ಮಂಗಳೂರು(ನ.14): ಮಂಗಳೂರು ಮಹಾನಗರ ಪಾಲಿಕೆಗೆ ಮಂಗಳವಾರ ನಡೆದ ಚುನಾವಣೆಯ ಮತ ಎಣಿಕೆ ನ.೧೪ರಂದು ನಗರದ ರೊಸಾರಿಯೊ ಶಿಕ್ಷಣ ಸಂಸ್ಥೆಯಲ್ಲಿ ನಡೆಯಲಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಸಿಂಧು ರೂರೇಶ್ ಬುಧವಾರ ಅಂತಿಮ ಸಿದ್ಧತೆಯ ಪರಿಶೀಲನೆ ನಡೆಸಿದ್ದಾರೆ. ಎಣಿಕೆ ಕೇಂದ್ರದ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಕಲಂ 144 ಸಿಆರ್‌ಪಿಸಿ ಅನ್ವಯ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಮಂಗಳೂರು ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ತಲಾ 5 ವಾರ್ಡ್‌ಗೆ ಒಬ್ಬರಂತೆ ಒಟ್ಟು 12 ಚುನಾವಣಾಧಿಕಾರಿಗಳು ೧೨ ಕೊಠಡಿಗಳಲ್ಲಿ ಮತ ಎಣಿಕೆ ನಡೆಸಲಿದ್ದಾರೆ. ಆಯಾ ಚುನಾವಣಾಧಿಕಾರಿಗಳು ಪ್ರತಿಯೊಂದು ವಾರ್ಡ್ ಮತ ಎಣಿಕೆ ಪೂರ್ಣಗೊಂಡ ನಂತರ ಇನ್ನೊಂದು ವಾರ್ಡ್‌ನ ಮತ ಎಣಿಕೆ ಕೈಗೊಳ್ಳಲಿದ್ದಾರೆ. ಒಂದು ಸುತ್ತಿನಲ್ಲಿ 4 ಮತಗಟ್ಟೆಗಳ ಮತ ಎಣಿಕೆ ನಡೆಯಲಿದೆ. ಮತ ಎಣಿಕೆ ಬೆಳಗ್ಗೆ 8 ಗಂಟೆಗೆ ಆರಂಭಗೊಳ್ಳಲಿದೆ. ಮಧ್ಯಾಹ್ನ ವೇಳೆಗೆ ಸಂಪೂರ್ಣ ಫಲಿತಾಂಶ ಲಭ್ಯವಾಗುವ ಸಾಧ್ಯತೆ ಇದೆ. ಮತ ಎಣಿಕೆ ಕೇಂದ್ರ ಸುತ್ತಮುತ್ತ ತೀವ್ರ ಭದ್ರತೆ ಕೈಗೊಳ್ಳಲಾಗಿದೆ. ಬುಧವಾರ ಡಿಸಿಪಿ ಅರುಣಾಂಗ್ಳು ಗಿರಿ ಅವರ ನೇತೃತ್ವದಲ್ಲಿ ಭದ್ರತಾ ರಿಹರ್ಸಲ್ ನಡೆಯಿತು.

ನಿಷೇಧಾಜ್ಞೆ ಜಾರಿ:

ಚುನಾವಣೆಯಲ್ಲಿ ಸ್ಪರ್ಧಿಸಿದ ವಿವಿಧ ಪಕ್ಷಗಳ ಅಭ್ಯರ್ಥಿಗಳು, ಪಕ್ಷಗಳ ಅಭಿಮಾನಿಗಳು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಮತ ಎಣಿಕೆ ಕೇಂದ್ರದ ಸುತ್ತ ಸೇರುವ ನಿರೀಕ್ಷೆ ಇದ್ದು, ಇದರಿಂದ ಸಾರ್ವಜನಿಕರ ಜೀವ, ಸೊತ್ತುಗಳಿಗೆ ಅಪಾಯ, ಹಾನಿಯಾಗುವ ಸಾಧ್ಯತೆ ಇದೆ. ಇದನ್ನು ತಡೆಯುವ ಉದ್ದೇಶದಿಂದ ಶಾಂತಿ ಕಾಪಾಡಲು ಮುನ್ನೆಚ್ಚರಿಕಾ ಕ್ರಮವಾಗಿ ಮತ ಎಣಿಕೆ ಕೇಂದ್ರದ ಸುತ್ತಮುತ್ತ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಮಂಗಳೂರು: 60 ವಾರ್ಡ್‌ಗಳ 180 ಮಂದಿ ಭವಿಷ್ಯ ಇಂದು ಪ್ರಕಟ

ನಿಷೇಧದ ಅವಧಿಯಲ್ಲಿ ಶಸ್ತ್ರಗಳು, ದೊಣ್ಣೆ, ಕತ್ತಿ, ಈಟಿಗಳು, ಗದೆ, ಬಂದೂಕು, ಚಾಕು, ಕೋಲು ಅಥವಾ ಲಾಠಿಗಳನ್ನು ಅಥವಾ ದೈಹಿಕ ಹಿಂಸೆಗೆ ಕಾರಣವಾಗುವ ಇತರ ಯಾವುದೇ ವಸ್ತುಗಳನು ಒಯ್ಯುವಂತಿಲ್ಲ. ಪಟಾಕಿ ಸಿಡಿಸುವುದು, ಯಾವುದೇ ರೀತಿಯ ವಿಜಯೋತ್ಸವ, ಸಾರ್ವಜನಿಕ ಮೆರವಣಿಗೆ, ರಾಜಕೀಯ ಸಭೆ ಸಮಾರಂಭ ನಡೆಸುವಂತಿಲ್ಲ ಎಂದು ಪೊಲೀಸ್ ಆಯುಕ್ತ ಡಾ.ಹರ್ಷ ಪಿ.ಎಸ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶೇ.59.67 ಮತದಾನ ಪಾಲಿಕೆ ಚುನಾವಣೆಯಲ್ಲಿ ಶೇ.59.67 ಮತದಾನವಾಗಿತ್ತು. ಒಟ್ಟು 3,94, 894 ಮತದಾರರ ಪೈಕಿ 2,34,628 ಮಂದಿ ಮತ ಚಲಾಯಿಸಿದ್ದರು. 18 ಕಾವೂರು ವಾರ್ಡ್‌ನಲ್ಲಿ ಅತೀ ಹೆಚ್ಚು, ಶೇ. 70.74, 40ನೇ ಕೋರ್ಟ್ ವಾರ್ಡ್‌ನಲ್ಲಿ ಅತೀ ಕಡಿಮೆ ಶೇ.42.09 ಮತದಾನವಾಗಿದೆ.      

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ : ಮತ ಎಣಿಕೆ ಆರಂಭ