ಮಂಗಳೂರು(ನ.05): ನಗರದಲ್ಲಿ ಮಾರ್ಗಮಧ್ಯೆ ಕೆಟ್ಟು ನಿಂತ ಕಾರನ್ನು ರಸ್ತೆ ಬದಿಗೆ ತಳ್ಳಲು ಸಹಕರಿಸಿದ ಕದ್ರಿ ಟ್ರಾಫಿಕ್‌ ಠಾಣೆಯ ಎಎಸ್‌ಐ ಕೃಷ್ಣ ಕುಮಾರ್‌ ಅವರ ಮಾನವೀಯ ಕಾರ್ಯಕ್ಕೆ ಜಾಲತಾಣದಲ್ಲಿ ಶ್ಲಾಘನೆ ವ್ಯಕ್ತವಾಗಿದೆ. ಕೂಡಲೆ ಸ್ಪಂದಿಸಿದ ನಗರ ಪೊಲೀಸ್‌ ಆಯುಕ್ತ ಡಾ.ಹರ್ಷ, ಇವರು ‘ಇಂದಿನ ಮೈ ಹೀರೋ’ ಎಂದಿದ್ದಾರೆ.

ನಗರದ ಕೆಪಿಟಿ ಬಳಿ ಎಎಸ್‌ಐ ಕೃಷ್ಣ ಕುಮಾರ್‌ ಅವರು ಕೆಟ್ಟು ನಿಂತ ಕಾರಿನ ಸಹ ಪ್ರಯಾಣಿಕರೊಂದಿಗೆ ಕಾರನ್ನು ತಳ್ಳಿ ಸಹಕರಿಸಿದ್ದರು. ಇದರ ವಿಡಿಯೊ ಮಾಡಿ ಜಾಲತಾಣದಲ್ಲಿ ಹಾಕಿದ ಸಾರ್ವಜನಿಕರೊಬ್ಬರು ಈ ಕಾರ್ಯವನ್ನು ಶ್ಲಾಘಿಸಿದ್ದರು.

ಕೆಲ ದಿನಗಳಿಂದ ನಗರದಲ್ಲಿ ಉತ್ತಮ ಕಾರ್ಯ ನಿರ್ವಹಿಸುವ ಪೊಲೀಸರನ್ನು ಅಭಿನಂದಿಸುವ ಕೆಲಸವನ್ನು ಆಯುಕ್ತರು ಮಾಡುತ್ತಿದ್ದಾರೆ. ಅಲ್ಲದೆ ಅಂಥವರನ್ನು ‘ಟುಡೇಸ್‌ ಮೈ ಹೀರೊ’ ಎಂದು ಪ್ರಶಂಸಿಸುತ್ತಿದ್ದಾರೆ. ಇತ್ತೀಚೆಗೆ ಲಾರಿ ಹತ್ತಿ ಅದರಲ್ಲಿದ್ದ ಮಣ್ಣನ್ನು ರಸ್ತೆ ಹೊಂಡಕ್ಕೆ ಸ್ವತಃ ಸುರಿಯುತ್ತಿರುವ ಟ್ರಾಫಿಕ್‌ ಸಿಬ್ಬಂದಿ ಪುಟ್ಟರಾಮ ಅವರನ್ನು ಕಚೇರಿಗೆ ಕರೆಸಿ ಡಾ.ಹರ್ಷ ಸನ್ಮಾನಿಸಿದ್ದಾರೆ.