ವಿಶ್ವಹಿಂದೂ ಪರಿಷತ್ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಬಂಧನ ಬೆನ್ನಲ್ಲೇ ಕದ್ರಿ ಪೊಲೀಸ್ ಠಾಣೆ ಬಳಿಕ ಹಿಂದೂ ಕಾರ್ಯಕರ್ತರು ಜಮಾವಣೆಗೊಂಡಿದ್ದಾರೆ.  ಇದು ಮುಸ್ಲಿಮರ ಒಲೈಕೆಗಾಗಿ ನಡೆದ ಬಂಧನ ಎಂದು ವಿಹೆಚ್‌ಪಿ ಮುಖಂಡ ಪ್ರದೀಪ್ ಸರಿಪಳ್ಳ ಹೇಳಿದ್ದಾರೆ. ಇಷ್ಟೇ ಅಲ್ಲ ಸರ್ಕಾರಕ್ಕೂ ಎಚ್ಚರಿಕೆ ನೀಡಿದ್ದಾರೆ.

ಮಂಗಳೂರು(ಮೇ.27) ಮಂಗಳೂರಿನಲ್ಲಿ ಪರಿಸ್ಥಿತಿ ಕೈಮೀರುತ್ತಿದೆಯಾ? ಸಾಲು ಸಾಲು ಪ್ರಕರಣಗಳು ಕಾನೂನು ಸುವ್ಯವಸ್ಥೆಯನ್ನೇ ಪ್ರಶ್ನಿಸುವಂತಿದೆ. ಬಂಟ್ವಾಳದಲ್ಲಿ ಅಬ್ದುಲ್ ರಹೀಂ ಹತ್ಯೆ ಬೆನ್ನಲ್ಲೇ ಪೊಲೀಸರ ಕಾರ್ಯಾಚರಣೆ ಚುರುಕುಗೊಂಡಿದೆ. ಇದರ ನಡುವೆ ವಿಶ್ವ ಹಿಂದೂ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್ ಬಂಧನವಾಗಿದೆ. ಸುಹಾಸ್ ಶೆಟ್ಟಿ ಪ್ರಕರಣ ಸಂಬಂಧ ದಕ್ಷಿಣ ಕನ್ನಡ ಜಿಲ್ಲೆಗೆ ಬಂದ್‌ಗೆ ಕರೆ ನೀಡಿದ್ದ ಪ್ರಕರಣ ಸಂಬಂಧ ಶರಣ್ ಪಂಪ್‌ವೆಲ್ ಬಂಧನವಾಗಿದೆ.ಆದರೆ ಬಂಟ್ವಾಳದಲ್ಲಿ ಅಬ್ದುಲ್ ರಹೀಂ ಹತ್ಯೆ ಪ್ರಕರಣ ಬೆನ್ನಲ್ಲೇ ಶರಣ್ ಪಂಪ್‌ವೆಲ್ ಬಂಧಿಸುವ ಮೂಲಕ ಮುಸ್ಲಿಮರ ಒಲೈಕೆ ಮಾಡಲಾಗುತ್ತಿದೆ. ಪ್ರಕರಣ ನಡೆದು 20 ದಿನಗಳ ಬಳಿಕ ಈಗ ಬಂಧನ ಮಾಡಿರುವುದು ಯಾಕೆ ಎಂದು ವಿಶ್ವ ಹಿಂದೂ ಪರಿಷತ್ ಮುಖಂಡ ಪ್ರದೀಪ್ ಸರಿಪಳ್ಳ ಪ್ರಶ್ನಿಸಿದ್ದಾರೆ.

