ಒಂದೇ ಕುಟುಂಬದ ಮೂವರು ನಿಗೂಢವಾಗಿ ಕಾಣೆಯಾಗಿದ್ದಾರೆ. ತಮ್ಮ ಮಗಳನ್ನು ಸಂಬಂಧಿಕರ ಮನೆಯಲ್ಲಿ ಬಿಟ್ಟು ಹೋದ ಈ ಕುಟುಂಬದ ಪತ್ತೆಗಾಗಿ ಬಂಟ್ವಾಳ ಗ್ರಾಮಾಂತರ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ದಕ್ಷಿಣ ಕನ್ನಡ: ಮಗು ಸಹಿತ ಒಂದೇ ಕುಟುಂಬದ ಮೂವರು ಕಾಣೆಯಾದ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಮೂಡುನಡುಗೋಡು ಗ್ರಾಮದಲ್ಲಿ ನಡೆದಿದೆ. ಮೂಲತಃ ನಾವೂರ ಗ್ರಾಮದ ನಿವಾಸಿಗಳಾದ ಸದಾಶಿವ ಮತ್ತು ಅವರ ಪತ್ನಿ ಪ್ರತಿಭಾ ಹಾಗೂ ಇವರ ಮಗ 9 ವರ್ಷದ ರಿತ್ವಿಕ್ ಕಾಣೆಯಾಗಿರುವ ವ್ಯಕ್ತಿಗಳಾಗಿದ್ದಾರೆ.

ಡಿ.17 ರಂದು ಮೂವರು ಕಾಣೆಯಾಗಿದ್ದು, ಡಿ.25 ರಂದು ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆಯಾದರೂ ಈವರೆಗೆ ಕುಟುಂಬದ ಪತ್ತೆಯಾಗಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಮಗಳನ್ನು ತಂಗಿ ಮನೆಯಲ್ಲಿ ಬಿಟ್ಟು ಹೋಗಿದ್ರು

ಸದಾಶಿವ ಮತ್ತು ಪ್ರತಿಭಾ ಅವರಿಗೆ ಒಂದು ಹೆಣ್ಣು ಮತ್ತು ಒಂದು ಗಂಡು ಮಗುವಿದ್ದು, ಇವರು ನಾಲ್ಕು ಮಂದಿ ಡಿ.16 ರಂದು ನಾವೂರ ಮನೆಯಿಂದ ಇವರು ಪ್ರತಿಭಾ ಅವರ ತಂಗಿಯ ಗಂಡನ ಮನೆಯಾದ ಮೂಡುನಡುಗೋಡು ಗ್ರಾಮದ ಶಾಂತಿಗುರಿಯಲ್ಲಿರುವ ಧರ್ಣಪ್ಪ ಪೂಜಾರಿ ಅವರ ಮನೆಗೆ ಬಂದಿದ್ದರು. ಅ ದಿನ ಅಲ್ಲೇ ಉಳಿದುಕೊಂಡಿದ್ದ ಇವರು ಮುಂಜಾನೆ ವೇಳೆಗೆ ಮಗಳನ್ನು ತಂಗಿ ಮನೆಯಲ್ಲಿ ಬಿಟ್ಟು ಸದಾಶಿವ ಮತ್ತು ಪತ್ನಿ ಪ್ರತಿಭಾ ಹಾಗೂ ಮಗ ರಿತ್ವಿಕ್ ಮೂವರು ಕಾಣೆಯಾಗಿದ್ದಾರೆ.

ಇದನ್ನೂ ಓದಿ: ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಶೇ. 8 ಮೀಸಲಾತಿ; ಬಂಪರ್ ಸುವರ್ಣವಕಾಶ

ಕಾಣೆಯಾದ ಬಗ್ಗೆ ಸಾಕಷ್ಟು ಅನುಮಾನ!

ಮಗಳನ್ನು ಬಿಟ್ಟು ಕಾಣೆಯಾದ ಈ‌ ಕುಟುಂಬದ ಬಗ್ಗೆ ಸಾಕಷ್ಟು ಅನುಮಾನಗಳು ಮೂಡತೊಡಗಿದ್ದು, ಇವರ ಪತ್ತೆ ಮಾಡಿಕೊಡುವಂತೆ ಧರ್ಣಪ್ಪ ಪೂಜಾರಿ ಅವರು ಬಂಟ್ವಾಳ ‌ಗ್ರಾಮಾಂತರ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ. ತಂದೆ ತಾಯಿ ಮತ್ತು ತಮ್ಮನನ್ನು ಕಳೆದುಕೊಂಡು ಹೆಣ್ಮಗಳು ಕೊರಗುತ್ತಿರುವ ಬಗ್ಗೆ ಮನೆಯವರು ಚಿಂತಿತರಾಗಿದ್ದಾರೆ.

ಕಾಣೆಯಾದ ಮೂವರು ತುಳು ಕನ್ನಡ ಭಾಷೆ ತಿಳಿದಿದ್ದು, ಇವರ ಗುರುತು ಪತ್ತೆಯಾದಲ್ಲಿ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಗೆ ಸಂಪರ್ಕ ಮಾಡುವಂತೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಸಬ್ ಇನ್ಸ್ ಪೆಕ್ಟರ್ ಮಂಜುನಾಥ್ ಅವರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಅಣ್ಣನ ಮನೆ ಹಾಳು ಮಾಡಲು ಹೋದ ಕನ್ನಡಿಗನಿಗೆ ಕ್ಷಣಾರ್ಧದಲ್ಲಿ ತಿರುಗಿಸಿಕೊಟ್ಟ ಕರ್ಮ; Karma Returns!