಿಂದ ಬಾಂಗ್ಲಾ ದೇಶಕ್ಕೆ ಗಡೀಪಾರು ಮಾಡುವಂತೆ ಆದೇಶಿಸಿತ್ತು.

ಮೂಲ ಎಲ್ಲಿಯದ್ದು : ಮಧ್ಯ ಕರ್ನಾಟಕದ ದಾವಣಗೆರೆ ನಗರ, ಜಿಲ್ಲೆಯಲ್ಲೂ ಅಕ್ರಮವಾಗಿ ಬಾಂಗ್ಲಾದೇಶಿಗರು ನೆಲೆಸಿದ್ದಾರೆ. ದಾವಣಗೆರೆ, ಹರಿಹರದಲ್ಲಿ ಅಕ್ರಮವಾಗಿ ಬಾಂಗ್ಲನ್ನರು ಇರುವ ಬಗ್ಗೆ ಗುಸು ಗುಸು ಕೇಳಿ ಬರುತ್ತಿದೆ. ಕಡಿಮೆ ಕೂಲಿಗೆ ಮೈಬಗ್ಗಿಸಿ ದುಡಿಯುವ ಈ ಜನರಿಗೆ ಕೆಲವರು ವ್ಯವಸ್ಥಿತವಾಗಿ ದಾಖಲಾತಿ ಮಾಡಿಕೊಡುವ ಕೆಲಸವನ್ನೂ ಮಾಡಿಕೊಡುತ್ತಿದ್ದಾರೆಂಬ ಆರೋಪವೂ ಇದೆ. ಇದಕ್ಕೆ ಇಂಬು ನೀಡುವಂತೆ ದಾವಣಗೆರೆಯಲ್ಲೇ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿರುವ ಅನುಮಾನಾಸ್ಪದ ವ್ಯಕ್ತಿಗಳು. ವಾರಕ್ಕೊಮ್ಮೆ ಎಲ್ಲರೂ ತಾವು ಕೆಲಸ ಮಾಡುವ ಸ್ಥಳದಿಂದ ಹೊರ ಬಂದು, ತಮ್ಮಷ್ಟಕ್ಕೆ ತಾವು ಬಂದ ಕೆಲಸ ಮುಗಿಸಿಕೊಂಡು ವಾಪಸಾಗುತ್ತಾರೆ. ನಿರ್ದಿಷ್ಟವಾಗಿ ಎಲ್ಲರೂ ಒಂದೇ ಕಡೆ ಬಂದು ಹೋಗುತ್ತಿದ್ದು, ಹೀಗೆ ಬಂದು ಹೋಗುವ ಶ್ರಮಿಕರು ಆಡುವ ಉರ್ದು ಭಾಷೆಯಾಗಲಿ, ಹಿಂದಿ ಭಾಷೆಯಾಗಲಿ, ಸ್ಥಳೀಯರ ರೀತಿಯಲ್ಲಾಗಲಿ ಇಲ್ಲ.