ಶರಣ್ ಪಂಪ್‌ವೆಲ್ ಬಂಧನ ಬೆನ್ನಲ್ಲೇ ಹಿಂದೂ ಕಾರ್ಯಕರ್ತರ ಜಮಾವಣೆ

ಶರಣ್ ಪಂಪ್‌ವೆಲ್ ಬಂಧನವಾಗುತ್ತಿದ್ದಂತೆ ಕದ್ರಿ ಪೊಲೀಸ್ ಠಾಣೆ ಬಳಿ ಹಿಂದೂ ಕಾರ್ಯಕರ್ತರು ಜಮಾಯಿಸುತ್ತಿದ್ದಾರೆ. ಹಲವು ಸಂಘಟನೆಗಳ ಮುಖಂಡರು ಪೊಲೀಸ್ ಠಾಣೆ ಎದುರು ಹಾಜರಾಗಿದ್ದಾರೆ. ಇದೇ ವೇಳೆ ವಿಶ್ವ ಹಿಂದೂ ಪರಿಷತ್ ಮುಖಂಡ ಪ್ರದೀಪ್ ಸರಿಪಳ್ಳ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಸರ್ಕಾರ ಹಾಗೂ ಪೊಲೀಸರಿಗೆ ಎಚ್ಚರಿಕೆ

ಸುಹಾಸ್ ಶೆಟ್ಟಿ ಹತ್ಯೆ ದಿನ ಶರಣ್ ಪಂಪ್‌ವೆಲ್ ಬಂದ್‌ಗೆ ಕರೆ ನೀಡಿದ್ದರು. ಇದೀಗ 20 ದಿನಗಳು ಉರುಳಿದೆ. ಈಗ ಬಂಧನ ಮಾಡಿದ್ದು ಯಾಕೆ? ಇವತ್ತು ನಡೆದಿರುವ ಹತ್ಯೆ ಘಟನೆ ಹಿನ್ನಲೆಯಲ್ಲಿ ಮುಸ್ಲಿಮರ ಒಲೈಕೆ ಮಾಡಲು ಶರಣ್ ಪಂಪ್‌ವೆಲ್ ಬಂಧಿಸಿದ್ದಾರೆ. ಇದು ಜಾಮೀನು ಆಗುವ ಕೇಸ್ ಆಗಿದೆ. ಶರಣ್ ಪಂಪ್‌ವೆಲ್ ಅವರನ್ನು ಜೈಲಿಗೆ ಕಳುಹಿಸುವುದಿಲ್ಲ ಎಂದು ಪೊಲೀಸ್ ಕಮಿಷನರ್ ಹೇಳಿದ್ದಾರೆ. ಒಲೈಕೆಗಾಗಿ ಶರಣ್ ಪಂಪ್‌ವೆಲ್ ಅವರನ್ನು ಜೈಲಿಗೆ ಹಾಕಿದರೆ ಮುಂದೆ ಆಗುವ ಘಟನೆಗಳಿಗೆ ಸರ್ಕಾರವೇ ನೇರ ಹೊಣೆಯಾಗಲಿದೆ ಎಂದು ಪ್ರದೀಪ್ ಸರಿಪಳ್ಳ ಎಚ್ಚರಿಸಿದ್ದಾರೆ. ಸರ್ಕಾರ ಹಾಗೂ ಪೊಲೀಸರಿಗೆ ಪ್ರದೀಪ್ ಸರಿಪಳ್ಳ ಎಚ್ಚರಿಸಿದ್ದಾರೆ.

ಬಂಟ್ವಾಳದ ಅಬ್ದುಲ್ ರಹೀಂ ಹತ್ಯೆ ಖಂಡಿಸಿ ಪ್ರತಿಭಟನೆ

ಬಂಟ್ವಾಳದ ಅಬ್ದುಲ್ ರಹೀಂ ಬರ್ಬರ ಹತ್ಯೆ ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಯೆನಪೋಯ ಆಸ್ಪತ್ರೆ ಮುಂಭಾಗ ಭಾರಿ ಪ್ರತಿಭಟನೆ ನಡೆಯುತ್ತಿದೆ. ಆ್ಯಂಬುಲೆನ್ಸ್ ವಾಹನ ತಡೆ ಹಿಡಿದು ಪ್ರತಿಭಟನೆ ನಡೆಯುತ್ತಿದೆ. ಎಲ್ಲಾ ವಾಹನಗಳನ್ನು ಪ್ರತಿಭಟನಕಾರರು ತಡೆಹಿಡಿದ್ದಾರೆ. ಆರೋಪಿಗಳನ್ನು ತಕ್ಷಣ ಬಂದಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.