ಬೆಂಗಳೂರು :  ರಾಜಧಾನಿ ಬೆಂಗಳೂರಿನ ಹಲವೆಡೆ ಶುಕ್ರವಾರ ಆಲಿಕಲ್ಲು ಸಹಿತ ಭಾರೀ ಮಳೆ ಸುರಿದ ಪರಿಣಾಮ ಜನಜೀವನ ಭಾಗಶಃ ಅಸ್ತವ್ಯಸ್ತಗೊಂಡಿತ್ತು. ಮಧ್ಯಾಹ್ನದಿಂದ ರಾತ್ರಿ ವರೆಗೂ ಬಿಟ್ಟು ಬಿಟ್ಟು ಸುರಿದ ಗಾಳಿ ಮಳೆಗೆ ವಿವಿಧೆಡೆ ಮರಗಳು ಹಾಗೂ ವಿದ್ಯುತ್‌ ಕಂಬಗಳು ನೆಲಕಚ್ಚಿವೆ. 

ಮರ ಬಿದ್ದುದರಿಂದ ಎರಡು ಕಾರುಗಳು ಜಖಂಗೊಂಡಿವೆ. ಮಲ್ಲೇಶ್ವರದ ಲಿಂಕ್‌ ರಸ್ತೆಯಲ್ಲಿ ರಾಜಕಾಲುವೆ ಉಕ್ಕಿ ಹರಿದು ಅಕ್ಕಪಕ್ಕದ ಕೆಲ ಮನೆಗಳಿಗೆ ನೀರು ನುಗ್ಗಿ ಅಲ್ಲಿನ ನಿವಾಸಿಗಳು ರಾತ್ರಿಯಿಡೀ ಸಮಸ್ಯೆ ಅನುಭವಿಸಿದ್ದಾರೆ.

ನಗರದಲ್ಲಿ ಇನ್ನೂ ಎರಡು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ತಿಳಿಸಿದೆ. ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿಯಿಂದ ಮಳೆ ತರುವ ಸ್ಟ್ರಫ್‌ (ಗಾಳಿಯ ಕಡಿಮೆ ಒತ್ತಡದ ತಗ್ಗು) ಏರ್ಪಟ್ಟಿದ್ದು, ಇದು ದಕ್ಷಿಣ ಒಳನಾಡಿನ ಮೂಲಕ ಹಾದು ಹೋಗುತ್ತಿದೆ. ಹಾಗಾಗಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಬೆಂಗಳೂರಿನಲ್ಲಿ ಇನ್ನೂ ಎರಡು ಮೂರು ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.